NWKRTC: 6 ವರ್ಷಗಳ ನಂತರ 1000 ಸಿಬ್ಬಂದಿ ನೇಮಕಾತಿ: ಆದೇಶ ಪತ್ರ ನೀಡಿದ ರಾಮಲಿಂಗಾ ರೆಡ್ಡಿ
ಬೆಂಗಳೂರು, ಜೂನ್ 25: ಕರ್ನಾಟಕ ಸಾರಿಗೆ ಇಲಾಖೆಯು 2019ರಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ವ್ಯಾಪ್ತಿಯಲ್ಲಿ ಖಾಲಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಸುಮಾರು ಆರು ವರ್ಷಗಳ ಬಳಿಕ ನೇಮಕಾತಿ ನಡೆದಿದೆ. ಹೊಸ ಸರ್ಕಾರ ಬಂದ ಬಳಿಕ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ರಾಜ್ಯ ಸಾರಿಗೆ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಬುಧವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬೆಂಗಳೂರಿನ ಸಭಾಂಗಣದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಹೊಸ ನೇಮಕಾತಿ ಮೂಲಕ ಆಯ್ಕೆಗೊಂಡ ಚಾಲಕರಿಗೆ ನೇಮಕಾತಿ ಪತ್ರವನ್ನು ಸಚಿವರು ವಿತರಣೆ ಮಾಡಿದರು. ಸಾಂಕೇತಿಕವಾಗಿ 46 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿ ಶುಭಕೋರಿದರು. ಬಳಿಕ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಾಣಿಜ್ಯ ಮಳಿಗೆಗಳ ಪರವಾನಗಿ ನಿರ್ವಹಣಾ ತಂತ್ರಾಂಶ ಅನಾವರಣಗೊಳಿಸಿ ಮಾತನಾಡಿದರು.

ರಾಮಲಿಂಗಾರೆಡ್ಡಿ ಅವರು, 2019 ರಲ್ಲಿ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ನಂತರದ ವರ್ಷಗಳಲ್ಲಿ ದೇಶದಲ್ಲೆಡೆ ಹರಡಿದ ಕೋವಿಡ್-19 ಕಾರಣದಿಂದ ಸ್ಥಗಿತಗೊಂಡಿತ್ತು. ನಂತರ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ NWKRTC ಸಂಸ್ಥೆಗೆ 1000 ಚಾಲಕ ಮತ್ತು ಚಾಲಕ ಕಂ ನಿರ್ವಾಹಕ ನೇಮಕಾತಿ ಮಾಡಿಕೊಳ್ಳಲಾಗಿದೆ. ಈ ನೇಮಕಾತಿ ಯಶಸ್ವಿಯಾಗಿ ಹಾಗೂ ಸಂಪೂರ್ಣ ಪಾರದರ್ಶಕತೆಯಿಂದ ಪೂರ್ಣಗೊಳಿಸಿದ್ದೇವೆ ಎಂದು ತಿಳಿಸಿದರು.
ವಿಶೇಷ ಅನುದಾನ ಕೋರಿದ NWKRTC ಅಧ್ಯಕ್ಷ
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC) ಅಧ್ಯಕ್ಷರಾದ ಭರಮಗೌಡ ಕಾಗೆ ಮಾತನಾಡಿ, ಸಂಸ್ಥೆಗೆ ಇನ್ನೂ ಚಾಲನಾ ಸಿಬ್ಬಂದಿಗಳ ಅವಶ್ಯಕತೆ ಇದೆ ಹಾಗಾಗಿ ಮತ್ತೊಮ್ಮೆ ಚಾಲನಾ ಸಿಬ್ಬಂದಿಗಳ ನೇಮಕಾತಿ ಪ್ರಾರಂಭಿಸಿದರೆ ಪುನಃ ಸಂಸ್ಥೆಗೆ ಖರ್ಚು ವೆಚ್ಚವಾಗುತ್ತದೆ. ಘಟಕಗಳ ಸುಧಾರಣೆ ಮಾಡಬೇಕಾಗಿದೆ ಅದಕ್ಕಾಗಿ ವಿಶೇಷ ಹೆಚ್ಚು ಅನುದಾನವನ್ನು ಸರ್ಕಾರರದಿಂದ ದೊರಕಿಸಿ ಕೊಡಬೇಕೆಂದು ಮನವಿ ಮಾಡಿದರು.
ಇತ್ತೀಚೆಗೆ ಕರ್ನಾಟಕ ಸರ್ಕಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ 08 ವರ್ಷಗಳ ಬಳಿಕ 2000 ಚಾಲಕ ಕಂ ನಿರ್ವಾಹಕರನ್ನು ನೇಮಕ ಮಾಡಿಕೊಂಡರು. ಈ ಅಭ್ಯರ್ಥಿಗಳಿಗೆ ರಾಮಲಿಂಗಾ ರೆಡ್ಡಿಯವರು ಕಳೆದ ಸಮಾರಂಭದಲ್ಲಿ ನಿಯೋಜನೆ ಆದೇಶ ಪತ್ರ ವಿತರಿಸಿದ್ದರು. ಸಾಂಕೇತಿಕವಾಗಿ ಪತ್ರ ವಿತರಣೆ ಮಾಡಿ, ಹೊಸ ಸಿಬ್ಬಂದಿಗೆ ಶುಭಾಶಯ ಕೋರಿದರು. ಯಾವ ರೀತಿ ನಿಗಮ ವ್ಯಾಪ್ತಿಯಲ್ಲಿ ಕೆಲಸ ಮಾಡಬೇಕು ಎಂದು ಅವರು ಕಿವಿ ಮಾತು ಹೇಳಿದ್ದರು.












Click it and Unblock the Notifications