Shakti Scheme: ವರ್ಷ ಕಳೆದರೂ ಮಹಿಳೆಯರ ಕೈಗೆ ಸಿಕ್ಕಿಲ್ಲ ಸ್ಮಾರ್ಟ್ ಕಾರ್ಡ್, ಇನ್ಯಾವಾಗ ಸಿಗುತ್ತೆ?
ಬೆಂಗಳೂರು, ಜೂನ್. 12: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಶಕ್ತಿ ಯೋಜನೆ ಕೂಡ ಒಂದು. ಮಹಿಳೆಯರಿಗೆ ಉಚಿತ ಬಸ್ ಪ್ರವಾಸ ಒದಗಿಸುವ ಈ ಶಕ್ತಿ ಯೋಜನೆ ಜಾರಿಯಾಗಿ ವರ್ಷವಾದರೂ ಕೂಡ ಇನ್ನು ಆಧಾರ್ ಸೇರಿದಂತೆ ಹಲವು ಕಾರ್ಡ್‌ಗಳನ್ನು ತೋರಿಸಿಯೇ ಪ್ರಯಾಣ ಮಾಡುತ್ತಿದ್ದಾರೆ.
ಶಕ್ತಿ ಯೋಜನೆಯು ಮೊದಲ ವರ್ಷವನ್ನು ಪೂರ್ಣಗೊಳಿಸಿದೆ. ಆದರೂ ಫಲಾನುಭವಿಗಳಿಗೆ ನೀಡಬೇಕಿದ್ದ ಸ್ಮಾರ್ಟ್ ಕಾರ್ಡ್‌ಗಳನ್ನು ಇನ್ನು ವಿತರಿಸಲಾಗಿಲ್ಲ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಸ್ಮಾರ್ಟ್‌ಕಾರ್ಡ್‌ಗಳನ್ನು ಸಿದ್ಧಪಡಿಸಲಾಗಿದ್ದು, ಎಲ್ಲಾ ಬಸ್‌ಗಳಲ್ಲಿ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರಗಳು (ಇಟಿಎಂ) ಇಲ್ಲದಿರುವುದರಿಂದ ಅವುಗಳ ವಿತರಣೆ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಸಾರಿಗೆ ಇಲಾಖೆಯು ಸೆಂಟರ್ ಫಾರ್ ಇ-ಗವರ್ನೆನ್ಸ್ (ಸಿಇಜಿ) ಜೊತೆಗೆ ಈ ಯೋಜನೆಗಾಗಿ ಸ್ಮಾರ್ಟ್ ಕಾರ್ಡ್‌ಗಳ ಮೂಲಮಾದರಿಗಳನ್ನು ಯಶಸ್ವಿಯಾಗಿ ರಚಿಸಿದೆ. ಈ ಸ್ಮಾರ್ಟ್ ಕಾರ್ಡ್‌ಗಳ ರೋಲ್‌ಔಟ್ ವಿಳಂಬವಾಗಬಹುದು. ಏಕೆಂದರೆ ನಗರ ಮಾರ್ಗಗಳಲ್ಲಿ, ವಿಶೇಷವಾಗಿ ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಶನ್ (ಬಿಎಂಟಿಸಿ) ವ್ಯಾಪ್ತಿಯಲ್ಲಿ ಮತ್ತು ಇಟಿಎಂಗಳಲ್ಲಿ ಬಳಸಲು ಅವುಗಳ ಸೂಕ್ತತೆಯನ್ನು ಮೌಲ್ಯಮಾಪನ ಮಾಡಬೇಕಾಗಿದೆ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಶಕ್ತಿ ಯೋಜನೆ ಮುಂದುವರೆಯುತ್ತದೆ ಎಂಬುದನ್ನು ಮತ್ತೆ ಪುನರುಚ್ಚರಿಸಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಈ ಯೋಜನೆಯು ಈಗಾಗಲೇ 226 ಕೋಟಿ ಜನರು ಸಂಚರಿಸಿದ್ದಾರೆ. ಉಚಿತ ಟಿಕೆಟ್‌ಗಳ ಒಟ್ಟು ಮೌಲ್ಯ 5,526 ಕೋಟಿ ರೂಪಾಯಿಗಳಷ್ಟಿದೆ. ಮೂರು ತಿಂಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸಲಾಗುತ್ತದೆ ಎಂದು ಸರ್ಕಾರ ಹೇಳಿತ್ತು. 2023ರ ಜೂನ್ 11 ರಂದು ಈ ಶಕ್ತಿ ಯೋಜನೆ ಜಾರಿಯಾಗಿತ್ತು.
