ಕರ್ನಾಟಕ: ಯಾತ್ರಾರ್ಥಿಗಳು ಸಬ್ಸಿಡಿ ಪಡೆಯುವುದು ಈಗ ಸರಳ
ಬೆಂಗಳೂರು, ಜುಲೈ 01: ಕರ್ನಾಟಕ ಸರ್ಕಾರ ವಿವಿಧ ಯಾತ್ರಾರ್ಥಿಗಳಿಗೆ ಸಬ್ಸಿಡಿಗಳನ್ನು ನೀಡುತ್ತದೆ. ಈ ಸಬ್ಸಿಡಿಗಳನ್ನು ಪಡೆಯುವ ಪ್ರಕ್ರಿಯೆಯನ್ನು ಸರ್ಕಾರ ಈಗ ಸರಳೀಕರಣಗೊಳಿಸಿದ್ದು, ಜನರಿಗೂ ಅನುಕೂಲವಾಗಿದೆ.
ಸರ್ಕಾರದಿಂದ ವಿವಿಧ ಯಾತ್ರೆಗಳಿಗೆ ಸಹಾಯಧನವನ್ನು ನೀಡಲಾಗುತ್ತದೆ. ಆದರೆ ಇದನ್ನು ಪಡೆಯಲು ಇದ್ದ ನಿಯಮಗಳು ಕಠಿಣವಾಗಿದ್ದವು, ದಾಖಲೆಗಳನ್ನು ನೀಡಲು ಸಹ ಜನರು ಹೆಚ್ಚು ಸಮಯ ಬೇಕಿತ್ತು. ಆದ್ದರಿಂದ ನಿಯಮಗಳನ್ನು ಸರಳೀಕರಣಗೊಳಿಸಬೇಕು ಎಂದು ಜನರು ಬೇಡಿಕೆ ಇಟ್ಟಿದ್ದರು.

ಈಗ ಸರ್ಕಾರ ಸಬ್ಸಿಡಿ ಪಡೆಯುವ ನಿಯಮ ಸರಳಗೊಳಿಸಿದ್ದು, ಜನರು ಕಛೇರಿಗಳಿಗೆ ಅಲೆಯುವುದಕ್ಕೆ ಕಡಿವಾಣ ಹಾಕಿದೆ. ಹೊಸ ವ್ಯವಸ್ಥೆ ಮೂಲಕ ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡುವ ನಿಯಮ ಜಾರಿಗೊಳಿಸಲಾಗಿದೆ. ಆದರೆ ಕೆಲವು ವೆಚ್ಚಗಳನ್ನು ಯಾತ್ರಾರ್ಥಿಗಳೇ ಭರಿಸಬೇಕು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಎಷ್ಟು ಸಬ್ಸಿಡಿ ನೀಡಲಾಗುತ್ತದೆ?; ಕರ್ನಾಟಕ ಸರ್ಕಾರ ಮುಜರಾಯಿ ಇಲಾಖೆ ಮೂಲಕ ಚಾರ್ ಧಾಮ್ ಯಾತ್ರೆಗೆ 30,000 ರೂ., ಕೈಲಾಸ ಮಾನಸ ಸರೋವರ ಯಾತ್ರೆಗೆ 20,000 ರೂ. ಮತ್ತು ಕಾಶಿ ಯಾತ್ರೆಯಲ್ಲಿ ಗಯಾ ಸೇರಿಸಿ 5,000 ರೂ. ಹಾಗೂ ರೈಲಿನ ಮೂಲಕ ಯಾತ್ರೆ ಕೈಗೊಳುವ ಯಾತ್ರಾರ್ಥಿಗಳಿಗೆ 5000 ದಿಂದ 7,500 ರೂ.ಗೆ ಸಹಾಯಧನವನ್ನು ನಿಯಮ, ಷರತ್ತುಗಳ ಅನ್ವಯ ನೀಡುತ್ತದೆ.
ಈ ಸಬ್ಸಿಡಿ ಪಡೆಯುವ ನಿಯಮ ಸರಳಗೊಳಿಸಲಾಗಿದ್ದು, ಈಗ ಯಾತ್ರಾರ್ಥಿಗಳು ಮೊಬೈಲ್ ಅಪ್ಲಿಕೇಶನ್ ಮೂಲಕ ನೋಂದಣಿ ಮಾಡಿಕೊಂಡು, ಜಿಯೋಲೊಕೇಶನ್ ಮಾಹಿತಿಯನ್ನು ಪೂರ್ಣಗೊಳಿಸಿ, ಸೆಲ್ಪೀ ಫೋಟೋವನ್ನು ಅಪ್‌ಲೋಡ್ ಮಾಡುವ ಮೂಲಕ ಯಾತ್ರಾ ಸ್ಥಳದಲ್ಲಿ ಮಾಡುವ (ದೇವಾಲಯದ 5 ಕಿಲೋ ಮೀಟರ್ ಒಳಗೆ), ಮೂಲಕ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ.
