ಹೈಕೋರ್ಟ್‌ನಲ್ಲಿ ಸ್ಥಳಾವಕಾಶಕ್ಕೆ ನ್ಯಾಯಮೂರ್ತಿಗಳೇ ಪರದಾಟ!
ಬೆಂಗಳೂರು, ಜುಲೈ 20; ಕರ್ನಾಟಕ ಹೈಕೋರ್ಟ್‌ನ ಕಚೇರಿಗಳು, ನ್ಯಾಯಾಧೀಶರ ಕೊಠಡಿಗಳು ಮತ್ತು ನ್ಯಾಯಾಲಯದ ಸಭಾಂಗಣಗಳಿಗೆ ಸ್ಥಳಾವಕಾಶವಿಲ್ಲದೆ, ಸ್ವತಃ ನ್ಯಾಯಮೂರ್ತಿಗಳೇ ಪರದಾಡುವಂತಾಗಿದೆ.
ಚೇಂಬರ್‌ಗಳಲ್ಲಿ ಹೆಚ್ಚಿನ ಜನ ಸಂದರ್ಶಕರು ಬಂದರೆ ಅವರನ್ನು ಹೊರಗೆ ನಿಲ್ಲಿಸುವ ಸ್ಥಿತಿ ಇದೆ ಎಂದು ಸ್ವತಃ ಮುಖ್ಯ ನ್ಯಾಯಮೂರ್ತಿಗಳು ಸ್ಥಳಾವಕಾಶದ ಕೊರತೆ ವಿಚಾರವನ್ನು ಬಹಿರಂಗಪಡಿಸಿದ ಘಟನೆ ಬುಧವಾರ ನಡೆಯಿತು. ಅಲ್ಲದೆ, ನ್ಯಾಯಾಲಯ ಹೆಚ್ಚುವರಿ ಸ್ಥಳಾವಕಾಶ ಒದಗಿಸುವ ಸಂಬಂಧ ಸಮಗ್ರವಾದ ಪ್ರಸ್ತಾವನೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಕೋರ್ಟ್ ಸೂಚನೆ ನೀಡಿತು.

ತುಮಕೂರಿನ ವಕೀಲ ರಮೇಶ್ ನಾಯಕ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ. ಜಿ. ಎಸ್. ಕಮಲ್ ಅವರಿದ್ದ ವಿಭಾಗೀಯ ಪೀಠ, ಈ ಸೂಚನೆ ನೀಡಿ ವಿಚಾರಣೆಯನ್ನು ಮುಂದಿನ ಮೂರುವಾರಗಳ ಕಾಲ ಮುಂದೂಡಿತು.
ಕಾರ್ಯನಿರ್ವಹಣೆ ಕಷ್ಟಕರ: ಹೈಕೋರ್ಟ್‌ಗೆ ಹೆಚ್ಚುವರಿ ಕಚೇರಿಗಳನ್ನು ಸ್ಥಳಾವಕಾಶವನ್ನು ಒದಗಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಗಮನ ಹರಿಸಿದೆ. ಆದರೆ, ಹೈಕೋರ್ಟ್‌ಗೆ ಸಲ್ಲಿಕೆಯಾಗುವ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ನ್ಯಾಯಾಧೀಶರ ನೇಮಕಾತಿ ಹಾಗೂ ಪದೋನ್ನತಿ ಪಡೆಯುತ್ತಿದ್ದು, ನ್ಯಾಯಾಧೀಶರಿಗೆ ಕೊಠಡಿಗಳನ್ನು ಒದಗಿಸುವುದು ಕಷ್ಟ ಸಾಧ್ಯವಾಗುತ್ತಿದೆ ಎಂದು ಸ್ವತಃ ಸಿಜೆ ಹೇಳಿದರು.
ಅಲ್ಲದೆ, ನ್ಯಾಯಾಲಯದ ಸಭಾಂಗಣಗಳನ್ನು ಒದಗಿಸುವುದಕ್ಕೆ ಸಂಬಂಧಿಸಿಂತೆ ಸಮಗ್ರವಾದ ಪ್ರಸ್ತಾವನೆಯನ್ನು ಸಿದ್ದಪಡಿಸಬೇಕು. ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಳಂಬ ಧೋರಣೆ ಅನುಸರಿಸಿದಲ್ಲಿ ಪರಿಸ್ಥಿತಿ ಕೆಟ್ಟುಹೋಗಲಿದೆ ಎಂದು ಪೀಠ ತಿಳಿಸಿದೆ.
ಕಡತಗಳ ಸಂಗ್ರಹ ಸೇರಿದಂತೆ ಕಚೇರಿ ಸಿಬ್ಬಂದಿ, ಸ್ಥಳಾವಕಾಶ ಬೇಕಾಗಿದೆ. ಬೇಡಿಕೆ ವಕೀಲರಿಗೆ ಸೂಕ್ತ ರೀತಿಯ ಶೌಚಾಲಯ ವ್ಯವಸ್ಥೆ ಇಲ್ಲವಾಗಿದೆ. ಮೂಲಸೌಲಭ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ನ್ಯಾಯಾಲಯದ ಸಿಬ್ಬಂದಿ ಮತ್ತು ಕಕ್ಷಿದಾರರನ್ನು ಮೂಲ ಸೌಲಭ್ಯಗಳಿಗಾಗಿ ನ್ಯಾಯಾಲುದ ಆವರಣದಿಂದ ಹೊರಕ್ಕೆ ಹೋಗುವಂತೆ ಸೂಚನೆ ನೀಡಲು ಸಾಧ್ಯವೇ? ಎಂದು ನ್ಯಾಯಪೀಠ ಪ್ರಶ್ನೆ ಮಾಡಿತು.
ಅಲ್ಲದೆ, ಈ ಎಲ್ಲ ಸಮಸ್ಯೆಗಳ ಸರಿಪಡಿಸಲು ನಾವು ಐಷಾರಾಮಿ ಸ್ಥಳಾವಕಾಶ ನೀಡುವಂತೆ ಕೇಳುತ್ತಿಲ್ಲ. ಇದರ ಬದಲಾಗಿ ಕಕ್ಷಿದಾರರ ಅವರ ಅರ್ಜಿಗಳ ವಿಚಾರಣೆ, ವಕೀಲರೊಂದಿಗೆ ಚರ್ಚೆ ನಡೆಸುವುಕ್ಕಾಗಿ ಅಗತ್ಯ ಸ್ಥಳಾವಕಾಶವನ್ನಾದರೂ ಒದಗಿಸಬೇಕು ಎಂದು ಪೀಠ ಮೌಖಿಕವಾಗಿ ಅಭಿಪ್ರಾಯ ಪಟ್ಟಿತು.
ಹೈಕೋರ್ಟ್‌ನ ವಿಭಾಗೀಯ ಪೀಠ ನೀಡಿದ್ದ ಹಿಂದಿನ ಆದೇಶದಂತೆ ಕೆಲ ವಿಭಾಗಗಳನ್ನು ಸ್ಥಳಾಂತರಿಸಲು ತಾಂತ್ರಿಕ ಶಿಕ್ಷಣ ಇಲಾಖೆಯ ಕಟ್ಟಡವೊಂದರಲ್ಲಿ ಎರಡು ಕೊಠಡಿಗಳನ್ನು ಸರ್ಕಾರ ಹಸ್ತಾಂತರಿಸಿತ್ತು. ಅಲ್ಲದೆ, ಹೆಚ್ಚುವರಿ ಸ್ಥಳಾವಕಾಶ ಒದಗಿಸುವುದಾಗಿ ಭರವಸೆಯನ್ನು ನೀಡಿತ್ತು. ಆದ್ದರಿಂದ ಹೈಕೋರ್ಟ್‌ಗೆ ಸ್ಥಳಾವಕಾಶ ಒದಗಿಸುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅಗತ್ಯವಾದ ಪ್ರಸ್ತಾವನೆಯೊಂದಿಗೆ ಬರಲು ತಿಳಿಸಿತು.
'ಎರಡು ಕೊಠಡಿಗಳ ಸ್ಥಳವನ್ನು ನಾಲ್ಕು ನ್ಯಾಯಾಧೀಶರ ಚೇಂಬರ್‌ಗಳನ್ನಾಗಿ ಮಾಡಲಾಗಿದೆ. ಚೇಂಬರ್‌ಗಳಿಗೆ ಯಾರಾದರೂ ಸಂದರ್ಶಕರು ಬಂದಲ್ಲಿ ಸ್ವಾಗತಿಸಿ ಕೂರುವಂತೆ ಹೇಳುವುದಕ್ಕೂ ಸ್ಥಳದ ಕೊರತೆಯಾಗಿದ್ದು, ಕಷ್ಟಕರದ ಪರಿಸ್ಥಿತಿಯಲ್ಲಿ ನ್ಯಾಯಾಧೀಶರು ಹೊಂದಾಣಿಕೆ ಮಾಡಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ' ಎಂದು ನ್ಯಾಯಾಲಯ ಹೇಳಿತು.
ಪ್ರಕರಣದ ಹಿನ್ನೆಲೆ: ಹೈಕೋರ್ಟ್‌ನ ಕಟ್ಟಡದ ನೆಲ ಮಾಳಿಗೆಯಲ್ಲಿ ಕಚೇರಿಗಳನ್ನಾಗಿ ಬಳಕೆ ಮಾಡಿಕೊಳ್ಳುವುದು ಕಾನೂನಿಗೆ ವಿರುದ್ಧವಾಗಿದೆ. ತಕ್ಷಣ ನೆಲ ಮಾಳಿಗೆಗಳಲ್ಲಿನ ಕಚೇರಿಗಳ ಕಾರ್ಯಚರಣೆಯನ್ನು ಸ್ಥಗಿತಗೊಳಿಸಬೇಕು. ಅಲ್ಲದೆ, ನ್ಯಾಯಾಲಯದ ಅಗತ್ಯತೆಗಳಿಗೆ ಬಳಕೆ ಮಾಡಿಕೊಳ್ಳುವುದಕ್ಕಾಗಿ ಹೆಚ್ಚುವರಿ ಜಾಗವನ್ನು ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ವಕೀಲರ ರಮೇಶ್ ನಾಯ್ಕ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.












Click it and Unblock the Notifications