ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ವರ್ಷದ ವ್ಯಕ್ತಿಗೆ ಅಭಿನಂದನೆಗಳು

By Prasad
|
Google Oneindia Kannada News

ಬೆಂಗಳೂರು, ಡಿ. 31 : ಮುಖ್ಯಮಂತ್ರಿಯಿರಲಿ, ಶಾಸಕನಿರಲಿ, ಕೋಟ್ಯಾಧಿಪತಿಯಾಗಿರಲಿ, ಆ ವ್ಯಕ್ತಿ ಎಷ್ಟೇ ಪ್ರಭಾವಿತನಾಗಿರಲಿ, 'ಇವನೇ ಆ ಅಕ್ರಮ ಎಸಗುತ್ತಿರುವ ವ್ಯಕ್ತಿ' ಎಂದು ಯಾವುದೇ ಹೆದರಿಕೆಯಿಲ್ಲದೆ, ನಿರ್ಭಿಡೆಯಾಗಿ ಬೆರಳು ಮಾಡಿ ತೋರಿಸುವ ದಿಟ್ಟಿಗರಲ್ಲಿ ಅಗ್ರಸ್ಥಾನದಲ್ಲಿರುವ ಸಾಮಾಜಿಕ ಚಳವಳಿಗಾರ ಸಂಗಯ್ಯ ರಾಚಯ್ಯ ಹಿರೇಮಠ (69) ಅವರನ್ನು 'ಕರ್ನಾಟಕದ ವರ್ಷದ ವ್ಯಕ್ತಿ 2013' ಪ್ರಶಸ್ತಿಗೆ ಒನ್ಇಂಡಿಯಾ ಓದುಗರೇ ಆಯ್ಕೆ ಮಾಡಿದ್ದಾರೆ.

ಐಷಾರಾಮಿ ಜೀವನ ನಡೆಸುವಷ್ಟು ಭರ್ಜರಿ ಸಂಬಳ ನೀಡುತ್ತಿದ್ದ ಅಮೆರಿಕದಲ್ಲಿನ ಕೆಲಸವನ್ನು ತ್ಯಜಿಸಿ ಸಮಾಜಸೇವೆ ಮಾಡಬೇಕು, ಗ್ರಾಮೀಣ ಕರ್ನಾಟಕವನ್ನು ಉದ್ಧಾರ ಮಾಡಬೇಕೆಂಬ ಒಂದೇ ಉದ್ದೇಶದಿಂದ, ನಿಸ್ವಾರ್ಥದಿಂದ ದುಡಿಯುತ್ತಿರುವ 69 ವರ್ಷದ ಎಸ್ಆರ್ ಹಿರೇಮಠ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅತ್ಯಂತ ಅರ್ಹ ವ್ಯಕ್ತಿಯನ್ನು ಗುರುತಿಸಿ, ಹೆಚ್ಚು ಮತಗಳನ್ನು ನೀಡಿ ಆಯ್ಕೆ ಮಾಡಿದ ಒನ್ಇಂಡಿಯಾ ಕನ್ನಡ ಓದುಗ ಬಂಧುಗಳಿಗೆ ಅನಂತಾನಂತ ಧನ್ಯವಾದಗಳು. [ಎಸ್ಆರ್ ಹಿರೇಮಠ ಯಾರು? ಸಂಕ್ಷಿಪ್ತ ಪರಿಚಯ]


ಈ ವರ್ಷದ ವ್ಯಕ್ತಿ ಪ್ರಶಸ್ತಿಗೆ ಯಾರ್ಯಾರನ್ನು ಶಾರ್ಟ್ ಲಿಸ್ಟ್ ಮಾಡಬೇಕೆಂದು ಚಿಂತನೆ ನಡೆಸಿದಾಗ ನಮ್ಮ ಕಣ್ಣಿಗೆ ಬಿದ್ದವರು ಇವರುಗಳು : ವಿಜ್ಞಾನಿ ಪ್ರೊ. ಸಿಎನ್ಆರ್ ರಾವ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಹೈಕ ಹೋರಾಟಗಾರ ವೈಜನಾಥ ಪಾಟೀಲ, ವಿಜ್ಞಾನಿ ಡಾ. ಯುಆರ್ ರಾವ್, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಎಟಿಎಂ ಹಲ್ಲೆಗೊಳಗಾದ ಜ್ಯೋತಿ ಉದಯ್, ಜ್ಞಾನಪೀಠ ವಿಜೇತ ಚಂದ್ರಶೇಖರ ಕಂಬಾರ, ಭೂಗಳ್ಳರಿಗೆ ಸಿಂಹಸ್ವಪ್ನವಾಗಿರುವ ಎಸ್ಆರ್ ಹಿರೇಮಠ, ಸೌಜನ್ಯ ಪರ ಹೋರಾಟಕ್ಕಿಳಿದಿರುವ ಕೇಮಾರು ಸ್ವಾಮಿ, ಮಂಡ್ಯದ ಸಂಸದೆ ನಟಿ ರಮ್ಯಾ.

ಇವರಲ್ಲಿ ಇವರನ್ಯಾಕೆ ಆಯ್ಕೆ ಮಾಡಿದಿರಿ ಎಂದು ಕೆಲ ವ್ಯಕ್ತಿಗಳ ಬಗ್ಗೆ ಕೆಲ ಓದುಗರು ಪ್ರಶ್ನಿಸಿದರು. ಅವರ ಅಭಿಪ್ರಾಯಗಳಿಗೆ ನಾವು ಮನ್ನಣೆ ನೀಡುತ್ತೇವೆ. ಕೇವಲ ಸಾಧನೆಯೊಂದನ್ನೇ ಮಾನದಂಡವನ್ನಾಗಿ ಮಾಡುವುದಾದರೆ ಒಂದೇ ಕೈನ ಬೆರಳೆಣಿಕೆಯಷ್ಟು ವ್ಯಕ್ತಿಗಳು ಕೂಡ ಸಿಗದಿದ್ದ ಕಾರಣ ಈ ವರ್ಷ ಸಾಧನೆ ಮಾಡಿದವರ ಜೊತೆಗೆ ಹೆಚ್ಚು ಸುದ್ದಿಯಲ್ಲಿರುವ ವ್ಯಕ್ತಿಗಳನ್ನು ಕೂಡ ಆಯ್ಕೆ ಮಾಡಬೇಕಾಯಿತು. ಆ ಕಾರಣ, ಈ ವ್ಯಕ್ತಿಗಳನ್ನು ಹೊರತುಪಡಿಸಿ ನಿಮ್ಮ ಮನದಲ್ಲಿರುವ ಅರ್ಹ ವ್ಯಕ್ತಿ ಯಾರಾದರೂ ಇದ್ದರೆ ನಮ್ಮ ಗಮನಕ್ಕೆ ತನ್ನಿ ಎಂಬ ಕರೆಯನ್ನೂ ನೀಡಿದ್ದೆವು.

ಯಾಕೆ ರಮ್ಯಾ ಹೆಸರನ್ನು ಸೇರಿಸಿದ್ದೀರಿ? ಈ ಪಟ್ಟಿಯಲ್ಲಿ ಇರುವುದಕ್ಕೆ ಯಡಿಯೂರಪ್ಪನವರಿಗೆ ಇರುವ ಅರ್ಹತೆಯಾದರೂ ಏನು? ಎಟಿಎಂ ಹಲ್ಲೆಗೊಳಗಾಗಿರುವ ಜ್ಯೋತಿ ಉದಯ್ ಅವರ ಸಾಧನೆ ಏನು ಅಂತ ಗೊತ್ತಾಗಲಿಲ್ಲ? ಇಷ್ಟು ದಿನಗಳಲ್ಲಿ ಮುಖ್ಯಮಂತ್ರಿಯಾಗಿ 'ಶಾದಿಭಾಗ್ಯ' ಹೊರತಾಗಿ ಸಿದ್ದರಾಮಯ್ಯ ಮಾಡಿರುವ ಸಾಧನೆಯಾದರೂ ಏನು? ಮುಂತಾದ ಪ್ರಶ್ನೆಗಳ ಬಾಣಗಳನ್ನು ಪ್ರೀತಿಯ ಓದುಗರು ಕಾಮೆಂಟ್ ಸ್ಥಳದಲ್ಲಿ ಎಸೆದಿದ್ದಾರೆ. ಕೆಲ ಅಭಿಮಾನಿಗಳು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಹೆಸರನ್ನು ಕೂಡ ಸೂಚಿಸಿದ್ದರು. ಎಲ್ಲ ಕಾಮೆಂಟುಗಳನ್ನೂ ಲೇಖನದಲ್ಲಿ ಪ್ರಕಟಿಸಲಾಗಿದೆ. ಧನ್ಯವಾದಗಳು.

