ಸಿಹಿ ಸುದ್ದಿ: ಕಾಡಂಚಿನಲ್ಲಿ ಎಸ್‌ಟಿ ಸಮುದಾಯದವರಿಗೆ ಜಮೀನು ನೀಡಲಿರುವ ರಾಜ್ಯ ಸರ್ಕಾರ
ಕಾಡಿನಲ್ಲಿ ವಾಸಿಸುವ ಎಸ್‌ಟಿ ಸಮುದಾಯಗಳಿಗೆ ಪ್ರಾಣಿಗಳ ಹಾವಳಿ ಹೆಚ್ಚು. ಅಂತವರಿಗೆ ಕಾಡಂಚಿನಲ್ಲಿ ಜಮೀನು ಒದಗಿಸಿ ಪುನರ್ವಸತಿಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಚಾಮರಾಜನಗರ, ಮಾರ್ಚ್ 01: ಅರಣ್ಯ ಪ್ರದೇಶ/ಕಾಡಿನಲ್ಲಿ ವಾಸಿಸುವ ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಪ್ರಾಣಿಗಳ ಹಾವಳಿ ಹೆಚ್ಚಿರುತ್ತದೆ. ಅಂತವರಿಗೆ ಕಾಡಂಚಿನಲ್ಲಿ ಜಮೀನು ಒದಗಿಸಿ ಪುನರ್ವಸತಿಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಯ ನೀಡಿದರು.
ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ವಿಜಯ ಸಂಕಲ್ಪ ರಥ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಚಾಲನೆ ನೀಡಿದರು. ಈ ವೇಳೆ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿಗಳು, ಕಾಡಂಚಿನ ಸಮುದಾಯಗಳ ಬಗ್ಗೆ ಈ ವರ್ಷದ ಆಯವ್ಯಯದಲ್ಲಿ ಆದ್ಯತೆ ನೀಡಲಾಗಿದೆ. ಅರಣ್ಯದಲ್ಲಿ ಬದುಕು ನಡೆಸುತ್ತಿರುವ ಜನರಿಗೆ ಭೂಮಿ ನೀಡಲು ಕಾನೂನು ತಿದ್ದುಪಡಿ ಮಾಡಲು ಕೇಂದ್ರಕ್ಕೆ ಶಿಫಾರಸು ಮಾಡಲಿದ್ದೇವೆ ಎಂದರು.

ಕಾಡಂಚಿನ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಖ್ಯೆ ಹೆಚ್ಚಿಸುವ ಬೇಡಿಕೆ ಇದೆ. ಈ ವರ್ಷ ಹೊಸದಾಗಿ 68 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಪ್ರಾರಂಭಿಸಲು ಯೋಜನೆ ರೂಪಿಸಲಾಗಿದೆ. ಈ ಯೋಜನೆಯಡಿ ಜಿಲ್ಲೆಯ ಈ ಭಾಗದ ಕಾಡಂಚಿನಲ್ಲಿರುವ ಜನರಿಗಾಗಿ ಆರೋಗ್ಯ ಕೇಂದ್ರಗಳಿಗೆ ವ್ಯವಸ್ಥೆ ಮಾಡಲಾಗುವುದು.
ಸ್ವಯಂ ಉದ್ಯೋಗ ಒದಗಿಸುತ್ತೇವೆ:ಸಿಎಂ
ಸ್ತ್ರೀಸಾಮರ್ಥ್ಯ ಯೋಜನೆಯಡಿ ಪ್ರತಿ ಗ್ರಾಮದ ಎರಡು ಸ್ತ್ರೀಶಕ್ತಿ ಸಂಘಗಳಿಗೆ ಒಟ್ಟು ಐದು ಲಕ್ಷ ರೂಪಾಯಿವರೆಗೆ ಅನುದಾನ ನೀಡಿ, ಅವರಿಂದ ಉತ್ಪಾದನೆ ಹೆಚ್ಚಿಸಿದ ಮಾರುಕಟ್ಟೆಗೆ ಸಂಪರ್ಕ ಸಾಧಿಸುವುದು. ಅರಣ್ಯ ಉತ್ಪನ್ನಗಳ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಇಲ್ಲಿ ಅವಕಾಶವಿದೆ. ಸ್ತ್ರೀಸಾಮರ್ಥ್ಯ ಯೋಜನೆಯಡಿ ಇದೇ ತಿಂಗಳು ಆರ್ಥಿಕ ನೆರವು, ತರಬೇತಿ ನೀಡಿ ಸ್ವಯಂ ಉದ್ಯೋಗ ಕಲ್ಪಿಸಲಾಗುವುದು. ಮಹಿಳೆಯರು ಮತ್ತು ಯುವ ಜನಾಂಗಕ್ಕೆ ಸ್ವಯಂ ಉದ್ಯೋಗ ನೀಡಿ ಸ್ವಾವಲಂಬಿ ಬದುಕು ನೀಡಲಾಗುವುದು ಎಂದು ಹೇಳಿದರು.

