Siddaramaiah: ಜನವರಿ 22 ರಂದು ಸರ್ಕಾರಿ ರಜೆ ಕೇಳಿದವರಿಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು
ತುಮಕೂರು, ಜನವರಿ 21: ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಗೆ ಲಕ್ಷಾಂತರ ರಾಮನ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ನಾಳೆ (ಸೋಮವಾರ)ಅಯೊಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಇತ್ತ ಹಲವು ರಾಜ್ಯಗಳಲ್ಲಿ ಸರ್ಕಾರ ರಜೆ ಘೋಷಿಸಿದ್ದು, ರಾಜ್ಯದಲ್ಲೂ ರಜೆ ಘೋಷಿಸುವಂತೆ ಬಿಜೆಪಿ ಆಗ್ರಹಿಸಿದೆ. ಆದ್ರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಜೆ ಘೋಷಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹೌದು, ಭಾನುವಾರ ತುಮಕೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾಳೆ ಮುಜರಾಯಿ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯುತ್ತೆ. ಆದ್ರೆ, ಸರ್ಕಾರಿ ರಜೆ ಇಲ್ಲ. ನಾಳೆ ಮುಜರಾಯಿ ದೇಗುಲಗಳಲ್ಲಿ ದಾಸೋಹ, ಪಾನಕ-ಫಲಹಾರ ವ್ಯವಸ್ಥೆ ಬಗ್ಗೆ ನನಗೆ ಮಾಹಿತಿ ಇಲ್ಲ. ನಾಳೆ ಮಹದೇವಪುರದಲ್ಲಿ ರಾಮನ ದೇವಸ್ಥಾನ ಉದ್ಘಾಟನೆ ಮಾಡುತ್ತಿದ್ದೇನೆ. ಕಾರ್ಯಕ್ರಮಕ್ಕೆ ನನಗೆ ಆಹ್ವಾನ ನೀಡಿದ್ದಾರೆ. ಹೀಗಾಗಿ ದೇಗುಲ ಉದ್ಘಾಟಿಸುತ್ತೇನೆ ಎಂದು ಹೇಳಿದ್ದಾರೆ.

ಧರ್ಮ, ಭಕ್ತಿ ಬಗ್ಗೆ ಬೇರೆಯವರಿಂದ ಕಲಿಯುವ ಅಗತ್ಯ ನಮಗಿಲ್ಲ: ಡಿಕೆಶಿ
ನಾವು ಪೂಜೆ, ಪುನಸ್ಕಾರ ಮಾಡಿಕೊಂಡು ನಮ್ಮ ಸಂಸ್ಕೃತಿ ಪಾಲನೆ ಮಾಡಿಕೊಂಡು ಬಂದಿದ್ದೇವೆ. ಧರ್ಮ, ಭಕ್ತಿ ಬಗ್ಗೆ ಬೇರೆಯವರಿಂದ ಕಲಿಯುವ ಅಗತ್ಯ ನಮಗಿಲ್ಲ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಅಲ್ಲದೇ
ಭಕ್ತಿ, ಧರ್ಮ, ಗೌರವವನ್ನು ನಾವು ಪ್ರಚಾರಕ್ಕೆ ಬಳಸುವುದಿಲ್ಲ. ಪ್ರಾರ್ಥನೆಗಳಿಂದ ಫಲ ಸಿಗುತ್ತದೆ ಎಂಬುದು ನಮ್ಮ ನಂಬಿಕೆ.
ಹೀಗಾಗಿ ಪ್ರಾರ್ಥನೆ ಮಾಡಿಕೊಳ್ಳಲು ಹೇಳಿದ್ದೇವೆ. ಬೇರೆಯವರು ಹೇಳುವ ಮುನ್ನವೇ ನಮ್ಮ ಸರ್ಕಾರ ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ವಿಶೇಷ ಪೂಜೆಗೆ ಸೂಚನೆ ನೀಡಿದೆ. ದೇವಾಲಯಗಳಲ್ಲಿ ಯಾವ ಪೂಜೆ, ಪುನಸ್ಕಾರ ಮಾಡಬೇಕೋ ಅದನ್ನು ಮಾಡಲಾಗುವುದು. ಬೇರೆಯವರಿಂದ ನಾವು ಹೇಳಿಸಿಕೊಳ್ಳುವ ಪ್ರಮೇಯವೇ ಇಲ್ಲ.
ಸಿದ್ದರಾಮಯ್ಯ ಅವರ ಹೆಸರಲ್ಲಿ ರಾಮ ಇದ್ದಾನೆ, ನನ್ನ ಹೆಸರಿನಲ್ಲಿ ಶಿವ ಇದ್ದಾನೆ. ಧರ್ಮ, ಸಂಸ್ಕೃತಿ ಪಾಲನೆ ವಿಚಾರವಾಗಿ ನಮಗೆ ಯಾರೂ ಹೇಳಿಕೊಡುವುದೂ ಬೇಡ, ಒತ್ತಡ ಹಾಕುವುದೂ ಬೇಡ. ನಮ್ಮ ಕರ್ತವ್ಯ ನಾವು ಮಾಡುತ್ತೇವೆ. ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಮಾಡಬಾರದು ಎಂದು ತಿಳಿಸಿದರು.
ಸಿಎಂ ಗೆ ಪತ್ರ ಬರೆದ ವಿರೋಧ ಪಕ್ಷದ ನಾಯಕ ಆರ್ ಅಶೋಕ್
ಈ ಪತ್ರ ಜನವರಿ 22ರಂದು ಸರ್ಕಾರಿ ರಜೆ ಘೋಷಿಸುವ ಕುರಿತು ಎಂಬ ವಿಚಾರವನ್ನು ಒಳಗೊಂಡಿದೆ. 500 ವರ್ಷಗಳ ಹೋರಾಟ, ತ್ಯಾಗದ ಫಲವಾಗಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣವಾಗಿ ಜನವರಿ 22ರಂದು ವಿಗ್ರಹ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿದೆ ಎಂದು ಆರ್. ಅಶೋಕ ಪತ್ರದಲ್ಲಿ ವಿವರಣೆ ನೀಡಿದ್ದಾರೆ.
ಈ ದಿನದಂದು ಪ್ರತಿ ಮನೆಗಳಲ್ಲಿ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ದೀಪ ಬೆಳಗುವುದು, ಭಜನೆ, ಶ್ರೀರಾಮನ ಆರಾಧನೆ ನಡೆಯುತ್ತಿದೆ. ಇಡೀ ರಾಜ್ಯದಲ್ಲಿ ಸಂಭ್ರಮ, ಸಡಗರದ ಆಚರಣೆ ನಡೆಯಲಿದೆ. ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಕೂಡ ವಿಗ್ರಹ ಪ್ರಾಣ ಪ್ರತಿಷ್ಠಾಪನೆಯಲ್ಲಿ ಭಾಗವಹಿಸಿದ್ದು, ಈಗಾಗಲೇ ಕೇಂದ್ರ ಸರ್ಕಾರದ ಕಚೇರಿಗಳಿಗೆ ಅರ್ಧ ದಿನದ ರಜೆ ಘೋಷಿಸಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ರಾಜ್ಯದಲ್ಲೂ ದೊಡ್ಡ ಮಟ್ಟದ ಆಚರಣೆ ನಡೆಯುತ್ತಿದ್ದು, ಆ ದಿನ ಕೆಲಸ ಮಾಡುವುದರಿಂದ ಆಚರಣೆಗೆ ತೊಡಕು ಉಂಟಾಗಬಹುದು. ಆದ್ದರಿಂದ ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳು, ಸಾರ್ವಜನಿಕ ಉದ್ದಿಮೆ ಸೇರಿದಂತೆ ಎಲ್ಲ ಕಡೆಗಳಲ್ಲಿ ಅನುಕೂಲವಾಗುವಂತೆ ಜನವರಿ 22ರಂದು ಒಂದು ದಿನದ ಮಟ್ಟಿಗೆ ಸರ್ಕಾರಿ ರಜೆಯನ್ನು ಘೋಷಿಸಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತೇನೆ ಎಂದು ಅಶೋಕ ಪತ್ರದಲ್ಲಿ ಮನವಿ ಮಾಡಿದ್ದಾರೆ.












Click it and Unblock the Notifications