ಲೋಕಸಭಾ ಚುನಾವಣೆಗೆ ದಳಪತಿ ಭರ್ಜರಿ ತಯಾರಿ; ಸಿದ್ದತೆ ಹೇಗಿದೆ ಗೊತ್ತಾ?: ಎಚ್ ಡಿ ಕುಮಾರಸ್ವಾಮಿ ಹೇಳಿದಿಷ್ಟು!
ಬೆಂಗಳೂರು, ಅಕ್ಟೋಬರ್ 19: 2024 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಠಕ್ಕರ್ ಕೊಡಲು ನಿರ್ಧರಿಸಿರುವ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಪಕ್ಷವನ್ನು ಬಲಿಷ್ಠವಾಗಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತದೆ. ವಿಜಯದಶಮಿ ಬಳಿಕ ಪಕ್ಷ ಸಂಘಟನೆ ಹಾಗೂ ರಾಜ್ಯದ ಸಮಸ್ಯೆ ಹಿನ್ನಲೆಯಲ್ಲಿ ಪರಿಣಾಮವಾಗಿ ಕೆಲಸ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಚುನಾವಣೆ ಬಳಿಕ ನಡೆದ ರಾಜಕೀಯ ಘಟನೆಗಳ ಹಿನ್ನಲೆಯಲ್ಲಿ ಹಳೆ ಘಟಕ ವಿಸರ್ಜನೆ ಮಾಡಿ ಹೊಸ ಸಮಿತಿ ರಚನೆ ಮಾಡಲಾಗಿದೆ. ಪಕ್ಷದಲ್ಲಿ ಪುನಶ್ಚೇತನ ಮಾಡಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಜವಾಬ್ದಾರಿ ನಿರ್ವಹಣೆ ಮಾಡಲು ಹೇಳಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರ ಆದೇಶದಂತೆ ಪಕ್ಷವನ್ನು ಸಶಕ್ತಗೊಳಿಸಲಾಗುವುದು ಎಂದರು.

ಕೋರ್ ಕಮಿಟಿ ಸದಸ್ಯರು ಹಾಗೂ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು ಈ ಸಭೆಯಲ್ಲಿ ಭಾಗಿಯಾಗಿದ್ದರು. ಎಲ್ಲರ ಸಹಮತದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. ಎಲ್ಲರನ್ನೂ ವಿಶ್ವಾಸ ತೆಗೆದುಕೊಳ್ಳುವ ಮೂಲಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು. ಇನ್ನು ಕುಟುಂಬ ರಾಜಕಾರಣದ ಕುರಿತಾದ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆಯಾಗಿ, ಕಾಂಗ್ರೆಸ್ ಪಕ್ಷದ ಏನು? ಅವರದೂ ಕುಟುಂಬ ಮೂಲ ಅಲ್ಲವೇ? ಅವರಿಗೆ ಯಾವ ನೈತಿಕತೆ ಇದೆ ನಮ್ಮ ಪಕ್ಷದ ಬಗ್ಗೆ ಮಾತನಾಡಲು ಎಂದು ಪ್ರಶ್ನಿಸಿದರು.
ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡರು, ಪಕ್ಷದ ಮಾಜಿ ರಾಜ್ಯಾಧ್ಯಕ್ಷರಾದ ಹೆಚ್.ಕೆ.ಕುಮಾರಸ್ವಾಮಿ, ಮಾಜಿ ಸಚಿವರಾದ ಬಂಡೆಪ್ಪ ಕಾಷೆಂಪೂರ್, ಅಲ್ಕೊಡ್ ಹನುಮಂತಪ್ಪ, ವೆಂಕಟರಾವ್ ನಾಡಗೌಡ, ಕೋರ್ ಕಮಿಟಿ ಸಂಚಾಲಕ ವೈ.ಎಸ್.ವಿ.ದತ್ತ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಸೇರಿದಂತೆ ಪಕ್ಷದ ಎಲ್ಲ ನಾಯಕರು ಹಾಜರಿದ್ದರು.
ಇನ್ನೂ ಈ ವೇಳೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್ ಡಿ ದೇವೇಗೌಡ್ರು ಮಾತನಾಡಿ, ಚುನಾವಣೆ ಮುಗಿದು ನಾಲ್ಕು ತಿಂಗಳು ಆಯಿತು. ಇಲ್ಲಿ ಸಿ.ಎಂ.ಇಬ್ರಾಹಿಂ ಅವರು ನೀಡಿರುವ ಹೇಳಿಕೆಗಳ ಬಗ್ಗೆ ಪ್ರಸ್ತಾಪ ಮಾಡಲ್ಲ. ಆದರೆ ಹೆ.ಡಿ.ಕುಮಾರಸ್ವಾಮಿ ಹಾಗೂ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಹಾಗೂ ಇತರೆ ಮುಖಂಡರ ಜತೆಗೆ ಸಮಾಲೋಚನೆ ಮಾಡಿದ್ದೇವೆ ಎಂದರು .

ಪಕ್ಷದ ವಿವಿಧ ರಾಜ್ಯಗಳ ಘಟಕಗಳಿಗೆ ಮಾಹಿತಿ ನೀಡಲಾಗಿದೆ. ಅವರಿಗೆ ನಮ್ಮ ನಡೆ ಮನವರಿಕೆ ಆಗಿದೆ. ನಮ್ಮ ಬಿಜೆಪಿ ಮೈತ್ರಿ ನಿರ್ಧಾರಕ್ಕೆ ಕೇರಳದ ಘಟಕ ಒಪ್ಪಿಗೆ ನೀಡಿದೆ. ಪಕ್ಷದ ಹಲವು ಮುಸ್ಲಿಂ ನಾಯಕರು ಕೂಡ ನಮ್ಮ ಜತೆಗೆ ಇದ್ದಾರೆ. ಯಾರೂ ಧೃತಿಗೆಡಬೇಕಾಗಿಲ್ಲ. ಬೇರೆ ಬೇರೆ ರಾಜ್ಯದಲ್ಲಿ ಬೇರೆ ಬೇರೆ ಸನ್ನಿವೇಶ ಇದೆ. ಕುಮಾರಸ್ವಾಮಿ ಅವರು ಶಾಸಕಾಂಗ ಪಕ್ಷದ ನಾಯಕ ಜವಾಬ್ದಾರಿಯ ಜತೆಗೆ ಜತೆಗೆ ಪಕ್ಷದ ಅಧ್ಯಕ್ಷ ಸ್ಥಾನದ ಹೊಣೆಯನ್ನೂ ನಿರ್ವಹಣೆ ಮಾಡಬೇಕು ಎಂದು ನಿರ್ಧಾರ ಮಾಡಲಾಗಿದೆ ಎಂದು ದೇವೇಗೌಡ್ರು ತಿಳಿಸಿದರು.
ಜನತಾದಳ (ಜಾತ್ಯತೀತ) ಪಕ್ಷದ ಸಂವಿಧಾನ ಮತ್ತು ನಿಯಮಗಳ ಅಡಿಯಲ್ಲಿ, ಅಂದರೆ; ಆರ್ಟಿಕಲ್ 10ರ ಪ್ರಕಾರ, ಕರ್ನಾಟಕ ಪ್ರದೇಶ ಜನತಾದಳ (ಜಾತ್ಯಾತೀತ) ಪಕ್ಷದ ರಾಜ್ಯಾಧ್ಯಕ್ಷರು ಮತ್ತು ರಾಜ್ಯ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಒಳಗೊಂಡಂತೆ ಈ ಕೂಡಲೇ ಜಾರಿಗೆ ಬರುವಂತೆ ಆ ಸಮಿತಿಯನ್ನು ವಿಸರ್ಜನೆ ಮಾಡಲಾಗಿದೆ ಎಂದು ಆದೇಶದಲ್ಲಿ ದೇವೇಗೌಡರು ತಿಳಿಸಿದ್ದಾರೆ.
ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ಪಕ್ಷದ ರಾಜ್ಯಾಧ್ಯಕ್ಷರು ಮತ್ತು ರಾಜ್ಯ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಒಳಗೊಂಡಂತೆ ಆ ಸಮಿತಿಯನ್ನು ಈಗಾಗಲೇ ವಿಸರ್ಜನೆ ಮಾಡಲಾಗಿದೆ. ಪಕ್ಷದ ಮುಂದಿನ ಕಾರ್ಯ ಚಟುವಟಿಕೆಗಳನ್ನು ಸುಲಲಿತವಾಗಿ ಮುಂದುವರಿಸಿಕೊಂಡು ಹೋಗಲು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಪಕ್ಷದ ರಾಜ್ಯ ಘಟಕದ ಅಡಾಕ್ ಅಧ್ಯಕ್ಷರನ್ನಾಗಿ ಕೂಡಲೇ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ ಎಂದು ಮಾಜಿ ಪ್ರಧಾನಿಗಳು ಮತ್ತೊಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications