HD kumaraswamy: ಸದ್ಯಕ್ಕೆ ರಾಜಕೀಯದ ಸಹವಾಸ ಹೋಗಬೇಡ: ಪುತ್ರನಿಗೆ ಹೆಚ್ ಡಿ ಕುಮಾರಸ್ವಾಮಿ ಕೊಟ್ಟ ಸಲಹೆ ಏನು?
ಮಂಡ್ಯ, ಆಗಸ್ಟ್ 28: ಸದ್ಯಕ್ಕೆ ರಾಜಕೀಯದ ಸಹವಾರಕ್ಕೆ ಹೋಗಬೇಡ. ನಿನಗೆ ಭಗವಂತ ಕಲೆ ಕೊಟ್ಟಿದ್ದಾನೆ ಸಿನಿಮಾ ಮಾಡು ಎಂದು ನಿಖಿಲ್ ಗೆ ಸಲಹೆ ಕೊಟ್ಟಿದ್ದೇನೆ. ಮುಂದಿನ ಐದು ವರ್ಷ ನಿಖಿಲ್ ಯಾವುದೇ ಚುನಾವಣೆಗೆ ಸ್ಪರ್ಧೆ ಮಾಡಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಈ ಕುರಿತು ಮಂಡ್ಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ದಯವಿಟ್ಟು ರಾಜಕೀಯ ಜಂಗುಳಿ ಬಿಟ್ಟು ಕಲಾವಿದನಾಗಿ ಬದುಕು ರೂಪಿಸಿಕೊಳ್ಳಲು ಹೇಳಿದ್ದೇನೆ. ನಿಖಿಲ್ ಚುನಾವಣೆಗೆ ನಿಲ್ಲುವ ಪ್ರಶ್ನೆ ಇಲ್ಲ. ಈಗಾಗಲೇ ಮೂರು ಚಿತ್ರಗಳನ್ನು ನಿರ್ಮಾಣ ಮಾಡಲು ಕೆಲವು ಸಂಸ್ಥೆಗಳು ಮುಂದೆ ಬಂದಿವೆ. ಸಿನಿಮಾ ಮಾಡಲು ನಿಖಿಲ್ ಮುಖ ಮಾಡಿದ್ದಾರೆ ಎಂದು ಹೇಳಿದರು.

ಈಗಾಗಲೇ ಎರಡು ಬಾರಿ ನಿಖಿಲ್ ಸೋತಿದ್ದಾನೆ. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಿಲ್ಲುವಾಗಲೂ ಬೇಡಾ ಅಂದಿದ್ದೆ. ನಿಖಿಲ್ ಮಂಡ್ಯದಲ್ಲಿ ನಿಲ್ಲಲು ತಯಾರು ಇರಲಿಲ್ಲ. ಶಾಸಕರು ಹಾಗೂ ಕಾರ್ಯಕರ್ತರ ಒತ್ತಡದಿಂದ ಚುನಾವಣೆಗೆ ತಲೆ ಕೊಟ್ಟ. ಸೋಲು ಗೆಲುವು ಇರುತ್ತೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ದೇವೇಗೌಡರು, ನಾನು ಎಲ್ಲರೂ ಸೋತಿದ್ದೇವೆ, ಜನಾಭಿಪ್ರಾಯ ಏನು ಇದೆ ಅದಕ್ಕೆ ತಲೆಬಾಗಬೇಕು. ನಾನು ಒತ್ತಡಗಳ ಮೇಲೆ ಚುನಾವಣೆ ಮಾಡಲ್ಲ ಎಂದು ತಿಳಿಸಿದರು.
ಸದ್ಯಕ್ಕೆ ನಿಖಿಲ್‌ಗೆ ರಾಜಕೀಯ ಬೇಡಾ ಅಂತಾ ಹೇಳಿದ್ದೇನೆ. ಮುಂದೆ ನೋಡೋಣಾ, ಅವನ ಹಣೆಯಲ್ಲಿ ಬರೆದಿದ್ರೆ ನಾನು ತಪ್ಪಿಸೋಕೆ ಆಗಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನಿನ್ನ ಜೀವನ ರೂಪಿಸಿಕೋ ಎಂದು ನಿಖಿಲ್‌ಗೆ ಹೇಳಿದ್ದೇನೆ. ಭಗವಂತ ನಿಖಿಲ್‌ಗೆ ಒಂದು ಕಲೆ ಕೊಟ್ಟಿದ್ದಾನೆ, ಆ ಕಲೆಯಲ್ಲಿ ಮುಂದುವರೆಯಪ್ಪಾ ಅಂತಾ ಹೇಳಿದ್ದೇನೆ. ಯಾವುದೇ ಕಾರಣಕ್ಕೂ ಮುಂದಿನ ಐದು ವರ್ಷ ಚುನಾವಣೆಗೆ ತರಲ್ಲ. ನಿಖಿಲ್ ಕುತಂತ್ರಕ್ಕೆ ಬಲಿಯಾಗಿದ್ದಾನೆ, ಇದೀಗ ಅದೇ ಜನ ಪಶ್ಚಾತ್ತಾಪ ಪಡುವಂತೆ ಆಗುದೆ. ಇದೇ ರಾಮನಗರದ ಜನರು ಎಲ್ಲಾ ನೋಡ್ತಾ ಇದ್ದಾರೆ. ರಾಮನಗರವನ್ನು ಹೇಗೆ ಉದ್ಧಾರ ಮಾಡ್ತಾ ಇದಾರೆ ಅಂತಾ ನೋಡ್ತಾ ಇದೀನಿ ಎಂದು ಹೇಳಿದರು.
ಇನ್ನೂ ಲೋಕಸಭಾ ಚುನಾವಣೆಗೆ 28 ಕ್ಷೇತ್ರದಲ್ಲೂ ಅಭ್ಯರ್ಥಿ ಹಾಕಬೇಕು ಎಂಬ ಅಭಿಪ್ರಾಯ ಇದೆ. ನಾನು ಮೈತ್ರಿ ಮಾಡಿಕೊಂಡರೆ, ಮೈತ್ರಿ ಮಾಡಿಕೊಳ್ಳದ ಕ್ಷೇತ್ರದಲ್ಲಿ ಕಾರ್ಯಕರ್ತರು ಏನು ಮಾಡ್ತಾರೆ. ಕಳೆದ ಬಾರಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಏನು ಅನುಕೂಲ ಆಯ್ತು. ಕಾಂಗ್ರೆಸ್‌ನಿಂದ ಕುತ್ತಿಗೆ ಕುಯ್ಯುವ ಕೆಲಸ ಆಯ್ತು. ಮೈತ್ರಿಯಿಂದ ನನ್ನ ಕಾರ್ಯಕರ್ತರು ಬಲಿಪಶುಗಳು ಆಗಬಾರದು. ಮೈತ್ರಿ ಆಗದೇ ಇದ್ದಿದ್ರೆ ಮಂಡ್ಯದಲ್ಲಿ ಸೋಲುವ ಪ್ರಶ್ನೆ ಇರ್ತಾ ಇರಲಿಲ್ಲ ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿದರು.
ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಚುನಾವಣೆ ಎದುರಿಸಬೇಕು ಎಂದು ಕೊಂಡಿದ್ದೇವೆ. 28 ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಅಂತಾ ನಾನು ಹೇಳಲ್ಲ. ನಾಲ್ಕೈದು ಕ್ಷೇತ್ರಗಳಲ್ಲಿ ನಾವು ಗೆಲ್ಲಿವ ವಿಶ್ವಾಸ ಇದೆ. 28 ಕ್ಷೇತ್ರಗಳಲ್ಲಿ ಕಾರ್ಯಕರ್ತರನ್ನು ಉಳಿಸಿಕೊಳ್ಳಲು ಕೆಲಸ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
ಜನ ನಮ್ಮನ್ನು ಕೈಬಿಟ್ಟಿಲ್ಲ. ಜೆಡಿಎಸ್ ಮುಗಿದಿಲ್ಲ, ಬದುಕಿದೆ. ದುರಹಂಕಾರದ ಮಾತು ಬಿಟ್ಟು ಪ್ರಾಮಾಣಿಕವಾಗಿ ನಡೆದುಕೊಳ್ಳಿ. ನಿಮ್ಮ ಕಾಲದಲ್ಲಿ ವರ್ಗಾವಣೆ ಆಗಿಲ್ವಾ ಅಂತಾರೆ. ಈಗೀನ ವರ್ಗಾವಣೆಗೂ, ನನ್ನ ಕಾಲದ ವರ್ಗಾವಣೆಗೂ ವ್ಯತ್ಯಾಸ ಇದೆ. 2018ರಲ್ಲಿ ನಾನು ಸಿಎಂ ಆದಾಗಾ ಬಿಡಿಎ ಕಮಿಷನರ್ ಆಗಲು 15 ಕೋಟಿ ರೂ. ಕೊಡಲು ಬಂದರು. ನನಗೆ 15 ಕೋಟಿ ರೂ. ಕೊಡುವ ಅಧಿಕಾರಿ ಬಿಡಿಎಗೆ ಏನು ಕೆಲಸ ಮಾಡಲು ಸಾಧ್ಯ ಬೇಡ ಎಂದಿದ್ದೆ. ನನ್ನ ಸರ್ಕಾರದ ತೆಗೆದು ಬಿಜೆಪಿ ಬಂದ ಬಳಿಕ ಅದೇ ಅಧಿಕಾರಿಗೆ ಪೋಸ್ಟ್ ಕೊಟ್ಟರು ಎಂದು ಹೇಳಿದರು.
