'ನಿಪುಣ ಕರ್ನಾಟಕ': ಕರ್ನಾಟಕ ಸರ್ಕಾರದ ಈ ಹೊಸ ಯೋಜನೆಯ ಸಂಪೂರ್ಣ ವಿವರ ತಿಳಿಯಿರಿ
ಬೆಂಗಳೂರು, ಡಿಸೆಂಬರ್ 12: ರಾಜ್ಯದಲ್ಲಿನ ಯುವ ಪ್ರತಿಭೆಗಳ ಕೌಶಲ್ಯವನ್ನು ವೃದ್ಧಿಸುವ ಉದ್ದೇಶದಿಂದ ರಾಜ್ಯ ಸರ್ಕಾರ 'ನಿಪುಣ ಕರ್ನಾಟಕ' ಯೋಜನೆಯನ್ನು ಪರಿಚಯಿಸುತ್ತಿದೆ. ಈ ಹೊಸ ಯೋಜನೆಯ ಬಗ್ಗೆ ಯುವ ಜನತೆ ತಿಳಿದುಕೊಳ್ಳಲೇಬೇಕಾಗಿದೆ. ಹೀಗಾಗಿ ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಸುದೀರ್ಘವಾಗಿ ವಿವರಿಸಿದ್ದಾರೆ.
'ನಿಪುಣ ಕರ್ನಾಟಕ' ಇದು ರಾಜ್ಯದ ಯುವ ಪ್ರತಿಭೆಗಳ ಕೌಶಲ್ಯವನ್ನು ವೃದ್ಧಿಸುವ ಮಹಾ ಯೋಜನೆ. ಪ್ರತಿಭೆಗೆ ಅವಕಾಶದ ನೀರೆರೆದಾಗ ಕ್ರಿಯಾಶೀಲತೆ ಹೊರಹೊಮ್ಮುತ್ತದೆ. ₹100 ಕೋಟಿ ಆರಂಭಿಕ ಹೂಡಿಕೆಯೊಂದಿಗೆ ಆರಂಭಿಸಲಾದ 'ನಿಪುಣ ಕರ್ನಾಟಕ' ಯೋಜನೆಯು ಕೇವಲ ಕೌಶಲ್ಯ ಯೋಜನೆಯಲ್ಲ. ಬದಲಾಗಿ ಆಧುನಿಕ ತಂತ್ರಜ್ಞಾನಕ್ಕೆ ನಮ್ಮ ಯುವಕರನ್ನು ಸಜ್ಜುಗೊಳಿಸುವಲ್ಲಿನ ನಮ್ಮ ಬದ್ಧತೆಯ ಪ್ರತೀಕವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಮೈಕ್ರೋಸಾಫ್ಟ್, ಐಬಿಎಮ್ (IBM), ಎನ್‌ವಿಐಡಿಐಎ (NVIDIA), ಆ್ಯಕ್ಸೆಂಚರ್ (Accenture), ಇನ್ಫೋಸಿಸ್ (Infosys), ಮತ್ತು (Wipro) ದಂತಹ ಜಾಗತಿಕ ತಂತ್ರಜ್ಞ ದೈತ್ಯ ಸಂಸ್ಥೆಗಳು ಒಂದು ವರ್ಷದಲ್ಲಿ 1 ಲಕ್ಷ ವಿದ್ಯಾರ್ಥಿಗಳಿಗೆ ಕೌಶಲ್ಯದ ಜೊತೆಗೆ ವಿಶೇಷ ತರಬೇತಿ ನೀಡಲು ಈ ಯೋಜನೆಯೊಂದಿಗೆ ಪಾಲುದಾರರಾಗಿದ್ದಾರೆ. AI ಎಐನಿಂದ ಬ್ಲಾಕ್‌ಚೈನ್‌ವರೆಗೆ, ಸೈಬರ್ ಸೆಕ್ಯುರಿಟಿಯಿಂದ ಕ್ವಾಂಟಮ್ ಕಂಪ್ಯೂಟಿಂಗ್‌ವರೆಗೆ ತರಬೇತಿಯು ತಂತ್ರಜ್ಞಾನ ಉದ್ಯಮದ ಅಗತ್ಯಗಳಿಗೆ ಅನುಗುಣವಾಗಿರುತ್ತದೆ.
ಆದರೆ 'ನಿಪುಣ' ಯೋಜನೆಯ ವಿಶೇಷತೆಗಳೇನು ಗೊತ್ತೇ? ಎಲ್ಲರನ್ನೂ ಒಳಗೊಳ್ಳುವಿಕೆ. ಗ್ರಾಮೀಣ ಪ್ರದೇಶಗಳಲ್ಲಿ ಸುಧಾರಿತ ಕೇಂದ್ರಗಳು, ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಉದ್ಯೋಗಿಗಳಿಗೆ ಮರಳುವ ಮಹಿಳೆಯರನ್ನು ಕೇಂದ್ರೀಕರಿಸಿದ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ. ಪ್ರಗತಿಯು ಎಲ್ಲರನ್ನೂ ಒಳಗೊಳ್ಳುವಂತಿರಬೇಕು ಮತ್ತು ಎಲ್ಲರಿಗೂ ತಲುಪುವಂತಿರಬೇಕು ಎಂದು ಪ್ರಿಯಾಂಕ್ ಖರ್ಗೆ ಯೋಜನೆ ಬಗ್ಗೆ ವಿವರಿಸಿದ್ದಾರೆ.

KEONICS ಕೆಇಒಎನ್‌ಐಸಿಎಸ್ ಮತ್ತು KDEM ಕೆಡಿಇಎಮ್ ಮೂಲಕ ಪದವೀಧರರಿಗೆ ಕೇವಲ ಉದ್ಯೋಗಗಳನ್ನು ದೊರಕಿಸಿಕೊಡುವುದಷ್ಟೇ ಅಲ್ಲದೇ, ಅವರು ಕರ್ನಾಟಕದ ಭವಿಷ್ಯಕ್ಕೆ ಕೊಡುಗೆ ನೀಡುವಂತಹ ವೃತ್ತಿಜೀವನವನ್ನು ರೂಪಿಸಿಕೊಳ್ಳುವುದನ್ನು ಖಚಿತಪಡಿಸಲಾಗುತ್ತದೆ. ಈ ನಿಪುಣ ಯೋಜನೆಯು ನಮ್ಮ ಕರ್ನಾಟಕದ ಭವಿಷ್ಯ ರೂಪಿಸುವುದಕ್ಕಾಗಿ ಹಾಗೂ ನಮ್ಮ ಯುವಜನತೆಯನ್ನು ಕೌಶಲ್ಯಯುತ ಮಾನವ ಸಂಪನ್ಮೂಲವನ್ನಾಗಿ ರೂಪಿಸಲು ಮಾಡುತ್ತಿರುವ ಹೂಡಿಕೆ, ಈ ಯೋಜನೆಯು ಯುವಕರನ್ನು ಸಬಲೀಕರಿಸಿ, ಆವಿಷ್ಕಾರದ ಚಿಂತನೆಯೆಡೆಗೆ ಕೊಂಡೊಯ್ಯುತ್ತದೆ ಎನ್ನುವ ಭರಸವೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications