ಬೆಲೆ ಏರಿಕೆ : 6 ಕೋಟಿ ಮೌಲ್ಯದ ತೊಗರಿ ಬೇಳೆ ವಶಕ್ಕೆ
ಬೆಂಗಳೂರು, ಅಕ್ಟೋಬರ್ 22 : ಮಾರುಕಟ್ಟೆಯಲ್ಲಿ ದ್ವಿ-ದಳ ಧಾನ್ಯಗಳ ದರಗಳು ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸೂಚನೆಯಂತೆ ರಾಜ್ಯದ ಕೆಲವು ಪ್ರಮುಖ ನಗರಗಳಲ್ಲಿ ಕಳೆದ ಎರಡು ದಿನಗಳಿಂದ ಗೋದಾಮುಗಳ ಮೇಲೆ ನಡೆದ ದಾಳಿಯಲ್ಲಿ ಅಕ್ರಮ ದಾಸ್ತಾನಾಗಿದ್ದ 4,800 ಕ್ವಿಂಟಾಲ್ ತೊಗರಿ ಬೇಳೆಯನ್ನು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಆಹಾರ, ನಾಗರೀಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ದಿನೇಶ್ ಗುಂಡೂರಾವ್ ಅವರು 'ಎರಡು ದಿನದಲ್ಲಿ ಸುಮಾರು 6 ಕೋಟಿ ಮೌಲ್ಯದ ತೊಗರಿ ಬೇಳೆಯನ್ನು ವಶಪಡಿಸಿಕೊಳ್ಳಲಾಗಿದೆ' ಎಂದರು.[ತೊಗರಿ ಬೇಳೆಗೆ ಬಂಗಾರದ ಬೆಲೆ ಬರಲು ಕಾರಣವೇನು?]

'ಕೇಂದ್ರ ಸರ್ಕಾರ ಹೊರಡಿಸಿರುವ ಸೂಚನೆಯಂತೆ ಸಗಟು ಮಾರಾಟಗಾರರು ಹಾಗೂ ಮಾಲ್‍ಗಳಲ್ಲಿ ಗರಿಷ್ಠ 2 ಸಾವಿರ ಕ್ವಿಂಟಾಲ್ ಗಿಂತಲೂ ಹೆಚ್ಚು ಬೇಳೆ ಕಾಳುಗಳನ್ನು ದಾಸ್ತಾನು ಮಾಡುವಂತಿಲ್ಲ. ಈ ಮಾರ್ಗ ಸೂಚಿಯ ಆಧಾರದ ಮೇಲೆಯೇ ದಾಳಿ ನಡೆಸಲಾಗಿದೆ' ಎಂದು ದಿನೇಶ್ ಗುಂಡೂರಾವ್ ಹೇಳಿದರು. [ತೊಗರಿ ಬೇಳೆ ಪ್ರತಿ ಕೆ.ಜಿಗೆ 110 ರು ಮಾತ್ರ]
'ಮಂಗಳವಾರ ಆರಂಭವಾದ ಮಳಿಗೆಗಳ ಮೇಲಿನ ದಾಳಿಯಲ್ಲಿ ಮೈಸೂರು ನಗರದಲ್ಲಿ 3,600 ಕ್ವಿಂಟಾಲ್ ಮತ್ತು ಬೀದರ್ ನಗರದಲ್ಲಿ 1,200 ಕ್ವಿಂಟಾಲ್ ತೊಗರಿ ಬೇಳೆ ವಶಪಡಿಸಿಕೊಳ್ಳಲಾಗಿದೆ. ಈ ದಾಳಿಯು ನಿರಂತರವಾಗಿ ಮುಂದುವರೆಯಲಿದೆ' ಎಂದು ಸಚಿವರು ತಿಳಿಸಿದರು.
'ದಾಳಿಯ ವೇಳೆ ವಶಪಡಿಸಿಕೊಂಡಿರುವ ದ್ವಿ-ದಳ ಧಾನ್ಯಗಳನ್ನು ಹರಾಜು ಮಾಡಿ, ಸ್ವೀಕೃತವಾಗುವ ಹಣವನ್ನು ಖಜಾನೆಯಲ್ಲಿ ಜಮೆ ಮಾಡಲಾಗುವುದು. ಎಲ್ಲಾ ಜಿಲ್ಲಾಧಿಕಾರಿಗಳು ನೋಡೆಲ್ ಅಧಿಕಾರಿಗಳಾಗಿರುವುದಂದ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿಯೇ ಅಕ್ರಮ ದಾಸ್ತಾನು ಪತ್ತೆ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಲು ನಿರ್ದೇಶನ ನೀಡಲಾಗಿದೆ' ಎಂದರು.
'ಬೆಂಗಳೂರು, ಮೈಸೂರು, ಮಂಗಳೂರು, ಕಾರವಾರ, ಬೀದರ್, ಕಲಬುರಗಿಯಲ್ಲಿ ದಾಳಿ ಮುಂದುವರೆಯುತ್ತವೆ. ಬೇರೆ ಬೇರೆ ಪ್ರದೇಶಗಳಿಂದ ಬಂದರು ಮೂಲಕ ದ್ವಿ-ದಳ ಧಾನ್ಯಗಳನ್ನು ಭಾರೀ ಪ್ರಮಾಣದಲ್ಲಿ ಖರೀದಿಸಿ, ದಾಸ್ತಾನು ಮಾಡುವವರ ಮೇಲೂ ಆಹಾರ ಇಲಾಖೆ ನಿಗಾ ಇಡಲಿದೆ' ಎಂದು ಸಚಿವರು ಹೇಳಿದರು.












Click it and Unblock the Notifications