ಶಾಸಕ ಮುನಿರತ್ನ ಬಂಧನಕ್ಕೆ ಅಸಲಿ ಕಾರಣ ಇದು ಎಂದ ಆರ್.ಅಶೋಕ್
ಬಿಬಿಎಂಪಿ ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಆರೋಪದ ಮೇರೆಗೆ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನು ವಿಪಕ್ಷ ನಾಯಕ ಆರ್.ಅಶೋಕ್ ಖಂಡಿಸಿದ್ದು, ಮುನಿರತ್ನ ಅವರ ಬಂಧನಕ್ಕೆ ಕಾರಣ ಏನು ಎಂಬುದನ್ನು ಹೇಳುವ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಕಾಂಗ್ರೆಸ್‌ನವರು ನಾಗಮಂಗಲ ಗಲಭೆ ಮರೆಮಾಚಲು ಈ ಹುನ್ನಾರ ಮಾಡಿದ್ದಾರೆ. ಹಿರಿಯರಾದ ಗೃಹ ಸಚಿವ ಜಿ.ಪರಮೇಶ್ವರ್ ಅವರು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಒಂದು ವೇಳೆ ಮುನಿರತ್ನ ನಿಜವಾಗಿಯೂ ತಪ್ಪು ಮಾಡಿದ್ದರೆ ನಾವು ಯಾರೂ ಬೆಂಬಲಿಸುವುದಿಲ್ಲ. ಈ ಇಡೀ ಬೆಳವಣಿಗೆ ನೋಡಿದರೆ ಇಲ್ಲಿ ದ್ವೇಷ ಬಿಟ್ಟು ಬೇರೇನೂ ಇಲ್ಲ. ಇದಕ್ಕೆ ನಮ್ಮ ಬಿಜೆಪಿ ಜಗ್ಗಲ್ಲ ಎಂದು ತಿರುಗೇಟು ನೀಡಿದ್ದಾರೆ.

ಗೃಹ ಸಚಿವ ಪರಮೇಶ್ವರ್ ಅವರು ಮೊದಲೇ ಸಂಚು ರೂಪಿಸಿ, ಮುನಿರತ್ನ ಅವರನ್ನು ಬಂಧಿಸಿದ್ದಾರೆ. ಇಲ್ಲದಿದ್ದರೆ ಇದೇ ದಿನ ಯಾಕೆ ಮುನಿರತ್ನ ಅವರನ್ನು ಬಂಧಿಸುತ್ತಿದ್ದರು? ಹೇಗಿದ್ದರೂ ಮುಂದಿನ ಮೂರು ದಿನ ಕೋರ್ಟ್ ರಜೆ ಇರುತ್ತೆ ಎಂದು ಈ ರೀತಿ ಯೋಜನೆ ರೂಪಿಸಿದ್ದಾರೆ ಎಂದು ಅಶೋಕ್ ಆರೋಪಿಸಿದ್ದಾರೆ.
ಇಷ್ಟು ಅರ್ಜೆಂಟಲ್ಲಿ ಕೋಲಾರಕ್ಕೆ ತೆರಳಿ ಮುನಿರತ್ನ ಅವರನ್ನು ಅರೆಸ್ಟ್ ಮಾಡುವ ಅಗತ್ಯವೇನಿತ್ತು? ಮೊದಲು ಕಾನೂನಿನ ಪ್ರಕಾರ ಮುನಿರತ್ನ ಅವರಿಗೆ ನೋಟಿಸ್ ನೀಡಬೇಕಾಗಿತ್ತು. ಅವರು ಎಲ್ಲಿಗೂ ಓಡಿ ಹೋಗುತ್ತಿರಲಿಲ್ಲ. ವೈರಲ್ ಆಗಿದೆ ಎನ್ನಲಾದ ಆಡಿಯೋ ಅನ್ನು ಮೊದಲು ಎಫ್ಎಸ್ಎಲ್ಗೆ ಕಳಿಸಿಕೊಡಬೇಕಾಗಿತ್ತು. ಆದರೆ ನಿನ್ನೆಯೇ ಯಾಕೆ ಗುತ್ತಿಗೆದಾರ ಮುನಿರತ್ನ ವಿರುದ್ಧ ದೂರು ಕೊಟ್ಟಿದ್ದಾನೆ? ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಗುತ್ತಿಗೆದಾರ ಚಲುವರಾಜು ಒಬ್ಬ ಸಾಮಾನ್ಯ ವ್ಯಕ್ತಿ. ಆತ ಸಿಎಂ ಸಿದ್ದರಾಮಯ್ಯ ಅವರ ಭೇಟಿಗೆ ಅಪಾಯಿಂಟ್‌ಮೆಂಟ್ ಪಡೀತಾರೆ ಎಂದರೆ ಅರ್ಥ ಏನು? ಇದೆಲ್ಲ ಪೂರ್ವನಿಯೋಜಿತ. ಕಾಂಗ್ರೆಸ್‌ನವರೇ ಆತನಿಗೆ ದೂರು ಕೊಡು ಎಂದು ಹೇಳಿ ಕಳುಹಿಸಿರುತ್ತಾರೆ. ಇದು ಗೃಹಸಚಿವರು ಮಾಡಿರೋ ಹುನ್ನಾರ ಎಂದು ಆರೋಪಿಸಿದ್ದಾರೆ.