"ಸ್ಮಾರ್ಟ್ ಕಾರ್ಡ್‌ಗಳು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್‌ಗಳಲ್ಲಿ ದೂರದ ಮಾರ್ಗಗಳಿಗೆ ಬಳಸುವ ಸಾಮರ್ಥ್ಯವನ್ನು ಹೊಂದಿವೆ. ಆದರೆ, ರಾಜ್ಯದೊಳಗಿನ ಬಿಎಂಟಿಸಿ ಮತ್ತು ಇತರ ಕಡಿಮೆ ದೂರ ನಗರ ಬಸ್‌ಗಳಿಗೆ ಅವುಗಳ ಅನ್ವಯಿಕೆಯನ್ನು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡುವ ಅಗತ್ಯವಿದೆ. ಸಿಟಿ ಬಸ್‌ಗಳಲ್ಲಿ ಅಲ್ಪಾವಧಿಯ ಪ್ರಯಾಣದ ಪ್ರಮಾಣ ಹೆಚ್ಚಿರುವುದರಿಂದ, ಯೋಜನೆಗೆ ಸ್ಮಾರ್ಟ್ ಕಾರ್ಡ್‌ಗಳನ್ನು ಅಳವಡಿಸುವುದು ಸವಾಲಿನ ಸಂಗತಿಯಾಗಿದೆ" ಎಂದು ಸ್ಮಾರ್ಟ್ ಕಾರ್ಡ್‌ಗಳ ಹಂಚಿಕೆ ಬಗ್ಗೆ ರಾಮಲಿಂಗಾ ರೆಡ್ಡಿ ವಿವರಿಸಿದ್ದಾರೆ.

ಜೂನ್ 11, 2023 ರಂದು, ರಾಜ್ಯದಲ್ಲಿ ಹೊಸದಾಗಿ ಆಯ್ಕೆಯಾದ ಕಾಂಗ್ರೆಸ್ ಸರ್ಕಾರವು ಶಕ್ತಿ ಯೋಜನೆಯನ್ನು ಪರಿಚಯಿಸಿತು. ಇದು ತನ್ನ ಪಂಚ ಗ್ಯಾರಂಟಿ ಯೋಜನೆಗಳ ಚುನಾವಣಾ ಭರವಸೆಗಳಲ್ಲಿ ಮೊದಲನೆಯದು. ಈ ಯೋಜನೆಯು ಮಹಿಳೆಯರಿಗೆ ಕರ್ನಾಟಕದಾದ್ಯಂತ ಪ್ರೀಮಿಯಂ, ಎಸಿ ಅಲ್ಲದ ರಾಜ್ಯ ಚಾಲಿತ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ.
ಆರಂಭದಿಂದಲೂ ಈ ಯೋಜನೆಗೆ ಮಹಿಳಾ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯೋಜನೆಯ ಪ್ರಾರಂಭದಲ್ಲಿ, ಯೋಜನೆಯಿಂದ ಪ್ರಯೋಜನ ಪಡೆಯಲು ಬಯಸುವ ಮಹಿಳೆಯರು ಅಧಿಕೃತ ಸ್ಕೀಮ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು ಮತ್ತು ಗುರುತಿನ ಪುರಾವೆಯಾಗಿ ಮಾನ್ಯ ಸರ್ಕಾರ ನೀಡಿದ ಗುರುತಿನ ಚೀಟಿಯನ್ನು ಸಲ್ಲಿಸಬೇಕು ಎಂದು ಸರ್ಕಾರ ಘೋಷಿಸಿತು. ಪ್ರಸ್ತುತ, ಮಹಿಳಾ ಪ್ರಯಾಣಿಕರು ಬಸ್ ಪ್ರಯಾಣಕ್ಕಾಗಿ ಉಚಿತ ಟಿಕೆಟ್ ಪಡೆಯಲು ಕೇಂದ್ರ ಅಥವಾ ರಾಜ್ಯ ಸರ್ಕಾರವು ನೀಡಿದ ಮಾನ್ಯ ಗುರುತಿನ ಚೀಟಿಯನ್ನು ತೋರಿಸುತ್ತಾರೆ.
"ಈಗ, ರಸ್ತೆ ಸಾರಿಗೆ ನಿಗಮಗಳು (ಆರ್‌ಟಿಸಿ) ಸ್ಮಾರ್ಟ್ ಕಾರ್ಡ್‌ಗಳಿಲ್ಲದೆ ಉತ್ತಮವಾಗಿ ನಿರ್ವಹಿಸುತ್ತಿವೆ. ಮಹಿಳಾ ಪ್ರಯಾಣಿಕರ ಗುರುತಿನ ಚೀಟಿಗಳನ್ನು ಪರಿಶೀಲಿಸಿದ ನಂತರ ಕಂಡಕ್ಟರ್‌ಗಳು ಟಿಕೆಟ್‌ಗಳನ್ನು ನೀಡುತ್ತಿದ್ದಾರೆ. ಟಿಕೆಟ್ ನೀಡಿಕೆಯಲ್ಲಿ ಯಾವುದೇ ಮಹತ್ವದ ಸಮಸ್ಯೆಗಳಿಲ್ಲ. ಆದರೆ, ಸ್ಮಾರ್ಟ್ ಕಾರ್ಡ್‌ಗಳು ಸಮಯವನ್ನು ಉಳಿಸುವ ಮೂಲಕ ಪ್ರಯಾಣಿಕರಿಗೆ ಮತ್ತು ಕಂಡಕ್ಟರ್‌ಗಳಿಗೆ ಪ್ರಯೋಜನಕಾರಿ ಎಂದು ಒಪ್ಪಿಕೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ.












Click it and Unblock the Notifications