ರಾಜ್ಯದಲ್ಲಿ ದಸರಾ ರಜೆ ವಿಸ್ತರಣೆ ಹಾಗೂ ಈ ಶಿಕ್ಷಕರ ಪರ್ಯಾಯ ರಜೆ ಬಗ್ಗೆ ಅಪ್ಡೇಟ್
ಬೆಂಗಳೂರು, ಸೆಪ್ಟೆಂಬರ್ 23: ಇದೀಗ ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ದಸರಾ ರಜೆಯನ್ನು ನೀಡಲಾಗಿದೆ. ಮತ್ತೊಂದೆಡೆ ಜಾತಿ ಸಮೀಕ್ಷೆ ಇದ್ದು, ಇದರಿಂದ ದಸರಾ ರಜೆ ವಿಸ್ತರಣೆ ಆಗಬಹುದಾ ಎನ್ನುವ ಪ್ರಶ್ನೆಗಳು ಎದ್ದಿದ್ದವು. ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಹತ್ವದ ಅಪ್ಡೇಟ್ ಮಾಹಿತಿಯೊಂದನ್ನು ನೀಡಿದ್ದಾರೆ. ಹಾಗಾದ್ರೆ ಅದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಶಾಲಾ ಅವಧಿಯಲ್ಲಿ ಬೋಧನೆಗೆ ಅಡ್ಡಿ ಆಗಬಾರದು ಎನ್ನುವ ಕಾರಣದಿಂದ ಜಾತಿವಾರು ಸಮೀಕ್ಷೆಗೆ ದಸರಾ ರಜೆಯನ್ನು ಬಳಸಿಕೊಂಡಿದ್ದೇವೆ. ರಜೆ ಮುಗಿದ ತಕ್ಷಣವೇ ಶಾಲೆಗಳು ಪುನರಾರಂಭ ಆಗಲಿವೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಕರಿಗೆ ದಸರಾ ಹಬ್ಬ ಮಾಡಲು ಅವಕಾಶ ಕೊಡದೇ ಸಮೀಕ್ಷೆ ಮಾಡಿಸಲಾಗುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಿದೆ. ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲೂ ಶಿಕ್ಷಕರ ಮೇಲೆ ಅನ್ಯ ಕಾರ್ಯಗಳ ಭಾರವನ್ನು ಹೊರಿಸಲಾಗಿತ್ತು. ಕೇಂದ್ರ ಸರ್ಕಾರ ನಡೆಸುವ ಗಣತಿಯನ್ನು ಅವರು ಯಾರ ಬಳಿ ಮಾಡಿಸುತ್ತಾರೆ? ಶಿಕ್ಷಕರನ್ನು ಬಳಸದ ಹೊರತು ಬೇರೆ ಪರ್ಯಾಯ ವ್ಯವಸ್ಥೆ ಎಲ್ಲಿದೆ ಎಂದು ಪ್ರಶ್ನೆ ಮಾಡಿದರು.
ರಾಜ್ಯದಲ್ಲಿನ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯನ್ನು ತಿಳಿದುಕೊಳ್ಳಲು ಸಮೀಕ್ಷೆ ಅನಿವಾರ್ಯವಾಗಿದೆ. ಸಮೀಕ್ಷೆಯಲ್ಲಿ ಭಾಗವಹಿಸಲು ಶಿಕ್ಷಕರು ಹಾಗೂ ಶಿಕ್ಷಕರ ಸಂಘಟನೆಗಳ ಜೊತೆ ಮಾತನಾಡಿ ಮನವರಿಕೆ ಮಾಡಿಕೊಟ್ಟಿದ್ದೇವೆ. ಶಿಕ್ಷಕರು ಸಹಕಾರ ನೀಡುತ್ತಿದ್ದಾರೆ. ಹಾಗೆಯೇ ಜನರು ಕೂಡ ಮನೆಗಳ ಬಳಿಗೆ ಬರುವ ಶಿಕ್ಷಕರಿಗೆ ಸಂಪೂರ್ಣ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ದಸರಾ ರಜೆ ವಿಸ್ತರಣೆ ಬಗ್ಗೆ ಮಾತನಾಡಿದ ಅವರು, ಈ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ. ರಜೆ ಮುಗಿದ ತಕ್ಷಣವೇ ಶಾಲೆಗಳು ಆರಂಭ ಆಗುತ್ತವೆ. ಸಮೀಕ್ಷೆಯಲ್ಲಿ ಭಾಗವಹಿಸುವ ಶಿಕ್ಷಕರಿಗೆ ಪರ್ಯಾಯ ರಜೆ ನೀಡುವ ಕುರಿತು ಚರ್ಚೆ ನಡೆಸಲಾಗುವುದು. ನಂತರ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು. ಇತ್ತೀಚೆಗಷ್ಟೇ ಸಮೀಕ್ಷೆಗೆ ಬಳಕೆ ಮಾಡಿಕೊಳ್ಳುವ ಶಿಕ್ಷಕರಿಗೆ ಯಾವುದೇ ಪರ್ಯಾಯ ರಜೆ ಹಾಗೂ ಭತ್ಯೆ ನೀಡಲಾಗುವುದಿಲ್ಲ ಎನ್ನುವ ಆರೋಪಗಳು ಕೇಳಿಬಂದಿದ್ದವು.
ಇದೀಗ ಈ ಬಗ್ಗೆ ಮಾತನಾಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಸಮೀಕ್ಷೆಗೆ ಬಳಸಿಕೊಳ್ಳುವ ಶಿಕ್ಷಕರಿಗೆ ಪರ್ಯಾಯ ರಜೆ ನೀಡುವ ಕೂರಿತು ಚರ್ಚಿಸಿದ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದಯ ಹೇಳಿದರು. ಈ ಮೂಲಕ ತಮ್ಮ ಮೇಲೆ ಬಂದಂತಹ ಆರೋಪಗಳಿಗೆ ಸ್ಪಷ್ಟನೆ ನೀಡುವ ಕೆಲಸವನ್ನು ಮಾಡಿದರು. ಇದೀಗ ದಸರಾ ರಜೆ ಇದ್ದು, ಈ ರಜೆ ಶಿಕ್ಷರಿಗೆ ಇಲ್ಲ ಅವರನ್ನು ಜಾತಿ ಸಮೀಕ್ಷೆಗೆ ಬಳಕೆ ಮಾಡಿಕೊಳ್ಳಲಾಗಿದೆ. ಇದರಿಂದ ತುಂಬಾ ಶಿಕ್ಷಕರು ಬೇಸರಗೊಂಡಿದ್ದಾರೆ ಎಂದು ತಿಳಿದುಬಂದಿತ್ತು. ಈ ಬಗ್ಗೆ ವರದಿಗಳು ಸಹ ಆಗಿದ್ದವು.
ಒಟ್ಟಿನಲ್ಲಿ ಹೇಳುವುದಾದರೆ, ದಸರಾ ರಜೆ ಪಡೆಯದ ಶಿಕ್ಷಕರಿಗೆ ಬಳಿಕ ಪರ್ಯಾಯ ರಜೆ ನೀಡುವುದರಿಂದ ಅವರಿಗೂ ಸಹ ತುಸು ವಿಶ್ರಾಂತಿ ಸಿಗಲಿದ್ದು, ಒತ್ತಡ ಕಡಿಮೆ ಆದಂತಾಗಲಿದೆ. ಅಲ್ಲದೆ, ಕುಟುಂಬದ ಜೊತೆ ಸಂತಸದ ಕ್ಷಣಗಳನ್ನು ಕಳೆಯಲು ಸಮಯ ಸಿಗಲಿದೆ. ಆದ್ದರಿಂದ ಈ ಬಗ್ಗೆ ಇಲಾಖೆ ಗಮನಹರಿಸಿ ದಸರಾ ರಜೆ ಪಡೆಯದೇ ಸಮೀಕ್ಷೆ ಕಾರ್ಯಗಳಲ್ಲಿ ಭಾಗವಹಿಸುವ ಶಿಕ್ಷಕರಿಗೆ ಪರ್ಯಾಯ ರಜೆಗಳನ್ನು ನೀಡಬೇಕು ಎನ್ನುವ ಮಾತುಗಳು ಕೇಳಿಬಂದಿದ್ದವು.












Click it and Unblock the Notifications