ಪುಟ್ಟರಾಜು ಸದ್ಯ ನಮ್ಮ ಪಕ್ಷದಲ್ಲಿಯೇ ಇದ್ದಾರೆ ಎಂದು ಹೇಳಿದ ಅವರು, ಇವತ್ತು ಯಾವದಕ್ಕೂ ನಾನು ಅಂಜಲ್ಲ. ಇದಕ್ಕಿಂತ ಕಷ್ಟದ ದಿನಗಳನ್ನು ನೋಡಿದ್ದೇನೆ. ಮೊದಲು ರೈತರ ಕಷ್ಟಗಳನ್ನು ಪರಿಹರಿಸಿ. 134 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ ಎಂದಿದ್ದೀರಿ. ರೈತರಿಗೆ ಬರ ಪರಿಹಾರ ಸಿಗಲ್ಲ. ಬರದ ಹೆಸರಲ್ಲೂ ದುಡ್ಡು ಹೊಡೆಯುವ ಕಾರ್ಯಕ್ರಮ ಆರಂಭವಾಗುತ್ತದೆ. ಅದು ಆಗದ ರೀತಿ ಎಚ್ಚರಿಕೆ ವಹಿಸಿ ಕೆಲಸ ಮಾಡಿ ಎಂದು ಹೇಳಿದರು.
ಪಕ್ಷ ನಿಷ್ಠೆ ಯಾರಲ್ಲೂ ಉಳಿದಿಲ್ಲ. ವೈಯಕ್ತಿಕ ಸ್ಥಾನಮಾನಕ್ಕಾಗಿ ಪಕ್ಷಾಂತರ ಮಾಡ್ತಾರೆ. ಹಾಗಾಗಿ ಆ ವಿಚಾರಗಳಿಗೆ ನಾನು ಮಹತ್ವ ಕೊಡಲ್ಲ, ತಲೆ ಕೆಡಿಸಿಕೊಳ್ಳಲ್ಲ. ಮಂಡ್ಯದಲ್ಲಿ ಕೆಲವರು ಹೋಗ್ತಾರೆ ಅಂತಾರೆ. ಈ ಬಗ್ಗೆ ಅವರನ್ನೇ ಕೇಳಬೇಕು, ನಾನು ಯಾರ ಮೇಲೂ ಅನುಮಾನ ಪಡಲ್ಲ. ಪುಟ್ಟರಾಜು ಸದ್ಯ ನಮ್ಮ ಪಕ್ಷದಲ್ಲಿದ್ದಾರೆ. ಪಕ್ಷಾಂತರ ಬಗ್ಗೆ ಅವರನ್ನೇ ಕೇಳಬೇಕು. ಈ ಸುದ್ದಿ ಹೇಳಿದವರು, ಸುದ್ದಿಯಲ್ಲಿರುವವರು ಸ್ಪಷ್ಟನೆ ನೀಡಬೇಕು ಎಂದು ಹೇಳಿದರು.












Click it and Unblock the Notifications