ಕರ್ನಾಟಕ ಸರ್ಕಾರ ಪ್ರವರ್ಗ 'ಸಿ' ದೇವಾಲಯದ ಅರ್ಚಕರು, ನೌಕರರು ಹಾಗೂ ಅವರ ಕುಟುಂಬದ ಒಬ್ಬರಿಗೆ ಒಟ್ಟು 2,400 ಜನಕ್ಕೆ ವರ್ಷದಲ್ಲಿ ಒಂದು ಬಾರಿ ಉಚಿತ ಕಾಶಿ ಯಾತ್ರೆಗೆ ಅವಕಾಶವನ್ನು ಕಲ್ಪಿಸಿದೆ. ಈಗ ಈ ಯಾತಾರ್ಥಿಗಳಿಗೆ ಸಬ್ಸಿಡಿ ನೀಡುವ ನಿಯಮ ಸರಳಗೊಳಿಸಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
ಆದರೆ ಸರ್ಕಾರ ಒಂದು ವಿಚಾರವನ್ನು ಸ್ಪಷ್ಟಪಡಿಸಿದ್ದು, ಕೆಲ ವೆಚ್ಚ ಯಾತ್ರಾರ್ಥಿಗಳದ್ದು ಯಾತ್ರೆಯನ್ನು ಕೈಗೊಳ್ಳುವಾಗ ಇದಕ್ಕೆ ಸಬ್ಸಿಡಿ ನೀಡುವುದಿಲ್ಲ ಎಂದು ಹೇಳಿದೆ. ಯಾತ್ರೆ ಕುರಿತು ಭಾರತ ಸರ್ಕಾರಕ್ಕೆ ಅರ್ಜಿ ಸಲ್ಲಿಸುವ ಮತ್ತು ಅರ್ಜಿಯ ಬಗ್ಗೆ ಸಂಬಂಧಿಸಿದ ಪ್ರಕ್ರಿಯೆಗಳಿಗೆ ತಗುಲುವ ಸಂಪೂರ್ಣ ವೆಚ್ಚ ಹಾಗೂ ಚೀನಾ ದೇಶದ ಮೂಲಕ ಸಂಚರಿಸುವ ವೇಳೆ ಪಾವತಿಸಬೇಕಾದ ಮೊತ್ತವನ್ನು ಯಾತ್ರಾರ್ಥಿಗಳೇ ಭರಿಸಬೇಕು.
ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ 201 ಪ್ರವರ್ಗ 'ಎ' ದೇವಾಲಯಗಳಿವೆ. 25,00,000 ರೂಪಾಯಿಗಳನ್ನು ಮೀರುವ ಒಟ್ಟು ವಾರ್ಷಿಕ ವರಮಾನವನ್ನು ಹೊಂದಿರುವ ಅಧಿಸೂಚಿತ ಸಂಸ್ಥೆಗಳಿವೆ. 139 ಪ್ರವರ್ಗ 'ಬಿ' ದೇವಾಲಯಗಳಿವೆ. 5,00,000 ರೂಪಾಯಿಗಳನ್ನು ಮೀರುವ ಆದರೆ 25,00,000 ರೂಪಾಯಿಗಳನ್ನು ಮೀರದ ಒಟ್ಟು ವಾರ್ಷಿಕ ವರಮಾನವನ್ನು ಹೊಂದಿರುವ ಅಧಿಸೂಚಿತ ಸಂಸ್ಥೆಗಳಿವೆ.
34223 ಪ್ರವರ್ಗ 'ಸಿ' ದೇವಾಲಯಗಳಿವೆ. ಇವುಗಳು 5,00,000 ರೂಪಾಯಿಗಳನ್ನು ಮೀರದ ಒಟ್ಟು ವಾರ್ಷಿಕ ವರಮಾನವನ್ನು ಹೊಂದಿವೆ. ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯಲ್ಲಿ ಬರುವ ಅಧಿಸೂಚಿತ ಸಂಸ್ಥೆಗಳ ನಿರ್ವಹಣೆಯನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಹಾಗೂ ನಿಯಮಗಳು 2002 ರ ಅನ್ವಯ ನಿರ್ವಹಿಸಲಾಗುತ್ತಿದೆ.
ಅಲ್ಲದೇ ಇಲಾಖೆ ಚಾರ್ ಧಾಮ್ ಯಾತ್ರೆ, ಕೈಲಾಸ ಮಾನಸ ಸರೋವರ ಯಾತ್ರೆ, ಕಾಶಿ ಯಾತ್ರೆಯಲ್ಲಿ ಗಯಾ ಸೇರಿ ಯಾತ್ರಾರ್ಥಿಗಳಿಗೆ ಸಹಾಯಧನವನ್ನು ನೀಡುತ್ತದೆ. ಈ ಸಹಾಯಧನ ನೀಡುವ ನಿಯಮ ಸರಳಗೊಳಿಸಬೇಕು ಎಂದು ಹಲವು ದಿನಗಳಿಂದ ಬೇಡಿಕೆ ಇಡಲಾಗಿತ್ತು.












Click it and Unblock the Notifications