ವಿಪಕ್ಷ ನಾಯಕ; ಕಾಂಗ್ರೆಸ್‌ಗೆ ತಲೆ ಕೆರೆದುಕೊಳ್ಳಬೇಡಿ ಎಂದ ಬಿಜೆಪಿ!
ಬೆಂಗಳೂರು, ಜುಲೈ 02; ಕರ್ನಾಟಕದಲ್ಲಿ ವಿರೋಧ ಪಕ್ಷದ ನಾಯಕರ ಯಾರು?. ಬಿಜೆಪಿಯ ರಾಜ್ಯ ನಾಯಕರ ಬಳಿ ಸಹ ಈ ಪ್ರಶ್ನೆಗೆ ಉತ್ತರ ಇರುವುದು ಅನುಮಾನ. ಕಾಂಗ್ರೆಸ್ ಪಕ್ಷ ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಸರಣಿ ಟ್ವೀಟ್ ಮೂಲಕ ಬಿಜೆಪಿಯನ್ನು ವ್ಯಂಗ್ಯವಾಡುತ್ತಿದೆ.
ಭಾನುವಾರ ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, 'ನಮ್ಮ ವಿಪಕ್ಷ ನಾಯಕ ಸ್ಥಾನದ ಬಗ್ಗೆ ನಮ್ಮ ವರಿಷ್ಠರು ಸದನ ಪ್ರಾರಂಭಕ್ಕಿಂತಲೂ ಮೊದಲೆ, ಸೂಕ್ತ ಸಮಯದಲ್ಲಿ ಘೋಷಿಸುತ್ತಾರೆ. ಕಾಂಗ್ರೆಸ್ ಪಕ್ಷ ಇದರ ಬಗ್ಗೆ ತಲೆ ಕೆರೆದುಕೊಳ್ಳುವುದನ್ನು ಬಿಟ್ಟು, ಅವಾಸ್ತವಿಕ ಗ್ಯಾರಂಟಿಗಳ ಅಪ್ರಬುದ್ಧ ಅನುಷ್ಠಾನದ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಿದ್ದವಾಗಿರುವ ನಮ್ಮ ಪಕ್ಷದ ಶಾಸಕರನ್ನು ಹೇಗೆ ಎದುರಿಸಬೇಕೆಂದು ತಮ್ಮ ಸರಕಾರಕ್ಕೆ ಸಲಹೆ ನೀಡಲಿ' ಎಂದು ಹೇಳಿದೆ.

ಬಿಜೆಪಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಒಟ್ಟಿಗೆ ಇರುವ ಫೋಟೋವನ್ನು ಟ್ವೀಟ್ ಮಾಡಿದೆ. 'ಬಹುಮತ ದೊರೆತರೂ, ಮುಖ್ಯಮಂತ್ರಿ ಸ್ಥಾನಕ್ಕೆ ಹೆಸರನ್ನು ಅಂತಿಮಗೊಳಿಸುವಲ್ಲಿ, ಕಾಂಗ್ರೆಸ್ ನಡೆಸಿದ ಹಗ್ಗಜಗ್ಗಾಟವನ್ನು ರಾಜ್ಯದ ಜನತೆ ಗಮನಿಸಿದ್ದಾರೆ. ಇವರಿಂದ ಹೇಳಿಸಿಕೊಂಡು ಬುದ್ದಿ ಕಲಿಯುವ ಪರಿಸ್ಥಿತಿ ಯಾರಿಗೂ ಬಂದಿಲ್ಲ' ಎಂದು ಕುಟುಕಿದೆ.
'ಇಷ್ಟಕ್ಕೂ ಹೊಸದಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದ ಸಿದ್ದರಾಮಯ್ಯ ಅವರು 2008ರಲ್ಲಿ ಅಂದಿನ ವಿಪಕ್ಷ ನಾಯಕನ ಸ್ಥಾನ ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೊರೆತ ಕಾರಣ, ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಆ ಪಕ್ಷದ ಕೆಲವು ಶಾಸಕರು ರಾಜೀನಾಮೆ ನೀಡಿದಾಗಲೂ, ಆ ಶಾಸಕರ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು' ಎಂದು ಕಾಂಗ್ರೆಸ್‌ಗೆ ಹಿಂದಿನ ದಿನಗಳ ನೆನಪು ಮಾಡಿಕೊಟ್ಟಿದೆ.
'ಕಾರ್ಯಕ್ರಮವೊಂದರ ನಿಮಿತ್ತ ಅಂದಿನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಜೊತೆ ಸಿದ್ದರಾಮಯ್ಯರವರು ಒಟ್ಟಿಗೆ ಪ್ರಯಾಣಿಸಿದ್ದರು. ಆ ಸಂದರ್ಭವನ್ನು ತಮಗೆ ಲಾಭವಾಗುವ ಹಾಗೆ ಸುದ್ದಿ ಹಬ್ಬಿಸಿ ಕಾಂಗ್ರೆಸ್ ಹೈಕಮಾಂಡ್‌ಗೆ ಬೆದರಿಸಿದ್ದರು. ಬೆದರಿಕೆಗೆ ಬಗ್ಗಿದ ಹೈಕಮಾಂಡ್ ಒಲ್ಲದ ಮನಸ್ಸಿನಿಂದಲೇ ಸಿದ್ದರಾಮಯ್ಯರಿಗೆ ವಿಪಕ್ಷ ನಾಯಕ ಸ್ಥಾನ ನೀಡಿತ್ತು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟ್ವೀಟ್ ಮಾಡಿದೆ.
'ಈ ಬೆಳವಣಿಗೆಯನ್ನು ಕಟುವಾಗಿ ಟೀಕಿಸಿದ್ದ ವಿರೋಧ ಪಕ್ಷದ ನಿರ್ಗಮಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, 10 ಜನ ಶಾಸಕರೊಂದಿಗೆ ಬಂದ ಸಿದ್ದರಾಮಯ್ಯ, ಈಗ 100 ಶಾಸಕರ ಮುಖ್ಯಸ್ಥರಾಗಿದ್ದಾರೆ ಎಂದು ಮಾರ್ಮಿಕವಾಗಿ ನುಡಿದಿದ್ದರು. ಈ ಎಲ್ಲಾ ಘಟನೆಗಳನ್ನು ಕಾಂಗ್ರೆಸ್ ಮರೆತಂತೆ ಕಾಣುತ್ತಿದೆ. ಚಿಂತಿಸಬೇಡಿ, ಕೆಲವೇ ದಿನಗಳಲ್ಲಿ ಈ ಘಟನೆಗಳು ಮತ್ತಷ್ಟು ವಿಭಿನ್ನವಾಗಿ ಪುನರಾವರ್ತನೆಯಾಗಲಿವೆ' ಎಂದು ಕರ್ನಾಟಕ ಕಾಂಗ್ರೆಸ್‌ಗೆ ಎಚ್ಚರಿಕೆ ಕೊಟ್ಟಿದೆ.
ಕಾಂಗ್ರೆಸ್ ಸರಣಿ ಟ್ವೀಟ್; ಕರ್ನಾಟಕ ಕಾಂಗ್ರೆಸ್ ವಿರೋಧ ಪಕ್ಷದ ನಾಯಕನ ಆಯ್ಕೆ ಕುರಿತು ಸರಣಿ ಟ್ವೀಟ್ ಮಾಡಿ ಶನಿವಾರದಿಂದ ಬಿಜೆಪಿಯನ್ನು ಲವೇಡಿ ಮಾಡುತ್ತಿದೆ. ಒಂದು ಟ್ವೀಟ್‌ನಲ್ಲಿ ಕಾಂಗ್ರೆಸ್, ಚುನಾವಣೆ ಮುಗಿದು 50ಕ್ಕೂ ಹೆಚ್ಚು ದಿನ ಕಳೆಯಿತು. ನಮ್ಮ ಸರ್ಕಾರ ರಚನೆ ಆಗಿ ತಿಂಗಳು ಕಳೆಯಿತು. ಮಂತ್ರಿಮಂಡಲವೂ ರಚನೆಯಾಯ್ತು. ಸರ್ಕಾರ ಕೆಲಸ ಶುರು ಮಾಡಿಯಾಯ್ತು. ಹಲವು ಕ್ಯಾಬಿನೆಟ್ ಸಭೆಗಳಾದವು, ಹಲವು ತೀರ್ಮಾನಗಳಾದವು. ಮೂರು ಗ್ಯಾರಂಟಿಗಳೂ ಜಾರಿಯಾದವು. ಇಷ್ಟೆಲ್ಲಾ ಆದರೂ ಬಿಜೆಪಿಗೆ ಒಬ್ಬ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲಾಗಿಲ್ಲ' ಎಂದು ದೂರಿತ್ತು.
ಮತ್ತೊಂದು ಟ್ವೀಟ್‌ನಲ್ಲಿ, 'ಬಿಜೆಪಿ ಪಕ್ಷ ಆಡಳಿತ ಮಾಡಲು ಆಸಮರ್ಥರು ಎಂದು ಈಗಾಗಲೇ ಜನರು ಸರ್ಟಿಫಿಕೇಟ್ ಕೊಟ್ಟಾಗಿದೆ, ಈಗ ವಿರೋಧ ಪಕ್ಷವಾಗಿರಲೂ ಸಹ ಆಸಮರ್ಥರು ಎಂದು ತಿಳಿಯುತ್ತಿದೆ.
ಪ್ರಜಾಪ್ರಭುತ್ವದ ಸೌಂದರ್ಯಕ್ಕಾಗಿ ಸಮರ್ಥ ವಿಪಕ್ಷ ನಾಯಕನನ್ನು ಎದುರು ನೋಡುತ್ತಿದ್ದೇವೆ. ನಮ್ಮ ಆಸೆ ಈಡೇರುತ್ತದೋ ಇಲ್ಲವೋ ಗೊತ್ತಿಲ್ಲ' ಎಂದು ವ್ಯಂಗ್ಯವಾಡಿತ್ತು.
ತುರ್ತು ಬೇಕಾಗಿದ್ದಾರೆ; ಕರ್ನಾಟಕ ಕಾಂಗ್ರೆಸ್ ಮತ್ತೊಂದು ಟ್ವೀಟ್‌ನಲ್ಲಿ ಶನಿವಾರ 'ತುರ್ತಾಗಿ ಬೇಕಾಗಿದ್ದಾರೆ' ಎಂದು ಪ್ರಕಟಣೆ ಮಾದರಿಯಲ್ಲಿ ಟ್ವೀಟ್‌ವೊಂದನ್ನು ಮಾಡಿತ್ತು. 'ವಿರೋಧ ಪಕ್ಷದ ನಾಯಕರೊಬ್ಬರು ಬೇಕಾಗಿದ್ದಾರೆ' ಎಂದು ಹೇಳಿತ್ತು. ವಿರೋಧ ಪಕ್ಷದ ನಾಯಕನಾಗಲು ಬೇಕಾದ ಅರ್ಹತೆ ಕುರಿತು ಸಹ ಟ್ವೀಟ್‌ನಲ್ಲಿ ಉಲ್ಲೇಖ ಮಾಡಿತ್ತು.
* ಸಂವಿಧಾನವನ್ನು ತಿಳಿದವರು, ಪ್ರಜಾಪ್ರಭುತ್ವವನ್ನು ಅರಿತವರು ವಿಪಕ್ಷ ನಾಯಕರೊಬ್ಬರು ಬೇಕಾಗಿದ್ದಾರೆ.
* ಸಿಡಿಗೆ ತಡೆಯಜ್ಞೆ ತರದವರು, ಭ್ರಷ್ಟಾಚಾರಿಯಲ್ಲದವರು ವಿಪಕ್ಷ ನಾಯಕ ಬೇಕಾಗಿದ್ದಾರೆ.
* RSS ಕೈಗೊಂಬೆಯಾಗದವರು, ಕೋಮುವಾದಿ ಅಲ್ಲದವರು ವಿಪಕ್ಷ ನಾಯಕ ಬೇಕಾಗಿದ್ದಾರೆ.
* ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಪದವಿ ಪಡೆದಿರಬಾರದು, ಸುಳ್ಳು ಹೇಳಬಾರದು.
* ಘನತೆಯ ವ್ಯಕ್ತಿತ್ವದವರು, ತೂಕದ ಮಾತಿನವರು ವಿಪಕ್ಷ ನಾಯಕ ಬೇಕಾಗಿದ್ದಾರೆ. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ವಿಪಕ್ಷ ನಾಯಕರೊಬ್ಬರು ಬೇಕಾಗಿದ್ದಾರೆ! ಎಂದು ಹೇಳುವ ಮೂಲಕ ಬಿಜೆಪಿಯನ್ನು ಲೇವಡಿ ಮಾಡಿತ್ತು.












Click it and Unblock the Notifications