ಬಿಜೆಪಿಗೆ ವಾಪಸ್- ನೋ ಛಾನ್ಸ್ ಎಂದ ಯಡಿಯೂರಪ್ಪ

No question of returning to BJP - Karnataka ex CM BS Yeddyurappa
ಹುಬ್ಬಳ್ಳಿ, ಅ. 17: ಅತ್ತ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಮತ್ತೆ ಬಿಜೆಪಿಗೆ ವಾಪಸ್‌ ಕರೆತರುವ ಪ್ರಯತ್ನ ತೀವ್ರಗೊಂಡಿರುವುದರ ಬೆನ್ನಿಗೆ ತಾನು ಯಾವುದೇ ಕಾರಣಕ್ಕೂ ಇನ್ನು ಬಿಜೆಪಿಗೆ ಹೋಗುವುದಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯೊಂದಿಗೆ ಕೆಜೆಪಿ ವಿಲೀನವಾಗುತ್ತದೆ ಎಂದು ಬಿಜೆಪಿ ಕೆಲ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಹೊಂದಾಣಿಕೆ ಹೊರತುಪಡಿಸಿ ವಿಲೀನವಾಗುವ ಮಾತೇ ಇಲ್ಲ ಎಂದವರು ಹೇಳಿದ್ದಾರೆ.

ಯಡಿಯೂರಪ್ಪ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್‌ ನಡುವಿನ ಭಿನ್ನಾಭಿಪ್ರಾಯ ನಿವಾರಿಸುವ ಪ್ರಯತ್ನವೂ ನಡೆದಿದ್ದು, ಪರಸ್ಪರರ ನಡುವಿರುವ ಆತಂಕ ಮತ್ತು ಸಂಶಯಗಳನ್ನು ದೂರಮಾಡುವ ಪ್ರಯತ್ನ ಬುಧವಾರ ಅಧಿಕೃತವಾಗಿಯೇ ನಡೆದಿದೆ.

'ಇನ್ನು ವಿಳಂಬ ಮಾಡುವುದರಲ್ಲಿ ಅರ್ಥವಿಲ್ಲ. ಇದರಿಂದ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ತೀವ್ರ ಹಿನ್ನೆಡೆಯಾಗಲಿದೆ. ನಿಮ್ಮಿಬ್ಬರ ನಡುವಿನ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಪಕ್ಷದ ಹಿತದೃಷ್ಟಿಯಿಂದ ಅದನ್ನೆಲ್ಲ ಬಗೆಹರಿಸಿಕೊಳ್ಳಿ. ಪರಸ್ಪರ ಒಂದೆಡೆ ಕುಳಿತು ಮಾತನಾಡಿ.

ಅದಕ್ಕೆ ಸೂಕ್ತ ವೇದಿಕೆಯನ್ನು ನಾವು ಕಲ್ಪಿಸಿಕೊಡುತ್ತೇವೆ' ಎಂದು ಮಾಜಿ ಮುಖ್ಯಮಂತ್ರಿಗಳಾದ ಡಿವಿ ಸದಾನಂದಗೌಡ, ಜಗದೀಶ್‌ ಶೆಟ್ಟರ್‌, ಮಾಜಿ ಸಚಿವರಾದ ಬಸವರಾಜ ಬೊಮ್ಮಾಯಿ, ವಿ ಸೋಮಣ್ಣ ಹಾಗೂ ಅರವಿಂದ್‌ ಲಿಂಬಾವಳಿ ಅವರು ಅನಂತಕುಮಾರ್‌ ಅವರಿಗೆ ಮನವಿ ಸಹ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದರೆ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು, 'ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಬಾಹ್ಯವಾಗಿಯೇ ಬೆಂಬಲ ನೀಡುತ್ತೇವೆ. ಆದರೆ ಬಿಜೆಪಿಯೊಂದಿಗೆ ವಿಲೀನಗೊಳ್ಳುವ ಪ್ರಶ್ನೆಯೇ ಇಲ್ಲ' ಎಂದು ತಿಳಿಸಿದ್ದಾರೆ.

'ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸರಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂಬುದು ಕೆಜೆಪಿ ಪಕ್ಷದ ನಿಲುವಾಗಿದೆ. ಆದ್ದರಿಂದ ರಾಜ್ಯದ ಹಿತಕ್ಕಾಗಿ ಅಂತಹ ಅವಕಾಶ ಹಾಗೂ ಸಂದರ್ಭ ಬಂದರೆ ರಾಷ್ಟ್ರ ರಾಜಕಾರಣಕ್ಕೂ ಹೋಗುವೆ. ಮುಂಬರುವ ಲೋಕಸಭಾ ಚುನಾವಣೆಗೆ ಈಗಾಗಲೇ ನಾನು ತಯಾರಿ ಮಾಡಿಕೊಂಡಿದ್ದೇನೆ. 10 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ' ಎಂದು ಯಡಿಯೂರಪ್ಪ ಹೇಳಿದರು.

ಬಿಜೆಪಿಗೆ ಬಿದರಿ ಅರ್ಜಿ?
ಇತ್ತೀಚೆಗಷ್ಟೇ ಸಮಾಜವಾದಿ ಪಕ್ಷ ತೊರೆದಿದ್ದ ನಿವೃತ್ತ ಡಿಜಿಪಿ ಶಂಕರ್‌ ಬಿದರಿ ಅವರು ಬಿಜೆಪಿಯತ್ತ ದೃಷ್ಟಿ ಹಾಯಿಸಿದ್ದಾರೆ. ತಮ್ಮ ಆಪ್ತರ ಮೂಲಕ ಬಿಜೆಪಿ ಸೇರ್ಪಡೆ ಕುರಿತು ಪ್ರಸ್ತಾವನೆಯನ್ನು ಬಿದರಿ ಅವರು ಕಳುಹಿಸಿದ್ದು, ಈ ಬಗ್ಗೆ ರಾಜ್ಯ ಬಿಜೆಪಿಯ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಆದರೆ, ಬಿದರಿ ಅವರನ್ನು ಪಕ್ಷಕ್ಕೆ ಕರೆದುಕೊಳ್ಳುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+