'ಆರೋಗ್ಯ ಸಚಿವರಿಗೆ ಬಸಿರು- ಪ್ರಸವದ ಯಮಯಾತನೆಯ ಅರಿವಿತ್ತೇ?'

ಬೆಂಗಳೂರು, ಅಕ್ಟೋಬರ್ 14: ಆಧುನಿಕ ಭಾರತೀಯ ಮಹಿಳೆಯರ ಬಗ್ಗೆ ಆರೋಗ್ಯ ಸಚಿವ ಡಾ. ಸುಧಾಕರ್ ಅವರು ನೀಡಿರುವ ಹೇಳಿಕೆ ವಿರುದ್ಧ ಜ್ಞಾನಭಾರತಿ ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಕೆ.ಎಸ್. ವೈಶಾಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶ್ವ ಮಾನಸಿಕ ಆರೋಗ್ಯ ದಿನದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವೈಜ್ಞಾನಿಕ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ರಾಜ್ಯ ಆರೋಗ್ಯ ಸಚಿವ ಡಾ. ಸುಧಾಕರ್ ಅವರು ತಮ್ಮ ಭಾಷಣದಲ್ಲಿ ಆಧುನಿಕ ಭಾರತೀಯ ಮಹಿಳೆಯರು ಮದುವೆಯಾಗದೇ ಅವಿವಾಹಿತೆಯರಾಗಿರಲು ಇಷ್ಟ ಪಡುತ್ತಾರೆ. ಮದುವೆಯಾದರೂ ಮಗುವಿಗೆ ಜನ್ಮ ನೀಡಲು ಬಯಸುವುದಿಲ್ಲ. ಬಾಡಿಗೆ ತಾಯಂದಿರ ಮುಖಾಂತರ ಮಕ್ಕಳನ್ನು ಪಡೆಯುತ್ತಾರೆ. ಇವೆಲ್ಲ ಆರೋಗ್ಯಕರ ಬೆಳವಣಿಗೆಯಲ್ಲ ಎಂದು ಹೇಳಿದ್ದರು.

ಸಚಿವರ ಈ ಉದ್ರೇಕಕಾರಿ ಹೇಳಿಕೆಗೆ ವ್ಯಾಪಕವಾದ ಪ್ರತಿಭಟನೆ, ಖಂಡನೆ ಹಾಗೂ ಆಕ್ರೋಶವನ್ನು ಪ್ರಗತಿ ಪರ ಸಂಘಟನೆಗಳು ಮತ್ತು ಅನೇಕ ಪ್ರಮುಖರು ವ್ಯಕ್ತ ಪಡಿಸಿದ್ದಾರೆ. ಬೆಂಗಳೂರಿನಂತಹ ಒಂದು ದೊಡ್ಡ ನಗರದಲ್ಲಿ, ಕಾಸ್ಮೊಪಾಲಿಟನ್ ಮೌಲ್ಯಗಳನ್ನು ಆದರಿಸುವ ಒಂದು ಸಾಮಾಜಿಕ - ಸಾಂಸ್ಕೃತಿಕ ಪರಿಸರದಲ್ಲಿ , ಅದರಲ್ಲಿಯೂ ನಮ್ಮ ಸಮಕಾಲೀನ 21ನೇ ಶತಮಾನದ ಕಾಲಘಟ್ಟದಲ್ಲಿ, ಇಷ್ಟು ಹುಂಬತನದಿಂದ ಕೂಡಿದ , ಲಿಂಗಾಧಾರಿತ ಅಸಮಾನತೆಗೆ ಕಲಶವಿಟ್ಟಂಥ ನುಡಿಮುತ್ತುಗಳನ್ನು ಮಂತ್ರಿವರೇಣ್ಯರೊಬ್ಬರು ಉದ್ಗರಿಸುತ್ತಾರೆಂದರೆ ಅದು ನಮ್ಮ ರಾಜ್ಯದ ದೌರ್ಭಾಗ್ಯವಲ್ಲದೇ ಮತ್ತೇನು ? ಈ ಗರ್ಭಧಾರಣೆ , ಶಿಶು ಪಾಲನೆ, ತಾಯ್ತನಗಳ ಬಗ್ಗೆ ಯೋಚಿಸುತ್ತ , ನನ್ನ ಆಲೋಚನಾ ಲಹರಿಯಲ್ಲಿಯೇ ತಲ್ಲೀನಳಾಗಿಹೋದ ನನ್ನ ಮನದ ಅಕ್ಷಿಪಟಲದ ಮುಂದೆ ಅಸಂಖ್ಯಾತ ಭಿತ್ತಿ ಚಿತ್ರಗಳು ಮೂಡತೊಡಗಿದವು.

Opposition To Health Minister Dr K Sudhakar Remark on Modern Women

ಗರ್ಭನಿರೋಧಕಗಳಿಲ್ಲದೇ ಹೆರುವ ಯಂತ್ರಗಳಂತೆ ಹತ್ತು, ಹದಿನೈದು, ಹದಿನೆಂಟು ಉಹೂಂ ಇಪ್ಪತ್ತು ಮಕ್ಕಳನ್ನು ಹೆತ್ತು, ತೀವ್ರ ರಕ್ತ ಸ್ರಾವದಿಂದ ಬಳಲಿ, ಬೆಂಡಾಗಿ ಅಸುನೀಗಿದ ಎಷ್ಟೋ ಕೋಟ್ಯಂತರ ಬಡಪಾಯಿ ಮಾತೆಯರು, ಪತಿಯ ಅಕಾಲಿಕ ಮರಣದಿಂದಲೋ, ಆತನ ಅಮಾನುಷ ಹಿಂಸೆ, ಕುಡಿತ, ವ್ಯಸನಗಳಿಂದ, ದುಂದುವೆಚ್ಚ , ಸಾಲಗಳಿಂದ ಜರ್ಝರಿತರಾಗಿ ಎಳೆಯ ಕಂದಮ್ಮಗಳನ್ನು ಬಾವಿಗೋ, ಹರಿಯುವ ನದಿಗೋ ದೂಡಿ ತಾವೂ ಆತ್ಮಹತ್ಯೆಗೆ ಶರಣಾದ ಹೆಂಗೆಳೆಯರು, ಅತ್ಯಾಚಾರಕ್ಕೊಳಗಾಗಿ, ಬಸಿರಾಗಿ, ಅಕ್ರಮ ಗರ್ಭಪಾತದ ಸಮಯದಲ್ಲಿ ಆದ ಅಡ್ಡ ಪರಿಣಾಮಗಳಿಗೆ ಬಲಿಯಾದ ಮುಗ್ಧ ಜೀವಗಳು,ಹೆತ್ತ ಮಕ್ಕಳನ್ನು ಸಾಕಿ ಸಲಹಲಾರದೆ ಅನಾಥಾಶ್ರಮದ ಬಾಗಿಲುಗಳ ಮುಂದೆ, ರಸ್ತೆಯಲ್ಲಿ ಕಸದ ತೊಟ್ಟಿಯ ಬಳಿ ನವಜಾತ ಶಿಶುಗಳನ್ನು ಬಿಟ್ಟು ಪಲಾಯನಗೈದ ಅಸಹಾಯಕ ತಾಯಂದಿರು, ಮಕ್ಕಳನ್ನು ಜೀತಕ್ಕೆ , ವೇಶ್ಯಾವಾಟಿಕೆಗೆ ತಳ್ಳಿದ ಪೋಷಕರು, ಅನ್ಯ ಕೋಮಿನವನನ್ನು ಪ್ರೀತಿಸಿದಳೆಂಬ ಕ್ಷುಲ್ಲಕ ಕಾರಣಕ್ಕೆ ತಮ್ಮ ಕರುಳಿನ ಕುಡಿಯನ್ನು ಅಮಾನುಷವಾಗಿ, ನಿರ್ದಯೆಯಿಂದ ಮರ್ಯಾದೆಗೇಡು ಹತ್ಯೆಗೈದ ತಂದೆ- ತಾಯಂದಿರು ...... ಹೀಗೇ ಇನ್ನೂ ಹಲವಾರು ಚಿತ್ರಗಳ ಸರಮಾಲೆಯೇ ಹಾದು ಹೋಯಿತು .

ತಾಯ್ತನವೆಂಬ 'ನೈಸರ್ಗಿಕ' ಪ್ರಕ್ರಿಯೆಗೆ ಇಷ್ಟೆಲ್ಲ ಕರಾಳ, ದುರಂತ, ಘೋರ ಮಜಲುಗಳಿದ್ದರೂ , ಅದನ್ನು ಎಷ್ಟು ರೊಮ್ಯಾಂಟಿಕ್ ಆಗಿ, ಹೆಣ್ತನದ ಪರಮೋಚ್ಚ ಗುರಿ, ಹೆಬ್ಬಯಕೆ, ಸಾರ್ಥಕತೆಯ ಕ್ಷಣವೆಂದೇ ಏಕೆ ಈ ಪುರುಷ ಪ್ರಧಾನ ಸಮಾಜ ವೈಭವೀಕರಿಸುತ್ತದೆ ಎಂಬ ಪ್ರಶ್ನೆ ನನ್ನನ್ನು ತೀವ್ರವಾಗಿ ಕಾಡುತ್ತದೆ. ಹೀಗೆ ಬಲಿಪಶುಗಳಾದ ಮಹಿಳೆಯರೆಲ್ಲರೂ ತಾಯಂದಿರಾಗಲು ಬಯಸಿದ್ದರೇ ಇಲ್ಲವೇ ಬಲವಂತದ, ಅನಿರೀಕ್ಷಿತ ಲೈಂಗಿಕ ಸಂಪರ್ಕದಿಂದ ಗರ್ಭಿಣಿಯರಾದರೇ ಎಂಬ ಸಂದೇಹವಂತೂ ಖಂಡಿತ ನಮ್ಮನ್ನು ಬಾಧಿಸುವುದಂತೂ ದಿಟ.

ಇನ್ನು ಮಹಿಳೆಯ ಪರಿಕಲ್ಪನೆಯ ಬಗ್ಗೆ ಹೇರಳವಾಗಿರುವ ವ್ಯಾಖ್ಯಾನಗಳನ್ನು ಒಮ್ಮೆ ಗಮನಿಸಿದರೆ, ಅವೆಲ್ಲ ಒಂದು ಸಿದ್ಧ ಮಾದರಿಯ , ಪೂರ್ವ ನಿಯೋಜಿತ ಹುನ್ನಾರಗಳ, ಉದ್ದೇಶಗಳ ಸಾಫಲ್ಯಕ್ಕಾಗಿ , ಪಟ್ಟಭದ್ರ ಹಿತಾಸಕ್ತಿಗಳ ಯಜಮಾನಿಕೆಯನ್ನು ಬೆಂಬಲಿಸಿ, ಎತ್ತಿ ಹಿಡಿಯುವ ಷಡ್ಯಂತ್ರಗಳಾಗಿಯೇ ಗೋಚರಿಸುತ್ತವೆ. ನಮ್ಮ ಪೌರಾಣಿಕ ಕಥೆಗಳಲ್ಲಿ ಋಷಿಗಳು ಪತಿವ್ರತಾ ಶಿರೋಮಣಿ ಸುಮಂಗಲಿಯರಿಗೆ "ಅಷ್ಟ ಪುತ್ರವತೀ ಭವ" ಎಂದು ಎಷ್ಟು ಸಲೀಸಾಗಿ ಆಶೀರ್ವಾದ ಮಾಡಿಬಿಡುತ್ತಿದ್ದರಲ್ಲ.

