ನನ್ನ ಮಗನನ್ನು ರಕ್ಷಿಸುವ ಕೆಲಸ ನಿಲ್ಲಿಸಿ
ಬಾಗಲಕೋಟೆ, ಆ.5 : "ನನ್ನ ಮಗನನ್ನು ರಕ್ಷಿಸುವ ಕಾರ್ಯಾಚರಣೆ ನಿಲ್ಲಿಸಿ, ಬದುಕಿರುವ ನನ್ನ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ತಿಮ್ಮಣ್ಣನನ್ನು ರಕ್ಷಿಸುವ ಕಾರ್ಯಾಚರಣೆಯನ್ನು ನಿಲ್ಲಿಸಿ" ಎಂದು ಕೊಳವೆ ಬಾವಿಗೆ ಬಿದ್ದಿರುವ ಬಾಲಕನ ತಂದೆ ಹನುಮಂತ ಹಟ್ಟಿ ಜಿಲ್ಲಾಡಳಿತಕ್ಕೆ ಮಂಗಳವಾರ ಬೆಳಗ್ಗೆ ಮನವಿ ಮಾಡಿದ್ದಾರೆ.
ಮಂಗಳವಾರ ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ತಿಮ್ಮಣ್ಣ ಹಟ್ಟಿ ತಂದೆ ಹನುಮಂತ ಹಟ್ಟಿ, "ತಿಮ್ಮಣ್ಣನನ್ನು ರಕ್ಷಿಸುವ ಕಾರ್ಯಾಚರಣೆಯನ್ನು ನಿಲ್ಲಿಸಿ, ಬೋರ್ ವೆಲ್ ಕೊರೆಸಲು 12 ಲಕ್ಷ ರೂ. ಸಾಲ ಮಾಡಿದ್ದೇನೆ. ಈಗ ನನ್ನ ಮಗ ಬದುಕಿಲ್ಲ ಜೊತೆಗೆ ನಾನು ಬೆಳೆದಿದ್ದ ಬೆಳೆಯೂ ಕಾರ್ಯಾಚರಣೆಯಿಂದ ಹಾಳಾಗಿದೆ. ಆದ್ದರಿಂದ ಕಾರ್ಯಾಚರಣೆ ನಿಲ್ಲಿಸಿ" ಎಂದು ಹನುಮಂತ ಹಟ್ಟಿ ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ. [ತಿಮ್ಮಣ್ಣ ರಕ್ಷಣೆ ಕಾರ್ಯಾಚರಣೆಯ ವಿವರ]

ಹನುಮಂತಪ್ಪ ಹೇಳುವುದಿಷ್ಟು : "ನನ್ನ ಮಗ ತಿಮ್ಮಣ್ಣ ಬದುಕಿಲ್ಲ. ಹೊಲದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯಿಂದಾಗಿ ನನ್ನ ಹೊಲ ಹಾಳಾಗಿದೆ. ನನಗೆ ಇನ್ನು ಎರಡು ಹೆಣ್ಣು ಮಕ್ಕಳಿದ್ದು ಅವರ ಭವಿಷ್ಯಕ್ಕಾಗಿ ಕಾರ್ಯಾಚರಣೆಯನ್ನು ನಿಲ್ಲಿಸಬೇಕು" ಎಂದು ತಿಮ್ಮಣ್ಣನ ತಂದೆ ಮನವಿ ಮಾಡಿದ್ದಾರೆ.
"ಈ ಕಾರ್ಯಾಚರಣೆಗಾಗಿ ತೆಗೆದಿರುವ ಮಣ್ಣನ್ನು ನಾನು ಮುಚ್ಚಬೇಕೆಂತೆ. ಈಗಾಗಲೇ 12 ಲಕ್ಷ ಸಾಲ ಮಾಡಿಕೊಂಡಿದ್ದೇನೆ. ಈಗ ಮಗನೂ ಜೀವಂತವಾಗಿ ಕೈಗೆ ಸೇರುವುದಿಲ್ಲ ಮತ್ತು ಮಣ್ಣನ್ನು ಮುಚ್ಚಲು ನನ್ನ ಬಳಿ ಹಣ ಇಲ್ಲ. ಪುನಃ ನಾನು ಸಾಲ ಮಾಡಿದರೆ, ನೇಣು ಹಾಕಿಕೊಳ್ಳಬೇಕಾಗುತ್ತದೆ. ಆದ್ದರಿಂದ ಮಗನನ್ನು ಉಳಿಸುವ ಕಾರ್ಯಾಚರಣೆಯನ್ನು ನಿಲ್ಲಿಸಿ" ಎಂದು ಹನುಮಂತ ಹಟ್ಟಿ ಒತ್ತಾಯಿಸಿದ್ದಾರೆ.
"ನನ್ನ ಮಗ ಮಣ್ಣಲ್ಲಿ ಮಣ್ಣಾದರೆ ನನ್ನ ಜಮೀನಿನಲ್ಲಿಯೇ ಇರುತ್ತಾನೆ. ಈಗ ನೀವು ನನ್ನ ಜಮೀನು ಹಾಳು ಮಾಡಿ ಆತನ ಶವವನ್ನು ನನ್ನ ಕೈಗೆ ಕೊಟ್ಟರೆ ಪುನಃ ಆತನನ್ನ ನಾನು ಮಣ್ಣು ಮಾಡಬೇಕಾಗುತ್ತದೆ". ಆದ್ದರಿಂದ ಈ ಕಾರ್ಯಾಚರಣೆಯನ್ನು ನಿಲ್ಲಿಸಿ ಎಂದು ಹನುಂತ ಹಟ್ಟಿ ಮನವಿ ಮಾಡುತ್ತಿದ್ದಾರೆ.
ಕಾರ್ಯಾಚರಣೆ ನಿಲ್ಲಿಸೋಲ್ಲ : ಹನುಮಂತ ಹಟ್ಟಿ ಮನವಿಯನ್ನು ತಿಸ್ಕರಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ್ ಕಾರ್ಯಾಚರಣೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ. ರೋಬೋ ತಜ್ಞ ಮಣಿಕಂಠನ್ ಮಧ್ಯಾಹ್ನ ಘಟನಾ ಸ್ಥಳಕ್ಕೆ ಆಗಮಿಸಲಿದ್ದು, ನಂತರ ಮಗುವನ್ನು ರಕ್ಷಣೆ ಮಾಡುವ ಬಗ್ಗೆ ವಿಶ್ವಾಸ ಹೊಂದಿದ್ದೇವೆ ಎಂದು ಹೇಳಿದ್ದಾರೆ.












Click it and Unblock the Notifications