JDS-BJP Alliance: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿಗೆ ಅಪಸ್ವರ: ಸುಮಲತಾಗೆ ಟಕ್ಕರ್ ಕೊಟ್ಟ ನಿಖಿಲ್ ಕುಮಾರಸ್ವಾಮಿ
ಮಂಡ್ಯ: ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು ಮಾಜಿ ಸಂಸದೆ ಸುಮಲತಾ ಅಂಬರೀಶ್ ಹಾಗೂ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ವಿರೋಧ ವ್ಯಕ್ತಪಡಿಸಿದ್ದ ಬೆನ್ನಲ್ಲೇ, ಬಿಜೆಪಿ ನಾಯಕರಿಗೆ ಟಕ್ಕರ್ ನೀಡಿರುವ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಮೈತ್ರಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಮಂಡ್ಯದ ಹನಕೆರೆಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು, ನಮ್ಮ ಬಿಜೆಪಿ ಮೈತ್ರಿ ಗಟ್ಟಿಯಾಗಿದೆ. ರಾಷ್ಟ್ರಮಟ್ಟದ ನಾಯಕರ ಜೊತೆ ನಮ್ಮ ಮೈತ್ರಿ ಆಗಿದೆ. ರಾಜ್ಯದಲ್ಲಿ ನಮ್ಮ ಬಿಜೆಪಿ ಮೈತ್ರಿಗೆ ಯಾವುದೇ ಅಡ್ಡಿ ಆತಂಕ ಇಲ್ಲ ಮೈತ್ರಿ ಗಟ್ಟಿಯಾಗಿದೆ. ಇಲ್ಲಿನ ಕೆಲವರು ತಮ್ಮ ರಾಜಕೀಯ ಅಸ್ತಿತ್ವ ಕಳೆದುಕೊಳ್ಳೋ ಭೀತಿಯಲ್ಲಿ ಮೈತ್ರಿ ಬೇಡ ಅಂತಿದ್ದಾರೆ. ನಾವು ನೀವು ಮೈತ್ರಿ ಬಗ್ಗೆ ಚರ್ಚೆ ಮಾಡಿದ್ರೆ ಏನು ಸಿಗುವುದಿಲ್ಲ ಎಂದು ಹೇಳಿದರು.

ಮಂಡ್ಯ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಅವರ ಸ್ಥಾನಕ್ಕೆ ಶೋಭೆ ತರುವಂತ ಮಾತಗಳನ್ನಾಡಲಿ. ಅವರು ರಾಜಕೀಯವಾಗಿ ಬೆಳೆದು ಬಂದ ದಾರಿಯನ್ನ ಮರೆತಿದ್ದಾರೆ. ಆ ದಾರಿಯನ್ನ ಮರೆತಿರುವವರು ಜೀವನದಲ್ಲಿ ಏಳಿಗೆ ಕಾಣುವುದಿಲ್ಲ ಎಂದು ಸಚಿವ ಚಲುವರಾಯಸ್ವಾಮಿಗೆ ನಿಖಿಲ್ ಕುಮಾರಸ್ವಾಮಿ ಅವರು ತಿರುಗೇಟು ನೀಡಿದರು. ನಮಗೂ ನಾಲಿಗೆಯಿದೆ ಅವರ ತರ ಹರಿಬಿಡುವುದಿಲ್ಲ. ಸಮಯ ಬಂದಾಗ ಜಿಲ್ಲೆಯ ಜನ ಇದಕ್ಕೆ ಉತ್ತರ ಕೊಡ್ತಾರೆ. ಅವರು ಹೇಳಿಕೆ ಕೊಡುವುದಕ್ಕಿಂತ ಮುಂಚೆ ಯೋಚನೆ ಮಾಡಿ ಮಾತನಾಡಲಿ ಎಂದು ನಿಖಿಲ್ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಅನ್ನು ಓಡಿಸುವಂತ ಶಕ್ತಿ ಇರುವುದು ಜಿಲ್ಲೆಯ ಜನತೆಗೆ. ಯಾರನ್ನ ಜಿಲ್ಲೆಯಲ್ಲಿ ಉಳಿಸಿಕೊಬೇಕು ಯಾರನ್ನ ಕಳಿಸಬೇಕು ಎಂದು ಜಿಲ್ಲೆಯ ಜನ ತೀರ್ಮಾನಿಸುತ್ತಾರೆ. ಕಳೆದ ಎರಡೂವರೆ ವರ್ಷದ ರಾಜ್ಯ ಸರ್ಕಾರದ ಆಡಳಿತ ವೈಖರಿಯನ್ನು ರಾಜ್ಯದ ಜನ ನೋಡಿದ್ದಾರೆ. ಇವತ್ತು ಗಲ್ಲಿ ಗಲ್ಲಿ ಗಲ್ಲಿಯಲ್ಲಿ ರಾಜ್ಯ ಸರ್ಕಾರವನ್ನು ಬಾಯಿಗೆ ಬಂದಂಗೆ ಬೈತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮದ್ದೂರು ನಗರಸಭೆ ವ್ಯಾಪ್ತಿಗೆ ಗ್ರಾಪಂಗಳ ಸೇರ್ಪಡೆ ಕೈ ಬಿಡುವಂತೆ ಗ್ರಾಮಸ್ಥರು ಹಾಗೂ ರೈತರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಗ್ರಾಪಂಗಳ ಸೇರ್ಪಡೆ ಕೈ ಬಿಡುವಂತೆ ನಿಖಿಲ್ ಕುಮಾರಸ್ವಾಮಿ ಆಗ್ರಹ ಮಾಡಿದರು. ನಗರಸಭೆ ಸೇರ್ಪಡೆ ಕೈಬಿಡಬೇಕು. ಈ ಹೋರಾಟಕ್ಕೆ ನಮ್ಮ ಬೆಂಬಲವಿದೆ. ನಾವು ಗ್ರಾಮಸ್ಥರ ಜೊತೆ ಇರುತ್ತೇವೆ. ಜಯ ಸಿಕ್ಕುವವರೆಗೆ ಹೋರಾಟ ಮಾಡುತ್ತೇವೆ. ಎಂದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ನಿಖಿಲ್ ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ರೈತರರನ್ನು ಒಕ್ಕಲೆಬ್ಬಿಸುವುದನ್ನ ಬಿಟ್ಟು ರೈತರ ಅಭಿವೃದ್ಧಿ ಮಾಡಬೇಕು, ಹಳ್ಳಿಯ ಸೊಗಡನ್ನು ಉಳಿಸಬೇಕು, ವಾಸ್ತವ ಅಂಶಗಳನ್ನು ಅರಿತು ಕೆಲಸ ಮಾಡಬೇಕು. ಈ ವಿಷಯವನ್ನು ಅಧಿವೇಶನದಲ್ಲಿ ಚರ್ಚೆ ಮಾಡಿ ಈ ಪ್ರತಿಭಟನೆಯನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕೆಂದು ಮೈತ್ರಿ ಪಕ್ಷದ ಜತೆ ಮಾತನಾಡಿದ್ದೇನೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದರು.
ಈ ವಿಷಯವನ್ನು ಕೇಂದ್ರ ಸಚಿವರಾದ ಕುಮಾರಣ್ಣ ಅವರೊಂದಿಗೆ ಗಂಭೀರವಾಗಿ ಚರ್ಚಿಸುತ್ತೇನೆ. ಈ ಹೋರಾಟವನ್ನ ಅರ್ಧ ದಾರಿಯಲಿ ಬಿಟ್ಟು ಹೋಗುವ ಕೆಲಸ ಮಾಡುವುದಿಲ್ಲ, ಯಾವ ರೀತಿ ಪರಿಹಾರ ಮಾಡಬೇಕು ಎಂಬುದನ್ನು ಚರ್ಚಿಸಿ, ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಗ್ರಾಮಸ್ಥರಿಗೆ ಧೈರ್ಯ ಹೇಳಿದರು.












Click it and Unblock the Notifications