ಆ ಮಹಾಶಯರಾರಿಗಾದರೂ ಬಸಿರು- ಪ್ರಸವದ ಯಮಯಾತನೆಯ ಅರಿವಿತ್ತೇ? ತಾಯಿಯ ಮೊಲೆ ಹಾಲಿನ ಬಗ್ಗೆ ಸುಂದರವಾದ ಕವನಗಳನ್ನು ಬರೆಯುವ ಕವಿ ಪುರುಷೋತ್ತಮರು ಎದೆಹಾಲೂಡಿಸುವ ಪ್ರಕ್ರಿಯೆಯಲ್ಲಿ ಎಷ್ಟೆಲ್ಲ ಸಂಕಷ್ಟ- ಸವಾಲುಗಳಿದ್ದಾವೆ ಎಂಬುದನ್ನು ತಿಳಿದುಕೊಳ್ಳುವ ಗೋಜಿಗಾದರೂ ಹೋಗಿದ್ದರೇ? ಮೊಲೆಗಳು ಬಾತುಕೊಳ್ಳವುದು, ಹಾಲು ಕಟ್ಟಿಕೊಳ್ಳುವುದು, ಮೊಲೆ ತೊಟ್ಟಿನ ಕೀವು ಕಟ್ಟಿಕೊಳ್ಳುವಿಕೆ, ಮಗುವಿಗೆ ಎದೆ ಹಾಲು ಬಿಡಿಸುವ ಸಮಯದಲ್ಲಿ ಹಾಲು ಶೇಖರವಾಗಿ ಅನುಭವಿಸುವ ಅಸಹನೀಯ ಯಾತನೆ - ಇಂಥಾ ವಾಸ್ತವಗಳನ್ನು ಅನುಭವಿಸಿದವರಾರೂ ಸುಮ್ಮನೇ ಮೊಲೆಯೂಡಿಸುವ ಅನುಭವವನ್ನು ವೈಭವೀಕರಿಸಲು ಸಾಧ್ಯವಿಲ್ಲ.

ಈಗ ಆಧುನಿಕ ಸಮಕಾಲೀನ ಮಹಿಳೆಯ ಬಗ್ಗೆ ಯೋಚನೆ ಮಾಡೋಣ- ಅಕೆಯ ಮುಂದಿರುವ ಸವಾಲುಗಳೇನು? ಪ್ರಪ್ರಥಮವಾಗಿ ಆಕೆ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಬೇಕು.

ಯಾವುದಾದರೂ ಕ್ಷೇತ್ರದಲ್ಲಿ ಪರಿಣತಿಯನ್ನು ಸಂಪಾದಿಸಬೇಕು, ಸ್ಪರ್ಧಾತ್ಮಕ , ಜನಸಂಖ್ಯಾ ಸ್ಪೋಟದಿಂದ ತತ್ತರಿಸುತ್ತಿರುವ , ಸ್ತ್ರೀವಿರೋಧಿ ಮೌಲ್ಯಗಳನ್ನು ಆರಾಧಿಸುವ ಸಮಾಜದಲ್ಲಿ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು, ತನ್ನ ಭವಿಷ್ಯವನ್ನು ಗಂಡನಿಗೊಪ್ಪಿಸಿದೇ, ತನ್ನ ಏಳ್ಗೆಯ ರೂವಾರಿ ತಾನೇ ಆಗಿರಬೇಕು ಎಂಬ ಆಕಾಂಕ್ಷೆಗಳನ್ನು ಹೊಂದಿರುವ ಯಾವ ಯುವತಿಗೂ ಮದುವೆ- ಸಾಂಸಾರಿಕ ಜೀವನ - ಬಸಿರು- ತಾಯ್ತನದ ಆಯ್ಕೆಗಳು ಸುಲಭವಲ್ಲ.

ಇನ್ನೂ ನಮ್ಮ ಕೌಟುಂಬಿಕ ವ್ಯವಸ್ಥೆ ಲಿಂಗಾಧಾರಿತ ಅಸಮಾನತೆಯ ತಳಹದಿಯ ಮೇಲೆ ವಿಜೃಂಭಿಸುತ್ತಿದೆ. ತಾಯ್ತನ- ಉದ್ಯೋಗದ ಸವಾಲುಗಳನ್ನು ಏಕ ಕಾಲದಲ್ಲಿಯೇ ಹೇಗೆ ನಿಭಾಯಿಸುವುದು ಎಂದು ಗಾಬರಿಗೊಂಡು ಹೈರಾಣಗೊಳ್ಳುವ ಎಷ್ಟು ಮಂದಿ ದುಡಿಯುವ ಮಹಿಳೆಯರನ್ನು ತಾನೆ ನಾವು ನೋಡಿಲ್ಲ? ಮನೆಕೆಲಸದಾಕೆ, ಕೂಲಿ ಮಾಡುವ ಹೆಣ್ಣಿನಿಂದ ಹಿಡಿದು, ಶಿಕ್ಷಕಿ, ವೈದ್ಯೆ, ವಿಜ್ಞಾನಿ, ಪೊಲಿಸ್ ಅಧಿಕಾರಿಣಿ ಇತ್ಯಾದಿ ಅತ್ಯುನ್ನತ ವರ್ಗದ ಔದ್ಯೋಗಿಕ ಕ್ಷೇತ್ರಗಳ ವಲಯದಲ್ಲೂ ಮಹಿಳೆಯರು ಹೇಗೆ ತಮ್ಮ ಕಾರ್ಯ ನಿರ್ವಹಿಸುವುದರೊಂದಿಗೇ ತಾಯ್ತನದ ಜವಾಬ್ದಾರಿಯನ್ನು ಚಾಚೂ ತಪ್ಪದೇ ಸೂಪರ್ ವುಮನ್ ಆಗಿ ಪೂರೈಸಿ ಧನ್ಯತೆಯನ್ನು ಪಡೆದರು ಎಂಬ ಗುಣಗಾನವೇ ಹೊರತು ಎಲ್ಲಾದರೂ ಒಬ್ಬನಾದರೂ ಪುರುಷ ಉದ್ಯೋಗದ ಒತ್ತಡದೊಂದಿಗೆ ತಂದೆಯಾಗುವ ಜವಾಬ್ದಾರಿಯನ್ನು ನಿಭಾಯಿಸುವುದು ಹೇಗೆ ಎಂದು ಯೋಚಿಸಿ ಕಂಗಾಲಾದ ನಿದರ್ಶನಗಳಿವೆಯೇ ? ಈ ವಿರೋಧಾಭಾಸಗಳನ್ನು ತೀಕ್ಷ್ಣವಾಗಿ ಮೆಲುಕು ಹಾಕಿದಾಗಲೇ ನಮಗೆ ಹೆಣ್ಣಾಗಿ ರೂಪಾಂತರ ಹೊಂದುವ ಪ್ರಕ್ರಿಯೆ ಎಷ್ಟು ಕೃತಕವಾಗಿ, ಸಾಮಾಜಿಕವಾಗಿ ನಿರ್ಮಿತವಾದದ್ದು, ಲಿಂಗತ್ವದ ಪರಿಕಲ್ಪನೆಯೇ ಎಂಥಾ ಶ್ರೇಣೀಕೃತ ವ್ಯವಸ್ಥೆ ಎನ್ನುವ ಕರಾಳ ಸತ್ಯದ ಅರಿವು ಮೂಡುತ್ತದೆ.

ವಸಾಹತೋತ್ತರ ಪ್ರಜಾಪ್ರಭುತ್ವವೆನಿಸಿಕೊಂಡ ನಾವು ಯಾವ ದೇಶದಲ್ಲಿ ಮಹಿಳಾ ವಿಮೋಚನೆಯ ಬಗ್ಗೆ ಕಳಕಳಿಯಿಲ್ಲವೋ ಅಲ್ಲಿ ದಾಸ್ಯ ವಿಮೋಚನೆ ಮರೀಚಿಕೆಯಾಗಿಯೇ ಉಳಿದುಬಿಡುತ್ತದೆ ಮತ್ತು ಇಂತಹ ವಿಷಮ ಪರಿಸ್ಥಿತಿಯಲ್ಲಿ ಮೂಲಭೂತವಾದಿಗಳು, ಮತಾಂಧರು, ಸ್ತ್ರೀ ಸ್ವಾತಂತ್ರ್ಯ ವಿರೋಧಿ, ಕಾಮುಕ ಅತ್ಯಾಚಾರಿಗಳು ರಕ್ತಬೀಜಾಸುರರಂತೆ, ಸಾಂಕ್ರಾಮಿಕ ಪಿಡುಗುಗಳಂತೆ ತಮ್ಮ ಸಾಮ್ರಾಜ್ಯವನ್ನು ರಾಜಾರೋಷವಾಗಿ ಸ್ಥಾಪಿಸುತ್ತಾರೆಂಬುದನ್ನು ಮನಗಾಣಬೇಕಾಗಿದೆ. -ಕೆ. ಎಸ್ ವೈಶಾಲಿ, ಪ್ರಾಧ್ಯಾಪಕರು, ಇಂಗ್ಲಿಷ್ ವಿಭಾಗ, ಜ್ಞಾನ ಭಾರತಿ, ಬೆಂಗಳೂರು ವಿಶ್ವವಿದ್ಯಾನಿಲಯ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+