ಎನ್. ಆರ್. ಸಂತೋಷ್ ಆಸ್ಪತ್ರೆಯಿಂದ ಡಿಸ್ಚಾರ್ಜ್; ಹೇಳಿದ್ದೇನು?
ಬೆಂಗಳೂರು, ನವೆಂಬರ್ 30 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್. ಆರ್. ಸಂತೋಷ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು. ಶುಕ್ರವಾರ ರಾತ್ರಿ ನಿದ್ರೆ ಮಾತ್ರೆ ಸೇವಿಸಿ ಸಂತೋಷ್ ಅಸ್ವಸ್ಥಗೊಂಡಿದ್ದರು.
ಸೋಮವಾರ ಎಂ. ಎಸ್. ರಾಮಯ್ಯ ಆಸ್ಪತ್ರೆಯಿಂದ ಸಂತೋಷ್ ಡಿಸ್ಚಾರ್ಜ್ ಆದರು. ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಮಾತ್ರೆ ಬದಲಾಗಿ ನಿದ್ದೆ ಮಾತ್ರ ಸೇವಿಸಿದ್ದೆ. ಇದೊಂದು ಅಚಾತುರ್ಯದ ಘಟನೆ" ಎಂದರು.
"ನನಗೆ ನಿದ್ದೆ ಬರದಿದ್ದಾಗ ನಿದ್ದೆ ಮಾತ್ರೆ ಸೇವಿಸುವ ಅಭ್ಯಾಸವಿದೆ. ಅರ್ಧ ಮಾತ್ರೆ ಸೇವಿಸುತ್ತಿದ್ದೆ. ಮೊನ್ನೆ ಇಡೀ ಮಾತ್ರೆ ಸೇವಿಸಿದ್ದೆ. ಆಕಸ್ಮಿಕವಾಗಿ ನಡೆದ ಘಟನೆ ಇದಾಗಿದೆ" ಎಂದು ಸ್ಪಷ್ಟನೆ ನೀಡಿದರು.

"ನಾನು ಆತ್ಮಹತ್ಯೆಗೆ ಯತ್ನಿಸುವಂತಹ ವ್ಯಕ್ತಿಯಲ್ಲ. ಉಪ ಚುನಾವಣೆಯ ಸೋಲಿನಿಂದ ಡಿ. ಕೆ. ಶಿವಕುಮಾರ್ ಅವರಿಗೆ ಮತಿಗೆಟ್ಟಿರಬೇಕು. ಅವರು ಈ ಮೊದಲು ಈ ರೀತಿಯ ಹೇಳಿಕೆಗಳನ್ನು ಕೊಟ್ಟಿದ್ದಾರೆ" ಎಂದರು.
"ಡಿ. ಕೆ. ಶಿವಕುಮಾರ್ ಅವರು ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವ ಮುನ್ನಾ 10 ಬಾರಿ ಯೋಚಿಸಬೇಕು. ಅವರ ಪಕ್ಷದ ಸಿದ್ದರಾಮಯ್ಯ ಸಾಹೇಬರನ್ನು ನೋಡಿ ಅವರು ಮಾತನಾಡುವುದು ಕಲಿಯಲಿ. ನಮ್ಮ ನಾಯಕ ಯಡಿಯೂರಪ್ಪ ಬಗ್ಗೆ ಮಾತನಾಡುವ ಮುನ್ನ ಎಚ್ಚರ" ಎಂದು ಎನ್. ಆರ್. ಸಂತೋಷ್ ಹೇಳಿದರು.
"ಕಾಂಗ್ರೆಸ್ ಪಕ್ಷದ ನಾಯಕರಲ್ಲಿ ನಾನು ಮನವಿ ಮಾಡುತ್ತೇನೆ. ಡಿ. ಕೆ. ಶಿವಕುಮಾರ್ ಅವರನ್ನು ಒಳ್ಳೆಯ ಆಸ್ಪತ್ರೆಗೆ ಕಳುಹಿಸಲಿ. ಅವರಿಗೆ ಒಂದು ತಿಂಗಳ ಕಾಲ ರಜೆ ಮೇಲೆ ಕಳುಹಿಸಲಿ" ಎಂದರು.












Click it and Unblock the Notifications