ಗಾಂಧಿ ಶಾಂತಿ ಸೇವಾ ಪ್ರಶಸ್ತಿ ಆರಂಭಿಸಿದ ಸರ್ಕಾರ
ಬೆಂಗಳೂರು, ಸೆ.9 : ಕರ್ನಾಟಕ ಸರ್ಕಾರ ಮಹಾತ್ಮ ಗಾಂಧಿ ಅವರ ಹೆಸರಿನಲ್ಲಿ ಕರ್ನಾಟಕ ಗಾಂಧಿ ಶಾಂತಿ ಸೇವಾ ಪ್ರಶಸ್ತಿ'ಯನ್ನು ನೀಡಲು ತೀರ್ಮಾನ ಕೈಗೊಂಡಿದೆ. ಈ ವರ್ಷದಿಂದ 5 ಲಕ್ಷ ರೂ. ಮೌಲ್ಯದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಅರ್ಹರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅ.2ರಂದು ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.
ಮಹಾತ್ಮ ಗಾಂಧಿಯವರ ತತ್ವಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸಾಧನೆ ಮಾಡಿದ ಮಹನೀಯರನ್ನು ಗುರುತಿಸಿ ಗೌರವಿಸಲು ಸರ್ಕಾರ ಈ ಪ್ರಶಸ್ತಿಯನ್ನು ನೀಡುತ್ತದೆ. ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ಹೊ. ಶ್ರೀನಿವಾಸಯ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮಾಡಿದ ಮನವಿ ಹಿನ್ನೆಲೆಯಲ್ಲಿ ಈ ಪ್ರಶಸ್ತಿಯನ್ನು ಈ ವರ್ಷದಿಂದ ನೀಡಲು ತೀರ್ಮಾನ ಕೈಗೊಂಡಿದೆ. [ಅ.2ರಂದು ಗಾಂಧಿ ಕಂಚಿನ ಪ್ರತಿಮೆ ಅನಾವರಣ]

ಅರ್ಜಿ ಆಹ್ವಾನ : ಕರ್ನಾಟಕ ಗಾಂಧಿ ಶಾಂತಿ ಸೇವಾ ಪ್ರಶಸ್ತಿಗಾಗಿ ಸರ್ಕಾರ ಈಗಾಗಲೇ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸುವವರು ಗಾಂಧಿಜಿಯವರ ಚಿಂತನೆಗಳು, ಧ್ಯೇಯೋದ್ದೇಶಗಳನ್ನು ಹೊಂದಿದ್ದು, ಗಾಂಧಿಜಿಯವರ ಜನಪರ ಕಾರ್ಯಕ್ರಮಗಳಾದ ಅಸ್ಪೃಶ್ಯತೆ ನಿವಾರಣೆ, ಅಹಿಂಸೆ, ಮಹಿಳಾ ಸಬಲೀಕರಣ, ಗ್ರಾಮೀಣ ನೈರ್ಮಲ್ಯ, ಮಧ್ಯಪಾನ ವಿರೋಧಿ ನೀತಿ, ಖಾದಿ ಬಳಕೆ, ಸ್ವದೇಶಿ ವಸ್ತು ಬಳಕೆ ಇತ್ಯಾದಿ ಕಾರ್ಯಕ್ರಮಗಳ ಪೈಕಿ ಕನಿಷ್ಟ ಎರಡರಲ್ಲಿ ಸ್ವಪ್ರೇರಣೆಯಿಂದ ತಮ್ಮನ್ನು ತಾವು ತೊಡಗಿಸಿಕೊಂಡಿರಬೇಕು.
ಇಂತಹ ವ್ಯಕ್ತಿಗಳು ಅಥವ ಸಂಸ್ಥೆಗಳಿದ್ದರೆ ಪ್ರಶಸ್ತಿಗಾಗಿ ನಾಮ ನಿರ್ದೇಶನ ಮಾಡಬಹುದಾಗಿದೆ. ನಾಮ ನಿರ್ದೇಶನಗೊಳ್ಳುವಂತಹ ವ್ಯಕ್ತಿಯ ಸಂಪೂರ್ಣ ಪರಿಚಯ ಹಾಗೂ ಅವರು ಕೈಗೊಂಡಿರುವ ಸಾಮಾಜಿಕ ಸಾಧನೆಯ ಪೂರ್ಣ ವಿವರಗಳನ್ನು ವಾರ್ತಾ ಮತ್ತು ಸಂಪರ್ಕ ಇಲಾಖೆಯ ನಿರ್ದೇಶಕರಿಗೆ ಸಲ್ಲಿಸಬೇಕಾಗುತ್ತದೆ.
ಪ್ರಶಸ್ತಿಗಾಗಿ ನಾಮನಿರ್ದೇಶನ ಮಾಡುವವರು ವಿವರಗಳನ್ನು ಸೆ.20ರೊಳಗೆ ಕಳುಹಿಸಬೇಕಾಗಿದೆ. ಅಕ್ಟೋಬರ್ 2ರಂದು ಸರ್ಕಾರ ಆಚರಿಸುವ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ. ನಿರ್ದೇಶಕರು, ವಾರ್ತಾ ಮತ್ತು ಸಂಪರ್ಕ ಇಲಾಖೆ, ನಂ.17, ಮಹಾವೀರ ಜೈನ್ ರಸ್ತೆ, ಬೆಂಗಳೂರು-560001 ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.












Click it and Unblock the Notifications