ಪಡಿತರ ವಿತರಣೆ ಮಾಡದಿರುವುದು ಗಂಭೀರ ಕೃತ್ಯ; ಹೈಕೋರ್ಟ್
ಬೆಂಗಳೂರು, ಡಿಸೆಂಬರ್ 14; ಬಡತನ ರೇಖೆಗಿಂತ ಕೆಳಗಿರುವ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ (ಪಿಡಿಎಸ್) ಪಡಿತರ ಸರಬರಾಜು ಮಾಡದಿರುವುದು ಗಂಭೀರ ಸ್ವರೂಪದ ಕೃತ್ಯ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಅಲ್ಲದೆ, ಪಡಿತರ ವಿತರಣೆಗೆ ನೀಡಲಾಗಿದ್ದ ನ್ಯಾಯಬೆಲೆ ಅಂಗಡಿಯ ಲೈಸನ್ಸ್ ರದ್ದು ಮಾಡಿದ್ದನ್ನು ನ್ಯಾಯಾಲಯ ಎತ್ತಿಹಿಡಿದಿದೆ. ಮೇಲ್ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಆಹಾರ ಧಾನ್ಯ ವಿತರಿಸದ ಆರೋಪದ ಮೇಲೆ ತಮಗೆ ಹಂಚಿಕೆ ಮಾಡಿದ್ದ ನ್ಯಾಯಬೆಲೆ ಅಂಗಡಿಯ ಪರವಾನಗಿ ರದ್ದುಪಡಿಸಿದ್ದ ರಾಮನಗರ ಆಹಾರ ಇಲಾಖೆ ಉಪ ಆಯುಕ್ತರ ಕ್ರಮ ಪುರಸ್ಕರಿಸಿದ ಏಕಸದಸ್ಯಪೀಠದ ಆದೇಶ ರದ್ದು ಕೋರಿ ವಾಜರಹಳ್ಳಿಯ ಜಯಮ್ಮ ಮತ್ತವರ ಕಟುಂಬ ಮೇಲ್ಮನವಿ ಸಲ್ಲಿಸಿತ್ತು.

ಅಲ್ಲದೆ, ಆರ್ಥಿಕವಾಗಿ ದುರ್ಬಲ ಮತ್ತು ಬಡತನದ ರೇಖೆಗಿಂತ ಕೆಳಗೆ ಇರುವವರಿಗೆ ಆಹಾರ ಧಾನ್ಯ ಮತ್ತು ಸೀಮೆ ಎಣ್ಣೆ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳನ್ನು ನಿಗದಿತ ಬೆಲೆಗೆ ವಿತರಿಸುವುದೇ ಸಾರ್ವಜನಿಕ ವಿತರಣಾ ಯೋಜನೆಯ ಧ್ಯೇಯೋದ್ದೇಶವಾಗಿದೆ.
ಅಂತಹ ವ್ಯಕ್ತಿಗಳಿಗೆ ಆಹಾರ ಧಾನ್ಯ ವಿತರಿಸದಿರುವುದು ಗಂಭೀರ ಸ್ವರೂಪದ ಕೃತ್ಯವಾಗಿದೆ. ಇಂತಹ ಕೃತ್ಯದಿಂದ ಪಡಿತರ ಚೀಟಿದಾರರು ಮೂಲಭೂತ ಸೌಲಭ್ಯದಿಂದ ವಂಚಿತರಾಗಲಿದ್ದಾರೆ ಎಂದು ಆದೇಶದಲ್ಲಿ ಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ವಿವರ: ಸಂಜೀವಯ್ಯ ನ್ಯಾಯಬೆಲೆ ಅಂಗಡಿ ಪರವಾನಗಿ ಪಡೆದುಕೊಂಡಿದ್ದರು. ಅವರು 435ಕ್ಕೂ ಹೆಚ್ಚು ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ವಿತರಿಸಿದ್ದರು. 13 ವರ್ಷಕ್ಕೂ ಹೆಚ್ಚು ಕಾಲದಿಂದ ನ್ಯಾಯ ಬೆಲೆ ಅಂಗಡಿ ನಡೆಸುತ್ತಿದ್ದರು. ಅಷ್ಟು ವರ್ಷಗಳಲ್ಲಿ ಅವರ ವಿರುದ್ಧ ಯಾವೊಂದು ದೂರು ದಾಖಲಾಗಿರಲಿಲ್ಲ.
ಆದರೆ, 2008ರ ಜು. 22ರಂದು ರಾಮನಗರ ಜಿಲ್ಲೆಯ ಆಹಾರ ವಿಭಾಗದ ಉಪ ಆಯುಕ್ತರು, ಸಂಜೀವಯ್ಯಗೆ ಷೋಕಾಸ್ ನೋಟಿಸ್ ಜಾರಿಗೊಳಿಸಿ, ಹೆಚ್ಚಿನ ಬೆಲೆಗೆ ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಕೆಲ ಪಡಿತರ ದಾರರಿಗೆ ಪಡಿತರ ಲಭ್ಯವಾಗುತ್ತಿಲ್ಲ. ಪಡಿತರ ವಿತರಿಸಿದ ನಂತರ ಕಾರ್ಡುದಾರರಿಗೆ ರಸೀದಿ ನೀಡುತ್ತಿಲ್ಲ. ಜತೆಗೆ, ಅಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಅಂಗಡಿ ಮುಚ್ಚಲಾಗಿತ್ತು ಎಂದು ಆರೋಪ ಕೇಳಿಬಂದಿದೆ. ಆ ಕುರಿತು ವಿವರಣೆ ನೀಡಬೇಕು ಎಂದು ಸೂಚಿಸಿದ್ದರು.
ಅದಕ್ಕೆ ಅರ್ಜಿದಾರರು ಉತ್ತರ ನೀಡಿದ್ದರು, ಅದರಿಂದ ತೃಪ್ತರಾಗದ ಉಪ ಆಯುಕ್ತರು, ಖುದ್ದಾಗಿ ವಿಚಾರಣೆ ನಡೆಸಿದ್ದರು. ಆ ವೇಳೆ ಅರ್ಜಿದಾರರು ತಮ್ಮ ಮೇಲಿನ ಆರೋಪಗಳನ್ನು ಒಪ್ಪಿಕೊಂಡಿದ್ದರು. ಇದರಿಂದ ಅವರ ಪರವಾನಗಿ ರದ್ದುಪಡಿಸಲಾಗಿತ್ತು.
ಆ ಆದೇಶವನ್ನು ಮೇಲ್ಮನವಿ ಪ್ರಾಧಿಕಾರ ಮತ್ತು ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ ಪುರಸ್ಕರಿಸಿತ್ತು. ಆ ಆದೇಶಗಳನ್ನು ರದ್ದುಪಡಿಸಲು ಕೋರಿ ಪ್ರಶ್ನಿಸಿ ಈ ಜಯಮ್ಮ ವಿಭಾಗಿಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಮಾಡಲಾಗಿರುವ ಆರೋಪಗಳು ಗಂಭೀರ ಸ್ವರೂಪದ್ದಲ್ಲ ಎಂದು ವಾದಿಸಿದ್ದರು. ಅದನ್ನುಒಪ್ಪದ ವಿಭಾಗೀಯ ಪೀಠ ಮೇಲ್ಮನವಿಯನ್ನು ವಜಾಗೊಳಿಸಿದೆ.












Click it and Unblock the Notifications