Caste Census Report: ಜಾತಿಗಣತಿ ವರದಿ ಕುರಿತು ಮಹತ್ವದ ಮಾಹಿತಿ ನೀಡಿದ ಪರಮೇಶ್ವರ್
ಬೆಂಗಳೂರು, ಏಪ್ರಿಲ್ 16: ಜಾತಿಗಣತಿ ವರದಿ ಸಚಿವ ಸಂಪುಟದ ಕೈಸೇರಿದ ಬಳಿಕ ಒಂದೇ ದಿನದಲ್ಲಿ ಚರ್ಚಿಸಲು ಆಗುವುದಿಲ್ಲ. ವರದಿಯನ್ನು ಓದಲು ಸಮಯ ಬೇಕು ಎಂದು ಮುಖ್ಯಮಂತ್ರಿಯವರಿಗೆ ತಿಳಿಸಿದಾಗ, ವರದಿಯ ಪ್ರತಿ ನೀಡಿ, ಒಂದು ವಾರ ಕಾಲಾವಕಾಶ ನೀಡಿದ್ದಾರೆ ಎಂದು ಗೃಹ ಸಚಿವರಾದ ಡಾ.ಜಿ ಪರಮೇಶ್ವರ್ ಅವರು ಹೇಳಿದರು. ನಾಳೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸುತ್ತೇವೆ. ಯಾರಿಗೆ ಏನೇನು ಅಭಿಪ್ರಾಯಗಳಿದೆ, ಅದನ್ನು ಕ್ಯಾಬಿನೆಟ್‌ನಲ್ಲಿ ಹೇಳುತ್ತಾರೆ. ಅಂತಿಮವಾಗಿ ಸರ್ಕಾರ ಏನು ತೀರ್ಮಾನ ಮಾಡುತ್ತದೆ ಎಂಬುದನ್ನು ಕಾದು ನೋಡೋಣ ಎಂದು ಹೇಳಿದರು.
ಸದಾಶಿವನಗರದಲ್ಲಿರುವ ಸಚಿವರ ಗೃಹಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಒಕ್ಕಲಿಗ ಸಮುದಾಯ ಸಭೆ ನಡೆದಿರುವುದಷ್ಟೆ ಗೊತ್ತು. ಒಳಗಡೆ ಏನೆಲ್ಲ ಚರ್ಚೆಯಾಗಿದೆ ಎಂಬುದು ನಮಗೆ ಮಾಹಿತಿ ಇಲ್ಲ. ಒಕ್ಕಲಿಗ ಸಮುದಾಯವು ತಮಗೆ ಅನ್ಯಾಯ ಆಗಬಾರದು ಎಂಬುದನ್ನು ಪ್ರಸ್ತಾಪ ಮಾಡಿದ್ದಾರೆ. ಇದನ್ನು ಹೊರತುಪಡಿಸಿ ಬೇರೆ ಏನು ಗೊತ್ತಿಲ್ಲ ಎಂದು ತಿಳಿಸಿದರು.

ದಾವಣಗೆರೆಯಲ್ಲಿ ಮುಸ್ಲಿಂ ಮಹಿಳೆ ಮೇಲೆ ಹಲ್ಲೆ ಪ್ರಕರಣವನ್ನು ಸ್ಥಳೀಯ ಪೊಲೀಸರು ಗಮನಿಸುತ್ತಾರೆ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ. ಇಂತಹ ಘಟನೆಗಳಾದಾಗ ಯಾವುದೇ ರೀತಿಯ ಮುಲಾಜಿಲ್ಲದೆ ಕಾನೂನಿನ ಚೌಕಟ್ಟಿನಲ್ಲಿ ಕಠಿಣವಾದ ಕ್ರಮ ತೆಗೆದುಕೊಳ್ಳುವಂತೆ ಈಗಾಗಲೇ ಸೂಚಿಸಿದ್ದೇನೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅತ್ಯಾಚಾರ, ಮಹಿಳೆಯರ ಮೇಲೆ ಹಲ್ಲೆ ಪ್ರಕರಣಗಳಾದಾಗ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕೆಲವು ವಿಶೇಷ ಸೂಚನೆಗಳನ್ನು ನೀಡಿದ್ದೇನೆ. ಅದರ ಪ್ರಕಾರ ಮಾಡಿಕೊಂಡು ಬರುತ್ತಿದ್ದಾರೆ.
ಯಾವುದೇ ಪ್ರಕರಣವನ್ನು ಲಘುವಾಗಿ ತೆಗೆದುಕೊಂಡಿಲ್ಲ. ಎಲ್ಲ ಕೇಸ್‌ಗಳಲ್ಲಿಯೂ ಆರೋಪಿಗಳನ್ನು ಬಂಧಿಸಿ, ಕಾನೂನು ಪ್ರಕಾರ ಕ್ರಮ ತೆಗೆದುಕೊಂಡಿದ್ದೇವೆ. ಒಬ್ಬೊಬ್ಬರ ಟೀಕೆಗೆ ಉತ್ತರಿಸಲು ಆಗುವುದಿಲ್ಲ. ಕೋಪ ಬಂದಾಗ, ನೋವಾದಾಗ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಅದಕ್ಕೆಲ್ಲ ಉತ್ತರಿಸಲು ಆಗುತ್ತದೆಯೇ? ದೇಶದಲ್ಲಿ ಕಾನೂನು ಇದೆ. ಅದರ ಪ್ರಕಾರ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಗೃಹ ಸಚಿವರಾದ ಡಾ.ಜಿ ಪರಮೇಶ್ವರ್ ಅವರು ಹೇಳಿದರು.
ಟಾಟಾ ಟ್ರಸ್ಟ್‌ನವರು ಕೆಲವು ಮಾನದಂಡಗಳನ್ನು ಇಟ್ಟುಕೊಂಡು ನಡೆಸಿದ ಸಮೀಕ್ಷೆಯಲ್ಲಿ ಕರ್ನಾಟಕ ಪೊಲೀಸ್ ವ್ಯವಸ್ಥೆ ಮೊದಲ ಸ್ಥಾನದಲ್ಲಿದೆ. ಕರ್ನಾಟಕ ಪೊಲೀಸ್ ಬಹಳ ಶ್ರಮ ವಹಿಸಿ ಕೆಲಸ ಮಾಡುತ್ತಿದೆ ಎಂಬುದನ್ನು ಮೊದಲಿನಿಂದಲೂ ಅನೇಕ ಸಂದರ್ಭಗಳಲ್ಲಿ ಹೇಳಿದ್ದೇನೆ. ಇಂದು ಸತ್ಯವಾಗಿದೆ. ಈ ವರದಿಯಿಂದ ರಾಜ್ಯ ಪೊಲೀಸ್ ಇಲಾಖೆಗೆ ಉತ್ತೇಜನ ನೀಡಿದಂತಾಗಿದೆ ಎಂದರು. ಇನ್ನೂ ಹುಬ್ಬಳ್ಳಿ ಎನ್‌ಕೌಂಟರ್ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದ್ದು, ತನಿಖೆಯಲ್ಲಿ ಏನು ಬರುತ್ತದೆ ನೋಡೋಣ. ತನಿಖೆಯಲ್ಲಿ ಸತ್ಯಾಂಶ ಹೊರಬರಲಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ಹೇಳಿದರು.
ಜಾತಿ ಸಾಮಾಜಿಕ ಸಮೀಕ್ಷೆ: ಸಿದ್ದರಾಮಯ್ಯ ಪ್ರತಿಕ್ರಿಯೆ
ನಾಳೆ ಸಾಮಾಜಿಕ, ಆರ್ಥಿಕ ಸಮೀಕ್ಷೆಯ ಕುರಿತು ಪ್ರತ್ಯೇಕವಾಗಿ ಸಚಿವ ಸಂಪುಟ ಸಭೆಯನ್ನು ಕರೆಯಲಾಗಿದ್ದು, ಈ ಬಗ್ಗೆ ಚರ್ಚೆ ಮಾಡಲಾಗುವುದು ಎಂದರು. ಶಾಸಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾಳೆ ಅಂತಿಮವಾಗಿ ತೀರ್ಮಾನ ಮಾಡಲಾಗುವುದು. ಸಾಮಾಜಿಕ, ಆರ್ಥಿಕ ಸಮೀಕ್ಷೆ ಇದಾಗಿದ್ದು, ಯಾವ ಸಮುದಾಯದವರಿಗೂ ಅನ್ಯಾಯವಾಗಲು ನಾವು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟವಾಗಿ ತಿಳಿಸಿದರು.












Click it and Unblock the Notifications