ಬಸವರಾಜ ಬೊಮ್ಮಾಯಿ ಮಂಡಿಸಿದ್ದು ನಿರಾಶಾದಾಯಕ, ಅಡ್ಡಕಸುಬಿ ಬಜೆಟ್: ಸಿದ್ದರಾಮಯ್ಯ

ಬೆಂಗಳೂರು, ಮಾ.4: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ಇದು ಅತ್ಯಂತ ನಿರಾಶಾದಾಯಕ, ಅಡ್ಡ ಕಸುಬಿ ಬಜೆಟ್. ಈ ಬಜೆಟ್‌ಗೆ ಅಭಿವೃದ್ಧಿಯ ಮುನ್ನೋಟವೇ ಇಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಬಜೆಟ್‌ಗೆ ಪ್ರತಿಕ್ರಿಯೆ ನೀಡಿರುವ ಅವರು, 'ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ತಮ್ಮ ಮೊದಲ ಬಜೆಟ್ ಮಂಡಿಸಿದ್ದಾರೆ. ಅವರು ತಮ್ಮ ಮಾತುಗಳ ಮೂಲಕ ಜನರಲ್ಲಿ ಬಹಳಷ್ಟು ನಿರೀಕ್ಷೆ ಮೂಡಿಸಿದ್ದರು. 'ನವ ಭಾರತಕ್ಕಾಗಿ ನವ ಕರ್ನಾಟಕ ನಿರ್ಮಾಣ ಮಾಡುತ್ತೇವೆ', ಭವಿಷ್ಯಕ್ಕಾಗಿ ಧೃಡ ಹೆಜ್ಜೆ ಇಡುತ್ತೇವೆ ಎಂದು ಹೇಳಿದ್ದರು. ಆದರೆ ಬಜೆಟ್ ನೋಡಿದ ಮೇಲೆ ಅವರ ಮಾತುಗಳು ಹುಸಿಯಾಗಿವೆ. ಇದು ಅತ್ಯಂತ ನೀರಸ, ಅಭಿವೃದ್ಧಿಯ ವಿರೋಧಿ, ದೂರದೃಷ್ಟಿ ಇಲ್ಲದ ಬಜೆಟ್ ಆಗಿದೆ' ಎಂದು ಹೇಳಿದ್ದಾರೆ.

ಬಜೆಟ್ ಎಂದರೆ ಜನರಿಗೆ ಕನಸು ಕಟ್ಟಿಕೊಡುವಂತಿರಬೇಕು, ನಾಡಿನ ಎಲ್ಲ ಜನರ ಭವಿಷ್ಯದ ಮುನ್ಸೂಚನೆಯಂತಿರಬೇಕು. ನಮ್ಮ ಸರ್ಕಾರದ ಅವಧಿಯಲ್ಲಿ ಇಲಾಖಾವಾರು ಮಾಹಿತಿಯನ್ನು ಜನರಿಗೆ ಪಾರದರ್ಶಕವಾಗಿ ಕೊಡುತ್ತಿದ್ದೆವು. ಹಿಂದಿನ ಬಜೆಟ್ ನಲ್ಲಿ ಯಾವ ಇಲಾಖೆಗೆ ಎಷ್ಟು ಹಣ ನೀಡಿದ್ದೆವು, ಎಷ್ಟು ಖರ್ಚಾಗಿತ್ತು, ಮುಂದೆ ಎಷ್ಟು ನೀಡುತ್ತಿದ್ದೇವೆ, ಹೀಗೆ ಇಲಾಖೆಯ ಪ್ರಗತಿಯನ್ನು ಪಾರದರ್ಶಕವಾಗಿ ನೀಡಿದ್ದೆವು, ಈಗ ಹಾಗಿಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ ಮೇಲಿಂದ ವಲಯವಾರು ಬಜೆಟ್ ಮಂಡನೆ ಮಾಡಲು ಆರಂಭಿಸಿದರು. ಇದರಿಂದ ಹಿಂದೆ ಇದ್ದ ಪಾರದರ್ಶಕತೆ ಈಗ ಇಲ್ಲವಾಗಿದೆ ಎಂದು ಟೀಕಿಸಿದರು.

