ಬಿಜೆಪಿಯ ಜನಾಕ್ರೋಶ ಯಾತ್ರೆ ಆಡಳಿತ ವಿರೋಧಿ ಅಲೆ ಸೃಷ್ಟಿಸುತ್ತಾ?
ಬೆಂಗಳೂರು, ಏಪ್ರಿಲ್ 08: ಆಡಳಿತದಲ್ಲಿರುವ ಪಕ್ಷದ ವಿರುದ್ಧ ಜನಾಕ್ರೋಶ ವ್ಯಕ್ತವಾಗುವಂತೆ ಮಾಡುವುದು ವಿಪಕ್ಷಗಳ ರಾಜಕೀಯ ತಂತ್ರವಾಗಿದೆ. ಇದು ರಾಷ್ಟ್ರ ರಾಜಕಾರಣ ಮತ್ತು ರಾಜ್ಯ ರಾಜಕಾರಣದಲ್ಲಿ ನಡೆಯುತ್ತಲೇ ಇರುತ್ತಿದೆ. ಯಾವುದೇ ಸರ್ಕಾರ ಆಡಳಿತ ನಡೆಸಿದರೂ ತಮ್ಮ ಆಡಳಿತಾವಧಿಯ ಅಂತ್ಯಕ್ಕೆ ಬಂದಾಗ ಆಡಳಿತ ವಿರೋಧಿ ಅಲೆ ಹುಟ್ಟಿಕೊಂಡರೆ ಆ ಪಕ್ಷ ಮತ್ತೊಮ್ಮೆ ಅಧಿಕಾರ ಹಿಡಿಯುವುದು ಕಷ್ಟವಾಗಲಿದೆ. ಹೀಗಾಗಿ ಇಂತಹದೊಂದು ಆಡಳಿತ ವಿರೋಧಿ ಅಲೆಯನ್ನು ಸೃಷ್ಟಿ ಮಾಡಲು ವಿಪಕ್ಷಗಳು ಸದಾ ಹೊಂಚು ಹಾಕುತ್ತಿರುತ್ತವೆ.
ರಾಷ್ಟ್ರೀಯ ರಾಜಕೀಯದಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಅಂತಹದೊಂದು ತಂತ್ರವನ್ನು ಕಾಂಗ್ರೆಸ್ ನೇತೃತ್ವದ ಇಂಡಿಕೂಟಗಳು ಮಾಡಿದ್ದು ಅದರಲ್ಲಿ ಒಂದಷ್ಟು ಮಟ್ಟಿಗೆ ಯಶಸ್ವಿಯಾದವು ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ ವಿಪಕ್ಷಗಳು ಮೋದಿ ವಿರುದ್ಧ ರಾಜಕೀಯ ಮಾಡುವುದರಲ್ಲಿಯೇ ತಲ್ಲೀನವಾಗಿದ್ದೇ ಹೊರತು ಮೋದಿ ಸರ್ಕಾರದಲ್ಲಿನ ಭ್ರಷ್ಟಾಚಾರವಾಗಲೀ ಇನ್ಯಾವುದೇ ಜನರು ಆಕ್ರೋಶ ಪಡುವಂತೆ ಮಾಡುವ ಯಾವುದೇ ಪ್ರಬಲ ಅಸ್ತ್ರಗಳು ಸಿಗಲಿಲ್ಲ. ಅದಕ್ಕಿಂತ ಹೆಚ್ಚಾಗಿ ದೇಶದಲ್ಲಿನ ಹೆಚ್ಚಿನ ರಾಜ್ಯಗಳಲ್ಲಿ ಬಿಜೆಪಿ ಆಡಳಿತವೇ ಇರುವುದರಿಂದ ದೇಶದಾದ್ಯಂತ ಜನಾಕ್ರೋಶ ಹುಟ್ಟಿಸುವಲ್ಲಿ ವಿಫಲವಾದವು.

ರಾಜ್ಯದಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ವಿಪಕ್ಷವಾಗಿದ್ದ ಕಾಂಗ್ರೆಸ್ ಆಡಳಿತದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಜನಾಕ್ರೋಶ ಮತ್ತು ಆಡಳಿತ ವಿರೋಧಿ ಅಲೆಯನ್ನು ಹುಟ್ಟು ಹಾಕುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಚುನಾವಣೆ ಕಳೆದು ಫಲಿತಾಂಶ ಬಂದಾಗ ಆಡಳಿತರೂಢ ಬಿಜೆಪಿ ನೆಲಕಚ್ಚಿ ಕಾಂಗ್ರೆಸ್ ನಿರೀಕ್ಷೆ ಮೀರಿದ ಯಶಸ್ಸನ್ನು ಸಂಪಾದಿಸಿತ್ತು. ಈಗ ಕಾಂಗ್ರೆಸ್ ವಿರುದ್ಧ ರಾಜ್ಯದಲ್ಲಿ ಬಿಜೆಪಿ ಜನಾಕ್ರೋಶ ಆಂದೋಲನ ನಡೆಸುವ ಮೂಲಕ ಹೋರಾಟ ಆರಂಭಿಸಿದೆ. ಇದು ಜನಸಾಮಾನ್ಯಪರ ಹೋರಾಟ ಎಂದರೂ ರಾಜಕೀಯ ತಂತ್ರ ಅಡಗಿರುವುದಂತು ನಿಜ.
ರಾಜ್ಯದಲ್ಲಿ ವಿಪಕ್ಷಗಳು ದುರ್ಬಲವಾಗಿವೆಯಾ?
ರಾಜ್ಯದಲ್ಲಿ ಹಲವು ತೆರಿಗೆ ಮತ್ತು ಬೆಲೆ ಏರಿಕೆಯಿಂದ ಸಂಕಷ್ಟಗಳನ್ನು ಜನಸಾಮಾನ್ಯರು ಅನುಭವಿಸುತ್ತಿದ್ದರೂ ಉಚಿತ ಯೋಜನೆಗಳನ್ನು ಕೂಡ ಹೆಚ್ಚಿನವರು ಪಡೆಯುತ್ತಿದ್ದಾರೆ. ಹೀಗಾಗಿ ಅಭಿವೃದ್ಧಿ ಕಾರ್ಯಗಳ ಮೂಲಕ ನೇರವಾಗಿ ಜನಸಾಮಾನ್ಯರ ಬಳಿಗೆ ಸರ್ಕಾರ ತಲುಪಲು ಸಾಧ್ಯವಾಗದಿರುವುದನ್ನು ಗ್ಯಾರಂಟಿ ಯೋಜನೆಗಳ ಮೂಲಕ ಮನೆ, ಮನೆ ತಲುಪುತ್ತಿದೆ. ಹೀಗಾಗಿ ಬೆಲೆ ಏರಿಕೆ ಮಾಡಿದ್ದಕ್ಕೆ ಹಿಡಿ ಶಾಪ ಹಾಕಿದರೂ ಗ್ಯಾರಂಟಿ ಯೋಜನೆ ಬಳಸುತ್ತಿರುವುದರಿಂದ ಸರ್ಕಾರದ ಕಡೆಗೆ ಮೆದು ಧೋರಣೆಯಂತು ಇದ್ದೇ ಇದೆ.

ಸದ್ಯ ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್ ಗೆ ಟಕ್ಕರ್ ನೀಡಲು ಬಿಜೆಪಿ ಮತ್ತು ಜೆಡಿಎಸ್ ವಿಪಕ್ಷಗಳಾಗಿವೆ. ಇವುಗಳೆರಡು ಇದೀಗ ಎನ್ ಡಿಎ ಒಕ್ಕೂಟದಲ್ಲಿವೆ. ಒಂದು ವೇಳೆ ಎರಡು ಪಕ್ಷಗಳು ಒಂದಾಗಿ ಹೋರಾಟ ನಡೆಸಿದರೆ ಆಡಳಿತರೂಢ ಕಾಂಗ್ರೆಸ್ ನ್ನು ನಡುಗಿಸಬಹುದು. ಆಡಳಿತ ವೈಫಲ್ಯಗಳನ್ನು ಸರಿಪಡಿಸಬಹದು. ಅಷ್ಟೇ ಅಲ್ಲದೆ ಮೇಲಿಂದ ಮೇಲೆ ಬೆಲೆ ಏರಿಕೆ ಮಾಡುತ್ತಿರುವುದಕ್ಕೆ ಕಡಿವಾಣವೂ ಹಾಕಬಹುದು ಆದರೆ ರಾಜ್ಯದಲ್ಲಿ ವಿರೋಧ ಪಕ್ಷಗಳು ಪ್ರಬಲವಾಗಿಲ್ಲ ಎನ್ನುವುದು ಈಗಾಗಲೇ ಸಾಭೀತಾಗಿದೆ.
ಆಡಳಿತ ವಿರೋಧಿ ಅಲೆ ಸೃಷ್ಟಿಸಲು ಯತ್ನ
ಇನ್ನೂ ಬಿಜೆಪಿಯಲ್ಲಿ ಎಲ್ಲ ನಾಯಕರು ಒಂದಾದಂತೆ ಕಾಣುತ್ತಿಲ್ಲ. ಬಣಜಗಳ ಒಳಗೊಳಗಿದೆ. ಬಸನಗೌಡ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಅಲ್ಲಿಗೆ ಬಿಜೆಪಿಯಲ್ಲಿ ಎಲ್ಲವೂ ಸರಿಹೋಗಿದೆಯಾ? ಖಂಡಿತಾ ಹೋಗಿಲ್ಲ. ಇನ್ನು ರಾಷ್ಟ್ರಮಟ್ಟದಲ್ಲಿ ಒಂದಾಗಿರುವ ಬಿಜೆಪಿ ಮತ್ತು ಜೆಡಿಎಸ್ ರಾಜ್ಯದ ಮಟ್ಟಿಗೆ ಒಂದಾದಂತೆ ಕಾಣುತ್ತಿಲ್ಲ. ನಾಯಕರ ನಡುವೆ ಸಮನ್ವಯದ ಕೊರತೆ ಎದ್ದು ಕಾಣಿಸುತ್ತಿದೆ. ಇದೀಗ ಬಿಜೆಪಿ ಬೆಲೆ ಏರಿಕೆ ವಿರುದ್ಧ ಹೋರಾಟವನ್ನು ಏಕಾಂಗಿ ಮಾಡುತ್ತಿದೆ. ಜೊತೆಯಾಗಿ ಹೋರಾಟ ಮಾಡುವ ಲಕ್ಷಣಗಳು ಕಾಣಿಸುತ್ತಿಲ್ಲ.

ಬೆಲೆ ಏರಿಕೆಯ ಆಕ್ರೋಶಗಳು ರಾಜ್ಯದಲ್ಲಿ ಭುಗಿಲೆದ್ದಿದೆ. ಹೀಗಿರುವಾಗಲೇ ಜನಾಕ್ರೋಶ ಯಾತ್ರೆಯನ್ನು ಬಿಜೆಪಿ ಮಾಡುತ್ತಿದೆ. ಜತೆಗೆ ಹಿಂದೂ ವಿರೋಧಿ ಸರ್ಕಾರ ಎಂದು ಬಿಂಬಿಸುವ ಕೆಲಸವನ್ನು ಮಾಡಲಾಗುತ್ತಿದೆ. ಆ ಮೂಲಕ ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್ ವಿರುದ್ಧ ಆಡಳಿತ ವಿರೋಧಿ ಅಲೆಯನ್ನು ಸೃಷ್ಟಿ ಮಾಡುವುದು ಬಿಜೆಪಿ ನಾಯಕರ ಉದ್ದೇಶವಾಗಿದೆ. ಇನ್ನು ಮೂರು ವರ್ಷಗಳಿವೆ. ಈ ಅವಧಿಯಲ್ಲಿ ಸರ್ಕಾರದ ನಡೆ ಹೇಗಿರುತ್ತದೆ? ಮತ್ತು ವಿರೋಧ ಪಕ್ಷಗಳು ಹೇಗೆ ನಡೆದುಕೊಳ್ಳುತ್ತವೆ ಎಂಬುದು ಅಷ್ಟೇ ಮುಖ್ಯವಾಗುತ್ತದೆ.
ಉಚಿತ ಬೇಕೆಂದರೆ ಬೆಲೆ ಏರಿಕೆ ಅನಿವಾರ್ಯ
ಯಾವುದೇ ಸರ್ಕಾರಗಳು ಆಡಳಿತಕ್ಕೆ ಬಂದರೂ ಬೆಲೆ ಏರಿಕೆ ಅನಿವಾರ್ಯವೇ ಆದರೆ ಯಾವಾಗ ಸರ್ಕಾರಗಳು ಉಚಿತ ಯೋಜನೆಯನ್ನು ಘೋಷಿಸಿ ಆ ಮೂಲಕ ಮತದಾರರನ್ನು ಸೆಳೆಯುವ ತಂತ್ರವನ್ನು ರಾಜಕಾರಣಿಗಳು ಯಾವಾಗ ಕಂಡುಕೊಂಡರೋ ಅಲ್ಲಿಂದ ಸಮಸ್ಯೆಗಳು ಹೆಚ್ಚಾಗಿವೆ. ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ಅದನ್ನು ಸರಿದೂಗಿಸಲು ಅನಿವಾರ್ಯವಾಗಿ ಬೆಲೆ ಏರಿಕೆ ಮಾಡುತ್ತಿದ್ದಾರೆ. ಇದರ ಪರಿಣಾಮಗಳನ್ನು ಗ್ಯಾರಂಟಿ ಯೋಜನೆಯ ಫಲಾನುಭವಿಗಳು ಸೇರಿದಂತೆ ಎಲ್ಲರೂ ಅನುಭವಿಸಬೇಕಾಗಿದೆ. ಈಗ ರಾಜ್ಯ ಸರ್ಕಾರದ ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡುತ್ತಿರುವ ಬಿಜೆಪಿ ನಾಯಕರು ಕೇಂದ್ರ ಸರ್ಕಾರ ಇಂಧನ ಬೆಲೆ ಏರಿಕೆ ಮಾಡಿರುವುದಕ್ಕೂ ಉತ್ತರ ಹೇಳಬೇಕಾಗಿದೆ.
ರಾಜಕೀಯ ಪಕ್ಷಗಳು ಬೆಲೆ ಏರಿಕೆ ವಿರುದ್ಧ ಯಾವುದೇ ರೀತಿಯ ಪ್ರತಿಭಟನೆ ಮಾಡಿದರೂ ಅದನ್ನು ರಾಜಕೀಯ ತಂತ್ರವೆಂದೇ ಹೇಳಬಹುದು. ಆದರೆ ಆ ಮೂಲಕ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯನ್ನು ಹುಟ್ಟು ಹಾಕಲು ಬಿಜೆಪಿ ಯತ್ನಿಸುತ್ತಿದ್ದು, ಇದಕ್ಕೆ ಜನ ಯಾವ ರೀತಿಯ ಬೆಂಬಲ ನೀಡುತ್ತಾರೆ? ಜನ ಬಿಜೆಪಿ ನಾಯಕರನ್ನು ನಂಬುತ್ತಾರಾ? ಜನಾಕ್ರೋಶ ಯಾತ್ರೆ ರಾಜಕೀಯಕ್ಕಷ್ಟೇ ಸೀಮಿತವಾಗುತ್ತಾ? ಹೀಗೆ ಹತ್ತಾರು ಪ್ರಶ್ನೆಗಳು ಜನ ಸಾಮಾನ್ಯರ ಮುಂದಿದೆ. ರಾಜನಿಗೆ ಪಟ್ಟ ಆದರೆ ರಾಗಿ ಬೀಸೋದು ತಪ್ಪುತ್ತಾ ಎನ್ನುವ ಹಳೆಯ ಕಾಲದ ಗಾದೆ ಇವತ್ತಿಗೂ ಪ್ರಸ್ತುತ ಎನಿಸುತ್ತಿದೆ. ಯಾರೇ ಅಧಿಕಾರಕ್ಕೆ ಬಂದರೂ ಬೆಲೆ ಏರಿಕೆ ಮಾತ್ರ ಇದ್ದೇ ಇರುತ್ತದೆ. ಇದನ್ನು ಜನ ಅನುಭವಿಸಲೇ ಬೇಕಾಗಿದೆ.












Click it and Unblock the Notifications