ಶಕ್ತಿ ಯೋಜನೆ "ಅವ್ಯವಸ್ಥೆಗೆ" ಜನರಿಂದಲೇ ವಿರೋಧ!

Shakthi Scheme: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆಯ ಬಗ್ಗೆ ಗಂಭೀರ ಚರ್ಚೆ ಶುರುವಾಗಿದೆ. ರಾಜ್ಯ ಸರ್ಕಾರಕ್ಕೆ ಎರಡು ವರ್ಷ ತುಂಬಿರುವ ಈ ಸಂದರ್ಭದಲ್ಲಿ ಶಕ್ತಿ ಯೋಜನೆಯ ಬಗ್ಗೆ ಅಪಸ್ವರ ಶುರುವಾಗಿದೆ. ಶಕ್ತಿ ಯೋಜನೆಯಿಂದ ಜನ ಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ಇದಕ್ಕೆ ಮಿತಿ ನಿಗದಿ ಮಾಡಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಜನ ಸಾಮಾನ್ಯರು ಹಾಗೂ ಬರಹಗಾರರು ಅವರಿಗೆ ಎದುರಾಗಿರುವ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದಾರೆ.

ಶಕ್ತಿ ಯೋಜನೆಯ ಸಮಸ್ಯೆಗಳು ಹಾಗೂ ಸರ್ಕಾರದ ನೀತಿಯ ಬಗ್ಗೆ ಬರಹಗಾರ ಮತ್ತು ಕವಿ ರಾಜೇಂದ್ರ ಪ್ರಸಾದ್‌ ಅವರು ಬರೆದುಕೊಂಡಿದ್ದು ಇದು ಚರ್ಚೆಗೆ ಕಾರಣವಾಗಿದೆ. ಮೇ ಸಾಹಿತ್ಯ ಮೇಳದಲ್ಲಿ ಭಾಗವಹಿಸಲೆಂದು ಈಚೆಗೆ ಮಂಡ್ಯ ಬಸ್ ನಿಲ್ದಾಣ ತಲುಪಿದೆ. ಮಂಡ್ಯ ಬಸ್ ನಿಲ್ದಾಣದಲ್ಲೇ ಹತ್ತತ್ತಿರ ಎರಡು ಗಂಟೆ ಕಾದೆ. ಆ ಅವಧಿಯೊಳಗೆ ಬಂದ 15+ ಬಸ್ ಗಳನ್ನು ಹತ್ತಲು ಸಾಧ್ಯವಾಗಲೇ ಇಲ್ಲ. ಬಸ್ಸಿನೊಳಗೆ, ಹೊರಗೆ ಹೆಣ್ಣು ಮಕ್ಕಳ ಸಾಮ್ರಾಜ್ಯವೇ ತುಂಬಿತ್ತು. ಕನಿಷ್ಠ ನಿಂತು ಪ್ರಯಾಣ ಮಾಡಲು ಸಾಧ್ಯವಿರದಷ್ಟು ಸಂದಣಿ ಇತ್ತು ಎಂದು ಅವರು ಬರೆದುಕೊಂಡಿದ್ದಾರೆ.

People oppose chaos shakthi bus 5 guarantee

ಮುಂದುವರಿದು ಎಷ್ಟು ಜನ ಖಾಲಿಯಾಗುತ್ತಾರೋ ಅದಕ್ಕಿಂತ ಒಂದು ಪಟ್ಟು ಹೆಚ್ಚೇ ಜನ ಬಸ್ ಸ್ಟಾಂಡಿನೊಳಗೆ ಪ್ರವಾಹದಂತೆ ಬರುತ್ತಿದ್ದರು. ನೇರ ಬಸ್ಸುಗಳು ಕೂಡ ಬಹಳ ಕಡಿಮೆ ಇದ್ದುವು. ಒಂದೇ ಒಂದು ಬಂತು. ಅದನ್ನು ಹತ್ತಿ ಕಿತ್ತಾಡುವುದನ್ನ ನೋಡಿ ದೂರವೇ ಉಳಿದುಬಿಟ್ಟೆ. ಯಾವ ಬಸ್ ಬಂದರೂ ಹತ್ತಿರ ಸುಳಿಯಲು ಕೂಡ ಜಾಗವಿಲ್ಲದಂತೆ ಹೆಂಗಸರು ಆವರಿಸಿಬಿಡುತ್ತಿದ್ದರು. ಕಡೆಗೆ ಇನ್ನು ಹೊರಟರೂ ಬೆಂಗಳೂರು ತಲುಪಿ ಸಿಂಧನೂರು ಬಸ್ ಹತ್ತುವುದು ಸಾಧ್ಯವಿರಲಿಲ್ಲ. ಬಸ್ ಹತ್ತುವ ಸರ್ಕಸ್ಸಿನ ಆಯಾಸದಿಂದ ಬೇಸತ್ತು ಬ್ಯಾಗೇರಿಸಿಕೊಂಡು ಮನೆಗೆ ಮರಳಿದೆ.

ಈಚೆಗೆ ಹತ್ತಾರು ಬಾರಿ ಬಸ್ ಪ್ರಯಾಣ ಮಾಡುವಾಗ ಗಮನಿಸಿದ್ದು ; ಸರ್ಕಾರವು ಶಕ್ತಿಯೋಜನೆಯನ್ನು ತಂದಿದ್ದೇನೋ ಸರಿ. ಅದಕ್ಕೆ ಮಿತಿಯಿರದೇ ಹೋದರೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತೊಂದು ಸರ್ಕಾರ ಬರುವುದರೊಳಗೆ ಹಳ್ಳ ಹಿಡಿಯುತ್ತದೆ. ದಿನವೂ ಕೆಲಸಕ್ಕಾಗಿ ಪ್ರಯಾಣ ಮಾಡುವರ ಕಥೆ ನೆನೆಸಿಕೊಂಡರೆ ದಿಗಿಲಾಗುತ್ತದೆ ಎಂದಿದ್ದಾರೆ. ಇದೇ ಮಾತನ್ನು ಹಲವರು ಹೇಳಿದ್ದಾರೆ. ಶಕ್ತಿ ಯೋಜನೆಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ.

ಮುಂದುವರಿದು ಈ ಪೋಸ್ಟ್ ಒಂದು ಪಡಿಪಾಟಲು ಅಷ್ಟೇ! ಅದರ ಕಡೆಯಲ್ಲಿ ನನ್ನ ವೈಯಕ್ತಿಕ ಅನಿಸಿಕೆ ತಿಳಿಸಿದ್ದೇನೆ. ಇದು ವಿರೋಧ, ಪರ ಎಂಬುದೇನೂ ಅಲ್ಲ. ಯಾವುದೇ ಸರ್ಕಾರ ಎಂತಹದೇ ಯೋಜನೆ ತಂದರೂ ನಾನು ಅದರ ಪರ ವಹಿಸಲಾರೆ. ಸರ್ಕಾರದ ಕೆಲಸವೇ ಜನರಿಗೆ ಒಳ್ಳೆಯ ವ್ಯವಸ್ಥೆಗಳನ್ನು ಕಲ್ಪಿಸುವುದಾಗಿದೆ. ಹಾಗೆ ಕಲ್ಪಿಸುವಾಗ ಎಲ್ಲ ನಾಗರೀಕರನ್ನು ಗಮನದಲ್ಲಿಟ್ಟುಕೊಳ್ಳಬೇಕಾದ್ದು ಅನಿವಾರ್ಯ ಅಗತ್ಯ.

ಶಕ್ತಿ ಯೋಜನೆಯನ್ನು ಕೂಡ ಹಾಗೇ ಮಾಡಬೇಕಲ್ಲವೇ?! ಯೋಜನೆ ಜಾರಿಗೆ ಬಂದು ಇಷ್ಟು ದಿನಗಳಾದರೂ ಅದಕ್ಕೆ ತಕ್ಕನಾದ ವ್ಯವಸ್ತೆಗಳನ್ನು ಕಲ್ಪಿಸದೇ ಹೋದರೆ ಅದು ವಿಫಲ ಯೋಜನೆಯಾಗುವುದಿಲ್ಲವೇ?! ಶಕ್ತಿ ಯಾತಕ್ಕೆ ಬೇಕು ಅಂತ ಗೊತ್ತಿರುವ ಸರ್ಕಾರಕ್ಕೆ ಅದಕ್ಕೆ ವ್ಯವಸ್ತಿತವಾದ ಸಾರಿಗೆಯನ್ನೂ ಒದಗಿಸಬೇಕು ಎಂಬ ಪ್ರಜ್ಞೆ ಇಲ್ಲದೇ ಹೋದರೆ 'ಸಾರ್ವಜನಿಕ ಸಾರಿಗೆ ವ್ಯವಸ್ಥೆ' ಹಳ್ಳ ಹಿಡಿಯುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಶಿಕ್ಷಿತರು ಸರ್ಕಾರದ ಪರವಾಗಿ ವಕಾಲತ್ತು ವಹಿಸುವ ಬದಲು ಸಮಸ್ಯೆಯ ಬಗ್ಗೆ ನಿಗಾವಹಿಸುವುದು ಅಗತ್ಯ. ಶಕ್ತಿಯೋಜನೆಯನ್ನು ಜಾರಿಗೆ ತಂದು, ಸಾರಿಗೆ ಕಡಿಮೆ ಮಾಡಿದರೆ ಕಡೆಗೆ ಹೆಣ್ಣುಮಕ್ಕಳ ಓಡಾಟದಿಂದ ಸಮಸ್ಯೆಯಾಗುತ್ತಿದೆ ಎಂಬ ಭಾವ ಹರಡಿದರೆ ಅದಕ್ಕೆ ಸರ್ಕಾರವೇ ಕಾರಣವಲ್ಲವೇ? ಈ ಮೂಲಕ ಏನನ್ನು ಸಾಧಿಸಲು ಸರ್ಕಾರ ಹವಣಿಸುತ್ತಿದೆ.

ಹೆಣ್ಣು ಮಕ್ಕಳ ಬಗ್ಗೆ ಕೇಡಿನ ಭಾವ ಹಬ್ಬಿಸಲೊ ಅಥವಾ ಸಾರ್ವಜನಿಕ ಸಾರಿಗೆಯನ್ನು ಖಾಸಗಿಗೆ ವರ್ಗಾಯಿಸುವ ಹುನ್ನಾರವೋ ಯೋಚಿಸಬೇಕಲ್ಲವೇ?! ಕಡೆಗೆ ಈ ಮಿತಿಯೇ ಇಲ್ಲ ಯೋಜನೆಯಿಂದ ದೇವಸ್ಥಾನಗಳಿಗೆ ಇಷ್ಟು ನೂರು ಕೋಟಿ ಆದಾಯ ಬಂದಿದೆ ಅಂತ ಸ್ವತಃ ಮುಖ್ಯಮಂತ್ರಿಗಳೇ ಪತ್ರಿಕಾ ಹೇಳಿಕೆ ಕೊಟ್ಟಿದ್ದಾರೆ. ಆದ್ರೆ ಅದಕ್ಕಾಗಿ ಸರ್ಕಾರ ಎಷ್ಟು ಸಾವಿರ ಕೋಟಿ ಖರ್ಚು ಮಾಡಿತು?! ಶಿಕ್ಷಣ, ಆರೋಗ್ಯ, ಆಹಾರಗಳ ಮೇಲೆ ಹೂಡಿಕೆ ಮಾಡದೇ ಇದರ ಮೇಲೆ ಸಾವಿರಾರು ಕೋಟಿ ಹೂಡುತ್ತಿರುವ ಸರ್ಕಾರ ಉದ್ದೇಶವಾದರೂ ಏನು ಎಂದು ಪ್ರಶ್ನೆ ಮಾಡಿದ್ದಾರೆ.

ಆದಿತ್ಯ ಎನ್ನುವವರು, ಕಳೆದ ವರ್ಷದವರೆಗೂ ಕಾಲೇಜಿಗೆ, ಈಗ ಪ್ರತಿದಿನ ಕೆಲಸಕ್ಕೆ ಹೋಗುವಾಗ, ಅನುಭವಿಸುತ್ತಲೇ ಇರುವ ಪಾಡಿದು ಎಂದು ಹೇಳಿದ್ದಾರೆ. ಯೋಜನೆಯ ಉದ್ದೇಶ ಯೋಗ್ಯವಾಗಿದ್ದರೂ ಯೋಜನೆಯನ್ನು ಅನುಷ್ಠಾನಕ್ಕೆ ತಂದ ರೀತಿಯಲ್ಲಿ ಏನೋ ಸಮಸ್ಯೆಯಿದೆ ಅನ್ನಿಸಿದೆ..
ಕೇವಲ ಮೈಸೂರು ಬೆಂಗಳೂರು ಮಾರ್ಗದಲ್ಲಷ್ಟೇ ಅಲ್ಲ.. ಮುಂಚೆ ಇದ್ದಷ್ಟು ಬಸ್ ಈಗ ಯಾವ ರೂಟಿಗೂ ಇಲ್ಲ... ಬಹಳ ತ್ರಾಸು.. ಈ ಸಂದಣಿಯಿಂದ, ನಡೆಯುವ ಅತಿಯಾದ ಜಗಳಗಳಂತೂ ಸಾಮಾನ್ಯವಾಗಿಹೋಗಿದೆ. ರಶ್ ಇದ್ದುದ್ದನ್ನೇ ಬಳಸಿಕೊಂಡು ಕಳ್ಳತನ ಮಾಡುವುದಂತೂ ತೀರಾ ಹೆಚ್ಚಿದೆ.

ಬರೀ ಶ್ರೀರಂಗಪಟ್ಟಣದಲ್ಲಿಯೇ ವಾರಕ್ಕೊಂದೆರಡಾದರೂ ಮೊಬೈಲು, ನಾಕೈದು ಪರ್ಸುಗಳು ಕಳ್ಳತನವಾಗ್ತಿದೆ. ಶ್ರೀರಂಗಪಟ್ಟಣ-ಮಂಡ್ಯ/ಪಾಂಡವಪುರ ಈ ರೂಟುಗಳ ಬಸ್ಸುಗಳಿಗೆ ಜನ ಹತ್ತುವಾಗ ಹೋಮ್‌ಗಾರ್ಡುಗಳು ಲಾಠಿ ಹಿಡಿದು ಬರಲೇಬೇಕು. ಇವುಗಳೆಲ್ಲವುಗಳ ಜೊತೆ ಬಸ್ಸುಗಳ ಸ್ಥಿತಿಯೂ ಹಾಳಾಗುತ್ತಿರುವುದು ಸತ್ಯ ಎಂದು ಹೇಳಿದ್ದಾರೆ.

ಇನ್ನು ಕೆಲವರು ಇದು ತಪ್ಪು ಅಭಿಪ್ರಾಯ ಅಂತಲೂ ವಾದಿಸಿದ್ದಾರೆ. ಬಾಪು ಅಮ್ಮೆಂಬಳ ಅವರು, ಮಹಿಳೆಯರು ಪ್ರಯಾಣಿಸುವುದನ್ನು ನಾವು ಸಕಾರಾತ್ಮಕವಾಗಿ ನೋಡಬೇಕು. ಮತ್ತು ಈ ಮಹಿಳೆಯರು ಸೇರಿದಂತೆ ಎಲ್ಲರೂ ಸುಗಮವಾಗಿ ಪ್ರಯಾಣಿಸಲು ಸರ್ಕಾರ ಬಸ್ಸುಗಳ ಸಂಖ್ಯೆ ಹೆಚ್ಚಿಸಲಿ ಎಂದು ಆಗ್ರಹಿಸಿಬೇಕು ಅಂತ ಹೇಳಿದ್ದಾರೆ.

ಸಮುದ್ಯತಾ ಕಂಜರ್ಪಣೆ ಅವರು, ಯೋಜನೆ ಬಂದಾಗಿನಿಂದ ಮಹಿಳೆಯರು ಮಾನವೀಯತೆ ಮರೆತು ಗರ್ಭಿಣಿಯರಿಗೆ, ಅಂಗವಿಕಲರಿಗೆ, ವೃದ್ಧರಿಗೆ ಸೀಟ್ ಕೊಡೋದೇ ಮರೆತ ಉದಾಹರಣೆಗಳು ಹೆಚ್ಚಾಗಿವೆ ಎನ್ನುವ ಗಂಭೀರ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

ಎಲ್ಲರೂ ಪೀಕ್ ಅವರ್ಸ್ ನಲ್ಲೇ ಹೋಗೋದರಿಂದ ವಿದ್ಯಾರ್ಥಿಗಳಿಗೆ, ಇತರ ನೌಕರರು ಕಾರ್ಮಿಕರಿಗೆ ತುಂಬಾ ಕಷ್ಟ ಆಗ್ತಿದೆ. ಸೌಲಭ್ಯ ಪಡ್ಕೊಳೋದು ದೊಡ್ಡದಲ್ಲ, ಅದಾದ ನಂತರ ಸಂವೇದನೆಯಿಂದ ನಮ್ಮಿಂದ‌ ಸಮಾಜಕ್ಕೂ ತೊಂದರೆ ಆಗಬಾರದು‌ ಅನ್ನೋ‌ ರೀತಿ ಅದನ್ನ ಬಳಸಿಕೊಳ್ತಾ ಇರೋರು ಕಡಿಮೆಯಾಗಿದ್ದಾರೆ ಎಂದು ಹೇಳಿದ್ದಾರೆ.

ಎನ್ ಲಿಂಗರಾಜಮೂರ್ತಿ ಮುತ್ತನಹಳ್ಳಿ ಅವರು, ಶಕ್ತಿ ಯೋಜನೆ ಜಾರಿಯಾದ ಮೇಲೆ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸುವುದು ಬಹಳ ಕಷ್ಟದ ಕೆಲಸ ಎಂಬಂತಾಗಿದೆ. ಶಾಲಾ - ಕಾಲೇಜುಗಳಿಗೆ ಹೋಗುವ ಮಕ್ಕಳು ಸರಿಯಾದ ಸಮಯಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ.

ನಾನು ಮೈಸೂರಿಗೆ ಹೋಗಬೇಕಾದರೆ ಮಳವಳ್ಳಿಯಲ್ಲಿ ಬೈಕ್ ನಿಲ್ಲಿಸಿ,ಮಳವಳ್ಳಿಯಿಂದ ಮೈಸೂರಿಗೆ ಯಾವಾಗಲೂ ಬಸ್ಸಿನಲ್ಲೇ ಪ್ರಯಾಣಿಸುತ್ತಿದ್ದೆ. ಆದರೆ ಶಕ್ತಿ ಯೋಜನೆ ಜಾರಿಯಾದ ಮೇಲೆ ಬಸ್ಸಿನಲ್ಲಿ ಹೋಗಲು ಬಹಳ ಕಷ್ಟವಾಗುತ್ತಿದೆ ಹಾಗಂತ ಬೈಕಿನಲ್ಲೇ ಹೋಗಿ ಬರಲೂ ದೈಹಿಕ ಹಾಗೂ ಮಾನಸಿಕವಾಗಿ ಬಹಳ ಶ್ರಮ.
ಒಟ್ಟಾರೆ ಶಕ್ತಿ ಯೋಜನೆ ಜಾರಿಯಾದ ಮೇಲೆ ಮಹಿಳೆಯರೂ ಸೇರಿದಂತೆ ಎಲ್ಲ ಪ್ರಯಾಣಿಕರಿಗೂ ಬಹಳ ಕಷ್ಟವಾಗುತ್ತಿದೆ. ಯೋಜನೆ ಜಾರಿಯ ಜೊತೆಗೆ ಎಲ್ಲ ಮಾರ್ಗಗಳಿಗೂ ಹೆಚ್ಚು ಬಸ್ ಸೌಲಭ್ಯ ಕಲ್ಪಿಸಲು ಸರ್ಕಾರ ಮುಂದಾಗಬೇಕಿದೆ ಆದರೆ ನಮ್ಮ ರಾಜಕಾರಣಿಗಳಿಗೆ ಅವರ ಅಧಿಕಾರ ಮುಖ್ಯವೇ ಹೊರತು ಜನರ ಬವಣೆಗಳ ಪರಿಹಾರವಲ್ಲ. "ನುಡಿದಂತೆ ನಡೆದಿದ್ದೇವೆ" ಇಷ್ಟೇ ನಮ್ಮ ಕೆಲಸ. ಕಷ್ಟ ಸುಖ ಎಲ್ಲ ನಿಮ್ದೇ ಎನ್ನುವಂತಿದೆ ಸರ್ಕಾರದ ನಿಲುವು ಎಂದು ಅಭಿಪ್ರಾಯಪಟ್ಟಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+