Tulsi Gowda Passes Away: ಪದ್ಮಶ್ರೀ ಪುರಸ್ಕೃತ ವೃಕ್ಷಮಾತೆ ತುಳಸಿಗೌಡ ನಿಧನ
ಪರಿಸರಪ್ರೇಮಿ ಹಾಗೂ ಪದ್ಮಶ್ರೀ ಪುರಸ್ಕೃತ ತುಳಸಿಗೌಡ (86) ಅವರು ವಯೋಸಹಜ ಕಾಯಿಲೆಯಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕು ಹೊನ್ನಳ್ಳಿಯವರಾದ ಅವರು ಲಕ್ಷಾಂತರ ಗಿಡಗಳನ್ನು ನೆಟ್ಟು, ನೀರೆರೆದ ಅವರು ವೃಕ್ಷಮಾತೆ ಎಂದು ಹೆಸರುವಾಸಿಯಾಗಿದ್ದರು.
ತುಳಸಿ ಗೌಡ ಅವರ ಅರಣ್ಯ ರಕ್ಷಣೆಯ ಸ್ಪೂರ್ತಿದಾಯಕ ಕೆಲಸಕ್ಕಾಗಿ ಪದ್ಮಶ್ರೀಯನ್ನು ಸ್ವೀಕರಿಸಿದ್ದರು. ಬುಡಕಟ್ಟು ಸಮುದಾಯದವರಾದ ಅವರನ್ನು ಅರಣ್ಯಗಳ ವಿಶ್ವಕೋಶ ಎಂದು ಕರೆಯಲಾಗುತ್ತದೆ. ಅವರು 30 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಆರೈಕೆ ಮಾಡಿದ್ದಾರೆ.

1944ರಲ್ಲಿ ಹೊನ್ನಳ್ಳಿ ಗ್ರಾಮದಲ್ಲಿ ಜನಿಸಿದ್ದ ತುಳಸಿಗೌಡ ಅವರು ನಾರಾಯಣ ಹಾಗೂ ನೀಲಿ ದಂಪತಿಯ ಪುತ್ರಿ. ಇವರಿಗೆ ತುಳಸಿ ಎನ್ನುವ ಸಸ್ಯದ ಹೆಸರನ್ನೇ ಇಡಲಾಗಿತ್ತು. ಬುಡಕಟ್ಟು ಸಮುದಾಯದ ಅವರು ಬಹುತೇಕ ಜೀವನ ಕಾಡಿನಲ್ಲೇ ಕಳೆದರು. ಬೆಳೆದು ಬಂದವರು.
ಅವರಿಗೆ ಮರಗಳ ಜೊತೆಗಿನ ಬಾಂಧವ್ಯ ಹೆಚ್ಚಾಗಿತ್ತು. ಈ ಕಾರಣದಿಂದ ಅವರನ್ನು 'ಅರಣ್ಯದ ಎನ್‌ಸೈಕ್ಲೋಪೀಡಿಯಾ' ಎಂದು ಕರೆಯಲಾಗುತ್ತಿತ್ತು. ತುಳಸಿ ಗೌಡ ಅವರಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯವು 2023ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.

ತುಳಸಿಗೌಡ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ. ಲಕ್ಷಾಂತರ ಗಿಡಗಳನ್ನು ನೆಟ್ಟು, ನೀರೆರೆದ ಅಂಕೋಲಾ ತಾಲ್ಲೂಕು ಹೊನ್ನಳ್ಳಿಯ ಪರಿಸರಪ್ರೇಮಿ ತುಳಸಿಗೌಡ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಜೀವನ ನಿರ್ವಹಣೆಗಾಗಿ ಅರಣ್ಯ ಇಲಾಖೆಯಲ್ಲಿ ದಿನಗೂಲಿ ಕೆಲಸಕ್ಕೆ ಸೇರಿದ್ದ ತುಳಸಿಗೌಡ ಅವರು ನಿವೃತ್ತಿಯ ನಂತರವೂ ತಮ್ಮ ಪರಿಸರ ಕಾಳಜಿಯಿಂದ ವಿಮುಖರಾಗದೆ, ಗಿಡ ನೆಡುವುದನ್ನು ಮುಂದುವರೆಸಿ, ಪದ್ಮಶ್ರೀಯಂತಹ ಅತ್ಯುನ್ನತ ಗೌರವಕ್ಕೆ ಪಾತ್ರರಾದವರು ಎಂದು ಸ್ಮರಿಸಿದ್ದಾರೆ.
ತುಳಸಿಗೌಡ ಅವರ ಪರಿಸರದ ಬಗೆಗಿನ ಪ್ರೀತಿ-ಕಾಳಜಿಯನ್ನು ಸ್ಮರಿಸುತ್ತ, ಅಗಲಿದ ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.