ಕೃಷಿಕರಿಗಾಗಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆ, ಉಜ್ವಲ ಯೋಜನೆ, ಆತ್ಮನಿರ್ಭರ ಯೋಜನೆ, ಆಯುಷ್ಮಾನ್ ಭಾರತ್ ಯೋಜನೆ ಸೇರಿದಂತೆ ಹಲವು ಜನಪರ ಕಾರ್ಯಕ್ರಮ ಅನುಷ್ಠಾನಗೊಂಡಿವೆ. ರಾಜ್ಯದಲ್ಲಿ ಎಸ್‌ಸಿ ಮತ್ತು ಎಸ್‌ಟಿಗಳ ಮೀಸಲಾತಿ ಹೆಚ್ಚಿಸಲಾಗಿದೆ. ಆ ಸಮುದಾಯದವರಿಗೆ 75 ಯೂನಿಟ್ ಉಚಿತ ವಿದ್ಯುತ್, ಮನೆ ನಿರ್ಮಿಸಿಕೊಡಲಾಗುತ್ತದೆ ಎಂದು ಅವರು ವಿವರಿಸಿದರು.
ಕೃಷಿ ಕಾರ್ಮಿಕರಾಗಿ ದುಡಿಯುವ ಹೆಣ್ಣು ಮಕ್ಕಳಿಗೆ ಗೃಹಿಣಿ ಶಕ್ತಿ ಯೋಜನೆಯ ಮೂಲಕ ಪ್ರತಿ ಮಾಹೆ 1000 ರೂ.ಗಳನ್ನು ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪಾಸ್, ಪಿಯುಸಿ ಯಿಂದ ಡಿಗ್ರಿವರೆಗೆ ಉಚಿತ ಶಿಕ್ಷಣ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ರೂಪಿಸಲಾಗಿದೆ. ರೈತ ವಿಮಾ ಯೋಜನೆ , ರೈತ ವಿದ್ಯಾನಿಧಿ ಯಂತಹ ರೈತಪರ ಯೋಜನೆಗಳನ್ನು ರೂಪಿಸಲಾಗಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ ಧ್ಯೇಯದೊಂದಿಗೆ ರಾಜ್ಯದಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದರು.
ಯಾತ್ರೆಯಿಂದ ಪಕ್ಷದ ಆತ್ಮವಿಶ್ವಾಸ ಇಮ್ಮಡಿ
ಬಿಜೆಪಿಯು ಮಲೆಮಹದೇಶ್ವರ ಕ್ಷೇತ್ರದಿಂದ ವಿಜಯಸಂಕಲ್ಪ ಯಾತ್ರೆ ಆರಂಭಿಸಿದ್ದು, ಇದು ದಾವಣಗೆರೆ ಜಿಲ್ಲೆಯ ಮುಕ್ತಾಯಗೊಳ್ಳಲಿದೆ. ಜನಸಂಕಲ್ಪ ಯಾತ್ರೆಯಿಂದ ನಮಗೆ ಹೆಚ್ಚು ಪ್ರೇರಣೆ ದೊರೆತಿದ್ದು, ಪಕ್ಷದ ಆತ್ಮವಿಶ್ವಾಸ ಹೆಚ್ಚಾಗಿದೆ. ಎಸ್ ಟಿ ಸಮುದಾಯದವರನ್ನು ಗೌರವಾನ್ವಿತ ರಾಷ್ಟ್ರಪತಿಗಳಾಗಿರುವ ಮೂಲಕ ಈ ಜನಾಂಗದವರಲ್ಲಿ ಆತ್ಮವಿಶ್ವಾಸ ಮೂಡಿದೆ. ಕೇಂದ್ರ ಮತ್ತು ರಾಜ್ಯದ ಡಬಲ್ ಇಂಜಿನ್ ಸರ್ಕಾರದಿಂದ ಜನಕಲ್ಯಾಣ ಕಾರ್ಯಕ್ರಮಗಳನ್ನು ಸಾಕಾರಗೊಳಿಸಲಾಗುತ್ತಿದೆ ಎಂದು ಬೊಮ್ಮಾಯಿ ಹೇಳಿದರು.












Click it and Unblock the Notifications