ಜನ ವಿಲನ್ ರೀತಿಯಲ್ಲಿ ನೋಡುತ್ತಿದ್ದಾರೆ, ನನ್ನ ಬಲಿಪಶು ಮಾಡಬೇಡಿ: ಸ್ಪೀಕರ್
Recommended Video
ಬೆಂಗಳೂರು, ಜುಲೈ 22: ಎಲ್ಲಾ ಶಾಸಕರಿಗೆ ಅಸಾಹಯಕತೆಯಿಂದ ಸ್ಪೀಕರ್ ರಮೇಶ್ ಕುಮಾರ್ ಮನವಿ ಮಾಡಿದ ವಿದ್ಯಮಾನ ಸೋಮವಾರದ ಅಧಿವೇಶನದ ವೇಳೆ ನಡೆದಿದೆ.
ಸದನ ಆರಂಭವಾಗುವ ಮುನ್ನ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸಚಿವ ಕೃಷ್ಣ ಭೈರೇಗೌಡ, ಸ್ಪೀಕರ್ ಅವರನ್ನು ಭೇಟಿ ಮಾಡಿ ವಿಶ್ವಾಸಮತಯಾಚನೆಯನ್ನು ಎರಡು ದಿನ ಮುಂದೂಡುವಂತೆ ಮನವಿ ಮಾಡಿದ್ದರು.
ಬಿಜೆಪಿ ನಿಯೋಗ ಕೂಡಾ ಸ್ಪೀಕರ್ ಅವರನ್ನು ಭೇಟಿಯಾಗಿ, ಸೋಮವಾರವೇ ಇದಕ್ಕೆ ತೆರೆ ಎಳೆಯಿರಿ ಎಂದು ಕೇಳಿಕೊಂಡಿತ್ತು. ಸದನ ಆಗಮಿಸುತ್ತಿದ್ದಂತೆಯೇ, ಮಾತಿಗೆ ಇಳಿದ ಸ್ಪೀಕರ್ ತನ್ನ ಸಂದಿಗ್ದ ಪರಿಸ್ಥಿತಿಯನ್ನು ಸದನಕ್ಕೆ ವಿವರಿಸಿದರು.

ಒಬ್ಬರು ಎರಡು ದಿನ ಕಾಲಾವಕಾಶ ಕೇಳುತ್ತಿದ್ದಾರೆ, ಇನ್ನೊಬ್ಬರು ಇಂದೇ ಮುಗಿಸಲು ಮನವಿ ಮಾಡುತ್ತಿದ್ದಾರೆ. ದಯವಿಟ್ಟು ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ. ಇಡೀ ರಾಜ್ಯದ ಜನತೆ ಇಲ್ಲಿಯ ಆಗುಹೋಗುಗಳನ್ನು ನೋಡುತ್ತಿದ್ದಾರೆ.
ಈಗಾಗಲೇ ನನ್ನನ್ನು ಜನ ವಿಲನ್ ರೀತಿಯಲ್ಲಿ ನೋಡುತ್ತಿದ್ದಾರೆ. ದಯವಿಟ್ಟು ನನ್ನನ್ನು ಬಲಿಪಶು ಮಾಡಬೇಡಿ. ಇವತ್ತು ವಿಶ್ವಾಸಮಾತಯಾಚನೆ ಮುಗಿಸುತ್ತೇನೆಂದು ಮಾತು ಕೊಟ್ಟಿದ್ದೇನೆ. ಅದರಂತೆ ನಡೆಯಲು ಬಿಡಿ ಎಂದು ಸ್ಪೀಕರ್ ರಮೇಶ್ ಕುಮಾರ್ ಎಲ್ಲರಲ್ಲೂ ಮನವಿ ಮಾಡಿದರು.
ಸಿದ್ದರಾಮಯ್ಯನವರು ಕ್ರಿಯಾಲೋಪ ಎತ್ತಿದ್ದರು, ಅದಕ್ಕೆ ನಾನು ಈ ರೂಲಿಂಗ್ ನೀಡುತ್ತಿದ್ದೇನೆ. ಶಾಸಕಾಂಗ ಪಕ್ಷದ ನಾಯಕರಾಗಿ ಸದಸ್ಯರಿಗೆ ವಿಪ್ ನೀಡಬಹುದು. ಅದು ಅವರ ಸಂವಿಧಾನದತ್ತವಾದ ಹಕ್ಕು ಕೂಡಾ. ವಿಪ್ ನೀಡಬೇಕೋ ಅಥವಾ ಬೇಡವೋ ಅದು ಅವರ ವಿವೇಚನೆಗೆ ಬಿಟ್ಟ ವಿಚಾರ ಎಂದು ಸ್ಪೀಕರ್ ಹೇಳಿದರು.












Click it and Unblock the Notifications