ಮದರಾಸಗಳಲ್ಲಿ ಸ್ಪರ್ಧಾತ್ಮಕ ಶಿಕ್ಷಣ ಸಿಗುತ್ತಿಲ್ಲ, ಪೋಷಕರೇ ಹೇಳುತ್ತಿದ್ದಾರೆ: ಬಿ.ಸಿ. ನಾಗೇಶ್
ಬೆಂಗಳೂರು, ಏ. 19: ಮದರಸಾಗಳಲ್ಲಿ ಕಲಿತ ಮಕ್ಕಳಿಗೆ ಜಾಗತಿಕವಾಗಿ ಸ್ಪರ್ಧೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅಭಿಪ್ರಾಯಪಟ್ಟಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ಬಳಿಕ ಮಾತನಾಡಿದ ಅವರು, ಮದರಸಾಗಳಲ್ಲಿ ಕಲಿತ ಮಕ್ಕಳಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆ ಮಾಡಲು ಸಾಧ್ಯವಾಗುತ್ತಿಲ್ಲ. ಸ್ಪರ್ಧಾತ್ಮಕ ಶಿಕ್ಷಣ ಅಲ್ಲಿ ಸಿಗುತ್ತಿಲ್ಲ ಎಂದು ಪೋಷಕರೇ ತಿಳಿಸಿದ್ದಾರೆ. ಮದರಸಾಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಅಲ್ಲಿ ಗುಣಮಟ್ಟದ ಶಿಕ್ಷಣ ನೀಡಿ ಎಂಬ ಬೇಡಿಕೆ ಬಂದಿಲ್ಲ. ಆದರೆ ಮದರಾಸಗಳಲ್ಲಿ ಶಿಕ್ಷಣ ಸರಿಯಿಲ್ಲ ಎಂಬುದನ್ನು ತುಂಬಾ ಪೋಷಕರು ಹೇಳಿದ್ದಾರೆ. ಮದರಸಾಗಳಿಂದ ಗುಣಮಟ್ಟದ ಶಿಕ್ಷಣ ಕೊಡುವ ಬಗ್ಗೆ ಬೇಡಿಕೆ ಬಂದರೆ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದರು.
ಟಿಪ್ಪು ಕುರಿತ ಪಠ್ಯ ಕಡಿತ ಜಾಸ್ತಿ ಮಾಡಿಲ್ಲ:
ಟಿಪ್ಪು ಸುಲ್ತಾನ್ ಕುರಿತ ಪಠ್ಯ ಹೆಚ್ಚು ಕಡಿತ ಮಾಡಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟನೆ ನೀಡಿದ್ದಾರೆ.

ಟಿಪ್ಪು ಪಠ್ಯದ ಕುರಿತು ಆಕ್ಷೇಪ ವ್ಯಕ್ತಪಡಿಸಿ ಅಪ್ಪಚ್ಚು ರಂಜನ್ ಪ್ರಸ್ತಾವನೆ ಇಟ್ಟಿದ್ದರು. ಟಿಪ್ಪು ಪಾಠವನ್ನೇ ಕೈ ಬಿಡಿ ಅಥವಾ ಟಿಪ್ಪುವಿನ ಎಲ್ಲಾ ಮುಖವನ್ನು ಪಾಠದಲ್ಲಿ ತೋರಿಸಿ ಎಂಬ ಬೇಡಿಕೆಯಿದೆ. ಟಿಪ್ಪು ಸುಲ್ತಾನ್ ಕುರಿತ ದಾಖಲೆ ಇಲ್ಲದ ಕೆಲವು ವಿಷಯಗಳನ್ನು ಕೈ ಬಿಡಲಾಗಿದೆ. ಆದರೆ, ಮೈಸೂರು ಹುಲಿ ಎಂಬ ಬಿರುದು ಕೈ ಬಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ:
ಪಠ್ಯದಲ್ಲಿ ನೈತಿಕ ಶಿಕ್ಷಣ ಅಳವಡಿಸುವ ವಿಚಾರವಾಗಿ ಚರ್ಚೆ ನಡೆದಿದೆ. ಮಹಾಭಾರತ, ಪಂಚತಂತ್ರ ಕಥೆ, ರಾಮಾಯಣ ಸೇರಿದಂತೆ ಎಲ್ಲಾ ವಿಚಾರಗಳನ್ನು ನೈತಿಕ ಶಿಕ್ಷಣದಲ್ಲಿಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳಲ್ಲಿ ಒಳ್ಳೆಯ ಗುಣ ಬೆಳೆಸುವ ಸಲುವಾಗಿ ನೈತಿಕ ಪಾಠ ಮಾಡಲು ಚಿಂತನೆ ಮಾಡಿದ್ದೇವೆ. ಮಾರಲ್ ಸೈನ್ಸ್ ಕೇವಲ ಭಗವದ್ಗೀತೆಗೆ ಸೀಮಿತವಾಗಿಲ್ಲ. ಮಕ್ಕಳಲ್ಲಿ ನೈತಿಕ ಗುಣ ಹೆಚ್ಚಿಸುವ ಭಾಗವನ್ನು ಸೇರಿಸುತ್ತೇವೆ. ಯಾವ ಶಾಲೆಯಲ್ಲಿ ಯಾವ ಧರ್ಮದವರು ಹೆಚ್ಚಾಗಿದ್ದರೋ ಆ ಧರ್ಮದ ವಿದ್ಯಾರ್ಥಿಗಳಿಗೆ ಅನುಗುಣವಾಗಿ ನೀತಿಪಾಠ ಬೋಧನೆಗೆ ಅವಕಾಶ ಮಾಡಿಕೊಡುತ್ತೇವೆ. ಕುರಾನ್ ಬೈಬಲ್ ಯಾವುದಾದರೂ ಇರಬಹುದು. ಮುಖ್ಯವಾದುದನ್ನು ಸಮಿತಿ ತೀರ್ಮಾನಿಸಿ ಕ್ರಮ ಜರುಗಿಸುತ್ತದೆ ಎಂದರು.












Click it and Unblock the Notifications