ವೃಕ್ಷ ಮಾತೆ ಖ್ಯಾತಿಯ ಪರಿಸರಪ್ರೇಮಿ ಪದ್ಮಶ್ರೀ ತುಳುಸಿಗೌಡ ಅವರು ಇಂದು ನಿಧನರಾಗಿರುವುದು ಅತ್ಯಂತ ದುಃಖದ ವಿಷಯ ಎಂದು ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಕೂಡ ಸಂತಾಪ ಸೂಚಿಸಿದ್ದಾರೆ. ಲಕ್ಷಾಂತರ ಗಿಡಗಳನ್ನು ನೆಟ್ಟು, ಪೋಷಿಸಿ, ನೀರೆರೆದು ಹಸಿರು ಕ್ರಾಂತಿಯನ್ನು ಹುಟ್ಟುಹಾಕಿದ್ದು, ನಿಸ್ವಾರ್ಥ ಪ್ರೇಮದಿಂದ ನಮ್ಮ ಪರಿಸರವನ್ನು ಹಾರೈಸಿದ್ದರು. 6 ದಶಕಗಳ ಪರಿಸರ ಸೇವೆ ಸಲ್ಲಿಸಿದ ಇವರು ಇಡೀ ಸಮಾಜಕ್ಕೆ ಮಾದರಿ ಎಂದಿದ್ದಾರೆ.
ನೈಸರ್ಗಿಕ ಸಂಪನ್ಮೂಲಗಳ ಕೌಶಲ ಇವರ ಹಿರಿಮೆ. ಅವರ ಈ ಪರಿಸರ ಪ್ರೇಮ ನಮ್ಮ ದಿನನಿತ್ಯದ ಜೀವನದಲ್ಲಿ ಮಹತ್ತರವಾದ ಪ್ರೇರಣೆ ಮತ್ತು ಪಾಠವಾಗಿದೆ. ಅವರ ಆತ್ಮಕ್ಕೆ ಶಾಂತಿ ಕೋರಿ, ಅವರ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ಧೈರ್ಯ ಹಾಗೂ ಶಕ್ತಿ ಸಿಗಲಿ, ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಸಂಸದ ಕೆ.ಸುಧಾಕರ್ ಕೂಡ ತುಳಸಿಗೌಡ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಐದು ದಶಕಗಳಿಂದ ಅರಣ್ಯ ಪಾಲನೆಯಲ್ಲಿ ತೊಡಗಿ 25 ಸಾವಿರಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಿದ್ದ ಅಂಕೋಲಾದ ವನದೇವತೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶ್ರೀಮತಿ ತುಳಸಿ ಗೌಡ ಅವರು ವಿಧಿವಶರಾದ ಸುದ್ದಿ ಆಘಾತ ಮೂಡಿಸಿತು. ಪರಿಸರ ಸಂರಕ್ಷಣೆ ಬಗ್ಗೆ ಅಗಾಧವಾದ ಜ್ಞಾನ, ಕಾಳಜಿ ಹೊಂದಿದ್ದ ವನತಪಸ್ವಿ ತುಳಸಿಗೌಡ ಅಮ್ಮನವರ ಬದುಕು, ಸಾಧನೆ ನಮಗೆ ಸದಾ ಪ್ರೇರಣೆ ಎಂದು ನೆನೆದಿದ್ದಾರೆ.












Click it and Unblock the Notifications