ಶನಿವಾರ ಸಂಜೆಯಿಂದ ಪೆಟ್ರೋಲ್, ಡೀಸೆಲ್ ಸಿಗೋಲ್ಲ
ಬೆಂಗಳೂರು, ಏ.10 : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತೈಲ ಮಾರಾಟ ಸ್ಥಗಿತಗೊಳಿಸಲು ಪೆಟ್ರೋಲ್ ಬಂಕ್ ಮಾಲೀಕರು ನಿರ್ಧರಿಸಿದ್ದಾರೆ. ಇದರಿಂದ ಶನಿವಾರ ಸಂಜೆ 6 ಗಂಟೆಯಿಂದ ಭಾನುವಾರ ಬೆಳಗ್ಗೆ 6 ಗಂಟೆಯ ತನಕ ಪೆಟ್ರೋಲ್, ಡೀಸೆಲ್ ದೊರೆಯುವುದಿಲ್ಲ.
ಪೆಟ್ರೋಲ್ ಬಂಕ್ ಮಾಲೀಕರ ಮುಷ್ಕರದ ಕುರಿತು ಅಖಿಲ ಕರ್ನಾಟಕ ಪೆಟ್ರೋಲಿಯಂ ಟ್ರೇಡರ್ಸ್ ಒಕ್ಕೂಟ ಹಾಗೂ ಬೆಂಗಳೂರು ಪೆಟ್ರೋಲಿಯಂ ಡೀಲರ್ಸ್ ಸಂಸ್ಥೆಯ ಅಧ್ಯಕ್ಷ ಬಿ.ಆರ್.ರವೀಂದ್ರನಾಥ್ ಮಾಹಿತಿ ನೀಡಿದ್ದಾರೆ. ದೇಶಾದ್ಯಂತ ಬಂದ್ ನಡೆಯುತ್ತಿದ್ದು, ಕರ್ನಾಟಕವೂ ಇದಕ್ಕೆ ಬೆಂಬಲ ನೀಡಿದೆ. [ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕೊಂಚ ಇಳಿಕೆ]

ಏ.11ರ ಶನಿವಾರ ಸಂಜೆ 6 ಗಂಟೆಯಿಂದ ಏ.12ರ ಭಾನುವಾರ ಬೆಳಗ್ಗೆ 6 ಗಂಟೆಯ ತನಕ ಡೀಸೆಲ್ ಮತ್ತು ಪೆಟ್ರೋಲ್ ದೊರೆಯುವುದಿಲ್ಲ. ರಾಜ್ಯದ ಸುಮಾರು 1,800 ಮತ್ತು ಬೆಂಗಳೂರು ನಗರದ 450 ಪೆಟ್ರೋಲ್ ಬಂಕ್‌ಗಳು ಕಾರ್ಯಾಚರಣೆ ಸ್ಥಗಿತಗೊಳಿಸಲಿವೆ ಎಂದು ರವೀಂದ್ರನಾಥ್ ಹೇಳಿದ್ದಾರೆ. [ತೈಲ ಬೆಲೆ ನಿರಂತರ ಇಳಿಕೆಗೆ ನಿಜವಾದ ಕಾರಣವೇನು?]
ಬೇಡಿಕೆ ಏನು : ಡೀಸೆಲ್ ಮತ್ತು ಪೆಟ್ರೋಲ್ ಮಾರಾಟಗಾರರಿಗೆ ಶೇ.5ರಷ್ಟು ಲಾಭಾಂಶ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಈ ಮುಷ್ಕರ ನಡೆಸಲಾಗುತ್ತಿದೆ. ತೈಲ ಮಾರಾಟ ಮಾಡುವ ಡೀಲರ್‌ಗಳಿಗೆ ಒಂದು ವರ್ಷದಿಂದ ಲಾಂಭಶ ಹೆಚ್ಚಳ ಮಾಡಿಲ್ಲ ಎಂದು ರವೀಂದ್ರನಾಥ್ ದೂರಿದ್ದಾರೆ.
ಡೀಲರ್‌ಗಳು ದೊಡ್ಡ ಪ್ರಮಾಣದಲ್ಲಿ ತೈಲ ದಾಸ್ತಾನು ಮಾಡಿಕೊಂಡಾಗ ಸರ್ಕಾರ ಬೆಲೆಗಳನ್ನು ಕಡಿಮೆ ಮಾಡುತ್ತಿದೆ. ಇದರಿಂದ ನಷ್ಟ ಉಂಟಾಗುತ್ತಿದ್ದು, ಕಳೆದ ಆರು ತಿಂಗಳಿನಲ್ಲಿ ಹಲವು ಬಾರಿ ದರ ಕಡಿಮೆ ಮಾಡಲಾಗಿದೆ. ಇದನ್ನು ವಿರೋಧಿಸಿ ಏ.11ರಂದು ದೇಶಾದ್ಯಂತ ಬಂದ್‌ಗೆ ಕರೆ ನೀಡಲಾಗಿದೆ ಎಂದು ಹೇಳಿದ್ದಾರೆ.












Click it and Unblock the Notifications