ಅಧಿಕೃತ ಘೋಷಣೆಗೂ ಮುನ್ನ ಕಾಂಗ್ರೆಸ್ ನಾಯಕನಿಗೆ MLC ಪಟ್ಟ, ಸಂಭ್ರಮಾಚರಣೆ!
ಕಾಂಗ್ರೆಸ್ ಪಕ್ಷವು ವಿಧಾನ ಪರಿಷತ್‌ಗೆ ನಾಲ್ಕು ಮಂದಿ ಸದಸ್ಯರನ್ನು ನಾಮನಿರ್ದೇಶನ ಮಾಡುವ ತಲೆನೋವಿನಲ್ಲಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ದೆಹಲಿಗೂ ತೆರಳಿ ಹೈಕಮಾಂಡ್ ನಾಯಕರ ಬಳಿ ಚರ್ಚಿಸಿದ್ದಾರೆ. ಈ ಸಮುದಾಯದ ಇದೇ ನಾಯಕರಿಗೆ ಎಂಎಲ್‌ಸಿ ಸ್ಥಾನ ಕೊಡಬೇಕು ಎಂದು ಇಬ್ಬರೂ ನಾಯಕರು ಬೇಡಿಕೆ ಇಟ್ಟಿದ್ದಾರೆ. ಇದರ ನಡುವೆ ಕಾಂಗ್ರೆಸ್ ನಾಯಕರೊಬ್ಬರನ್ನು ಆಗಲೇ ಎಂಎಲ್‌ಸಿ ಎಂದು ಅಭಿನಂದನೆಗಳನ್ನು ಸಲ್ಲಿಸಲಾಗುತ್ತಿದೆ. ಆದರೆ, ಕಾಂಗ್ರೆಸ್ ಹೈಕಮಾಂಡ್ ಇನ್ನೂ ವಿಧಾನ ಪರಿಷತ್‌ಗೆ ಯಾರ ಹೆಸರನ್ನೂ ಅಂತಿಮಗೊಳಿಸಿ ಅಧಿಕೃತ ಘೋಷಣೆ ಮಾಡಿಲ್ಲ.
ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ನಿಕೇತ್ ರಾಜ್ ಮೌರ್ಯ ಅವರನ್ನ ಕಾಂಗ್ರೆಸ್ ಪಕ್ಷದ ಎಂಎಲ್‌ಸಿ ಎಂದು ಅಧಿಕೃತ ಘೋಷಣೆಗೂ ಮುನ್ನವೇ ಸಂಭ್ರಮಾಚರಣೆ ಮಾಡಲಾಗುತ್ತಿದೆ. ಸೋಶಿಯಲ್ ಮೀಡಿಯಾಗಳಲ್ಲಿ ನಿಕೇತ್ ರಾಜ್ ಮೌರ್ಯ ಅವರಿಗೆ ಅಭಿನಂದನೆಗಳು ಮಹಾಪೂರವೇ ಹರಿದಿದೆ. ಈಗಾಗಲೇ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ಹೈಕಮಾಂಡ್‌ಗೆ ಎಂಎಲ್‌ಸಿ ಅಭ್ಯರ್ಥಿಗಳ ಪಟ್ಟಿ ನೀಡಿದ್ದಾರೆ. ಇಬ್ಬರೂ ಒಮ್ಮತಕ್ಕೆ ಬಂದು ಅಂತಿಮ ಪಟ್ಟಿ ಕಳಿಸಿಕೊಡುವಂತೆ ಹೈಕಮಾಂಡ್ ಇಬ್ಬರೂ ನಾಯಕರಿಗೆ ತಿಳಿಸಿದೆ. ಇದರ ನಡುವೆಯೇ ರಾಜ್ಯ ಕಾಂಗ್ರೆಸ್‌ನಲ್ಲಿ ಈ ಬೆಳವಣಿಗೆ ನಡೆದಿದೆ.

