ಮಧ್ಯಂತರ ವರದಿ ಬಗ್ಗೆ ಕಾನೂನು ಸಚಿವರ ಜೊತೆ ಚರ್ಚಿಸಿ ತೀರ್ಮಾನ: ಬಸವರಾಜ ಬೊಮ್ಮಾಯಿ
ಬೆಳಗಾವಿ,ಡಿಸೆಂಬರ್ 22: ಹಿಂದುಳಿದ ಆಯೋಗದ ಅಧ್ಯಕ್ಷರು ಸಲ್ಲಿಸಿದ ಮಧ್ಯಂತರ ವರದಿ ಬಗ್ಗೆ ಮಧ್ಯಂತರ ವರದಿ ಬಗ್ಗೆ ಕಾನೂನು ಸಚಿವರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಈ ಕುರಿತು ಬೆಳಗಾವಿ ಸುವರ್ಣಸೌಧದಲ್ಲಿ ಗುರುವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ ಹೆಗ್ಡೆಯವರು ಭೇಟಿ ಮಾಡಿದ್ದು, ಈ ವೇಳೆ ಮಧ್ಯಂತರ ವರದಿಯನ್ನಕೊಟ್ಟಿದ್ದಾರೆ. ಅದರ ಬಗ್ಗೆ ಮುಂದೇನು ಕ್ರಮ ತಗೊಬೇಕು ಎಂದು ಕಾನೂನು ಸಚಿವರ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದರು.
ಇನ್ನೂ ಆದಷ್ಟು ಬೇಗ ಕಾನೂನಾತ್ಮಕವಾಗಿ ಚರ್ಚಿಸಿ ಸೂಕ್ತ ತೀರ್ಮಾನ ಮಾಡ್ತೀವಿ. ಎಲ್ಲ ಸಮುದಾಯದ ನಾಯಕರ ವಿಶ್ವಾಸದೊಂದಿಗೆ ಸೂಕ್ತ ನಿರ್ಧಾರ ಮಾಡುತ್ತೇವೆ. ಸಾಮಾನ್ಯವಾಗಿ ವರದಿ ಬಂದ ಸಂದರ್ಭದಲ್ಲಿ ಅದರ ವಿವರ ಯಾವತ್ತೂ ಹೇಳಿಲ್ಲ. ನಾಗ ಮೋಹನ್ ದಾಸ್ ವರದಿ ಬಂದು ಒಂದು ವರ್ಷ ಆದ ಮೇಲೆ ಅದನ್ನು ಒಪ್ಪಿ ವಿವರ ಕೊಟ್ಟಿದ್ದೆವು. ಸದಾಶಿವ ಆಯೋಗ ವರದಿ ಬಂದು ಹತ್ತು ವರ್ಷ ಆದರೂ ಸರ್ಕಾರ ಅದನ್ನು ಒಪ್ಪದ ಕಾರಣ ವಿವರ ಕೊಟ್ಟಿಲ್ಲ. ಅದೇ ರೀತಿ ಕಾಂತರಾಜು ವರದಿ ಬಂದರೂ ಆಯೋಗದಲ್ಲಿಯೇ ಇದೆ. ಆದರೆ ಈ ವರದಿ ಬಗ್ಗೆ ಕಾನೂನಾತ್ಮಕ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.ಎಲ್ಲ ಪಕ್ಷದ ನಾಯಕರ ವಿಶ್ವಾಸದೊಂದಿಗೆ ಮುಂದುವರಿಯುತ್ತೇವೆ ಎಂದರು.

ಪಂಚಮಸಾಲಿ ಸಮುದಾಯದಿಂದ 2ಎ ಪ್ರವರ್ಗದಡಿ ಮೀಸಲಾತಿಗೆ ಒತ್ತಾಯಿಸಿ ಬೆಳಗಾವಿಯಲ್ಲಿ ಬೃಹತ್ ಪಾದಯಾತ್ರೆ ನಡೆಯುತ್ತಿದೆ. ಇದೇ ವೇಳೆ ಗುರುವಾರ ಕರ್ನಾಟಕ ರಾಜ್ಯ ಖಾಯಂ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಧ್ಯಂತರ ವರದಿ ಸಲ್ಲಿಸಿದ್ದಾರೆ.
ಗುರುವಾರ ಮಧ್ಯಾಹ್ನ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಪಂಚಮಸಾಲಿ ಸಮುದಾಯದ ಹಿಂದುಳಿದಿರುವಿಕೆ ಕುರಿತು ಸಲ್ಲಿಸಲಾಗಿರುವ ಮಧ್ಯಂತರ ವರದಿ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಇನ್ನೂ ಪಂಚಮಸಾಲಿ ಸಮುದಾಯ ಪ್ರಸ್ತುತ 3B ವರ್ಗದಲ್ಲಿ ಇದ್ದು, ಇಲ್ಲಿ ಅವರು ಶೇಕಡಾ 5 ರಷ್ಟು ಮೀಸಲಾತಿಯನ್ನು ಪಡೆಯುತ್ತಿದ್ದಾರೆ. ಆದರೆ 15% ಮೀಸಲಾತಿಯನ್ನು ಖಾತರಿಪಡಿಸುವ ಇತರ ಹಿಂದುಳಿದ ವರ್ಗಗಳ (OBC) 2ಎ ಪ್ರವರ್ಗದಡಿ ಮೀಸಲಾತಿಗೆ ಒತ್ತಾಯಿಸುತ್ತಿದ್ದಾರೆ.

ಡಿಸೆಂಬರ್ 19 ರಂದು ಅಧಿವೇಶನ ಪ್ರಾರಂಭವಾಗುವ ಮೊದಲು ಆಯೋಗ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ಆದರೆ, ಆಯೋಗ ಗುರುವಾರ (ಡಿಸೆಂಬರ್ 22) ಮಧ್ಯಂತರ ವರದಿಯನ್ನು ಸಲ್ಲಿಸಿದೆ. ಒಬಿಸಿ ಆಯೋಗದ ವರದಿ ನಂತರ ಮೀಸಲಾತಿ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಂಡಿದ್ದಾರೆ. ವೀರಶೈವ ಲಿಂಗಾಯತರ ಪ್ರಬಲ ಉಪಪಂಗಡಗಳಲ್ಲಿ ಒಂದಾದ ಪಂಚಮಸಾಲಿ ಸಮಾಜದವರು ಮೀಸಲಾತಿಗಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಬೆಳಗಾವಿಯ ಸುವರ್ಣ ಸೌಧದಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದರು. ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಬೆದರಿಕೆ ಹಾಕಿರುವ ಸಮುದಾಯದವರು ಇಂದೇ ಮೀಸಲಾತಿ ಪ್ರಕಟಿಸುವಂತೆ ಸಿಎಂಗೆ ಗಡುವು ನೀಡಿದ್ದಾರೆ. ಗುರುವಾರ ಬೆಳಗಾವಿಯಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದೆ. ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಲು ಶಕ್ತಿ ಪ್ರದರ್ಶನ ನಡೆಸುತ್ತಿದೆ.












Click it and Unblock the Notifications