ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ತಾರಾಲಯ ಕಾಮಗಾರಿ ಪ್ರಗತಿ
ಮೈಸೂರು, ನವೆಂಬರ್ 15: ಡಿಜಿಟಲ್ ಡಿಸ್‌ಪ್ಲೇಗಳ ಮೂಲಕ ಖಗೋಳದ ಆ ಕ್ಷಣದ ಮಾಹಿತಿಯನ್ನು ನೇರವಾಗಿ ಪಡೆದುಕೊಳ್ಳಬಹುದಾದ (ರಿಯಲ್ ಟೈಂ ಡೇಟಾ) ದೇಶದ ಮೊದಲ ಅತ್ಯಾಧುನಿಕ ಖಗೋಳ ತಾರಾಲಯದ ಕಾಮಗಾರಿ ಭರದಿಂದ ಸಾಗಿದೆ.
2022ರ ಮಾರ್ಚ್ 6ರಂದು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ತಾರಾಲಯಕ್ಕೆ ಶಂಕುಸ್ಥಾಪನೆ ನಡೆಸಿದ್ದರು. ಈಗ ಅದರ ಕಾಮಗಾರಿ ವೇಗಪಡೆದುಕೊಂಡಿದೆ.

ಈ ಬಗ್ಗೆ ಮತ್ತೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಅವರು, ಕರ್ನಾಟಕದ ಮೈಸೂರು ವಿಶ್ವವಿದ್ಯಾನಿಲಯದ ಚಾಮುಂಡಿ ಬೆಟ್ಟದ ಕ್ಯಾಂಪಸ್‍ನಲ್ಲಿ ಅತ್ಯಾಧುನಿಕ ತಾರಾಲಯದ ನಿರ್ಮಾಣವು ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದೆ ಎಂದು ತಿಳಿಸಿದ್ದಾರೆ.
ಸಚಿವೆ ನಿರ್ಮಲ ಸೀತಾರಾಮನ್ ಅವರು ಕಾಸ್ಮಾಲಜಿ ಶಿಕ್ಷಣ ಮತ್ತು ಸಂಶೋಧನಾ-ತರಬೇತಿ ಕೇಂದ್ರದ ಯೋಜನೆಗಾಗಿ ತಮ್ಮ ಸಂಸದರ ನಿಧಿಯ 5 ಕೋಟಿ ರೂ.ಗಳನ್ನು ವಿನಿಯೋಗಿಸಿದ್ದಾರೆ ಮತ್ತು ಮಾರ್ಚ್ 2022 ರಲ್ಲಿ ಶಿಲಾನ್ಯಾಸ ನೆರವೇರಿಸಿದ್ದಾರೆ. ಕರ್ನಾಟಕದ ಯುವಜನರಲ್ಲಿ ಬಾಹ್ಯಾಕಾಶ ಮತ್ತು ವಿಶ್ವವಿಜ್ಞಾನದ ಬಗ್ಗೆ ಆಸಕ್ತಿಯನ್ನು ಬೆಳೆಸಲು ಡಿಜಿಸ್ಟಾರ್ 7 ತಾರಾಲಯವನ್ನು ಸ್ಥಾಪಿಸುವ ಕಲ್ಪನೆಯಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಎಲ್‍ಇಡಿ ಗುಮ್ಮಟವನ್ನು ಕೊನಿಕಾ-ಮಿನೋಲ್ಟಾ (ಜಪಾನ್), ಆರ್‍ಎಸ್‍ಎ-ಕಾಸ್ಮೊಸ್ (ಫ್ರಾನ್ಸ್), ಮತ್ತು ಮೆಸರ್ಸ್ ಆರ್ಬಿಟ್-ಅನಿಮೇಟ್ (ಇಂಡಿಯಾ) ಕನ್ಸೋರ್ಟಿಯಂ ಅಭಿವೃದ್ಧಿಪಡಿಸುತ್ತಿವೆ. ಎಲ್‍ಇಡಿ ಡೋಮ್‍ನ ಅಭಿವೃದ್ಧಿ ಮತ್ತು ಸಿವಿಲ್ ನಿರ್ಮಾಣವು ಪ್ರಸ್ತುತ ನಡೆಯುತ್ತಿದೆ. 8ಕೆ ರೆಸಲ್ಯೂಶನ್ ಹೊಂದಿರುವ ಹೈಟೆಕ್ 15-ಮೀಟರ್ ಎಲ್‍ಇಡಿ ಗುಮ್ಮಟ ತಾರಾಲಯವು ವಿಶ್ವದ ಮೊದಲ ಗುಮ್ಮಟ ತಾರಾಲಯ ಎಂಬ ಪ್ರಸಿದ್ಧಿಗೆ ಪಾತ್ರವಾಗಲಿದೆ.
86 ಕೋಟಿ ರೂಪಾಯಿಗಳ ಬಜೆಟ್ ಅಂದಾಜಿನೊಂದಿಗೆ ಈ ಯೋಜನೆಯು ನಿರ್ಮಾಣ ಮತ್ತು ಕಾರ್ಯಾಚರಣೆಗಾಗಿ ಮೈಸೂರು ವಿಶ್ವವಿದ್ಯಾನಿಲಯದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (ಐಐಎ) ಮೂಲಕ ಕಾರ್ಯಗತಗೊಳಿಸಲಾಗುತ್ತಿದೆ.
ಕಾಸ್ಮಾಲಜಿ ಶಿಕ್ಷಣ ಮತ್ತು ಸಂಶೋಧನಾ-ತರಬೇತಿ ಕೇಂದ್ರ ಯೋಜನೆಯ ಅನುಷ್ಠಾನವನ್ನು ಸಚಿವಾಲಯದ ಕಾರ್ಯದರ್ಶಿ ಮಾರ್ಗದರ್ಶನದ ಸಲಹಾ ಮಂಡಳಿಯ ಅಡಿಯಲ್ಲಿ ಕೈಗೊಳ್ಳಲಾಗುತ್ತಿದೆ.












Click it and Unblock the Notifications