Opposition Leader Siddaramaiah Reaction to Karnataka Budget 2022-23

ಸಾಲ ಪಡೆದು ಅಭಿವೃದ್ಧಿ ಕಾರ್ಯ:

ನಮ್ಮ ಐದು ವರ್ಷಗಳ ಆಡಳಿತದಲ್ಲಿ ರಾಜಸ್ವ ಉಳಿಕೆ ಬಜೆಟ್ ಇತ್ತು, ಬಿಜೆಪಿ ಬಂದಮೇಲೆ ರಾಜಸ್ವ ಕೊರತೆ ಆರಂಭವಾಗಿದೆ. ಇದು ನಮ್ಮ ಮತ್ತು ಬಿಜೆಪಿ ಸರ್ಕಾರದ ನಡುವಿನ ವ್ಯತ್ಯಾಸ. ಈಗ ರಾಜಸ್ವ ಕೊರತೆ ಇರುವುದರಿಂದ ಸಾಲ ಪಡೆದು ಅಭಿವೃದ್ಧಿ ಕಾರ್ಯಗಳಿಗೆ ಮತ್ತು ಆಸ್ತಿ ಸೃಜನೆಗೆ ಹಣ ಖರ್ಚು ಮಾಡುವಂತಾಗಿದೆ. ಮುಂಬರುವ ಸಾಲಿನಲ್ಲಿ ರೂ. 15,000 ಕೋಟಿ ರಾಜಸ್ವ ಕೊರತೆ ಆಗುತ್ತೆ ಎಂದು ಬಜೆಟ್ ನಲ್ಲಿ ಹೇಳಿದ್ದಾರೆ. ಕಳೆದ ಬಾರಿ ಬದ್ಧತಾ ಖರ್ಚು 102% ಆಗಿತ್ತು ಎಂದು ಹೇಳಿದ್ದರು, ಆದರೆ ಈ ಬಾರಿ ಅದರ ಬಗ್ಗೆ ಎಲ್ಲೂ ಮಾಹಿತಿ ನೀಡಿಯೇ ಇಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಬದ್ಧತಾ ಖರ್ಚು ಸುಮಾರು 80% ಇತ್ತು.

ಈ ವರ್ಷದ ಜೂನ್ 30ರ ವರೆಗೆ ಮಾತ್ರ ನಮ್ಮ ರಾಜ್ಯಕ್ಕೆ ಜಿ.ಎಸ್.ಟಿ ಪರಿಹಾರ ಸಿಗುತ್ತದೆ. ಹಾಗಾಗಿ ಮುಂದಿನ ದಿನಗಳು ಇನ್ನಷ್ಟು ಕಷ್ಟದಾಯಕವಾಗಿರಲಿದೆ. ಇದೇ ಕಾರಣಕ್ಕೆ ಜಿ.ಎಸ್.ಟಿ ಪರಿಹಾರವನ್ನು ಇನ್ನೂ ಐದು ವರ್ಷ ಮುಂದುವರೆಸಲು ಕೇಂದ್ರ ಸರ್ಕಾರವನ್ನು ಒತ್ತಾಯ ಮಾಡಿ ಎಂದು ನಾನು ಸಲಹೆ ನೀಡಿದ್ದೆ. ಆದರೆ ಈ ಬಾರಿಯ ಕೇಂದ್ರದ ಬಜೆಟ್ ನಲ್ಲಿ ಇದನ್ನು ಮುಂದುವರೆಸುವ ಬಗ್ಗೆ ಯಾವ ಪ್ರಸ್ತಾಪವೂ ಇಲ್ಲ, ರಾಜ್ಯ ಸರ್ಕಾರ ಕೂಡ ಮೂರು ವರ್ಷ ಮುಂದುವರೆಸಲು ಮನವಿ ಮಾಡಿದ್ದೀವಿ ಎಂದಷ್ಟೇ ಹೇಳಿದೆ. ಒಂದು ವೇಳೆ ಕೇಂದ್ರ ಸರ್ಕಾರ ಜಿ.ಎಸ್.ಟಿ ಪರಿಹಾರ ಕೊಡದೆ ಹೋದರೆ ರಾಜಸ್ವ ಸಂಗ್ರಹ ಕಡಿಮೆಯಾಗಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗುತ್ತವೆ. ವರ್ಷಕ್ಕೆ ಸುಮಾರು ರೂ. 10 ರಿಂದ 12 ಸಾವಿರ ಕೋಟಿ ನಷ್ಟವಾಗುತ್ತದೆ. ಜಿ.ಎಸ್.ಟಿ ಸಭೆಯಲ್ಲಿ ಎಲ್ಲಾ ಮುಖ್ಯಮಂತ್ರಿಗಳು ಸೇರಿ ಗಲಾಟೆ ಮಾಡಿ ಇನ್ನೂ ಐದು ವರ್ಷ ಮುಂದುವರೆಸುವಂತೆ ಒತ್ತಾಯ ಮಾಡಬೇಕಿತ್ತು. ಇವರು ಅದನ್ನು ಮಾಡಿಲ್ಲ. ಇದೇ ಕಾರಣಕ್ಕೆ ನಾನು ಈ ಸರ್ಕಾರವನ್ನು ಹೇಡಿಗಳ ಸರ್ಕಾರ ಎಂದು ಕರೆದದ್ದು.

