ಕರ್ನಾಟಕದಲ್ಲಿ ಬಿಜೆಪಿಯ ಬಂಡಾಯ ಶಮನ
ಬೆಂಗಳೂರು, ಮಾ.27 : ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಗಾಗಿ ನಾಮಪತ್ರ ಸಲ್ಲಿಕೆ ಕಾರ್ಯ ಮುಕ್ತಾಯವಾಗಿದ್ದು, ಬಿಜೆಪಿಗೆ ಬಂಡಾಯ ಅಭ್ಯರ್ಥಿಗಳ ತಲೆನೋವು ಇಲ್ಲವಾಗಿದೆ. ಬೀದರ್ ಕ್ಷೇತ್ರದಲ್ಲಿ ಬಂಡಾಯದ ಬಾವುಟ ಹಾರಿಸಲು ಮುಂದಾಗಿದ್ದ ಸೂರ್ಯಕಾಂತ ನಾಗಮಾರಪಲ್ಲಿ ಅವರ ಮನವೊಲಿಸಲು ಬಿಜೆಪಿ ನಾಯಕರು ಯಶಸ್ವಿಯಾಗಿದ್ದಾರೆ.
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಗೊಂದಲ ಉಂಟಾಗಿತ್ತು. ಆದರೆ, ಪಕ್ಷದಲ್ಲಿ ಉಂಟಾಗಿದ್ದ ಅಸಮಾಧಾನವನ್ನು ಶಮನಗೊಳಿಸುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗಿದ್ದಾರೆ. ಆದ್ದರಿಂದ ಯಾವುದೇ ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳಾಗಿ ಯಾರು ಕಣಕ್ಕಿಳಿದಿಲ್ಲ.

ಬೀದರ್, ಕೊಪ್ಪಳ, ಉತ್ತರ ಕನ್ನಡ, ಚಿತ್ರದುರ್ಗ, ತುಮಕೂರು, ಕೋಲಾರ, ಬೆಂಗಳೂರು ಉತ್ತರ, ಮೈಸೂರು, ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಗೊಂದಲ ಉಂಟಾಗಿತ್ತು. ಆದರೆ, ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಬುಧವಾರ ಎಲ್ಲ ಭಿನ್ನಾಭಿಪ್ರಾಯ, ಶಮನಗೊಂಡಂತಾಗಿದೆ. ಎಲ್ಲಿಯೂ ಬಂಡಾಯ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿಲ್ಲ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಬೀದರ್ ಕ್ಷೇತ್ರದಲ್ಲಿ ಕೊನೆ ಕ್ಷಣದವರೆಗೂ ಬಂಡಾಯ ಅಭ್ಯರ್ಥಿ ಕಣಕ್ಕಿಳಿಯಬಹುದು ಎಂಬ ಲೆಕ್ಕಾಚಾರವಿತ್ತು. ಕೆಜೆಪಿಯಿಂದ ಬಿಜೆಪಿಗೆ ಆಗಮಿಸಿದ ಹಾಲಿ ಶಾಸಕ ಗುರುಪಾದಪ್ಪ ನಾಗಮಾರಪಲ್ಲಿ ಪುತ್ರ ಸೂರ್ಯಕಾಂತ್ ಅವರಿಗೆ ಟಿಕೆಟ್ ಕೊನೆಯ ಹಂತದಲ್ಲಿ ಕೈತಪ್ಪಿದ್ದರಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದರು.
ಆದರೆ, ಕೊನೆಯ ಕ್ಷಣದವರೆಗೂ ಬಿಜೆಪಿ ರಾಜ್ಯ ನಾಯಕರು ಗುರುಪಾದಪ್ಪ ಹಾಗೂ ಪುತ್ರ ಸೂರ್ಯಕಾಂತ್ ಅವರನ್ನು ಮನವೊಲಿಸಿ ಬಂಡಾಯ ಅಭ್ಯರ್ಥಿಯಾಗದಂತೆ ತಡೆದಿದ್ದಾರೆ. ಇನ್ನು ಹಾಲಿ ಸಂಸದರಾಗಿ ಟಿಕೆಟ್ ಕೈ ತಪ್ಪಿಸಿಕೊಂಡಿದ್ದ ಕೊಪ್ಪಳದ ಶಿವರಾಮಗೌಡ, ಬೆಂಗಳೂರು ಉತ್ತರದಲ್ಲಿ ಡಿ.ಬಿ.ಚಂದ್ರೇಗೌಡ ಅವರು ಪಕ್ಷದ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡುವುದಾಗಿ ಪಕ್ಷದ ನಾಯಕರಿಗೆ ಭರವಸೆ ನೀಡಿದ್ದು, ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಕೋಲಾರದಲ್ಲಿ ಟಿಕೆಟ್ ಗಾಗಿ ಭಾರೀ ಪೈಪೋಟಿ ನಡೆಸಿದ್ದ ವಿಧಾನಪರಿಷತ್ ಸದಸ್ಯ ಡಿ.ಎಸ್.ವೀರಯ್ಯ ಸದ್ಯಕ್ಕೆ ಶಾಂತವಾಗಿದ್ದು, ಪಕ್ಷ ತೊರೆದಿಲ್ಲ. ಮೈಸೂರಿನಲ್ಲಿ ಟಿಕೆಟ್ ಕೈ ತಪ್ಪಿದ್ದರಿಂದ ಮುನಿಸಿಕೊಂಡಿದ್ದ ಸಿ.ಎಚ್.ವಿಜಯಶಂಕರ್ ಹಾಸನ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
ಸ್ವತಃ ಬಿಜೆಪಿ ಅಧ್ಯಕ್ಷರ ಕ್ಷೇತ್ರ ಧಾರವಾಡದಲ್ಲಿ ಬಿಜೆಪಿಗೆ ಬೆಳಗ್ಗೆ ಬಂದು ಸಂಜೆ ವಾಪಸ್ ಹೋದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಉಳಿದಂತೆ ಯಾವ ಕ್ಷೇತ್ರಗಳಲ್ಲೂ ಬಿಜೆಪಿಗೆ ಬಂಡಾಯ ಅಭ್ಯರ್ಥಿಗಳ ತಲೆ ನೋವು ಇಲ್ಲವಾಗಿದೆ.












Click it and Unblock the Notifications