ನಿಕೇತ್ ರಾಜ್ ಮೌರ್ಯ ಅವರನ್ನು ಬೆಂಬಲಿಗರು ಎಂಎಲ್‌ಸಿ ಎಂದು ನಿರ್ಧರಿಸಿ, ಸೋಶಿಯಲ್ ಮೀಡಿಯಾಗಳಲ್ಲಿ ಅಭಿನಂದನೆ ತಿಳಿಸುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ನಿಕೇತ್, ಪ್ರೀತಿಯ ಬಂಧುಗಳೇ, ತಮಗೆಲ್ಲರಿಗೂ ಕರ್ನಾಟಕ ವಿಧಾನಪರಿಷತ್ತಿಗೆ ಕಾಂಗ್ರೆಸ್ ಪಕ್ಷ ನಾಲ್ಕು ಜನರನ್ನ ನಾಮ ನಿರ್ದೇಶನ ಮಾಡಲು ಚರ್ಚೆ ನಡೆಸುತ್ತಿರುವುದು ತಿಳಿದೇ ಇದೆ. ನಾನು ಕೂಡ ಒಬ್ಬ ಆಕಾಂಕ್ಷಿ ಎಂಬುದು ಸತ್ಯ ಎಂದಿದ್ದಾರೆ.
ಆಗಲೇ ನಾನು ಎಂಎಲ್‌ಸಿಯಾಗಿ ಘೋಷಣೆಯಾಗಿದೆ ಎಂದು ಭಾವಿಸಿ ಇಡೀ ರಾಜ್ಯಾದ್ಯಂತ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ತಾವು ತಮ್ಮ ಸಂಭ್ರಮ ಹಾಗು ಹರ್ಷವನ್ನು ವ್ಯಕ್ತಪಡಿಸುತ್ತಿದ್ದೀರಿ. ಕನಿಷ್ಟ ಐದು ಸಾವಿರಕ್ಕೂ ಹೆಚ್ಚು ಕರೆಗಳು ಬಂದಿರಬಹುದು. ತಮ್ಮ ಪ್ರೀತಿಗೆ ಅಭಿಮಾನಕ್ಕೆ ನಾನು ಚಿರಋಣಿ. ಆದರೆ ಇನ್ನು ಅಧಿಕೃತವಾಗಿ ಯಾರ ಹೆಸರು ಘೋಷಣೆಯಾಗಿರದಿರುವುದರಿಂದ ತಾವುಗಳು ಸಂಯಮದಿಂದ ವರ್ತಿಸಬೇಕೆಂಬುದು ನನ್ನ ಪ್ರಾರ್ಥನೆ ಎಂದು ಮನವಿ ಮಾಡಿದ್ದಾರೆ.

ಪಕ್ಷದ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಸಾಹೇಬರು, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಸಾಹೇಬರು, ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಸಾಹೇಬರು, ಗೃಹ ಸಚಿವರಾದ ಜಿ.ಪರಮೇಶ್ವರ್ ಸಾಹೇಬರಂತಹ ಹಿರಿಯರು ಪಕ್ಷದ ಹಿತ್ರದೃಷ್ಟಿಯಿಂದ ಯಾರದೇ ಹೆಸರನ್ನು ಘೋಷಿಸುವವರೆಗೂ ತಾಳ್ಮೆಯಿಂದ ವರ್ತಿಸಬೇಕಾಗಿ ಕೋರುತ್ತೇನೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ದೆಹಲಿಗೆ ತೆರಳಿದ್ದ ಸಿಎಂ ಸಿದ್ದರಾಮಯ್ಯ ಅವರು ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿಯಾಗಿ ವಿಧಾನ ಪರಿಷತ್‌ಗೆ ಪ್ರಮುಖರ ಹೆಸರನ್ನು ಸೂಚಿಸಿ, ಇದೇ ಸಮುದಾಯದ ನಾಯಕರಿಗೆ ಆ ಸ್ಥಾನ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಮಲ್ಲಿಕಾರ್ಜುನ್ ಖರ್ಗೆ ಅವರೊಂದಿಗೆ ಚರ್ಚೆ ನಡೆಸಿ ನಾಮನಿರ್ದೇಶನ ಪ್ರಕ್ರಿಯೆ ಅಂತಿಮಗೊಳಿಸುವ ಬಗ್ಗೆಯೂ ಚರ್ಚೆ ನಡೆಸಿದ್ದು, ಈ ಸ್ಥಾನಕ್ಕೆ ಸಂಭಾವ್ಯರ ಪಟ್ಟಿಯನ್ನು ಕೂಡ ಖರ್ಗೆ ಅವರಿಗೆ ನೀಡಿದ್ದಾರಂತೆ. ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ನಾಮನಿರ್ದೇಶನ ಮಾಡುವಾಗ ಒಕ್ಕಲಿಗ, ಇತರ ಹಿಂದುಳಿದ ವರ್ಗಗಳು, ದಲಿತ ಸಮುದಾಯಕ್ಕೆ ಒತ್ತು ಕೊಡಬೇಕು ಎಂದು ಬೇಡಿಕೆ ಇಡಲಾಗಿದ್ದು, ಪಕ್ಷಕ್ಕಾಗಿ ದುಡಿಯುತ್ತಿರುವ ಕಾರ್ಯಕರ್ತರಿಗೆ ಈ ಸ್ಥಾನ ಸಿಗಬೇಕು ಎಂದು ಡಿಕೆ ಶಿವಕುಮಾರ್ ಕೂಡ ಅಭಿಪ್ರಾಯ ತಿಳಿಸಿದ್ದಾರೆ. ಆದರೆ, ಇಲ್ಲಿ ಘೋಷಣೆಗೂ ಮುನ್ನವೇ ಶುಭಾಶಯಗಳನ್ನು ಕೋರಲಾಗುತ್ತಿದೆ.












Click it and Unblock the Notifications