ನಾನೇನು ಸನ್ಯಾಸಿಯಲ್ಲ: ಕುಮಾರಸ್ವಾಮಿ ಮಾರ್ಮಿಕ ಹೇಳಿಕೆ
Recommended Video

ಬೆಂಗಳೂರು, ಫೆಬ್ರವರಿ 12: ವಿಧಾನಸಭೆ ಅಧಿವೇಶನದ ಮಂಗಳವಾರ ಮಧ್ಯಾಹ್ನದ ಕಲಾಪವೂ ಆಡಿಯೋ ಕುರಿತಾದ ಚರ್ಚೆಗೆ ಮೀಸಲಾಯಿತು.
ಕಲಾಪ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್, ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಖುದ್ದಾಗಿ ಈ ಆಡಿಯೋ ಮುದ್ರಣ ಮಾಡಿಸಿದ್ದಾರೆ. ಬಜೆಟ್‌ನಂತಹ ಪ್ರಮುಖ ಕಾರ್ಯ ಮುಂದಿರುವಾಗ ಅದಕ್ಕೂ ಮೊದಲೇ ಪತ್ರಿಕಾಗೋಷ್ಠಿ ನಡೆಸಿ ಆಡಿಯೋ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದರಲ್ಲಿ ಸಭಾಧ್ಯಕ್ಷರಾದ ನಿಮ್ಮ ಹೆಸರೂ (ರಮೇಶ್ ಕುಮಾರ್) ಇದೆ. ಹೀಗಿರುವಾಗ ಅವರು ಅದನ್ನು ಬಹಿರಂಗಪಡಿಸದೆ ಮೊದಲು ನಿಮ್ಮ ಬಳಿ ಚರ್ಚಿಸಬೇಕಿತ್ತು ಎಂದು ಹೇಳಿದರು.
ಈ ಬಗ್ಗೆ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿಯ ಇತರೆ ಸದಸ್ಯರು ಶೆಟ್ಟರ್ ಮಾತಿಗೆ ಬೆಂಬಲ ಸೂಚಿಸಿದರು. ಅಲ್ಲದೆ, ರಾಮಕೃಷ್ಣ ಹೆಗಡೆ ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಉದಾಹರಣೆಯಾಗಿ ನೀಡಿದರು. ಇಲ್ಲಿಯೂ ವೈಯಕ್ತಿಕ ಮಾತುಕತೆಯನ್ನು ಕದ್ದು ಮುದ್ರಿಸಿಕೊಳ್ಳಲಾಗಿದೆ. ಇದು ವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಆರೋಪಿಸಿದರು.

ಇದು ಕದ್ದಾಲಿಕೆಯ ಪ್ರಕರಣವಲ್ಲ
ಆಗ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡರು. ರಾಮಕೃಷ್ಣ ಹೆಗಡೆ ಪ್ರಕರಣಕ್ಕೂ ಇದಕ್ಕೂ ವ್ಯತ್ಯಾಸವಿದೆ. ಈ ಪ್ರಕರಣ ದೂರವಾಣಿ ಕದ್ದಾಲಿಕೆಯಲ್ಲ. ನಾನು ಕದ್ದಾಲಿಕೆ ಮಾಡಿಲ್ಲ. ನೀವೇ ಮಾಡಿದ ಆಮಿಷವನ್ನು ರೆಕಾರ್ಡ್ ಮಾಡಿಕೊಳ್ಳಲಾಗಿದೆ ಎಂದರು.

ನಾನು ಸನ್ಯಾಸಿಯಲ್ಲ
ನಿಮ್ಮ ಆರೋಪದ ಮೇಲೆ ಅಷ್ಟೊಂದು ವಿಶ್ವಾಸವಿದ್ದರೆ ಆರೋಪದ ತನಿಖೆ ಎದುರಿಸಿ. ತನಿಖೆಗೆ ಏಕೆ ಹೆದರುತ್ತಿದ್ದೀರಿ? ನಾನು ವೈಯಕ್ತಿಕವಾಗಿ ತನಿಖೆಗೆ ಸಿದ್ಧನಿದ್ದೇನೆ. ನಾನು ಸನ್ಯಾಸಿಯಲ್ಲ. ನನ್ನ ಜಾಗ ಉಳಿಸಿಕೊಳ್ಳಲು ಏನು ಬೇಕೋಅದನ್ನು ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.

ನಿದ್ದೆ ಮಾಡುತ್ತಿರುವವರನ್ನು ಎಬ್ಬಿಸಬಹುದು
ಬಳಿಕ ರಮೇಶ್ ಕುಮಾರ್, ಬಿಜೆಪಿಯ ಬಸವರಾಜ ಬೊಮ್ಮಾಯಿ ಅವರನ್ನು ಉದ್ದೇಶಿಸಿ, 'ಬಸವರಾಜ್ ಅವರೇ ನೀವು ಎಂಜಿನಿಯರ್ ಮತ್ತು ರಾಜಕಾರಣಿ. ಕದ್ದಾಲಿಕೆಗೂ ಧ್ವನಿ ಮುದ್ರಣಕ್ಕೂ ವ್ಯತ್ಯಾಸವಿದೆ' ಎಂದು ಹೇಳಿದರು.
'ನಿದ್ದೆ ಮಾಡುತ್ತಿರುವವರನ್ನು ಎಬ್ಬಿಸಬಹುದು. ನಿದ್ದೆ ಮಾಡುತ್ತಿರುವಂತೆ ನಟಿಸುತ್ತಿರುವವರನ್ನು ಎಬ್ಬಿಸುವುದು ಕಷ್ಟ ಎಂದು ಮಾರ್ಮಿಕವಾಗಿ ರಮೇಶ್ ಕುಮಾರ್ ಬಿಜೆಪಿಯವರ ಕಾಲೆಳೆದರು.

ತೀವ್ರವಾದ ಗದ್ದಲ
ಇದು ಕೂಡ ಕದ್ದಾಲಿಕೆಯೇ. ಡಿಕೆ ಶಿವಕುಮಾರ್ ಕದ್ದು ರೆಕಾರ್ಡ್ ಮಾಡಿಕೊಳ್ಳಲು ಬಂದವರನ್ನು ಹಿಡಿದು ಪೊಲೀಸ್ ಕೇಸ್ ಹಾಕಿರಲಿಲ್ಲವೇ? ಇಂತಹ ಬೇಕಾದಷ್ಟು ಉದಾಹರಣೆಗಳನ್ನು ಕೊಡಬಹುದು ಎಂದು ಬೊಮ್ಮಾಯಿ ಹೇಳಿದರು. ಜೆಡಿಎಸ್‌ನ ಸಾ.ರಾ. ಮಹೇಶ್ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಆಗ ರೇಣುಕಾಚಾರ್ಯ ಮತ್ತು ಸಾ.ರಾ. ಮಹೇಶ್ ನಡುವೆ ವಾಗ್ವಾದ ನಡೆಯಿತು.












Click it and Unblock the Notifications