ಕರ್ನಾಟಕದಲ್ಲಿನ ಹೆದ್ದಾರಿಗಳ ಸಮಸ್ಯೆ ಸರಿಪಡಿಸಲು ಗಡ್ಕರಿ ಭರವಸೆ
ಬೆಂಗಳೂರು, ಆಗಸ್ಟ್ 04: ಕರ್ನಾಟಕ ರಾಜ್ಯದಲ್ಲಿನ ಹೆದ್ದಾರಿಗಳಲ್ಲಿನ ಸಮಸ್ಯೆ, ಅವೈಜ್ಞಾನಿಕ ಕಾಮಗಾರಿ ಸೇರಿದಂತೆ ಹಲವು ಲೋಪಗಳನ್ನು ಸರಿಪಡಿಸಲು ಕೇಂದ್ರದಿಂದ ಅಧಿಕಾರಿಗಳು ಹಾಗೂ ತಜ್ಞರ ತಂಡವನ್ನು ಇಲ್ಲಿಗೆ ಕಳುಹಿಸಿವುದಾಗಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಭರವಸೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿ ಭೇಟಿ ವೇಳೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ರಾಜ್ಯದಲ್ಲಿನ ಹೆದ್ದಾರಿಗಳ ಸಮಸ್ಯೆ ಕುರಿತು ಚರ್ಚಿಸಿದರು. ಈ ಸಂಬಂಧ ಪ್ರಕ್ರಿಯಿಸಿದ ಕೇಂದ್ರ ಸಚಿವರು ಹೆದ್ದಾರಿ ವೀಕ್ಷಣೆಗೆ ಕಳುಹಿಸಿ ಅಲ್ಲಿನ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ.

ಬೆಂಗಳೂರು- ಮೈಸೂರು ಪ್ರವೇಶ ನಿಯಂತ್ರಣ ಹೆದ್ದಾರಿಯಲ್ಲಿ ನಿರಂತರವಾಗಿ ಅಪಘಾತಗಳ ನಡೆಯುತ್ತಲೇ ಇದೆ. ಅವೈಜ್ಞಾನಿಕ ಹೆದ್ದಾರಿ ಕಾಮಕಾರಿಗಳ ಬಗ್ಗೆಯು ಸಿದ್ದರಾಮಯ್ಯ ಚರ್ಚಿಸಿದರು. ಯಾವ ಕ್ರಮ ಕೈಗೊಳ್ಳಬಹುದು ಎಂಬುದರ ಕುರಿತು ಅವರು ಗಮನ ಸೆಳೆದರು.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ನಲ್ಲಿ ಬೈಪಾಸ್‌ಗಳ ಪ್ರವೇಶ ಹಾಗೂ ನಿರ್ಗಮನಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಇನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಬದಿಯ ಅಗತ್ಯ ಸೌಕರ್ಯಗಳನ್ನು ಒದಗಿಸಬೇಕು ಎಂದು ಕೋರಿದರು.
ಇನ್ನೂ ಸಕಲೇಶಪುರದಿಂದ ಧರ್ಮಸ್ಥಳ, ಮಂಗಳೂರು ತಲುಪುವ ಶಿರಾಡಿ ಘಾಟ್‌ನಲ್ಲಿ ಸುರಂಗ ಮಾರ್ಗ ನಿರ್ಮಾಣ ಹಾಗೂ ಹೆದ್ದಾರಿಗಳಲ್ಲಿ ಅಪಘಾತ ತಡೆಗೆ ಕ್ರಮಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು. ಹೆದ್ದಾರಿಗಳಲ್ಲಿನ ಲೋಪ ಸರಿಪಡಿಸಲು ಅಧಿಕಾರಿಗಳನ್ನು ಕಳುಹಿಸುವುದಾಗಿ ಕೇಂದ್ರ ಸಚಿವರು ಹೇಳಿದರು.

ವಿವಿಧ ವಿಚಾರವಾಗಿ ಮುನ್ನೆಲೆಗೆ ಬಂದ ಎಕ್ಸ್‌ಪ್ರೆಸ್
ಇತ್ತೀಚೆಗೆ ಸಂಸತ್ ಅಧಿವೇಶನದಲ್ಲಿ ಕರ್ನಾಟಕ ಸಂಸದರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿತಿನ್ ಗಡ್ಕರಿ ಅವರು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ನಲ್ಲಿನ ಸಾವು ನೋವುಗಳ ಮಾಹಿತಿ ನೀಡಿದ್ದರು. ಇತ್ತ ಪೊಲೀಸರು ಅಪಘಾತಗಳ ತಡೆಗೆ ಹೊಸ ತಂತ್ರಜ್ಞಾನ ಅಳವಡಿಕೆ, ಬೈಕ್, ದ್ವಿಚಕ್ರ ಮತ್ತು ತ್ರಿಚಕ್ರವಾಹನಗಳನ್ನು ಎಕ್ಸ್‌ಪ್ರೆಸ್ ವೇನಲ್ಲಿ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದಾರೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ದಂಡ ವಸೂಲಾತಿಯ ಕ್ರಮ ಜಾರಿಗೆ ತಂದಿದ್ದಾರೆ.
ಇನ್ನೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)ವು ಬೆಂಗಳೂರು- ಮೈಸೂರು ಹೆದ್ದಾರಿ ರಸ್ತೆ ಇದು ಎಕ್ಸ್‌ಪ್ರೆಸ್ ವೇ ಅಲ್ಲ, ಇದು ಪ್ರವೇಶ ನಿಯಂತ್ರಣ ಹೆದ್ದಾರಿ ಎಂದು ತಿಳಿಸಿದೆ. ಅವೆರಡಕ್ಕೂ ಇರುವ ವ್ಯತ್ಯಾಸ ಕುರಿತು ವಿವರಿಸಿದೆ. ಏನೇಯಾದರೂ ಈ ಹೆದ್ದಾರಿಯಲ್ಲಿ ಅತೀ ಕಡಿಮೆ ಅವಧಿಯಲ್ಲಿ ಅಧಿಕ ಅಪಘಾತ ಮತ್ತು ಜೀವ ಹಾನಿಗಳು ಸಂಭವಿಸಿದೆ. ಆದಷ್ಟು ಶೀಘ್ರವೇ ಕೇಂದ್ರದ ಅಧಿಕಾರಿಗಳ ತಂಡ ಬಂದು ಹೆದ್ದಾರಿಗಳಲ್ಲಿನ ಲೋಪ ಸರಿಪಡಿಸಿದರೆ ಸಾಕು ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ರಸ್ತೆ-ಹೆದ್ದಾರಿಗಳಿಗೆ ಅನುದಾನ ಹೆಚ್ಚಳಕ್ಕೆ ಜಾರಕಿಹೊಳಿ ಮನವಿ
ಸಿಎಂ ಸಿದ್ದರಾಮಯ್ಯನವರು ಕೇಂದ್ರ ಸಚಿವರ ಬೇಟಿ ವೇಳೆ ಉಪಸ್ಥಿತರಿದ್ದ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕೇಂದ್ರ ರಸ್ತೆ ಮೂಲಸೌಕರ್ಯ ನಿಧಿಗಳ (CRIF) ಮುಖೇನ ರೂ.1,000 ಕೋಟಿ ಅನುದಾನ ಬಿಡುಗಡೆ ಮಾಡಲು ಅವರು ಮನವಿ ಮಾಡಿದರು.
ರಾಜ್ಯದ ರಸ್ತೆಗಳು, ಜಿಲ್ಲೆಗಳ ಮುಖ್ಯ ರಸ್ತೆಗಳ ನಿರ್ವಹಣೆ ಮತ್ತು ದುರಸ್ಥಿಗೆ ನೀಡುವ ಅನುದಾನವನ್ನು 50 ಕೋಟಿ ರೂ.ಗೆ ಹೆಚ್ಚಳ ಮಾಡಬೇಕು. ಪ್ರವಾಹ ಹಾನಿ ದುರಸ್ತಿಗಾಗಿ ರೂಪಾಯಿ 250 ಕೋಟಿ ಅನುದಾನ ನೀಡುವಂತೆ ಅವರು ಮನವಿ ಮಾಡಿದ್ದಲ್ಲದೇ, ರಾಜ್ಯದ ಸಹಾಯಕ್ಕೆ ನಿತಿನ್ ಗಡ್ಕರಿ ಅವರು ಬರಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications