ಚುನಾವಣೆ ಘೋಷಣೆಗೂ ಮೊದಲು ಯಾವುದೇ ವಸ್ತು ವಶಪಡಿಸಿಕೊಳ್ಳುವಂತಿಲ್ಲ
ಬೆಂಗಳೂರು, ಏಪ್ರಿಲ್ 12; ಚುನಾವಣಾ ದಿನಾಂಕ ಘೋಷಣೆಗೂ ಮುನ್ನ ಚುನಾವಣಾ ಕಾರ್ಯಕ್ಕೆ ನಿಯೋಜನೆ ಮಾಡಿರುವ ಅಧಿಕಾರಿಗಳು ದಾಳಿ ನಡೆಸಿ ಯಾವುದೇ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲು ಅಧಿಕಾರವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಅಲ್ಲದೇ, ಶಿವಾಜಿ ನಗರದಲ್ಲಿ ಬಡಜನತೆಗೆ ಹಂಚುವುದಕ್ಕಾಗಿ ಸಾಮಾಜಿಕ ಕಾರ್ಯಕರ್ತರೊಬ್ಬರು ಸಂಗ್ರಹಿಸಿದ್ದ ಅಕ್ಕಿಯ ಚೀಲಗಳನ್ನು ಷರತ್ತಿನ ಮೇಲೆ ಹಿಂದಿರುಗಿಸಬೇಕು ಎಂದು ನಿರ್ದೇಶನ ನೀಡಿದೆ.
ಶಿವಾಜಿನಗರದ ಇಷ್ತಿಯಾಕ್ ಅಹ್ಮದ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ಧ ನ್ಯಾಯಪೀಠ ಈ ಆದೇಶ ನೀಡಿದೆ. ಚುನಾವಣೆ ಕಾರ್ಯಕ್ಕಾಗಿ ನಿಯೋಜನೆಗೊಂಡಿರುವ ಅಧಿಕಾರಿಗಳು ಚುನಾವಣಾ ದಿನಾಂಕ ಘೋಷಣೆಗೂ ಮುನ್ನ ದಾಳಿ ನಡೆಸುವುದು ಮತ್ತು ಯಾವುದೇ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಅಲ್ಲದೇ, ಚುನಾವಣಾ ಅಧಿಕಾರಿಗಳಿಗೆ ಚುನಾವಣೆ ಘೋಷಣೆಯ ಬಳಿಕವೇ ಅಧಿಕಾರ ಸಿಗಲಿದೆ. ಆದರೆ, ಈ ಪ್ರಕರಣದಲ್ಲಿ ಚುನಾವಣಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ದಾಳಿಯ ವೇಳೆ ಅಕ್ಕಿಯ ಚೀಲಗಳನ್ನು ವಶಕ್ಕೆ ಪಡೆದಿರುವುದು ಕಾನೂನು ಬಾಹಿರವಾಗಿದೆ. ಹೀಗಾಗಿ ವಶಪಡಿಸಿಕೊಂಡಿರುವ ಅಕ್ಕಿಯ ಚೀಲಗಳನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಹೇಳಿದೆ.
