ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಮೇಲೆ ED ದಾಳಿ : ಪರಮೇಶ್ವರ್ ಫಸ್ಟ್ ರಿಯಾಕ್ಷನ್
ಬೆಂಗಳೂರು, ಮೇ 22: ದೆಹಲಿಯ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾಲೇಜುಗಳಿಗೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದು, ಏನೇ ದಾಖಲೆಗಳನ್ನು ಕೇಳಿದರು ಕೊಡುವಂತೆ ಸೂಚಿಸಿದ್ದೇನೆ ಎಂದು ಡಾ. ಜಿ.ಪರಮೇಶ್ವರ ಅವರು ತಿಳಿಸಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇ.ಡಿ.ಯವರ ಮ್ಯಾಂಡೇಟ್ ಏನೆಂಬುದು ಗೊತ್ತಿಲ್ಲ. ನಿನ್ನೆ ಕಾಲೇಜುಗಳ ಅಕೌಂಟ್ಸ್‌ಗಳನ್ನು ಕೇಳಿದ್ದಾರೆ. ಗೊತ್ತಾದ ಕೂಡಲೇ, ಇ.ಡಿ. ಅಧಿಕಾರಿಗಳು ಏನೇ ದಾಖಲೆಗಳನ್ನು ಕೇಳಿದರು ಕೊಡುವಂತೆ ಹೇಳಿದ್ದೇನೆ. ಹಿಂದಿನ ವರ್ಷಗಳದ್ದು ಕೇಳಿದರೆ ಕೊಡುವಂತೆ ಹೇಳಿದ್ದೇನೆ. ಈ ವರ್ಷದ್ದು ಇನ್ನು ಆಡಿಟ್ ಆಗಿರುವುದಿಲ್ಲ ಎಂದರು. ಇವತ್ತು ಕೂಡ ಪರಿಶೀಲನೆ ಮುಂದುವರಿಸಿದ್ದಾರೆ. ಇ.ಡಿ.ಯವರ ಉದ್ದೇಶ ನಮಗೆ ಗೊತ್ತಿಲ್ಲ. ಎಲ್ಲ ರೀತಿಯ ಸಹಕಾರವನ್ನು ಇಡಿ ಅಧಿಕಾರಿಗಳಿಗೆ ಕೊಟ್ಟಿದ್ದೇವೆ, ಕೊಡುತ್ತೇವೆ. ಇದರಲ್ಲಿ ಮುಚ್ಚಿಡುವಂತದ್ದು ಯಾವುದು ಇಲ್ಲ ಎಂದು ಸ್ಪಷ್ಟಪಡಿಸಿದರು.

ಮೊದಲಿನಿಂದಲೂ ನಾನು ಕಾನೂನಿಗೆ ಗೌರವ ನೀಡುತ್ತ ಬಂದಿರುವವನು. ಈ ದೇಶದ ಕಾನೂನು ಎಲ್ಲರಿಗೂ ಒಂದೇ. ದೊಡ್ಡವರಿಗೊಂದು ಕಾನೂನು, ಸಣ್ಣವರಿಗೊಂದು ರೀತಿಯ ಕಾನೂನು ಮಾಡಿಲ್ಲ. ಕಾನೂನನ್ನು ಗೌರವಿಸುವಂತವನು ನಾನು. ಆದ್ದರಿಂದ ಯಾವುದೇ ರೀತಿಯ ಸಂದರ್ಭದಲ್ಲಿಯೂ ಕೂಡ ಕಾನೂನನ್ನು ಗೌರವಿಸುತ್ತೇನೆ. ಎಲ್ಲ ರೀತಿಯ ಸಹಕಾರವನ್ನು ಸಂಸ್ಥೆ ನೀಡುತ್ತದೆ ಎಂದು ಡಾ. ಜಿ.ಪರಮೇಶ್ವರ ಅವರು ಹೇಳಿದರು.
ಸಂಸ್ಥೆಯ ಕಾಲೇಜುಗಳ ಮೇಲೆ ಇ.ಡಿ. ಅಧಿಕಾರಿಗಳ ಭೇಟಿ ನನ್ನ ವೈಯಕ್ತಿಕ ವಿಚಾರವಲ್ಲ. ಸಂಸ್ಥೆಯು ಎಲ್ಲ ರೀತಿಯ ಸಹಕಾರ ಕೊಡುತ್ತದೆ. ಇ.ಡಿ.ಯವರು ಮುಂದೆ ಏನು ಪ್ರಶ್ನೆ ಕೇಳುತ್ತಾರೆ ಅದೆಲ್ಲದ್ದಕ್ಕು ಕೂಡ ಸಹಕರಿಸುತ್ತೇವೆ ಎಂದು ತಿಳಿಸಿದರು. ಇ.ಡಿ. ತನಿಖೆಯಲ್ಲಿ ಏನು ಅಂತಿಮವಾಗಿ ಬರುತ್ತದೆ ಅದೇ ಮುಖ್ಯ. ಅಲ್ಲಿಯವರೆಗೂ ಊಹಾಪೋಹ ಅಷ್ಟೇ. ಊಹಾಪೋಹಾ ವರದಿ ಮಾಡುವುದಕ್ಕಿಂತ, ಸ್ಪಷ್ಟ ವರದಿ ಬಂದಾಗ ಮಾಡಿದರೆ ಒಳ್ಳೆಯದು ಎಂದು ಮನವಿ ಮಾಡುತ್ತೇನೆ. ಇ.ಡಿ.ಯವರು ಏನು ಬೇಕಾದರು ಪರಿಶೀಲನೆ ಮಾಡಲಿ. ಎಲ್ಲ ರೀತಿಯ ಸಹಕಾರ ಕೊಡುತ್ತೇವೆ. ಅವರು ಸಂಸ್ಥೆಗೆ ಮಾಹಿತಿ ನೀಡಬೇಕಲ್ಲವೇ? ಅದಾದ ನಂತರ ತಿಳಿಸೋಣ. ಅಲ್ಲಿಯವರೆಗೂ ಯಾವುದರ ಬಗ್ಗೆಯೂ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರು.
ದಲಿತ ನಾಯಕ ಅನ್ನುವ ಕಾರಣಕ್ಕೆ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಸಂದರ್ಭದಲ್ಲಿ ಅದರ ಬಗ್ಗೆ ಹೇಳಲು ಹೋಗುವುದಿಲ್ಲ. ಇ.ಡಿ.ಯವರೇನು ಜಾತಿ ನೋಡಿಕೊಂಡು ಬರ್ತಾರ ಅನ್ನುವ ಪ್ರಶ್ನೆ ಬರುತ್ತದೆ. ಹೀಗಾಗಿ ನಾನು ಏನನ್ನು ಹೇಳಲು ಹೋಗುವುದಿಲ್ಲ. ಪಕ್ಷದ ಹಿರಿಯರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ನಾನು ಏನನ್ನು ಹೇಳಲು ಹೋಗುವುದಿಲ್ಲ ಎಂದರು.
ಇ.ಡಿ. ಭೇಟಿ ಕುರಿತಂತೆ ಬಿಜೆಪಿಯವರ ಆರೋಪದ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಆರೋಪ ಮಾಡುತ್ತಿದ್ದಾರೆ ಅಷ್ಟೇ ತಾನೆ. ಮಾಡಲಿ ಎಂದರು. ಇ.ಡಿ.ಯವರು ಈವರೆಗೂ ನನ್ನನ್ನು ಸಂಪರ್ಕಿಸಿಲ್ಲ. ಸಂಸ್ಥೆಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಅಲ್ಲೆ ಇದ್ದಾರೆ ಎಂದು ಹೇಳಿದರು.
ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಪ್ರಾರಂಭಿಸಿ 68 ವರ್ಷಗಳಾಗಿದೆ. ಬೆಳೆಯುತ್ತಿರುವ ಸಂಸ್ಥೆ. ಪ್ರಗತಿ ಕಾಣಬೇಕಲ್ಲವೇ? ಇಂಜಿನಿಯರಿಂಗ್ ಕಾಲೇಜು, ಎರಡು ಮೆಡಿಕಲ್ ಕಾಲೇಜು ಮಾಡಿದ್ದೇವೆ. ಮಾಜಿ ಶಾಸಕರಾದ ಶಫೀ ಅಹ್ಮದ್ ಅವರ ಹೆಚ್‌ಎಮ್‌ಎಸ್ ಇಂಜಿನಿಯರಿಂಗ್ ಕಾಲೇಜು ಮುಚ್ಚುವ ಸ್ಥಿತಿಯಲ್ಲಿತ್ತು. ಅವರು ನನ್ನ ಬಳಿ ಬಂದು,, ಕಾಲೇಜು ಮುಚ್ಚುತ್ತಿದ್ದೇವೆ. ನೀವಾದರು ತಗೊಳ್ಳಿ ಎಂದು ಕೇಳಿಕೊಂಡರು. ಸಾಧಕ-ಬಾಧಕ ನೋಡಿಕೊಂಡು ತೆಗೆದುಕೊಂಡಿದ್ದೇವೆ. ಆ ಸಂಸ್ಥೆಯನ್ನು ಪುನಶ್ಚೇತನ ಮಾಡುತ್ತಿದ್ದೇವೆ. ಇದರಲ್ಲಿ ಹಿಂದೆ-ಮುಂದೆ ಏನು ಇಲ್ಲ ಎಂದು ಸ್ಪಷ್ಟಪಡಿಸಿದರು.
ನಮ್ಮ ಸಿದ್ದಾರ್ಥ ಸಂಸ್ಥೆಯಿಂದ ಕಳೆದ ಮೂವತ್ತೈದು ವರ್ಷಗಳಲ್ಲಿ 40 ಸಾವಿರ ಇಂಜಿನಿಯರಿಂಗ್ ಪದವಿದರರು, 10 ಸಾವಿರ ವೈದ್ಯಕೀಯ ಪದವಿಕೊಂಡಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ನಮ್ಮದು ಅಳಿಲು ಸೇವೆ ಇದೆ. ನಮ್ಮ ತಂದೆಯವರು ಮಾಡಿದ್ದ ಸಂಸ್ಥೆ, ಮಲ್ಲಿಕಾರ್ಜುನ ಖರ್ಗೆ ಮತ್ತು ಮಲ್ಲಿಕಾರ್ಜುನ ಸ್ವಾಮೀಜಿಯವರು ಸಂಸ್ಥೆಯ ಅಧ್ಯಕ್ಷರಾಗಿದ್ದರು. ಆ ಸಂಸ್ಥೆಯನ್ನು ಬೆಳೆಸಬೇಕು ಎಂಬುದೇ ತಪ್ಪೇ? ಎಂದರು. ಇ.ಡಿ.ಯವರ ವರದಿ ಬರುವವರೆಗೂ ಎನೂ ಹೇಳಲು ಹೋಗುವುದಿಲ್ಲ. ಹೆಚ್ಚಿನ ಮಾಹಿತಿ ಹೇಳಲು ಆಗುವುದಿಲ್ಲ. ಇದರಿಂದ ಊಹೆಗಳಿಗೆ ಕಾರಣವಾಗುತ್ತದೆ ಎಂದು ಸ್ಪಷ್ಟಪಡಿಸಿದರು.












Click it and Unblock the Notifications