ಮೇಕೆದಾಟು: ನಾವು ಕೊಟ್ಟಷ್ಟು ಹಣವನ್ನೂ ಕೊಟ್ಟಿಲ್ಲ

ಮೇಕೆದಾಟು ಯೋಜನೆ ಜಾರಿಯಾಗಬೇಕು ಎಂಬುದು ನಮ್ಮ ಒತ್ತಾಯ. ಆದರೆ ಪರಿಸರ ಅನುಮತಿ ಪತ್ರ ಪಡೆಯದೆ ಯೋಜನೆ ಹೇಗೆ ಆರಂಭ ಮಾಡುತ್ತಾರೆ? ಬಜೆಟ್‌ನಲ್ಲಿ ಹಣ ಇಟ್ಟ ಕೂಡಲೆ ಯೋಜನೆ ಆರಂಭ ಆಗುತ್ತಾ? ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಯಾವ ಸಮಸ್ಯೆ ಇಲ್ಲ ಆದರೂ ಅದನ್ನೂ ಆರಂಭ ಮಾಡಿಲ್ಲ. ಬಹಳಷ್ಟು ಇಲಾಖೆಗಳಿಗೆ ನಾವು 2018 ರ ಬಜೆಟ್ ನಲ್ಲಿ ಕೊಟ್ಟಷ್ಟು ಹಣವನ್ನೂ ಕೊಟ್ಟಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.

ಕೊರೊನಾದಿಂದ ಜನ ತತ್ತರಿಸಿ ಹೋಗಿರುವ ಕಾರಣ ತೆರಿಗೆ ಹೆಚ್ಚು ಮಾಡಲು ಆಗಲ್ಲ ಎಂದು ಬಜೆಟ್‌ನಲ್ಲಿ ಹೇಳಿದ್ದಾರೆ. ನಮ್ಮ ಸರ್ಕಾರ ಕೂಡ ಅಬಕಾರಿ ತೆರಿಗೆ ಹೆಚ್ಚು ಮಾಡಿದ್ದು ಬಿಟ್ಟರೆ ಐದು ವರ್ಷಗಳಲ್ಲಿ ಬೇರೆ ತೆರಿಗೆ ಯಾವುದನ್ನೂ ಹೆಚ್ಚಳ ಮಾಡಿಲ್ಲ. ಈ ವರ್ಷ ಸರ್ಕಾರ ಆರ್ಥಿಕವಾಗಿ ಕೊಂಚ ಚೇತರಿಕೆ ಆಗಿದೆ. ಜಿಡಿಪಿ ಬೆಳವಣಿಗೆಯನ್ನು ಕೊರೊನಾ ಇದ್ದ ವರ್ಷಕ್ಕೆ ಹೋಲಿಕೆ ಮಾಡಬಾರದು, ಕೊರೊನಾ ಪೂರ್ವದಲ್ಲಿ ಹೇಗಿತ್ತು ಅದಕ್ಕೆ ಹೋಲಿಕೆ ಮಾಡಬೇಕು. ಕೊರೊನಾ ಇದ್ದಾಗ ಆರ್ಥಿಕವಾಗಿ ಕುಸಿತ ಆಗಿರುತ್ತೆ, ಅದಕ್ಕೆ ಹೋಲಿಕೆ ಮಾಡಿ ಹೇಳಿದರೆ ಏನು ಉಪಯೋಗ? ಎಂದು ಪ್ರಶ್ನಿಸಿದರು.

