PM Modi In Bidar: ವಿಷ ಸರ್ಪ, ಭ್ರಷ್ಟ ಲಿಂಗಾಯತ ಸಿಎಂ ಹೇಳಿಕೆ ಲಾಭ ಪಡೆಯಲು ಮುಂದಾದ ಮೋದಿ
ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ರಾಜ್ಯಕ್ಕೆ ಆಗಮಿಸಿದ್ದು, ಬಿಜೆಪಿ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಬೀದರ್ ಜಿಲ್ಲೆಗೆ ಆಗಮಿಸಿದ ಅವರು ಹುಮ್ನಾಬಾದ್ ತಾಲೂಕಿನ ಚಿನಕೇರಾ ಕ್ರಾಸ್ ಬಳಿ ಬಿಜೆಪಿ ಬೃಹತ್ ಸಮಾವೇಶದಲ್ಲಿ ಕಾಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಸಿದ್ದರಾಮಯ್ಯ ನೀಡಿದ್ದ ಭ್ರಷ್ಟ ಲಿಂಗಾಯತ ಸಿಎಂ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ವಿಷ ಸರ್ಪ ಹೇಳಿಕೆ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು. ತಮ್ಮ ಭಾಷಣದಲ್ಲಿ ಮೋದಿ ಯಾವೊಬ್ಬ ಕಾಂಗ್ರೆಸ್ ನಾಯಕರ ಹೆಸರನ್ನು ಕೂಡ ಪ್ರಸ್ತಾಪಿಸದೆ ಟೀಕೆ ಮಾಡಿದ್ದು ವಿಶೇಷ.

ಸಿದ್ದರಾಮಯ್ಯ ಅವರ ಭ್ರಷ್ಟ ಲಿಂಗಾಯತ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ ಮೋದಿ, ಕಾಂಗ್ರೆಸ್‌ನವರು ನನ್ನನ್ನು ಚೌಕೀದಾರ್ ಕಳ್ಳ ಎಂದು ಟೀಕಿಸಿದ್ದರು. ಈಗ ನನ್ನ ಲಿಂಗಾಯತ ಸಹೋದರರನ್ನು ಕೂಡ ಕಳ್ಳರು ಎಂದು ಕರೆಯುತ್ತಿದ್ದಾರೆ ಎಂದು ಮೋದಿ ಹೇಳಿದರು. ಈ ಮೂಲಕ ಲಿಂಗಾಯತ ಮತಗಳನ್ನು ಸೆಳೆಯಲು ಮೋದಿ ಪ್ರಯತ್ನ ಮಾಡಿದರು.
ತಮ್ಮ ಮೇಲಿನ ಟೀಕೆಗೆ ಉತ್ತರ ನೀಡಿದ ಅವರು, ಕಾಂಗ್ರೆಸ್‌ನವರು 91 ಬಾರಿ ಬಾರಿ ನನಗೆ ಬೈದಿದ್ದಾರೆ. ನನ್ನನ್ನು ಬೈಯುವುದರಲ್ಲೇ ಅವರು ಸಮಯ ವ್ಯರ್ಥ ಮಾಡುತ್ತಿದ್ದಾರೆ. ಯಾರೇ ಒಳ್ಳೆಯ ಕೆಲಸ ಮಾಡಿದರೂ, ಅವರನ್ನು ನಿಂದಿಸುವುದು ಕಾಂಗ್ರೆಸ್‌ನವರ ಚಾಳಿ. ನನ್ನನ್ನು ಟೀಕಿಸಿದ ಸಂದರ್ಭದಲ್ಲೆಲ್ಲಾ ಅವರಿಗೆ ಜನ ಶಿಕ್ಷೆ ಕೊಟ್ಟಿದ್ದಾರೆ ಎಂದು ಮೋದಿ ತಿಳಿಸಿದ್ದಾರೆ.
ಕಾಂಗ್ರೆಸ್ ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಅವರನ್ನು ಬಿಟ್ಟಿಲ್ಲ, ಅವರನ್ನೂ ರಾಷ್ಟ್ರದ್ರೋಹಿ, ರಾಕ್ಷಸ ಎಂದೆಲ್ಲಾ ನಿಂದಿಸಿದೆ. ವೀರ ಸಾವರ್ಕರ್ ಅವರನ್ನೂ ಕಾಂಗ್ರೆಸ್ ನಾಯಕರು ನಿಂದಿಸುತ್ತಿದ್ದಾರೆ. ಮಹಾಪುರುಷರನ್ನೂ ಕಾಂಗ್ರೆಸ್ ನಿಂದಿಸಿದೆ, ಈಗ ನನ್ನನ್ನೂ ನಿಂದಿಸುತ್ತಾ ಕಾಲ ಕಳೆಯುತ್ತಿದೆ. ನಾನು ಜನರ ಸೇವೆಯಲ್ಲಿ ನಿರತನಾಗಿರುತ್ತೇನೆ ಎಂದು ಮೋದಿ ಹೇಳಿದ್ದಾರೆ.
ಯಾರ ಹೆಸರೂ ಹೇಳದೆ ಮೋದಿ ಜಾಣ ನಡೆ
ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಯಾವುದೇ ಕಾಂಗ್ರೆಸ್, ಜೆಡಿಎಸ್ ನಾಯಕರ ಹೆಸರನ್ನು ಪ್ರಸ್ತಾಪಿಸದೆ ರಾಜಕೀಯವಾಗಿ ಜಾಣ ನಡೆ ತೋರಿಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಂದೆ ಬಿಟ್ಟು ದಲಿತ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದ ಕಾಂಗ್ರೆಸ್‌ಗೆ ತಿರುಗೇಟು ಕೊಡಲು ಡಾ. ಅಂಬೇಡ್ಕರ್ ಅವರ ಹೆಸರನ್ನು ಪ್ರಸ್ತಾಪಿಸಿದರು. ಒಂದು ವೇಳೆ ಮೋದಿ ಖರ್ಗೆ, ಸಿದ್ದರಾಮಯ್ಯ ಹೆಸರನ್ನು ಪ್ರಸ್ತಾಪಿಸಿ ಟೀಕೆ ಮಾಡಿದ್ದರೆ, ಕಾಂಗ್ರೆಸ್ ಅದರ ಲಾಭ ಪಡೆಯುವ ಸಾಧ್ಯತೆ ಇತ್ತು, ಆದರೆ ಮೋದಿ ಜಾಣ ನಡೆ ಕಾಂಗ್ರೆಸ್ ಆಸೆಗೆ ಭಂಗ ತಂದಿದೆ.
ನರೇಂದ್ರ ಮೋದಿ ಕರ್ನಾಟಕದ ಎಂಟು ಕಡೆಗಳಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲಿದ್ದು, ಇನ್ನು ಕಾಂಗ್ರೆಸ್, ಜೆಡಿಎಸ್ ಮೇಲೆ ಯಾವೆಲ್ಲಾ ಅಸ್ತ್ರಗಳನ್ನು ಬಳಲಸಿದ್ದಾರೆ ಎಂದು ಕಾದು ಮೋಡಬೇಕಿದೆ.












Click it and Unblock the Notifications