ಪೆಪ್ಪರ್ ಸ್ಪ್ರೇ ಬಳಕೆ ಅಪಾಯಕಾರಿ, ವೈಯಕ್ತಿಕ ರಕ್ಷಣೆಗೆ ಬಳಕೆ ಸಲ್ಲ
ಬೆಂಗಳೂರು, ಮೇ 08: ಪೆಪ್ಪರ್ ಸ್ಪ್ರೇ ಬಳಸಿದ್ದ ಸಿ. ಕೃಷ್ಣಯ್ಯ ಚೆಟ್ಟಿ ಅಂಡ್ ಸನ್ಸ್ ಕಂಪೆನಿ (ಸಿಕೆಸಿ ಅಂಡ್ ಸನ್ಸ್ ಕಂಪೆನಿ) ಚಿನ್ನಾಭರಣಗಳ ಮಳಿಗೆ ನಿರ್ದೇಶಕರಲ್ಲಿ ಒಬ್ಬರಾದ ಸಿ. ಗಣೇಶ್ ನಾರಾಯಣ ಮತ್ತವರ ಪತ್ನಿ ವಿದ್ಯಾ ನಟರಾಜ್ ಎಂಬುವರ ವಿರುದ್ಧದ ಕ್ರಿಮಿನಲ್ ಪ್ರಕರಣದ ತನಿಖೆ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
ಅಲ್ಲದೆ, ಅಮೆರಿಕಾ ನ್ಯಾಯಾಲಯದ ಆದೇಶವೊಂದನ್ನು ಪ್ರಸ್ತಾಪಿಸಿರುವ ಹೈಕೋರ್ಟ್, ಪೆಪ್ಪರ್ ಸ್ಪ್ರೇ ಎನ್ನುವುದು ಅತ್ಯಂತ ಅಪಾಯಕಾರಿ ಆಯುಧವಾಗಿದೆ, ಅದನ್ನು ವೈಯಕ್ತಿಕ ರಕ್ಷಣೆಗೆ ಬಳಸುವಂತಿಲ್ಲ ಎಂದು ಆದೇಶಿಸಿದೆ.

ಬೆಂಗಳೂರಿನ ಶಿವಾಜಿನಗರದಲ್ಲಿರುವ ಸಿಕೆಸಿ ಅಂಡ್ ಸನ್ಸ್ ಮಳಿಗೆಯಲ್ಲಿನ ಭದ್ರತಾ ಸಿಬ್ಬಂದಿಯಾಗಿರುವ ರಣದೀಪ್ ದಾಸ್ ಎಂಬುವರು ಮೇಲೆ ಪೆಪ್ಪರ್ ಸ್ಪ್ರೇ ದಾಳಿ ನಡೆಸಿದ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣ ಮತ್ತದರ ಕುರಿತ ತನಿಖೆ ರದ್ದುಗೊಳಿಸಬೇಕು ಎಂದು ಕೋರಿ ಸಿ. ಗಣೇಶ್ ನಾರಾಯಣ ಮತ್ತವರ ಪತ್ನಿ ವಿದ್ಯಾ ನಟರಾಜ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ.
ಹೈಕೋರ್ಟ್ ಅದೇಶವೇನು?: ಸಾಕ್ಷ್ಯಾಧಾರಗಳ ಪರಿಶೀಲನೆ ಮತ್ತು ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಪ್ರಕರಣದಲ್ಲಿ ಎರಡೂ ಪಕ್ಷಗಾರರು ಒಬ್ಬರ ವಿರುದ್ಧ ಮತ್ತೊಬ್ಬರು ದೂರು ದಾಖಲಿಸಿದ್ದಾರೆ. ಆದರೆ, ಐಪಿಸಿ ಸೆಕ್ಷನ್ 324 ಅಡಿ ತಿಳಿಸಿರುವಂತೆ ಗುಂಡು ಹಾರಿಸುವುದು, ಚೂಪಾದ ವಸ್ತುವಿನಿಂದ ಇರಿಯುವ ಮೂಲಕ ಮೂಲಕ ಸ್ವಯಂ ಪ್ರೇರಣೆಯಿಂದ ಮತ್ತೊಬ್ಬರಿಗೆ ಗಾಯವನ್ನುಂಟು ಮಾಡುವುದು ಅಪರಾಧ ಕೃತ್ಯವಾಗಿರಲಿದೆ.
ಪೆಪ್ಪರ್ ಸ್ಪ್ರೇ ಸಹಾ ಒಂದು ಅಪಾಯಕಾರಿ ಆಯುಧ ಎನ್ನುವುದರಲ್ಲಿ ಸಂಶಯವೇ ಇಲ್ಲ. ಪೆಪ್ಪರ್ ಸ್ಪ್ರೇ ಬಳಕೆಯು ಅಪಾಯಕಾರಿ ಎಂಬುದಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಯಾವುದೇ ಕಾನೂನು ರೂಪಿಸಲಾಗಿಲ್ಲ. ಆದರೆ, 2018ರಲ್ಲಿ ಪೀಪಲ್ ವಿರುದ್ಧದ ಸ್ಯಾಂಡೇಜ್ ಪ್ರಕರಣದಲ್ಲಿ ಅಮೆರಿಕಾ ನ್ಯಾಯಾಲಯ ಪೆಪ್ಪರ್ ಸ್ಪ್ರೇಯಂತಹ ಹಾನಿಕಾರಕ ರಾಸಾಯನಿಕಗಳು ಅಪಾಯಕಾರಿ ಆಯುಧಗಳು ಎಂದು ತಿಳಿಸಿದೆ.
ಅಲ್ಲದೆ, ಈ ಪ್ರಕರಣದಲ್ಲಿ ಅರ್ಜಿದಾರರ ಜೀವಕ್ಕೆ ಅಪಾಯವಿರುವುದಿಲ್ಲ. ಹೀಗಾಗಿ ಅವರು ಪೆಪ್ಪರ್ ಸ್ಪ್ರೇ ಬಳಕೆ ಮಾಡವುದು ತಪ್ಪಾಗಿದೆ. ಆದ್ದರಿಂದ ಪ್ರಕರಣ ಸಂಬಂಧ ಕನಿಷ್ಟ ತನಿಖೆ ನಡೆಸುವುದು ಅತ್ಯಗತ್ಯವಾಗಿದೆ. ಆದ್ದರಿಂದ ಈ ಹಂತದಲ್ಲಿ ಹೈಕೋರ್ಟ್ ಮಧ್ಯಪ್ರವೇಶ ಮಾಡುವುದು ಸುಪ್ರೀಂಕೋರ್ಟ್‌ನ ವಿವಿಧ ತೀರ್ಪುಗಳಿಗೆ ವಿರುದ್ಧವಾಗಲಿದೆ ಎಂದು ತಿಳಿಸಿದ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಅರ್ಜಿದಾರರ ಪರ ವಕೀಲರು, ಅಂದು ನಡೆದ ಗಲಾಟೆಯಲ್ಲಿ ಆತ್ಮ ರಕ್ಷಣೆ ಮಾಡಿಕೊಳ್ಳುವುದಕ್ಕಾಗಿ ಪೆಪ್ಪರ್ ಸ್ಪ್ರೇ ಬಳಕೆ ಮಾಡಿಕೊಳ್ಳಲಾಗಿದೆ. ಐಪಿಸಿ ಸೆಕ್ಷನ್ 100ರ ಪ್ರಕಾರ ಸ್ವಯಂ ರಕ್ಷಣೆ ಮಾಡಿಕೊಳ್ಳುವುದು ಹಕ್ಕಾಗಾಗಿದೆ. ಆದ್ದರಿಂದ ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಗೊಳಿಸಬೇಕು ಎಂದು ವಾದಿಸಿದ್ದರು.
ಪ್ರಕರಣದ ಹಿನ್ನೆಲೆ : ಸಿಕೆಸಿ ಅಂಡ್ ಸನ್ಸ್ ಕಂಪೆನಿಯ ಪಕ್ಕದ ನಿವೇಶನದ ಮಾಲೀಕ ವಿನೋದ್ ಹಯಗ್ರೀವಾ ಎಂಬುವರು ತಮ್ಮ ಜಾಗದಲ್ಲಿ ಅತಿಕ್ರಮ ಪ್ರವೇಶ ಮಾಡದಂತೆ ನ್ಯಾಯಾಲಯದಿಂದ ಮಧ್ಯಂತರ ನಿರ್ಬಂಧಕಾಜ್ಞೆ ಪಡೆದುಕೊಂಡಿದ್ದರು.
ಈ ನಡುವೆ 2023ರ ಏಪ್ರಿಲ್ 4ರಂದು ಈ ಸ್ಥಳದಲ್ಲಿ ಉಂಟಾದ ಗಲಾಟೆಯ ವೇಳೆ ಅರ್ಜಿದಾರರಲ್ಲಿ ಒಬ್ಬರಾದ ವಿದ್ಯಾ ಅವರು ಪೆಪ್ಪರ್ ಸ್ಪ್ರೇ ಅನ್ನು ದೂರುದಾರರ ಮುಖಕ್ಕೆ ಹಾಕಿದ್ದರು. ಇದರಿಂದ ದೂರುದಾರ ದಾಸ್ ಅವರು ಪ್ರಕರಣ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.












Click it and Unblock the Notifications