ಬಿಜೆಪಿ ಸಭೆಯಲ್ಲಿ ಪ್ರಧಾನಿ ಮೋದಿ ಆಜ್ಞೆಗೆ ಬೆಚ್ಚಿಬಿದ್ದ ರಾಜ್ಯ ಬಿಜೆಪಿ?
ದೇಶದ ಎಲ್ಲಾ ಪ್ರಮುಖ ಪಕ್ಷಗಳು ಕುಟುಂಬ ರಾಜಕಾರಣದಿಂದ ಹೊರತಾಗಿಲ್ಲ. ಇನ್ನು, ಕರ್ನಾಟಕದಲ್ಲಂತೂ ಮೂರೂ ಪಕ್ಷಗಳ ಹೆಚ್ಚಿನ ನಾಯಕರ ಕುಟುಂಬದವರು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಈಗ ಬಿಜೆಪಿ ಇದಕ್ಕೆ ಬ್ರೇಕ್ ಹಾಕಲು ಮುಂದಾಗಿದೆಯಾ?
ಚುನಾವಣೆಗೆ ಟಿಕೆಟ್ ನೀಡುವ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಮಾಡುವ ಶಿಫಾರಸನ್ನು ಬಿಟ್ಟು, ಬಿಜೆಪಿಯ ಕೇಂದ್ರದ ನಾಯಕರು ತಮ್ಮದೇ ಮೂಲಗಳಿಂದ ವರದಿಯನ್ನು ಆಧರಿಸಿ ಟಿಕೆಟ್ ಅನ್ನು ನೀಡುತ್ತಾರೆ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ.
ಎಲ್ಲೋ ಅಪರೂಪಕ್ಕೆ ಎನ್ನುವಂತೆ ಕುಟುಂಬದ ಸದಸ್ಯರಿಗೆ ಉಪ ಚುನಾವಣೆಯಲ್ಲಿ ಟಿಕೆಟ್ ನೀಡಲಾಗಿದ್ದರೂ, ಒಟ್ಟಾರೆಯಾಗಿ ಬಿಜೆಪಿ ಕುಟುಂಬ ರಾಜಕಾರಣದಿಂದ ಹಂತಹಂತವಾಗಿ ಹಿಂದಕ್ಕೆ ಸರಿಯುತ್ತಿದೆ. ಇದಕ್ಕೆ ಕೊಡಬಹುದಾದ ಒಂದು ಉದಾಹರಣೆಯೆಂದರೆ, ಹಾನಗಲ್ ಉಪಚುನಾವಣೆಯಲ್ಲಿ ಉದಾಸಿ ಕುಟುಂಬದವರಿಗೆ ಟಿಕೆಟ್ ನೀಡದೇ ಇದ್ದದ್ದು.
ಟಿಕೆಟ್ ನೀಡುವ ವಿಚಾರವಾಗಿರಲಿ, ಸಂಪುಟ ವಿಸ್ತರಣೆಯಾಗಲಿ ನಿಮ್ಮದೇನೂ ಇಲ್ಲ, ಎಲ್ಲಾ ನಮ್ಮ ನಿರ್ಧಾರವೇ ಅಂತಿಮವೆಂದು ಈಗಾಗಲೇ ಹಲವು ಬಾರಿ ಋಜುವಾತು ಪಡಿಸಿರುವ ಬಿಜೆಪಿ ವರಿಷ್ಠರು, ಕುಟುಂಬ ರಾಜಕಾರಣದ ವಿಚಾರದಲ್ಲಿ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.

ಯಡಿಯೂರಪ್ಪನವರು ಮಂಚೂಣಿಯಲ್ಲಿ ನಿಲ್ಲುತ್ತಾರೆ
ರಾಜ್ಯದಲ್ಲಿ ಸದ್ಯ ಕುಟುಂಬ ರಾಜಕೀಯದ ವಿಚಾರಕ್ಕೆ ಬಂದಾಗ ಯಡಿಯೂರಪ್ಪನವರು ಮಂಚೂಣಿಯಲ್ಲಿ ನಿಲ್ಲುತ್ತಾರೆ. ಅವರ ಇಬ್ಬರು ಪುತ್ರರಲ್ಲಿ ಒಬ್ಬರು ಸಂಸದರು, ಇನ್ನೊಬ್ಬರು ರಾಜ್ಯ ಉಪಾಧ್ಯಕ್ಷರು. ಇನ್ನು, ಜಗದೀಶ್ ಶೆಟ್ಟರ್ ಕುಟುಂಬವೂ ಹಾಗೇ. ಉಮೇಶ್ ಜಾಧವ್ ಸಂಸದರು, ಅವರ ಪುತ್ರ ಶಾಸಕರು. ಶಶಿಕಲಾ ಜೊಲ್ಲೆ ಸಚಿವೆಯಾಗಿದ್ದರೆ, ಅವರ ಪತಿ ಸಂಸದರು. ಇನ್ನು, ಈಶ್ವರಪ್ಪನವರ ಪುತ್ರ ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದಾರೆ. ಇನ್ನು, ಜಾರಕಿಹೊಳಿ ಕುಟುಂಬದ ನಾಲ್ವರು ಶಾಸಕರಾಗಿದ್ದಾರೆ. ಈಗ, ಈ ಕುಟುಂಬ ರಾಜಕಾರಣಕ್ಕೆ ಬಿಜೆಪಿ ಈಗ ಬ್ರೇಕ್ ಹಾಕಲು ಹೊರಟಿದೆ.

ನಾಯಕರ ಮಕ್ಕಳಿಗೆ ಟಿಕೆಟ್ ನಿರಾಕರಿಸಿದರೆ ಅದಕ್ಕೆ ನಾನೇ ಹೊಣೆ, ಮೋದಿ
ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ನಂತರ ಬಿಜೆಪಿ ಪಾರ್ಲಿಮೆಂಟರಿ ಪಾರ್ಟಿ ಸಭೆ, ಮಂಗಳವಾರ (ಮಾರ್ಚ್ 15) ನವದೆಹಲಿಯಲ್ಲಿ ನಡೆದಿತ್ತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಕುಟುಂಬ ರಾಜಕಾರಣಕ್ಕೆ ಇನ್ನು ಮುಂದೆ ಬಿಜೆಪಿಯಲ್ಲಿ ಅನುವು ಮಾಡಿಕೊಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. "ಪಕ್ಷದಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶ ನೀಡುವುದಿಲ್ಲ. ಇತರ ಪಕ್ಷಗಳಲ್ಲಿನ ವಂಶಾಡಳಿತ ರಾಜಕಾರಣದ ವಿರುದ್ಧ ಹೋರಾಟ ನಡೆಸಬೇಕಿದೆ. ಹಾಗಾಗಿ, ಯಾರ ನಾಯಕರ ಮಕ್ಕಳಿಗೆ ಟಿಕೆಟ್ ನಿರಾಕರಿಸಿದರೆ ಅದಕ್ಕೆ ನಾನೇ ಹೊಣೆ ಹೊರುತ್ತೇನೆ"ಎಂದು ಮೋದಿ ಹೇಳಿದ್ದರು ಎಂದು ವರದಿಯಾಗಿದೆ. (ಚಿತ್ರ : ಪಿಟಿಐ)

ಪ್ರಧಾನಿ ಹೇಳಿಕೆಯಿಂದ ದಂಗಾದ ರಾಜ್ಯ ಬಿಜೆಪಿ ನಾಯಕರು
ಬಿಜೆಪಿ ವರಿಷ್ಠರ ಈ ನಿರ್ಧಾರ ಕುಟುಂಬ ರಾಜಕಾರಣವನ್ನು ನಂಬಿದವರಿಗೆ ದೊಡ್ಡ ಹೊಡೆತವನ್ನು ನೀಡಿದೆ. ಪ್ರಧಾನಿ ಹೇಳಿಕೆಯಿಂದ ಮುಂಬರುವ ಚುನಾವಣೆಗಳಲ್ಲಿ ತಮ್ಮತಮ್ಮ ಕುಟುಂಬದವರನ್ನು ಕಣಕ್ಕಿಳಿಸಬೇಕು ಎನ್ನುವ ಪ್ಲ್ಯಾನ್ ಮಾಡಿಕೊಂಡವರು ದಂಗಾಗಿದ್ದಾರೆ. ಯಾಕೆಂದರೆ, ಮುಂದಿನ ವರ್ಷ ನಡೆಯಲಿರುವ ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸಲು ಹಲವರು ಈಗಾಗಲೇ ಪೂರ್ವ ತಯಾರಿಯನ್ನು ಆರಂಭಿಸಿದ್ದಾರೆ. ಈಗ, ಬಿಜೆಪಿ ವರಿಷ್ಠರ ನಿರ್ಧಾರದಿಂದ ಅವರ ಯೋಜನೆ ತಲೆಕೆಳಗಾಗುವ ಸಾಧ್ಯತೆಯಿಲ್ಲದಿಲ್ಲ.

ಪಕ್ಷ ಬೆಳೆಸುವಲ್ಲಿ ಇದು ನಿರ್ಣಾಯಕ ಪಾತ್ರ ಆಲೋಚನೆ ಬಿಜೆಪಿ ವರಿಷ್ಠರಿಗೆ
ಪಂಚ ರಾಜ್ಯಗಳ ಅಸೆಂಬ್ಲಿ ಚುನಾವಣಾ ಯಶಸ್ಸಿನಿಂದ ಬಿಜೆಪಿ ಮುಂದಿನ ದಿನಗಳಲ್ಲಿ ಕುಟುಂಬ ರಾಜಕಾರಣಕ್ಕೆ ಸಂಪೂರ್ಣ ತಿಲಾಂಜಲಿ ಇಡುವ ಸಾಧ್ಯತೆಯಿದೆ. ಯುವ ಮುಖಗಳು ಮತ್ತು ಪಕ್ಷದ ನಿಷ್ಟಾವಂತ ಕಾರ್ಯಕರ್ತರಿಗೆ ಮಣೆ ಹಾಕಿದರೆ, ಪಕ್ಷ ಬೆಳೆಸುವಲ್ಲಿ ಇದು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎನ್ನುವ ಆಲೋಚನೆ ಬಿಜೆಪಿ ವರಿಷ್ಠರಿಗೆ ಇದೆ ಎಂದು ಹೇಳಲಾಗುತ್ತಿದೆ. (ಚಿತ್ರ : ಪಿಟಿಐ)












Click it and Unblock the Notifications