ಅಂತರ್ಜಾಲ ಮದುವೆಗೆ ಮರುಳು: ವೈದ್ಯೆಗೆ ಪಂಗನಾಮ

ಇಲ್ಲಿನ ಗಾಂಧಿ ಮೈದಾನ ಬಳಿಯಿರುವ ಆಯುರ್ವೇದ ಮಹಿಳಾ ವೈದ್ಯರಾದ ಕೆ ಲಾವಣ್ಯ ರಾವ್ ವಂಚನೆಗೊಳಾದ ಮಹಿಳೆ. ನಾಗೇಶ್ ರಾವ್ ಅವರ ಪುತ್ರಿ 41 ವರ್ಷದ ಲಾವಣ್ಯಗೆ ಇನ್ನೂ ಮದುವೆಯಾಗಿರಲಿಲ್ಲ. ಅದೇ ಪಯತ್ನದಲ್ಲಿದ್ದ ಲಾವಣ್ಯ ಮೊನ್ನೆ ಮಾರ್ಚ್ ತಿಂಗಳಲ್ಲಿ Kannada Bharath Matrimony websiteನಲ್ಲಿ ರಿಜಿಸ್ಟರ್ ಮಾಡಿಸಿಕೊಂಡರು.
ಎರಡು ತಿಂಗಳಲ್ಲಿ (ಮೇ 5ರಂದು) ಅಜಮಲ್ ಎಂಬ ವ್ಯಕ್ತಿ ಸ್ಪಂದಿಸಿ, ತಮ್ಮ ಪ್ರೊಫೈಲ್ ಅನ್ನೂ ಕಳಿಸಿಕೊಟ್ಟರು. ಇಂತಿಪ್ಪ ಲಾವಣ್ಯ ಮತ್ತು ಅಜಮಲ್ ಅಂತರ್ಜಾಲದಲ್ಲೇ ಸ್ನೇಹ ಮುಂದುವರಿಸಿ, ಪರಸ್ಪರ ಹೃದಯಗಳನ್ನು ಕದ್ದಿದ್ದಾರೆ. ಮುಂದುವರಿದು ಮದುವೆಯಾಗುವ ನಿರ್ಣಯಕ್ಕೂ ಬಂದಿದ್ದಾರೆ.
ಆದರೆ ಅತ್ತ ಅಜಮಲ್ ಎಣಿಕೆಯೇ ಬೇರೆಯಾಗಿತ್ತು. ತಾನು ಖತಾರ್ ನಲ್ಲಿದ್ದು, ತನ್ನಪ್ಪ ಸಾವಿಗೀಡಾಗಿದ್ದಾರೆ. ಖತಾರ್ ಸರಕಾರದಿಂದ ತನಗೆ ಹಣ ಬರಬೇಕಾಗಿದೆ. ಅದು ವಿಳಂಬವಾಗುತ್ತಿದೆ. ಆದರೆ ತನಗೆ ತಕ್ಷಣಕ್ಕೆ ಹಣಕಾಸು ನೆರವು ಬೇಕಾಗಿದೆ. ಹಾಗಾಗಿ, ಸದ್ಯಕ್ಕೆ ಒಂದಷ್ಟು ಹಣ ಕಳುಹಿಸಿಕೊಡಿ ಎಂದು ಅಲವತ್ತುಕೊಂಡಿದ್ದಾನೆ.
ಹಿಂದುಮುಂದು ಯೋಜಿಸದ ಪುಣ್ಯಾತಿಗಿತ್ತಿ ಲಾವಣ್ಯ ರಾವ್ ಅಜಮಲ್ ಹೆಸರಿನಲ್ಲಿದ್ದ ನಾನಾ ಬ್ಯಾಂಕ್ ಖಾತೆಗಳಿಗೆ ಹಣ ತುಂಬಿದ್ದಾರೆ. ನವದೆಹಲಿ, ಹೈದರಾಬಾದ್, ಮುಂಬೈ, ನೋಯ್ಡಾ, ಬಾಗಲ್ಪುರ ಮತ್ತು ಲಖನೌ ಮುಂತಾದ ನಗರಗಳಲ್ಲಿರುವ ಅಜಮಲನ ಬ್ಯಾಂಕ್ ಖಾತೆಗಳಿಗೆ ಬರೋಬ್ಬರಿ 11,35,000 ರೂ ಜಮಾ ಮಾಡಿದ್ದಾರೆ.
ಅಷ್ಟು ಹಣ ಕೈಸೇರಿದ ಮೇಲೆ ಅಜಮಲನಿಗೆ ನಿಜಕ್ಕೂ ಭಂಡ ಧೈರ್ಯ ಬಂದಿದೆ. ಜತೆಗೆ ಸರಿಯಾದ ಮಿಕ ತನ್ನ ಬಲೆಗೆ ಬಿದ್ದಿದೆ ಎಂದು ಭಾವಿಸಿ, ಮತ್ತಷ್ಟು ಹಣ ಕಳುಹಿಸುವಂತೆ ಲಾವಣ್ಯಗೆ ಪೀಡಿಸಿದ್ದಾನೆ. ಅಷ್ಟೇ ಅಲ್ಲ. ಹಣ ಕಳುಹಿಸದಿದ್ದರೆ ಸಾಯಿಸುವುದಾಗಿಯೂ ಬೆದರಿಕೆ ಹಾಕಿದ್ದಾನೆ.
ಇದರ ನೀತಿ ಪಾಠ ಏನು !?: ಕಂಗೆಟ್ಟ ವೈದ್ಯೆ ಲಾವಣ್ಯ ಧೈರ್ಯ ಮಾಡಿ ಸ್ಥಳೀಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮಾಹಿತಿ ತಂತ್ರಜ್ಞಾನ ಅಪರಾಧ ಕಾಯಿದೆ 2008 ಅನುಸಾರ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ. ಒಟ್ಟಿನಲ್ಲಿ ರಾತ್ರಿ ಕಂಡ ಬಾವಿಗೆ ಹಗಲು ಬೀಳುವಂತೆ...












Click it and Unblock the Notifications