Get Updates
Get notified of breaking news, exclusive insights, and must-see stories!

Amul vs Nandini : 'ಅಮುಲ್ ಮತ್ತು ನಂದಿನಿ ನಡುವೆ ಯಾವುದೇ ಸಮಸ್ಯೆ ಇಲ್ಲ': ಅಮುಲ್ ಎಂಡಿ ಜಯನ್ ಮೆಹ್ತಾ ಸ್ಪಷ್ಟನೆ

ಬೆಂಗಳೂರು, ಏಪ್ರಿಲ್. 11: ರಾಜ್ಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿರುವ ಅಮುಲ್ ಮತ್ತು ನಂದಿನಿ ವಾಗ್ವಾದ ರಾಜಕೀಯ ತಿರುವು ಪಡೆದುಕೊಂಡಿದೆ. ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಸಮಯದಲ್ಲಿ ಆಡಳಿತರೂಢ ಬಿಜೆಪಿಗೆ ಈ ವಿವಾದ ಕಂಟಕವಾಗುವಂತಿದೆ. ಇದರ ಬೆನ್ನಲ್ಲೆ ಅಮುಲ್ ವ್ಯವಸ್ಥಾಪಕ ನಿರ್ದೇಶಕರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಅಮುಲ್‌ನ ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ ಅವರು ಮಂಗಳವಾರ ಈ ಬಗ್ಗೆ ಮಾತನಾಡಿದ್ದು, ಎರಡೂ ಕಂಪನಿಗಳ ನಡುವೆ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಮುಲ್ ಮತ್ತು ನಂದಿನಿ ಎರಡೂ ಕಂಪನಿಗಳು ಒಟ್ಟಿಗೆ ಕಾರ್ಯನಿರ್ವಹಿಸುತ್ತಿವೆ ಮತ್ತು ಕರ್ನಾಟಕದಲ್ಲಿ ಸಹ ಅಸ್ತಿತ್ವದಲ್ಲಿವೆ ಎಂದು ಮಾಹಿತಿ ನೀಡಿದ್ದಾರೆ.

No Issue Between Amul and Nandini Says Amul MD Jayen Mehta

ಸುದ್ದಿಗಾರರೊಂದಿಗೆ ಮಾತನಾಡಿದ ಜಯನ್ ಮೆಹ್ತಾ, ಅಮುಲ್ ಮತ್ತು ನಂದಿನಿ ಕಳೆದ ಕೆಲವು ದಶಕಗಳಿಂದ ಭಾರತವನ್ನು ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಕರಾಗಲು ಒಟ್ಟಾಗಿ ಕೆಲಸ ಮಾಡುತ್ತಿವೆ. ನಮ್ಮ ಉತ್ಪನ್ನಗಳ ತಂತ್ರಜ್ಞಾನ, ಸಂಸ್ಕರಣೆ ಮತ್ತು ಮಾರ್ಕೆಟಿಂಗ್‌ನಂತಹ ಅಂಶಗಳಲ್ಲಿ ನಾವು ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.

"ವಾಸ್ತವವಾಗಿ, ನಮ್ಮ ಐಸ್ ಕ್ರೀಮ್ ಅನ್ನು ಕಳೆದ 25 ವರ್ಷಗಳಿಂದ ನಂದಿನಿ ಒಡೆತನದ ಕರ್ನಾಟಕದ ಮೂರು ಘಟಕಗಳಲ್ಲಿ ತಯಾರಿಸಲಾಗುತ್ತಿದೆ. ಸಾಂಕ್ರಾಮಿಕ ಸಮಯದಲ್ಲಿ ನಾವು ನಂದಿನಿಯಿಂದ ಐದು ಟನ್ ಚೀಸ್ ಖರೀದಿಸಿದ್ದೇವೆ. ಕರ್ನಾಟಕದಲ್ಲಿ ಪೌಚ್ ಹಾಲಿನ ಮಾರುಕಟ್ಟೆಗೆ ಅಮುಲ್ ಪ್ರವೇಶ ಹೊಸದಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

"ನಾವು 2015 ರಿಂದ ಕರ್ನಾಟಕದಲ್ಲಿ ಪೌಚ್ ಹಾಲನ್ನು ಮಾರಾಟ ಮಾಡುತ್ತಿದ್ದೇವೆ. ನಂದಿನಿ ಉತ್ಪನ್ನಗಳಿಗಿಂತ ಹೆಚ್ಚಿಲ್ಲದ ಬೆಲೆಗಳಲ್ಲಿ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕವೇ ಬೆಂಗಳೂರಿಗೆ ಪ್ರವೇಶಿಸುವುದು ನಮ್ಮ ಪ್ರಯತ್ನ. ನಂದಿನಿ ಟೋನ್ಡ್ ಹಾಲು ಪ್ರತಿ ಲೀಟರ್‌ಗೆ ಸುಮಾರು 39 ರೂಪಾಯಿ. ಆದರೆ ಅಮುಲ್ ಟೋನ್ಡ್ ಹಾಲನ್ನು ಪ್ರತಿ ಲೀಟರ್‌ಗೆ 54 ರೂಪಾಯಿ ಎಂದಿದ್ದಾರೆ.

ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟವು ಇತ್ತೀಚೆಗೆ ಬೆಂಗಳೂರಿನಲ್ಲಿ ತ್ವರಿತ ವಾಣಿಜ್ಯ ವೇದಿಕೆಗಳ ಮೂಲಕ ಅಮುಲ್ ಹಾಲು ಮತ್ತು ಮೊಸರನ್ನು ಪರಿಚಯಿಸುವ ಯೋಜನೆಯನ್ನು ಪ್ರಕಟಿಸಿತ್ತು. ರಾಜ್ಯದ ವಿರೋಧ ಪಕ್ಷದ ನಾಯಕರು ಈ ಕ್ರಮವನ್ನು ಟೀಕಿಸಿದ್ದಾರೆ. ಇದು ಕೆಎಂಎಫ್ ಒಡೆತನದ ನಂದಿನಿ ಬ್ರಾಂಡ್‌ನ ಹಿತಾಸಕ್ತಿಯ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಕಂಪನಿಗಳ ನಡುವೆ ವಿಲೀನ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಧಾನಿ ರಾಜ್ಯಕ್ಕೆ ಭೇಟಿ ನೀಡಿದ್ದ ವೇಳೆ ಟ್ವಿಟ್ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, "ಪ್ರಧಾನಿ ನರೇಂದ್ರ ಮೋದಿ ಅವರೇ, ನೀವು ಕರ್ನಾಟಕಕ್ಕೆ ಬರುವುದು ಕನ್ನಡಿಗರಿಗೆ ಕೊಡುವುದಕ್ಕೋ, ಕಿತ್ತುಕೊಳ್ಳುವುದಕ್ಕೋ? ಕನ್ನಡಿಗರು ಕಟ್ಟಿದ್ದ ಬ್ಯಾಂಕು, ಬಂದರು, ವಿಮಾನ ನಿಲ್ದಾಣಗಳನ್ನು ಮುಕ್ಕಿ ತಿಂದಾಯಿತು. ಈಗ ನಮ್ಮ ನಂದಿನಿಯನ್ನು ಮುಕ್ಕಲು ಹೊರಟಿದ್ದೀರಾ..?" ಎಂದು ಕಟುವಾಗಿ ಪ್ರಶ್ನಿಸಿದ್ದರು.

"ನಮ್ಮ ವಿಜಯಾ ಬ್ಯಾಂಕನ್ನು ನುಂಗಿದ ಬರೋಡಾ ಬ್ಯಾಂಕ್ ಗುಜರಾತ್ ನದ್ದು, ಬಂದರು, ಏರ್ ಪೋರ್ಟ್ ನುಂಗಿದ್ದ ಅದಾನಿ ಗುಜರಾತ್ ನವರು, ಈಗ ಕೆಎಂಎಫ್ ನುಂಗಲು ಹೊರಟಿರುವ ಅಮುಲ್ ಗುಜರಾತ್ ನದ್ದು. ಗುಜರಾತಿಗಳಿಗೆ ಕನ್ನಡಿಗರು ಶತ್ರುಗಳಾ? ಈ ಗುಜರಾತಿ ಆಕ್ರಮಣ ಇನ್ನು ಸಹಿಸಲು ಸಾಧ್ಯ ಇಲ್ಲ. ಕರ್ನಾಟಕದಲ್ಲಿ ಅಮುಲ್ ಉತ್ಪನ್ನಗಳ ಮಾರಾಟವನ್ನು ಗೌರವಪೂರ್ವಕವಾಗಿ ನಿಲ್ಲಿಸಿ. ಕನ್ನಡಿಗರ ನಾಡಪ್ರೇಮ, ಸ್ವಾಭಿಮಾನವನ್ನು ಕೆಣಕಲು ಹೋಗಬೇಡಿ, ಪರಿಣಾಮ ನೆಟ್ಟಗಾಗದು..!" ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+