ಗುತ್ತಿಗೆದಾರನಿಗೆ ಕೊಲೆ ಬೆದರಿಕೆ ಹಾಗೂ ಜಾತಿ ನಿಂದನೆ ಆರೋಪದ ಮೇರೆಗೆ ರಾಜರಾಜೇಶ್ವರಿ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ನಂಗಲಿ ಗ್ರಾಮದ ಬಳಿ ಮುನಿರತ್ನ ಅವರನ್ನು ಪೊಲೀಸರು ಲಾಕ್ ಮಾಡಿದ್ದಾರೆ ಎನ್ನಲಾಗಿದೆ.
ಏನಿದು ಪ್ರಕರಣ?: ಬಿಜೆಪಿ ಶಾಸಕ ಮುನಿರತ್ನ ಅವರು ಗುತ್ತಿಗೆದಾರ ಚಲುವರಾಜು ಎಂಬುವರಿಗೆ ಅವಾಚ್ಯವಾಗಿ ನಿಂದಿಸಿ, ಜಾತಿ ನಿಂದನೆ ಮಾಡಿದ್ದಾರೆ ಎನ್ನಲಾದ ಆಡಿಯೋ ಸದ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಇನ್ನು ಈ ಸಂಬಂಧ ಶಾಸಕ ಮುನಿರತ್ನ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿದೆ. ಈ ಬಗ್ಗೆ ಮುನಿರತ್ನ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು. ʼಆ ಆಡಿಯೋ ನನ್ನದೇ ಎಂದು ಸಾಬೀತಾದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆʼ ಎಂದು ಮುನಿರತ್ನ ಹೇಳಿದ್ದರು.
ಕೋಲಾರದಿಂದ ಆಂಧ್ರದ ಚಿತ್ತೂರು ಕಡೆಗೆ ಹೋಗಲು ಶಾಸಕ ಮುನಿರತ್ನ ಮುಂದಾಗಿದ್ದರು. ಮುನಿರತ್ನ ಅವರ ಮೊಬೈಲ್ ಲೊಕೇಶನ್ ಟ್ರ್ಯಾಕ್ ಮಾಡಿ ಅವರಿದ್ದ ಸ್ಥಳವನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಇಂದು ಬೆಳಿಗ್ಗೆಯಿಂದಲೂ ಶಾಸಕ ಮುನಿರತ್ನ ನಾಪತ್ತೆಯಾಗಿದ್ದರು ಎಂದು ಹೇಳಲಾಗಿತ್ತು. ಆದರೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಮುನಿರತ್ನ ನಾನೆಲ್ಲೂ ನಾಪತ್ತೆಯಾಗಿಲ್ಲ ಎಂದು ಹೇಳಿದ್ದರು.
ಮುನಿರತ್ನ ಅವರ ಬೆನ್ನು ಹತ್ತಿದ್ದ ಪೊಲೀಸರು, ಅವರ ಚಲನವಲನಗಳ ಬಗ್ಗೆ ನಿಗಾ ಇಟ್ಟಿದ್ದರು. ಹಾಗಾಗಿ ಮುನಿರತ್ನ ಕೋಲಾರದಲ್ಲಿ ಇರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಕೂಡಲ್ಲೇ ಅಲ್ಲಿನ ಪೊಲೀಸರ ನೆರವಿನಿಂದ ಮುನಿರತ್ನ ಅವರನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದು ಬೆಂಗಳೂರಿಗೆ ಕರೆತಂದಿದ್ದರು.
ಸದ್ಯ ಮುನಿರತ್ನ ಅವರನ್ನು ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಬಳಿಕ ಅಲ್ಲಿಂದ ಅಶೋಕಪುರ ಪೊಲೀಸ್ ಠಾಣೆಗೆ ಕರೆದೊಯ್ದು ಬಂಧನದ ಪ್ರಕ್ರಿಯೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಇಂದು ತಡರಾತ್ರಿ ವೇಳೆಗೆ ಮುನಿರತ್ನ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಇದು ಸಾಧ್ಯವಾಗದಿದ್ದರೆ ನಾಳೆ ಪ್ರಕ್ರಿಯೆ ಮುಂದುವರಿಯಲಿದೆ.
ಮುನಿರತ್ನ ಅವರನ್ನು ಪೊಲೀಸರು ಕರೆತಂದ ಬೆನ್ನಲ್ಲೇ ಅವರ ಬೆಂಬಲಿಗರು ಸ್ಥಳದಲ್ಲಿ ಜಮಾಯಿಸಿ, ಪ್ರತಿಭಟನೆಯೂ ಮಾಡಿದ್ದಾರೆ. ಈ ಬಗ್ಗೆ ಮುನಿರತ್ನ ಅವರ ಪರ ವಕೀಲ ಕೂಡ ಮಾತನಾಡಿದ್ದು, ದೂರುದಾರನ ವಿರುದ್ಧ ಪ್ರತಿದೂರು ದಾಖಲಿಸುವುದಾಗಿ ಹೇಳಿದ್ದಾರೆ.












Click it and Unblock the Notifications