ಸಂಸತ್ ಭದ್ರತಾ ಲೋಪ: ಸಂಸದರು-ದಾಳಿಕೋರರ ಸಂಬಂಧ ಬಗ್ಗೆ ತನಿಖೆ ನಡೆಯುತ್ತಿಲ್ಲ ಏಕೆ?: ಕಾಂಗ್ರೆಸ್
ಬೆಂಗಳೂರು, ಡಿಸೆಂಬರ್ 15: ಸಂಸತ್ ಮೇಲಿನ ದಾಳಿಗೆ 22ವರ್ಷ ತುಂಬಿದ ದಿನವೇ ಮತ್ತೆ ಸಂಸತ್‌ನಲ್ಲಿ ಯುವಕರು ಕಳೆದ ಬುಧವಾರ ದಾಳಿ ನಡೆಸಿದ್ದು, ಅವರಿಗೆ ಪಾಸ್ ವಿತರಣೆ ಮಾಡಿದ್ದ ಬಿಜೆಪಿ ಸಂಸದ ಪ್ರತಾಪ್ ಸಿಂಹ್ ಅವರ ಹೆಸರು ಹೆಚ್ಚು ಚಾಲ್ತಿಗೆ ಬರುತ್ತಿದೆ. ಅಲ್ಲದೇ ಪ್ರಕರಣ ಸಂಬಂಧ ಪ್ರತಾಪ್ ಸಿಂಹ ಅವರ ಮೇಲೆ ತನಿಖೆ ಮಾಡಿಲ್ಲ ಮತ್ತು ಸಂಸದರು ಅಡಗಿ ಕುಳಿತಿರುವುದೇಕೆ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಸಂಸತ್ ಮೇಲಿನ ದಾಳಿ ಕುರಿತು ಕರ್ನಾಟಕ ಕಾಂಗ್ರೆಸ್ ಶುಕ್ರವಾರ ಟ್ವೀಟ್ ಮಾಡಿ ಪ್ರಶ್ನಿಸಿದೆ. ಮೊನ್ನೆ ನಡೆದ ಸಂಸತ್ ದಾಳಿಕೋರರಿಗೆ ಸಂಸದ ಪ್ರತಾಪ್ ಸಿಂಹ ಮೂರು ಬಾರಿ ಸಂಸತ್ ಪಾಸ್ ನೀಡಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ.

ಪರಿಚಯ, ಆತ್ಮೀಯ ಒಡನಾಟ ಇಲ್ಲದೆ ಇದ್ದರೆ ಮೂರು ಬಾರಿ ಪಾಸ್ ವಿತರಿಸಲು ಸಾಧ್ಯವೇ ಇಲ್ಲ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರಿಗೂ ದಾಳಿಕೋರರಿಗೂ ಇರುವ ನಿಗೂಢ ಸಂಬಂಧದ ಬಗ್ಗೆ ತನಿಖೆ ಮಾಡದಿರುವುದೇಕೆ? ಪ್ರತಾಪ್ ಸಿಂಹ ಅಡಗಿ ಕುಳಿತಿರುವುದೇಕೆ? ಎಂದು ಕಾಂಗ್ರೆಸ್ ಕೇಳಿದೆ.
ಸಂಸದರ ರಕ್ಷಣೆಗೆ ನಿಂತಿರುವುದೇಕೇ?: ಕಾಂಗ್ರೆಸ್
ಸಂಸತ್ ದಾಳಿಕೋರರ ಮೇಲೆ ಕಾನೂನು ಬಾಹಿರ ಚಟುವಟಿಕೆ ತಡೆಯುವ ಕಾಯ್ದೆ (UAPA) ಯಂತಹ ಗಂಭೀರ ಪ್ರಕರಣ ದಾಖಲಿಸಲಾಗಿದೆ. ಅಪರಾಧಕ್ಕೆ ಸಹಕಾರ ನೀಡಿದವರನ್ನೂ ತನಿಖೆಗೆ ಒಳಪಡಿಸುವುದು ಸಹಜ ಕಾನೂನು ಪ್ರಕ್ರಿಯೆ. ಇಂತಹ ಸಹಜ ಕಾನೂನು ಪ್ರಕ್ರಿಯೆಯನ್ನೂ ಮಾಡದೆ ಪ್ರತಾಪ್ ಸಿಂಹರವರ ರಕ್ಷಣೆಗೆ ನಿಂತಿರುವುದೇಕೆ? ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಇಂತಹ ಕೃತ್ಯವನ್ನು ಕೇವಲ ಭದ್ರತಾ ಲೋಪ ಎನ್ನುವಂತೆ ಬಿಂಬಿಸಿ ಕೇಂದ್ರ ಸರ್ಕಾರ ಕೈ ತೊಳೆದುಕೊಳ್ಳಲು ಹೊರಟಿರುವುದೇಕೆ? ಎಂದು ಕರ್ನಾಟಕ ಕಾಂಗ್ರೆಸ್ ದೂರಿದೆ. ಈ ಮೂಲಕ ದಾಳಿಕೋರರ ಯುವಕರಿಗೆ ಸಂಸದರ ನಡುವಿನ ಸಂಬಂಧ ಕುರಿತು ಅನುಮಾನ ವ್ಯಕ್ತಪಡಿಸಿದೆ.

ಸಂಸತ್ ದಾಳಿ: ನಿಗೂಢ ಸಂಬಂಧದ ತನಿಖೆ ಬಗ್ಗೆ 'ಕೈ' ಪ್ರಶ್ನೆ
ಸುಮಾರು 22 ವರ್ಷಗಳ ಹಿಂದೆ ಡಿಸೆಂಬರ್ 13 ರಂದು ಸಂಸತ್ ಮೇಲೆ ದಾಳಿ ನಡೆದಿತ್ತು. ಅದು ಆಗಿ ಇಷ್ಟು ವರ್ಷಗಳ ಬಳಿಕ ಮತ್ತದೇ ದಿನಾಂಕದಂದು ಸಂಸತ್ ಮೇಲೆ ದಾಳಿ ನಡೆದಿದೆ. ಮೊನ್ನೆ ಡಿ.13 ರಂದು ಬುಧವಾರ ಗ್ಯಾಲರಿಯಿಂದ ಜಿಗಿದ ಇಬ್ಬರು ಯುವಕರು ಶೂನಲ್ಲಿ ಅವಿಸಿಟ್ಟುಕೊಂಡು ಬಂದಿದ್ದ ಹಳದಿ ಹೊಗೆಯ ಕ್ಯಾನ್ ಮೂಲಕ ಚಳಿಗಾಲ ಅಧಿವೇಶನ ನಡೆಯುತ್ತಿದ್ದ ಹೊಸ ಸಂಸತ್ತಿನ ಮೇಲೆ ದಾಳಿ ಮಾಡಿದ್ದಾರೆ.
ಈ ಘಟನೆಯು ರಾಷ್ಟ್ರಮಟ್ಟದಲ್ಲಿ ಚರ್ಚೆ ಆಗಿದೆ. ಆದರೆ ಈ ದಾಳಿಕೋರರು ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಹೆಸರಿನಲ್ಲಿ ಪಾಸ್ ಪಡೆದು ಬಂದರೆಂಬುದು ಹೊರ ಬಿದ್ದಿದೆ. ಈ ನಿಟ್ಟಿನಲ್ಲಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಆದರೆ, ಸಾಮಾನ್ಯ ವ್ಯಕ್ತಿಗಳು ಸರ್ಕಾರದ ವಿರುದ್ಧ ಇಂತಹ ಕೃತ್ಯ ನಡೆಸುವುದಿಲ್ಲ. ಈ ನಿಟ್ಟಿನಿಲ್ಲಿಯು ಯುವಕರ ದಾಳಿಗೆ ನಿಖರ ಕಾರಣವನ್ನು ಪತ್ತೆ ಮಾಡಲಾಗುತ್ತಿದೆ. ಈ ಮಧ್ಯೆ ಪ್ರತಾಪ್ ಸಿಂಹ ಮತ್ತು ಯುವಕರ ನಿಗೂಢ ಸಂಬಂಧ ಕುರಿತು ತನಿಖೆ ನಡೆಯದಿಲ್ಲ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.












Click it and Unblock the Notifications