Horse Race: ಕುದುರೆ ರೇಸ್‌ಗೆ ಅನುಮತಿ; 10 ದಿನದಲ್ಲಿ ತೀರ್ಮಾನಿಸಲು ಸರ್ಕಾರಕ್ಕೆ ತಾಕೀತು
ಬೆಂಗಳೂರು, ಮೇ. 24 : ಬೆಂಗಳೂರು ಟರ್ಫ್ ಕ್ಲಬ್ (ರೇಸ್ ಕೋರ್ಸ್) ನಲ್ಲಿ ಕುದುರೆ ರೇಸ್ ಆಯೋಜನೆಗೆ ಅನುಮತಿ ಕೋರಿ ಸಲ್ಲಿಸಿರುವ ಮನವಿಯನ್ನು 10 ದಿನಗಳಲ್ಲಿ ಕಾನೂನು ಬದ್ಧವಾಗಿ ಪರಿಗಣಿಸಲು ಕರ್ನಾಟಕ ಹೈಕೋರ್ಟ್ ಸರ್ಕಾರಕ್ಕೆ ತಾಕೀತು ಮಾಡಿದೆ. ಹಾಗಾಗಿ ಇದೇ ಮೇ 25 ಮತ್ತು 26 ರಂದು ನಿಗದಿಯಾಗಿದ್ದ ಕುದುರೇ ರೇಸ್ ನಡೆಯುವುದಿಲ್ಲ. ಅದಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಮುಂದೂಡಿದೆ.
ಕುದುರೆ ಪಂದ್ಯಗಳ ಆಯೋಜನೆಗೆ ಪರವಾನಿಗೆ ನೀಡದ ಸರ್ಕಾರದ ಕ್ರಮ ಪ್ರಶ್ನಿಸಿ ಬೆಂಗಳೂರು ಟರ್ಫ್‌ಕ್ಲಬ್ ಲಿಮಿಟೆಡ್, ಕರ್ನಾಟಕ ರೇಸ್ ಹಾರ್ಸ್ ಓನರ್ಸ್ ಅಸೋಸಿಯೇಷನ್ ಮತ್ತು ಕರ್ನಾಟಕ ಟ್ರೈನರ್ಸ್ ಆಸೋಸಿಯೇಷನ್ ಅರ್ಜಿ ಸಲ್ಲಿಸಿದ್ದವು. ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜೆ.ಎಸ್. ಕಮಲ್ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿ ವಿಚಾರಣೆಯನ್ನು ಜೂನ್ 6ಕ್ಕೆ ಮುಂದೂಡಿದೆ.

ಅಕ್ರಮಕ್ಕೆ ಆಸ್ಪದವಿಲ್ಲ
ಅರ್ಜಿದಾರರ ಪರ ಹಿರಿಯ ವಕೀಲರು, ರೇಸ್‌ಕೋರ್ಸ್ ಆಡಳಿತ ಮಂಡಳಿಯಲ್ಲಿ ಸರ್ಕಾರದ ಹಣಕಾಸು ಕಾರ್ಯದರ್ಶಿಗಳು, ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸದಸ್ಯರಾಗಿದ್ದಾರೆ. ರೇಸ್ ಆಯೋಜನೆಯ ಎಲ್ಲ ಚಟುವಟಿಕೆಗಳು ಸರ್ಕಾರಕ್ಕೆ ಗೊತ್ತಾಗುತ್ತಿರುತ್ತಿದ್ದು, ಅಕ್ರಮಗಳು ನಡೆಸುವ ಸಾಧ್ಯತೆಗಳು ಇಲ್ಲ ಎಂದು ವಿವರಿಸಿದರು.
ತೆರಿಗೆ ವಂಚನೆಗಾಗಿ ಅಕ್ರಮವಾಗಿ ಬೆಟ್ಟಿಂಗ್ ಮಾಡಿದ ಆರೋಪದಲ್ಲಿ ಆರೋಪ ಪಟ್ಟಿ ದಾಖಲಿಸಿರುವ ಬುಕ್ಕಿಗಳ ಪರವಾನಿಗೆಯನ್ನು ರದ್ದು ಪಡಿಸುವುದಕ್ಕಾಗಿ ಮಂಡಳಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ, ಕುದುರೆ ಪಂದ್ಯಗಳ ಆಯೋಜನೆಯಲ್ಲಿ ಬುಕ್ಕಿ ಕಂಪೆನಿಗಳಿಗೆ ಯಾವುದೇ ಸಂಬಂಧವಿರುವುದಿಲ್ಲ. ಹೀಗಾಗಿ ರೇಸ್ ಆಯೋಜನೆಗೆ ಅವಕಾಶ ಕಲ್ಪಿಸಬೇಕು ಎಂದು ಪೀಠಕ್ಕೆ ತಿಳಿಸಿದರು.

ನಾಲ್ಕು ವಾರ ಸಮಯ ಕೋರಿಕೆ:
ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಕೆ. ಶಶಿ ಕಿರಣ್ ಶೆಟ್ಟಿ, ರೇಸ್ ಆಯೋಜನೆಗೆ ಪರವಾನಿಗೆ ಕುರಿತಂತೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸುಮಾರು ಎರಡು ತಾಸು ಚರ್ಚೆಯಾಗಿದೆ. ಜತೆಗೆ, ಈ ಕುರಿತ ಇತರೆ ಪಾಲುದಾರರೊಂದಿಗೆ ಚರ್ಚೆಗಳು ನಡೆಸಬೇಕಾಗಿದ್ದು, ಅಕ್ರಮಗಳ ತಡೆಗಾಗಿ ಕಾನೂನು ಬದ್ಧವಾಗಿ ಷರತ್ತುಗಳನ್ನು ವಿಧಿಸಿ ಅನುಮತಿ ನೀಡಬೇಕಾಗಿದೆ ಎಂದರು.
ಅಲ್ಲದೆ, ರೇಸ್ ಗೆ ಕೆಲ ಆಕ್ಷೇಪಾರ್ಹ ಚಟುವಟಿಕೆಗಳನ್ನು ನಡೆಸುತ್ತಿರುವ ಸಂಬಂಧ ಸರ್ಕಾರದ ಗಮನಕ್ಕೆ ಬಂದಿದ್ದರಿಂದ ಪರವಾನಿಗೆ ವಿಳಂಬವಾಗಿದೆ. ಅಲ್ಲದೆ, 161 ವರ್ಷದಿಂದ ರೇಸ್ ಕೋರ್ಸ್‌ನಲ್ಲಿ ರೇಸ್ ನಡೆಯುತ್ತಿವೆ, ಕಳೆದ 72 ವರ್ಷಗಳಿಂದ ಪಂದ್ಯಗಳ ಆಯೋಜನೆಗೆ ಸರ್ಕಾರ ಪರವಾನಿಗೆ ನೀಡುತ್ತಿದೆ. ಆದರೆ, ಆಕ್ಷೇಪಾರ್ಹ ಚಟುವಟಿಕೆಗಳನ್ನು ಸರಿಪಡಿಸುವ ಉದ್ದೇಶದಿಂದ ವಿಳಂಬವಾಗಿದ್ದು, ಅಕ್ರಮಗಳಿಗೆ ಕಡಿವಾಣ ಹಾಕಿ ಕಾನೂನು ಬದ್ಧವಾಗಿ ಷರತ್ತುಗಳನ್ನು ವಿಧಿಸಿ ಪರವಾನಿಗೆ ನೀಡಬೇಕಾಗಿದ್ದು, ನಾಲ್ಕು ವಾರ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ, ನಾಲ್ಕುವಾರ ವಿಳಂವಾಗಲಿದ್ದು ಮುಂದಿನ 10 ದಿನಗಳಲ್ಲಿ ಅರ್ಜಿದಾರರ ಮನವಿಯನ್ನು ಪರಿಗಣಿಸಬೇಕು ಎಂದು ಸೂಚನೆ ನೀಡಿ ವಿಚಾರಣೆಯನ್ನು ಜೂನ್ 6ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ:
ಪ್ರತಿ ವರ್ಷ ರೇಸ್ ಆಯೋಜನೆಗೆ ತಿಂಗಳಿಗೊಮ್ಮೆ ಪರವಾನಿಗೆ ಪಡೆಯುವುದು ಸಾಮಾನ್ಯವಾಗಿದೆ. ಆದರೆ, ಮಾರ್ಚ್ ತಿಂಗಳಿನ ಬಳಿಕ ಕುದುರೆ ಪಂದ್ಯಗಳ ಆಯೋಜನೆಗೆ ಸರ್ಕಾರ ಅನುಮತಿ ನೀಡಿರಲಿಲ್ಲ. ಇದಾದ ಬಳಿಕ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಮನವಿಯ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಕುದುರೆ ಪಂದ್ಯಾವಳಿಗಳಿಂದ ಸುಮಾರು 2000 ಸಿಬ್ಬಂದಿ ಜೀವನೋಪಾಯಕ್ಕೆ ತೊಂದರೆಯಾಗಿದೆ. ರೇಸ್ ಆಯೋಜನೆಗೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಸೂಚನೆ ನೀಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.












Click it and Unblock the Notifications