Government Employee; OPS ಜಾರಿ ಕಡತಕ್ಕೆ ಮುಖ್ಯಮಂತ್ರಿಗಳ ಸಹಿ ಬಾಕಿ
ಬೆಂಗಳೂರು, ಜನವರಿ 12: ಕರ್ನಾಟಕದ ಸರ್ಕಾರಿ ನೌಕರರು ಕಾಂಗ್ರೆಸ್ ಸರ್ಕಾರದ ಮುಂದೆ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ (OPS) ಪುನಃ ಜಾರಿಗೆ ತರಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಕಾಂಗ್ರೆಸ್ ಸಹ ಈ ಕುರಿತು ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಳೆಯ ಪಿಂಚಣಿ ಯೋಜನೆ ಜಾರಿ ಕುರಿತು ಸರ್ಕಾರದ ಮಟ್ಟದಲ್ಲಿ ಆಗಿರುವ ಬೆಳವಣಿಗೆಯ ಮಾಹಿತಿ ನೀಡಿದೆ. ಕೇಂದ್ರದ ಮಾದರಿಯಲ್ಲಿ 1/4/2006ಕ್ಕಿಂತ ಪೂರ್ವದಲ್ಲಿ ರಾಜ್ಯ ಸರ್ಕಾರದ ಅಧಿಸೂಚನೆಯನ್ವಯ ನೇಮಕಾತಿ ಹೊಂದಿರುವ ನೌಕರರಿಗೆ ಹಳೇ ಪಿಂಚಣಿ ಯೋಜನೆ ಅನುಷ್ಠಾನವಾಗಲಿದೆ. ಈ ಕುರಿತು ಶೀಘ್ರದಲ್ಲೇ ಆದೇಶ ಪ್ರಕಟವಾಗಲಿದೆ ಎಂದು ತಿಳಿಸಿದೆ.

1/4/2006ಕ್ಕಿಂತ ಪೂರ್ವದಲ್ಲಿ ರಾಜ್ಯ ಸರ್ಕಾರದ ಅಧಿಸೂಚನೆಯನ್ವಯ ನೇಮಕಾತಿ ಹೊಂದಿರುವ NPS ನೌಕರರಿಗೆ ಕೇಂದ್ರ ಸರ್ಕಾರದ ಆದೇಶದಂತೆ ಹಲವು ರಾಜ್ಯಗಳಲ್ಲೂ ಜಾರಿಗೆ ಬಂದಿರುವ ಮಾದರಿಯಲ್ಲಿ, ಕರ್ನಾಟಕದಲ್ಲೂ ಉನ್ನತ ಶ್ರೇಣಿಯ ಅಧಿಕಾರಿಗಳನ್ನು ಪರಿಗಣಿಸಿರುವಂತೆ, ಉಳಿದ ನೌಕರರನ್ನು ಸಹ ಪರಿಗಣಿಸಲು ದಿನಾಂಕ 3/3/2023ರಂದು ಸಂಘದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು.
ಸಂಘ ಸಲ್ಲಿಸಿದ್ದ ಮನವಿ ಮೇರೆಗೆ ಕಡತ ಸಂಖ್ಯೆ: /99/6/2023 (30.30:1043074)ರಲ್ಲಿನ ಪ್ರಸ್ತಾವನೆಯನ್ನು ಮಾನ್ಯ ಮುಖ್ಯಮಂತ್ರಿಗಳ ಕಛೇರಿಗೆ ಸಲ್ಲಿಸಲಾಗಿದ್ದು, ಮಾನ್ಯ ಮುಖ್ಯಮಂತ್ರಿಗಳ ಅನುಮೋದನೆ ನಂತರ ಶೀಘ್ರದಲ್ಲೇ ಆದೇಶ ಹೊರಬೀಳಲಿದೆ ಎಂದು ಸರ್ಕಾರಿ ನೌಕರರ ಸಂಘ ಹೇಳಿದೆ.
ಅಭಿನಂದನೆ ಸಲ್ಲಿಸಿದ ಸಂಘ; ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಪಡಾಕ್ಷರಿ ಪತ್ರಿಕಾ ಪ್ರಕಟಣೆಯಲ್ಲಿ ಬಹು ದಿನಗಳ ಸಾವಿರಾರು ನೌಕರರ ಬೇಡಿಕೆ ಈಡೇರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಮಸ್ತ ರಾಜ್ಯದ 6 ಲಕ್ಷ ಸರ್ಕಾರಿ ನೌಕರರ ಹಾಗೂ ಸಂಘದ ಪರವಾಗಿ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.
1/4/2006ಕ್ಕಿಂತ ಪೂರ್ವದಲ್ಲಿ ರಾಜ್ಯ ಸರ್ಕಾರದ ಅಧಿಸೂಚನೆಯನ್ವಯ ನೇಮಕಾತಿ ಹೊಂದಿರುವ ನೌಕರರ ಆದ್ಯ ಗಮನಕ್ಕೆ. ದಿನಾಂಕ 01/04/2006ಕ್ಕಿಂತ ಪೂರ್ವದಲ್ಲಿ ರಾಜ್ಯ ಸರ್ಕಾರದ ಅಧಿಸೂಚನೆಯನ್ವಯ ನೇಮಕಾತಿ ಹೊಂದಿರುವ ನೌಕರರು ಹಳೆ ಪಿಂಚಣಿ ಯೋಜನೆಗೆ ಪರಿಗಣಿಸಲು ಮಾನ್ಯ ಮುಖ್ಯಮಂತ್ರಿಗಳಿಂದ ಅನುಮೋದನೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಸಂಘದ ನಿರಂತರ ಪ್ರಯತ್ನದ ಫಲವಾಗಿ ಹಾಗೂ ದಿನಾಂಕ 10/01/2024ರಂದು ಆರ್ಥಿಕ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಎಲ್. ಕೆ. ಅತೀಕ್ ಅವರನ್ನು ಭೇಟಿ ಮಾಡಿ 2006ರ ಪೂರ್ವದಲ್ಲಿ ನೇಮಕಾತಿ ಅಧಿಸೂಚನೆಗೆ ಒಳಪಟ್ಟ NPS ನೌಕರರನ್ನು OPS ವ್ಯಾಪ್ತಿಗೆ ಪರಿಗಣಿಸಲು ಕೋರಲಾಗಿ ಮಾನ್ಯರು ಸಕಾರಾತ್ಮಕವಾಗಿ ಸ್ಪಂದಿಸಿ, ಮಾನ್ಯ ಮುಖ್ಯಮಂತ್ರಿಗಳ ಅನುಮೋದನೆ ಪಡೆದು ಶೀಘ್ರದಲ್ಲೇ ಆದೇಶ ಹೊರಡಿಸುವುದಾಗಿ ತಿಳಿಸಿದ್ದರು.
ಅದರಂತೆ 11/1/2024ರಂದು ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಬಹುದಿನಗಳ ಬೇಡಿಕೆಯಾದ ದಿನಾಂಕ 31/03/2006ಕ್ಕಿಂತ ಪೂರ್ವದಲ್ಲಿ ರಾಜ್ಯ ಸರ್ಕಾರದ ಅಧಿಸೂಚನೆಯನ್ವಯ ನೇಮಕಾತಿ ಹೊಂದಿ ದಿನಾಂಕ 01/04/2006ರ ನಂತರ ಕೆಲಸಕ್ಕೆ ಹಾಜರಾಗಿ ಪ್ರಸ್ತುತ ಎನ್‌ಪಿಎಸ್ ಯೋಜನೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ ಓಪಿಎಸ್ ನೌಕರರೆಂದು ಪರಿಗಣಿಸುವುದಕ್ಕೆ ಸಂಭಂದಿಸಿದ ಕಡತ ಸಂಖ್ಯೆ:ಎಫ್‌ಡಿ/99/ಪಿಇಎನ್/2023 ರ ಕಡತದಲ್ಲಿ ಅನುಮೋದನೆ ನೀಡಿರುತ್ತಾರೆ ಹಾಗೂ ಕಡತ ಆರ್ಥಿಕ ಇಲಾಖೆಯಲ್ಲಿದ್ದು, ಶೀಘ್ರದಲ್ಲಿಯೇ ಆದೇಶ ಹೊರಬೀಳಲಿದೆ.
ಯೋಜನೆಯಿಂದ ರಾಜ್ಯದ 11,366 ಬಾದಿತ NPS ಸರ್ಕಾರಿ ನೌಕರರು OPS ಸೌಲಭ್ಯ ಪಡೆಯಲಿದ್ದಾರೆ. ಇದರಿಂದ ಬಹಳ ವರ್ಷಗಳ ಕನಸು ಈಡೇರಿದ್ದು, ಅವರಿಗೆ ಹಾಗೂ ಅವಲಂಬಿತರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಸರ್ಕಾರಿ ನೌಕರರ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications