ವಿಧಾನಪರಿಷತ್ ಚುನಾವಣೆ : ಪರಮೇಶ್ವರ ಮಹತ್ವದ ಸಭೆ
ಬೆಂಗಳೂರು, ಜೂನ್ 04 : 'ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ರಾಮೋಜಿಗೌಡ ಗೆಲುವಿಗೆ ಎಲ್ಲರೂ ಶ್ರಮಿಸಬೇಕು' ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಕರೆ ನೀಡಿದರು.
ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಬೆಂಗಳೂರು ಪದವೀಧರ ಕ್ಷೇತ್ರ ಚುನಾವಣೆ ಸಂಬಂಧ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಪರಮೇಶ್ವರ ಅವರು, 'ವಿಧಾನಪರಿಷತ್ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಿಗೆ ಸಂಬಂಧಿಸಿದ ಗಣ್ಯರು ಚುನಾಯಿತರಾಗಿ ಮತ್ತು ನಾಮ ನಿರ್ದೇಶಿತರಾಗಿರುತ್ತಾರೆ. ಅಲ್ಲಿ ತಮ್ಮ ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಚರ್ಚೆಗಳ ಮೂಲಕ ಬೆಳಕು ಚೆಲ್ಲುತ್ತಾರೆ' ಎಂದರು.
'ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ರಾಮೋಜಿಗೌಡ ಅವರು ಸ್ಪರ್ಧಿಸಿದ್ದಾರೆ. ಅವರಿಗೆ ಪಕ್ಷದ ಕಾರ್ಯಕರ್ತರೆಲ್ಲಾ ಬೆಂಬಲ ನೀಡಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಬೇಕು. ರಾಮೋಜಿಗೌಡರು ಪದವೀಧರರ ಶ್ರೇಯೋಭಿವೃದ್ಧಿ ಬಗ್ಗೆ ಸಾಕಷ್ಟು ಕಾಳಜಿ ಹೊಂದಿದವರಾಗಿದ್ದಾರೆ. ಇಂತಹ ನಾಯಕರು ವಿಧಾನಪರಿಷತ್ತಿಗೆ ಆಯ್ಕೆ ಬರಬೇಕು' ಎಂದು ಹೇಳಿದರು.

ಸಭೆಯಲ್ಲಿ ಮಾತನಾಡಿದ ರಾಮೋಜಿಗೌಡ ಅವರು, 'ಬೆಂಗಳೂರು ಪದವೀಧರರ ಕ್ಷೇತ್ರದ ವ್ಯಾಪ್ತಿ ಬಹಳಷ್ಟು ದೊಡ್ಡದಿದೆ. ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟ ಪಕ್ಷಕ್ಕೆ ನಾನು ಚಿರಋಣಿಯಾಗಿದ್ದೇನೆ. ಪಕ್ಷ ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಕುಂದುಂಟಾಗದ ರೀತಿಯಲ್ಲಿ ಕಾರ್ಯ ನಿರ್ವಹಿಸುವೆ' ಎಂದು ಭರವಸೆ ನೀಡಿದರು.
'ಕ್ಷೇತ್ರದಲ್ಲಿ ನಾನು ಸಾಕಷ್ಟು ಪ್ರಚಾರ ನಡೆಸಿದ್ದು, ಪ್ರತಿಯೊಬ್ಬ ಪದವೀಧರ ಮತದಾರನನ್ನೂ ತಲುಪುವ ಪ್ರಯತ್ನ ನಡೆಸುತ್ತಿದ್ದೇನೆ. ನನಗೆ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಅಪಾರವಾದ ಬೆಂಬಲ ನೀಡುತ್ತಿರುವುದು ದೊಡ್ಡ ಕೊಡುಗೆಯಂತಾಗಿದೆ. ಈಗಾಗಲೇ, ನನಗೆ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಹಾಗೂ ಸಂಘಟನೆಗಳು ಬೆಂಬಲ ನೀಡಿವೆ. ಇದರಿಂದ ಪಕ್ಷದ ಬಲ ಹೆಚ್ಚಿದೆ' ಎಂದರು.
ಬೆಂಗಳೂರು ಪದವೀಧರ ಕ್ಷೇತ್ರ ಸೇರಿದಂತೆ ವಿಧಾನಪರಿಷತ್ತಿಗೆ ಶಿಕ್ಷಕ, ಪದವೀಧರ ಕ್ಷೇತ್ರದಿಂದ ಸದಸ್ಯರನ್ನು ಆಯ್ಕೆ ಮಾಡಲು ಜೂನ್ 8ರಂದು ಚುನಾವಣೆ ನಡೆಯಲಿದೆ.












Click it and Unblock the Notifications