ಸಿಎಂ ಪಟ್ಟಕ್ಕಾಗಿ ಕನಕಪುರ ಬಂಡೆ ಪಟ್ಟು; 5 ವರ್ಷ ನಾನೇ ಸಿಎಂ ಎಂದ ಸಿದ್ದರಾಮಯ್ಯ: ಡಿ ಕೆ ಶಿವಕುಮಾರ್ ರಿಯಾಕ್ಷನ್
ಬೆಂಗಳೂರು,ನವೆಂಬರ್ 21: ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಣಗಳ ನಡುವಣ ಅಧಿಕಾರ ಹಂಚಿಕೆ ಕುರಿತ ಚರ್ಚೆಗಳು ತೀವ್ರಗೊಂಡಿದೆ. ಅಲ್ಲದೇ ಚಾಮರಾಜನಗರದಲ್ಲಿ ಐದೂ ವರ್ಷವೂ ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಅವರ ಹೇಳಿಕೆಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಸದಾಶಿವನಗರದಲ್ಲಿ ಮಾಧ್ಯಮಗಳ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಇರುವುದಿಲ್ಲ ಎಂದು ಯಾರೂ ಹೇಳಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟನೆ ನೀಡಿದರು. ಐದೂ ವರ್ಷವೂ ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಅವರು ಹೇಳಿರುವುದು ಬಹಳ ಸಂತೋಷ, ಅವರಿಗೆ ಮುಖ್ಯಮಂತ್ರಿ ಹುದ್ದೆ ಜವಾಬ್ದಾರಿಯನ್ನು ಪಕ್ಷ ಕೊಟ್ಟಿದೆ. ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ವಿಧಾನ ಪರಿಷತ್ ಸದಸ್ಯರ ಭೇಟಿಯ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ವಿಧಾನಪರಿಷತ್ ಸಭಾಧ್ಯಕ್ಷರು ಹಾಗೂ ಉಪ ಸಭಾಧ್ಯಕ್ಷರನ್ನು ಈ ಬಾರಿ ಕಾಂಗ್ರೆಸ್ ಪಕ್ಷದಿಂದಲೇ ಆಯ್ಕೆ ಮಾಡಬೇಕು ಎಂದು ಪಕ್ಷದ ಸದಸ್ಯರುಗಳು ಮನವಿ ಮಾಡಿದ್ದಾರೆ. ಈ ಹಿಂದೆಯೇ ಇದನ್ನು ಮಾಡಬೇಕಿತ್ತು. ಮೇಲ್ಮನೆಯಲ್ಲಿ ವಿಪಕ್ಷಗಳ ಹಾಗೂ ನಮ್ಮ ಸಂಖ್ಯೆ ಸಮನಾಗಿದೆ. ಗಾಯತ್ರಿ ಅವರ ಪ್ರಕರಣವನ್ನು ನ್ಯಾಯಲಯದಲ್ಲಿ ಗೆದ್ದಿದ್ದೇವೆ. ಅಲ್ಲಿಂದ ಆದೇಶ ಪಡೆಯಬೇಕಿದೆ. ಆಗ ನಮ್ಮ ಸದಸ್ಯರ ಸಂಖ್ಯೆ ಹೆಚ್ಚಳವಾಗಲಿದೆ ಎಂದು ಸದಸ್ಯರು ತಿಳಿಸಿದ್ದಾರೆ ಎಂದರು.
ಸಚಿವರು, ಶಾಸಕರು, ಎಂಎಲ್ ಸಿಗಳ ದೆಹಲಿ ಭೇಟಿ ಹಾಗೂ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಇದರ ಬಗ್ಗೆ ಗೊತ್ತಿಲ್ಲ. ಯಾರೂ ನನ್ನ ಬಳಿ ಕೇಳಿಯೂ ಇಲ್ಲ. ಈ ವಿಚಾರ ನನಗೆ ಗೊತ್ತೂ ಇಲ್ಲ ಎಂದು ಹೇಳಿದರು. ಸರ್ಕಾರಕ್ಕೆ ಎರಡುವರೆ ವರ್ಷ ಪೂರೈಸಿದ ದಿನವೇ ಅಧಿಕಾರ ಹಂಚಿಕೆ ವಿಚಾರ ಚರ್ಚೆಯಾಗುತ್ತಿರುವ ಬಗ್ಗೆ ಮಾತನಾಡಿ, ನನಗೆ ಆರೋಗ್ಯ ಸರಿಯಿಲ್ಲದ ಕಾರಣಕ್ಕೆ ಮನೆಯಿಂದ ಹೊರಗಡೆ ಬಂದಿಲ್ಲ. ಸ್ನಾನವನ್ನೂ ಮಾಡಿಲ್ಲ ಎಂದು ತಿಳಿಸಿದರು.
ಕಸ ಗುಡಿಸುವ ಯಂತ್ರ ಬಾಡಿಗೆ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, ಈ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಶೋಭಾ ಕರಂದ್ಲಾಜೆ ಹಾಗೂ ನಿಖಿಲ್ ಕುಮಾರಸ್ವಾಮಿ ಅವರು ಲೋಕಾಯುಕ್ತ ಅಥವಾ ಸೂಕ್ತ ತನಿಖಾ ಸಂಸ್ಥೆಗೆ ದೂರು ನೀಡಲಿ. ನಾನು ಕೇಂದ್ರ ಶೋಭಾ ಕರಂದ್ಲಾಜೆ ಅವರಿಗೆ ಉತ್ತರಿಸುತ್ತೇನೆಯೇ ಹೊರತು ಆತನಿಗಲ್ಲ. ಕಸ ಗುಡಿಸುವ ಯಂತ್ರಗಳ ಬಗ್ಗೆ ಅಧ್ಯಯನ ನಡೆಸಿಯೇ ಮುಂದುವರೆದಿರುವುದು. ಇದು ಕೇವಲ ಒಂದು ವರ್ಷದ ಯೋಜನೆಯಲ್ಲ. ಏಳು ವರ್ಷಗಳ ಯೋಜನೆ. ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ.
ನಾವು ತನಿಖೆ ನಡೆಸಲು ಸಿದ್ಧರಿದ್ದೇವೆ. ಶೋಭಾ ಕರಂದ್ಲಾಜೆ ಅವರ ಟೀಕೆಗಳನ್ನು ನಾನು ಸ್ವಾಗತ ಮಾಡುತ್ತೇನೆ. ಅವರ ಪ್ರಶ್ನೆಗಳಿಗೆ ಉತ್ತರಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಈ ವಿಚಾರದಲ್ಲಿ ನಾವು ಪಾರದರ್ಶಕವಾಗಿದ್ದೇವೆ. ಈ ಮೊತ್ತ ದೊಡ್ಡದಾಗಿ ಕಾಣುತ್ತಿರಬಹುದು. ಇದು ಕೇವಲ ವಾಹನದ ವಿಚಾರವೊಂದೇ ಇಲ್ಲ. ಚಾಲಕ, ಸಹಾಯಕ, ಸ್ವಚ್ಛ ಮಾಡುವವರು ಸೇರಿದಂತೆ ಅನೇಕ ವಿಚಾರಗಳಿವೆ. ಎಲ್ಲಾ ಆಯಾಮಗಳಿಂದ ಆಲೋಚಿಸಿ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದರು.












Click it and Unblock the Notifications