Passport; ಕ್ರಿಮಿನಲ್ ಕೇಸ್ ಬಾಕಿ ಇದ್ದರೆ ಪಾಸ್‌ಪೋರ್ಟ್ ನವೀಕರಣವಿಲ್ಲ
ಬೆಂಗಳೂರು, ಡಿಸೆಂಬರ್ 06: ಕ್ರಿಮಿನಲ್ ಕೇಸ್ ಬಾಕಿ ಇದ್ದರೆ ಪಾಸ್‌ಪೋರ್ಟ್ ನವೀಕರಣವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ತಾಯಿಯ ಕೊಲೆ ಪ್ರಕರಣದ ಆರೋಪ ಎದುರಿಸುತ್ತಿದ್ದ ತುಮಕೂರಿನ ವ್ಯಕ್ತಿಯ ಪಾಸ್‌ಪೋರ್ಟ್ ನವೀಕರಣಕ್ಕೆ ಅವಕಾಶ ನೀಡಲಾಗದು ಎಂದು ಕೋರ್ಟ್ ಆದೇಶಿಸಿದೆ.
ಪಾಸ್‌ಪೋರ್ಟ್ ನವೀಕರಣಕ್ಕೆ ನಿರಾಕರಣೆ ಮಾಡಿ ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ನೀಡಿದ್ದ ಹಿಂಬರಹವನ್ನು ಕೋರ್ಟ್ ಆದೇಶದಲ್ಲಿ ಎತ್ತಿಹಿಡಿದಿದೆ. ಸೆಷನ್ಸ್ ಕೋರ್ಟ್ ಮುಂದೆ ಕ್ರಿಮಿನಲ್ ಪ್ರಕರಣ ಬಾಕಿ ಇರುವ ಸಂತೋಷ್ ಬೀಜಾಡಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.

"ಪಾಸ್‌ಪೋರ್ಟ್ ಕಾಯಿದೆಯ ಯಾವುದೇ ನಿಯಮಗಳಲ್ಲಿ ಪಾಸ್‌ಪೋರ್ಟ್ ವಿತರಣೆ/ ನವೀಕರಣಕ್ಕೆ ಬಾಕಿ ಇರುವ ಕ್ರಿಮಿನಲ್ ಕೇಸ್ ಅನ್ನು ಅಲಕ್ಷಿಸುವ ಯಾವುದೇ ಪ್ರತ್ಯೇಕ ಮಾನದಂಡವಿಲ್ಲ" ಎಂದು ಕೋರ್ಟ್ ಆದೇಶಿಸಿದೆ.
ಭಿನ್ನ ತೀರ್ಪು: ಈ ಹಿಂದೆ ಹೈಕೋರ್ಟ್‌ನ ಮೂರು ಪ್ರತ್ಯೇಕ ಏಕಸದಸ್ಯಪೀಠಗಳು, ಕ್ರಿಮಿನಲ್ ಪ್ರಕರಣ ಬಾಕಿ ಇರುವುದು ಪಾಸ್‌ಪೋರ್ಟ್ ನವೀಕರಣಕ್ಕೆ ಅಡ್ಡಿಯಲ್ಲ ಎಂದು ಆದೇಶಿಸಿದ್ದವು. ಆದರೆ ಇದೀಗ ಕೋರ್ಟ್ ಕ್ರಿಮಿನಲ್ ಕೇಸ್ ಇರುವುದು ಅಡ್ಡಿ ಎಂದು ಹೇಳುವ ಮೂಲಕ ಭಿನ್ನವಾದ ತೀರ್ಪು ನೀಡಿದೆ.
"ಭಾರತೀಯ ಸಂವಿಧಾನದ 226ನೇ ವಿಧಿಯಡಿ ಲಭ್ಯವಿರುವ ಅಧಿಕಾರವನ್ನು ಬಳಸಿ ಈ ಕೋರ್ಟ್ ಒಂದು ಆದೇಶದ ಮೂಲಕ ನಿಯಮವನ್ನು ಸರಳೀಕರಣ ಮಾಡಲಾಗದು. ಸೆಕ್ಷನ್ 6(2) (ಎಫ್ ) ಪ್ರಕಾರ ಯಾವುದೇ ಪೋಸ್‌ಪೋರ್ಟ್ ಅರ್ಜಿ ಸಲ್ಲಿಕೆಯಾದರೂ ಸಹ ಅದು ಹೊಸದಾಗಿ ವಿತರಣೆ, ನವೀಕರಣ ಹಾಗೂ ಮರು ವಿತರಣೆಗೆ ಆಗಿರಬಹುದು, ಅಂತಹ ವೇಳೆ ನಿಯಮಗಳನ್ನು ಸಡಿಲಿಕೆ ಮಾಡಲಾಗದು" ಎಂದು ಹೇಳಿದೆ.
ಆದರೆ ಹೈಕೋರ್ಟ್ ಅರ್ಜಿದಾರರು ತಮ್ಮ ವಿರುದ್ಧ ಎಲ್ಲಿ ಕ್ರಿಮಿನಲ್ ಕೇಸ್ ಬಾಕಿ ಇದೆಯೋ ಅದೇ ಕೋರ್ಟ್‌ನಲ್ಲಿ ಅಲ್ಪಾವಧಿಯ ಪಾಸ್‌ಪೋರ್ಟ್ ವಿತರಣೆಗೆ ಅರ್ಜಿ ಸಲ್ಲಿಸಬಹುದು. ಆ ಕೋರ್ಟ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಅರ್ಜಿಯನ್ನು ಪರಿಗಣಿಸಬಹುದು ಎಂದು ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರರಿಗೆ 2014ರ ಏ.11ರಂದು 10 ವರ್ಷಗಳ ಅವಧಿಗೆ ಅಂದರೆ 2024ರ ಏ.10ರವರೆಗೆ ಮಾನ್ಯತೆ ಇರುವ ಪಾಸ್‌ಪೋರ್ಟ್ ವಿತರಣೆ ಮಾಡಲಾಗಿತ್ತು. ಆ ಅವಧಿಯಲ್ಲಿ ತಮ್ಮ ತಾಯಿಯ ಸಾವಿನ ಸಂಬಂಧ ಅವರ ವಿರುದ್ಧ ಐಪಿಸಿ ಸೆಕ್ಷನ್ 302,201, 120ಬಿ ಮತ್ತು 182ರ ಅನ್ವಯ ಕ್ರಿಮಿನಲ್ ಕೇಸ್ ದಾಖಲಾಗಿತ್ತು. ಪ್ರಕರಣದಲ್ಲಿ ಅರ್ಜಿದಾರರು ಎರಡನೇ ಆರೋಪಿ, ಅವರ ತಂದೆ ಮತ್ತು ಪತ್ನಿ ಕ್ರಮವಾಗಿ ಮೊದಲನೇ ಮತ್ತು ಮೂರನೇ ಆರೋಪಿಯಾಗಿದ್ದರು.
ಆ ಸಂಬಂಧದ ಪ್ರಕರಣ ತುಮಕೂರಿನ ಸೆಷನ್ಸ್ ಕೋರ್ಟ್ ಮುಂದೆ ವಿಚಾರಣೆ ಬಾಕಿ ಇತ್ತು. ಆ ಅವಧಿಯಲ್ಲಿ ಅವರು ಪಾಸ್‌ಪೋರ್ಟ್ ಮರು ವಿತರಣೆ ಕೋರಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ತಿರಸ್ಕರಿಸಿ ಹಿಂಬರಹ ನೀಡಿದ್ದರು. ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.












Click it and Unblock the Notifications