ಅವಾಸ್ತವಿಕ ಮತ್ತು ಅಸಾಧ್ಯವಾದ ಕೆಲಸ

ದೀನದಯಾಳು ಉಪಾಧ್ಯಾಯ ಅವರ ಹೆಸರಿನಲ್ಲಿ ಸಾವಿರ ವಿದ್ಯಾರ್ಥಿಗಳ ಹಾಸ್ಟೆಲ್ ಮಾಡುವುದಾಗಿ ಹೇಳಿದ್ದಾರೆ. ಆದರೆ ಇದನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲ. 200 - 300 ಮಕ್ಕಳ ಹಾಸ್ಟೆಲ್ ಮಾಡಿದರೆ ಅದೇ ದೊಡ್ಡದು. ನಾಲ್ಕು ಕಡೆ ಸಾವಿರ ವಿದ್ಯಾರ್ಥಿಗಳ ಹಾಸ್ಟೆಲ್ ಮಾಡ್ತೀವಿ ಎಂದಿದ್ದಾರೆ, ಇದು ಅವಾಸ್ತವಿಕ ಮತ್ತು ಅಸಾಧ್ಯವಾದ ಕೆಲಸ.

ಹಿಂದುಳಿದ ಜಾತಿಗಳೆಲ್ಲವೂ ಸೇರಿ ಅವುಗಳ ಅಭಿವೃದ್ಧಿ ನಿಗಮಗಳಿಗೆ ರೂ. 400 ಕೋಟಿ ನೀಡಿದ್ದರು. ಈ ವರ್ಷ ಅದೂ ಇಲ್ಲ. ಗೋಹತ್ಯೆ ನಿಷೇಧ ನಂತರ ಗೋಶಾಲೆ ಮಾಡುವುದಾಗಿ ಹೇಳಿದ್ದರು. ರಾಜ್ಯದಲ್ಲಿ ಈಗ 31 ಗೋಶಾಲೆಗಳಿವೆ, ಈ ಬಜೆಟ್‌ನಲ್ಲಿ ಅದನ್ನು 100 ಮಾಡುತ್ತೇವೆ ಎಂದಿದ್ದಾರೆ. ನನ್ನ ಪ್ರಕಾರ ಈಗ ರಾಜ್ಯದಲ್ಲಿರುವ ಬರಡು ದನಗಳನ್ನು ಗೋಶಾಲೆಗೆ ಕಳುಹಿಸಿದರೆ ಕನಿಷ್ಠ 500 ಗೋಶಾಲೆಗಳ ಅಗತ್ಯ ಇದೆ. ಇದನ್ನು ಮಾಡದಿದ್ದರೆ ಉತ್ತರ ಪ್ರದೇಶದಲ್ಲಿ ಆದಂತೆ ಬೀದಿ ಬೀದಿಯಲ್ಲಿ ದನಗಳು ಇರುತ್ತವೆ. ಪುಣ್ಯಕೋಟಿ ಹೆಸರಿನಲ್ಲಿ ಗೋವುಗಳನ್ನು ದತ್ತು ಪಡೆಯುವವರಿಗೆ ಸರ್ಕಾರ ರೂ. 11,000 ಕೊಡುವುದಾಗಿ ಹೇಳಿದೆ, ಈ ಹಣವನ್ನು ರೈತರಿಗೇ ಕೊಟ್ಟಿದ್ದರೆ ಅವರೇ ಸಾಕ್ತಿದ್ದರು. ಇದರಿಂದ ಜಾನುವಾರುಗಳ ಮಾಲಿಕರಾದ ರೈತರಿಗೆ ಅನ್ಯಾಯ ಆಗುತ್ತದೆ ಎಂದು ಸಿದ್ದರಾಮಯ್ಯ ವಿವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+