"ದಲಿತರ ಬಗ್ಗೆ ಕಾಂಗ್ರೆಸ್‍ನ ನಿಜ ಬಣ್ಣ ಬಯಲು ಮಾಡಿದ ಡಾ.ಪರಮೇಶ್ವರ್"
ಬೆಂಗಳೂರು, ಡಿಸೆಂಬರ್ 03: ದಲಿತರ ಬಗ್ಗೆ ಕಾಂಗ್ರೆಸ್‍ನ ವರ್ತನೆ ಮತ್ತು ವಿಧಾನವು ಪ್ರಾಮಾಣಿಕವಲ್ಲ ಮತ್ತು ನಕಲಿ ಎಂದು ಬಿಜೆಪಿ ಯಾವಾಗಲೂ ತಿಳಿಸುತ್ತ ಬಂದಿದೆ. ಇದನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರೇ ದೃಢಪಡಿಸಿದ್ದಾರೆ ಮತ್ತು ಸಮರ್ಥಿಸಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ಡಾ. ನರೇಂದ್ರ ರಂಗಪ್ಪ ಅವರು ಇಲ್ಲಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಉಪಹಾರ ಸಭೆಗಳ ಕುರಿತು ಆ ಇಬ್ಬರು ಮಾತ್ರ ಊಟ ಮಾಡುತ್ತಿದ್ದಾರೆ, ನಮ್ಮಲ್ಲಿ ಏನೂ ಇಲ್ಲ ಎಂಬರ್ಥದ ಡಾ.ಪರಮೇಶ್ವರ ಅವರ ಅಳಲಿನ ಹೇಳಿಕೆ ವಾಸ್ತವವಾಗಿ ದಲಿತರ ಬಗ್ಗೆ ಕಾಂಗ್ರೆಸ್‍ನ ನಿಜ ಬಣ್ಣ ಬಯಲು ಮಾಡಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಗೃಹ ಸಚಿವರು ಉಪಾಹಾರದ ಬಗ್ಗೆ ಮಾತನಾಡುತ್ತಿರಲಿಲ್ಲ; ಅವರು ವಾಸ್ತವವಾಗಿ ದಲಿತರನ್ನು ಕಾಂಗ್ರೆಸ್ಸಿನಲ್ಲಿ ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾಗಿ ವಿವರಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಕೆಲವು ದಿನಗಳ ಹಿಂದೆ, 'ದಿನವಿಡೀ ನಾವು ಘೋಷಣೆ ಕೂಗುತ್ತೇವೆ; ಆದರೆ, ಇತರರು ಪ್ರತಿಫಲ ಪಡೆದು ಹೊರಟು ಹೋಗುತ್ತಾರೆ' ಎಂದು ಇದೇ ರೀತಿಯ ಅಳಲಿನ ಹೇಳಿಕೆಯನ್ನು ನೀಡಿದ್ದಾಗಿ ಅವರು ನೆನಪಿಸಿದ್ದಾರೆ. ಹಿರಿಯ ಮಲ್ಲಿಕಾರ್ಜುನ್ ಖರ್ಗೆ ಮತ್ತು ಡಾ. ಪರಮೇಶ್ವರ್ ಅವರ ಹೇಳಿಕೆಗಳು ದಲಿತರ ಬಗ್ಗೆ ಅಪ್ರಾಮಾಣಿಕ ಮತ್ತು ನಕಲಿ ಕಾಳಜಿ ಹೊಂದಿರುವ ಪುರಾತನ ಪಕ್ಷದ ಮೇಲಿನ ಆರೋಪವಾಗಿದೆ ಎಂದು ಹೇಳಿದರು.