ಅರ್ಜಿದಾರರಿಗೆ ಚುನಾವಣೆ ಘೋಷಣೆಯಾಗಿರುವುದರಿಂದ ಯಾವುದೇ ರೀತಿಯ ನೀತಿ ಸಂಹಿತೆ ಉಲ್ಲಂಘನೆ ಮಾಡದಂತೆ ಮತ್ತು ಅಕ್ಕಿ ಸೇರಿದಂತೆ ಯಾವುದೇ ವಸ್ತುಗಳನ್ನು ವಿತರಿಸದಂತೆ ಮುಚ್ಚಳಿಕೆಯನ್ನು ಹೈಕೋರ್ಟ್ ಪಡೆದುಕೊಂಡಿದೆ. ಅರ್ಜಿದಾರರು ಚುನಾವಣೆ ಮುಗಿಯುವ ಮುನ್ನವೇ ಅಕ್ಕಿ ಸೇರಿದಂತೆ ಯಾವುದೇ ವಸ್ತುಗಳನ್ನು ವಿತರಣೆ ಮಾಡಿ ನೀತಿ ಸಂಹಿತೆ ಉಲ್ಲಂಘಿಸಿದಲ್ಲಿ ಚುನಾವಣಾಧಿಕಾರಿಗಳು ಕಾನೂನು ಪ್ರಕಾರ ಕ್ರಮ ಕೈಗೊಳ್ಳಬಹುದು ಎಂದು ನ್ಯಾಯಪೀಠ ತನ್ನ ಆದೇಶಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ; ಬೆಂಗಳೂರಿನ ಶಿವಾಜಿ ನಗರದ ಸಮಾಜ ಸೇವಕ ಇಷ್ತಿಯಾಕ್ ಅಹಮದ್ 2023ರ ಮಾರ್ಚ್ 19ರಂದು ಕಡು ಬಡವರಿಗೆ ಹಂಚುವುದಕ್ಕಾಗಿ 25 ಕೆಜಿ ತೂಕದ 570 ಅಕ್ಕಿ ಚೀಲಗಳನ್ನು ಸಂಗ್ರಹಿಸಿದ್ದರು. ಚುನಾವಣಾ ಘೋಷಣೆ ಮಾಡುವುದಕ್ಕೂ ಮುನ್ನ ಚುನಾವಣ ಕಾರ್ಯಕ್ಕೆ ನಿಯೋಜನೆ ಗೊಂಡಿರುವ ಅಧಿಕಾರಿಗಳು ದಾಳಿ ನಡೆಸಿ ಅಕ್ಕಿ ಚೀಲಗಳನ್ನು ವಶಪಡಿಸಿಕೊಂಡಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ನೋಟಿಸ್ ಜಾರಿ ಮಾಡಿದ್ದರು. ಈ ಸಂಬಂಧ ಅರ್ಜಿದಾರರು ಕಳೆದ 15 ವರ್ಷಗಳಿಂದ ಬಡವರಿಗೆ ಹಬ್ಬ ಹರಿದಿನಗಳಲ್ಲಿ ಬಟ್ಟೆ ಮತ್ತು ಅಕ್ಕಿ ಸೇರಿದಂತೆ ಇತರೆ ಅಗತ್ಯ ವಸ್ತುಗಳು ವಿತರಣೆ ಮಾಡುವುದಕ್ಕೆ ಸಂಗ್ರಹಿಸಲಾಗಿತ್ತು ಎಂದು ತಿಳಿಸಿದ್ದರು. ಅಲ್ಲದೇ, ಈ ಸಂಬಂಧ ಖರೀದಿ ಮಾಡಿದ್ದ ರಸೀದಿಗಳನ್ನು ಸಲ್ಲಿಸಿದ್ದರು.
ಆದರೂ ಚುನಾವಣೆಗೆ ನಿಯೋಜನೆಗೊಂಡಿದ್ದ ಅಧಿಕಾರಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಜತೆಗೆ ಅಕ್ಕಿಯ ಚೀಲಗಳನ್ನು ವಾಪಸ್ ನೀಡಿರಲಿಲ್ಲ. ಹೀಗಾಗಿ ಅಕ್ಕಿ ಚೀಲಗಳನ್ನು ಹಿಂದಿರುಗಿಸುವಂತೆ ಕೋರಿ ಇಷ್ತಿಯಾಕ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ದಾಳಿಯ ಬಳಿಕ ಮಾರ್ಚ್ 29ರಂದು ರಾಜ್ಯದಲ್ಲಿ ಚುನಾವಣಾ ದಿನಾಂಕ ಘೋಷಣೆ ಮಾಡಲಾಗಿತ್ತು. ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿತ್ತು.
ಚುನಾವಣೆ ವೇಳಾಪಟ್ಟಿ; ಕೇಂದ್ರ ಚುನಾವಣಾ ಆಯೋಗ 2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. ಮಾರ್ಚ್ 29ರಂದು ವೇಳಾಪಟ್ಟಿ ಪ್ರಕವಾಗಿದ್ದು, ತಕ್ಷಣದಿಂದಲೇ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಏಪ್ರಿಲ್ 13ರ ಗುರುವಾರ ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಕೆ ಮಾಡಲು ಏಪ್ರಿಲ್ 20 ಕೊನೆಯ ದಿನವಾಗಿದೆ. ಮೇ 10ರಂದು ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮತ ಎಣಿಕೆ ಮೇ 13ರ ಶನಿವಾರ ನಡೆಯಲಿದೆ.












Click it and Unblock the Notifications