ಬಾಬಾಸಾಹೇಬ್ ಡಾ. ಅಂಬೇಡ್ಕರ್ ಅವರನ್ನು ಸಂಸತ್ತಿಗೆ ಅವಿರೋಧವಾಗಿ ಆಯ್ಕೆ ಮಾಡಬೇಕಿದ್ದ ಸಂದರ್ಭದಲ್ಲಿ ಎರಡು ಚುನಾವಣೆಗಳಲ್ಲಿ ಡಾ. ಅಂಬೇಡ್ಕರ್ ಅವರನ್ನು ಸೋಲಿಸುವ ಮೂಲಕ ಕಾಂಗ್ರೆಸ್ ಹೇಗೆ ದ್ರೋಹವೆಸಗಿದೆ ಎಂಬುದನ್ನು ಬಿಜೆಪಿ ಹಲವು ಬಾರಿ ಬಹಿರಂಗಪಡಿಸಿದೆ. ಅದೇ ರೀತಿ ಕಾಂಗ್ರೆಸ್ ಬಾಬು ಜಗಜೀವನ್ ರಾಮ್ ಅವರನ್ನೂ ಕೆಟ್ಟದಾಗಿ ನಡೆಸಿಕೊಂಡಿತ್ತು ಎಂದು ಡಾ. ನರೇಂದ್ರ ರಂಗಪ್ಪ ಆಕ್ಷೇಪಿಸಿದ್ದಾರೆ. ದಲಿತರ ಬಗ್ಗೆ ಕಾಂಗ್ರೆಸ್ ಪಕ್ಷದ ನಿಜವಾದ ಬಣ್ಣ ಮತ್ತು ಕಠೋರ ವಾಸ್ತವವನ್ನು ಹೊರತಂದಿದ್ದಕ್ಕಾಗಿ ಡಾ. ಪರಮೇಶ್ವರ್ ಅವರನ್ನು ಅಭಿನಂದಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಸಿಎಂ ಕುರ್ಚಿಗೆ ಏಳೆಂಟು ಜನರ ಪೈಪೋಟಿ: ವಿಜಯೇಂದ್ರ
ಮುಖ್ಯಮಂತ್ರಿ ಕುರ್ಚಿಗೆ ದಿನೇದಿನೇ ಪೈಪೋಟಿ ಜಾಸ್ತಿ ಆಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ. ನನಗಿರುವ ಮಾಹಿತಿ ಪ್ರಕಾರ ಆಡಳಿತ ಪಕ್ಷದಲ್ಲಿ ಏಳೆಂಟು ಜನ ಹಿರಿಯ ಶಾಸಕರು ಅಥವಾ ಸಚಿವರು ಹೇಗಾದರೂ ಮುಖ್ಯಮಂತ್ರಿ ಆಗಬೇಕೆಂದು ಪೈಪೋಟಿಗೆ ಇಳಿದಿದ್ದಾರೆ. ಇದರ ಪರಿಣಾಮವಾಗಿ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದುಬಿದ್ದಿದೆ.
ಸಿದ್ದರಾಮಯ್ಯರ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ರೈತರ ಬಗ್ಗೆ ಅಸಡ್ಡೆ ತೋರುತ್ತ ಬಂದಿದೆ. ಕಿಸಾನ್ ಸಮ್ಮಾನ್ ಯೋಜನೆಯನ್ನು ಪ್ರಧಾನಿಯವರು ಜಾರಿಗೊಳಿಸಿದ್ದರು. ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರಕಾರ 4 ಸಾವಿರ ಹೆಚ್ಚುವರಿಯಾಗಿ ನೀಡಿತ್ತು. ಅದಕ್ಕೆ ಕಲ್ಲುಹಾಕಿದ್ದಾರೆ ಎಂದು ಆಕ್ಷೇಪಿಸಿದರು. ಬಸವರಾಜ ಬೊಮ್ಮಾಯಿಯವರು ರೈತ ವಿದ್ಯಾನಿಧಿ ಜಾರಿಗೊಳಿಸಿದರು. ಅದಕ್ಕೂ ಕಲ್ಲು ಹಾಕಿದರು ಎಂದು ದೂರಿದರು.
ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸರಕಾರದ ಚಳಿ ಬಿಡಿಸುವ ಕುರಿತು ಈಗಾಗಲೇ ಚರ್ಚಿಸಿದ್ದೇವೆ. ವಿಪಕ್ಷವಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸದನದ ಒಳಗಡೆ ಒಟ್ಟಾಗಿ ಸರಕಾರದ ಕಿವಿ ಹಿಂಡಲು ಈಗಾಗಲೇ ಕಾರ್ಯತಂತ್ರ ರೂಪಿಸಿದ್ದೇವೆ ಎಂದು ತಿಳಿಸಿದರು. ಸದನದ ಹೊರಗಡೆಯೂ ಪ್ರತಿಭಟನೆ ನಡೆಯಲಿದೆ. ಮುಖ್ಯಮಂತ್ರಿಗಳು ಡಿಸಿಎಂ ಮನೆಗೆ ತಿಂಡಿಗೆ ಹೋಗುವುದಾದರೆ ಅದರ ಬಗ್ಗೆ ನಾವೇನು ಪ್ರತಿಕ್ರಿಯೆ ನೀಡಲಿದೆ? ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ಆ ಸಭೆಯಲ್ಲಿ ಏನು ಚರ್ಚೆ ಆಗುತ್ತದೆ? ಅದರ ಕುರಿತ ನಿಮ್ಮ ಮಾಹಿತಿ ಆಧಾರದಲ್ಲಿ ಪ್ರತಿಕ್ರಿಯೆ ಕೊಡೋಣ ಎಂದರು.












Click it and Unblock the Notifications