ಅತಿಹೆಚ್ಚು ಮತಗಳನ್ನು ಪಡೆದಿರುವ ಎಸ್ಆರ್ ಹಿರೇಮಠ ಅವರು ಮೊದಲ ಸ್ಥಾನದಲ್ಲಿದ್ದರೆ, 'ಭಾರತರತ್ನ' ಪ್ರೊ. ಸಿಎನ್ಆರ್ ರಾವ್ ಅವರು ಎರಡನೇ ಸ್ಥಾನ ಅಲಂಕರಿಸಿದ್ದಾರೆ. ಅಚ್ಚರಿಯ ಸಂಗತಿಯೆಂದರೆ ಹೊಸಪಕ್ಷ ಕಟ್ಟಿ ಸೋತ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಮೂರನೇ ಸ್ಥಾನದಲ್ಲಿದ್ದಾರೆ. ಬಿಜೆಸಿ ಸರಕಾರ ಉರುಳಿಸಿ, ಪಕ್ಷದಲ್ಲಿನ ವಿರೋಧ ಮೆಟ್ಟಿನಿಂತು ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ನಾಲ್ಕನೇ ಸ್ಥಾನದಲ್ಲಿದ್ದರೆ, ಕಳೆದ ವರ್ಷ ಭೀಕರವಾಗಿ ಹತ್ಯೆಗೀಡಾಗಿದ್ದ ಸೌಮ್ಯಳ ಕುಟುಂಬಕ್ಕೆ ನ್ಯಾಯ ಸಿಗಬೇಕೆಂದು ಹೋರಾಟ ನಡೆಸಿರುವ ಕೇಮಾರು ಶ್ರೀಗಳು ಐದನೇ ಸ್ಥಾನ ಪಡೆದಿದ್ದಾರೆ.

ಆದರೆ, ನಮ್ಮ ಓದುಗರು ದಡ್ಡರಲ್ಲ. ಕೊನೆಗೂ ಸೂಕ್ತವಾದ ವ್ಯಕ್ತಿಯನ್ನೇ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಈ ವರ್ಷವೇ ಪ್ರತಿಷ್ಠಿತ 'ಭಾರತರತ್ನ' ಪ್ರಶಸ್ತಿಗೆ ಭಾಜನರಾಗಿರುವ ನಾಡಿನ ಹೆಮ್ಮೆಯ ವಿಜ್ಞಾನಿ ಪ್ರೊ. ಸಿಎನ್ಆರ್ ರಾವ್ ಅವರು ಕೂಡ, ಓದುಗರ ಪ್ರಕಾರ ಈ ಪ್ರಶಸ್ತಿಗೆ ಅರ್ಹರು ಎಂಬುದರಲ್ಲಿ ಎರಡು ಮಾತಿಲ್ಲ. ಮತದಾನ ಶುರುವಾದಂದಿನಿಂದ ಕೊನೆಯ ದಿನವಾದ ಡಿಸೆಂಬರ್ 31ರವರೆಗೆ ಸಿಆರ್ ಹಿರೇಮಠ ಮತ್ತು ಪ್ರೊ. ಸಿಎನ್ಆರ್ ರಾವ್ ಅವರ ನಡುವೆ ಭಾರೀ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ ಹಿರೇಮಠ ಅವರನ್ನು ವಿಜಯಿಶಾಲಿಯನ್ನಾಗಿ ಓದುಗರು ಮಾಡಿದ್ದಾರೆ. ಎರಡನೇ ಸ್ಥಾನದಲ್ಲಿ ಸಿಎನ್ಆರ್ ರಾವ್ ಅವರು ಇದ್ದಾರೆ.

ಎಸ್ಆರ್ ಹಿರೇಮಠ ಅವರು ಮಾಡುತ್ತಿರುವ ಹೋರಾಟಕ್ಕೆ ಇನ್ನಷ್ಟು ಶಕ್ತಿ ದೊರೆಯಲಿ ಎಂಬ ಆಶಯದೊಂದಿಗೆ 2013ನೇ ವರ್ಷಕ್ಕೆ ತೆರೆ ಎಳೆಯೋಣ. ಹಾಗೆಯೆ, ಭ್ರಷ್ಟಾಚಾರದ ವಿರುದ್ಧ ಅವರು ನಡೆಸುತ್ತಿರುವ ಹೋರಾಟದಲ್ಲಿ ನಾವೂ ಭಾಗಿಯಾಗೋಣ ಎಂಬ ಸಂಕಲ್ಪದೊಂದಿಗೆ ಹೊಸ ವರ್ಷಕ್ಕೆ ಹೆಜ್ಜೆಯಿಡೋಣ. 'ಕರ್ನಾಟಕ ವರ್ಷದ ವ್ಯಕ್ತಿ 2013' ಸ್ಪರ್ಧೆಯಲ್ಲಿ ಯಾರಿಗೆ ಎಷ್ಟು ಮತಗಳು ಬಿದ್ದಿವೆ ಎಂಬುದನ್ನು ಕೆಳಗೆ ನೀಡಲಾಗಿದೆ. ಇಡೀ ವರ್ಷ ನಮ್ಮೊಂದಿಗೆ ನಮ್ಮವರಾಗಿ, ನಮ್ಮನ್ನು ತಿದ್ದಿತೀಡಿ ಕೈಹಿಡಿದು ನಡೆಸುತ್ತಿರುವ ಎಲ್ಲ ಓದುಗ ಬಾಂಧವರಿಗೆ ಹೊಸವರ್ಷದ ಹಾರ್ದಿಕ ಶುಭಾಶಯಗಳು. ನಿಮ್ಮ ಪ್ರೀತಿ ಹೀಗೆಯೇ ಇರಲಿ.

Nightmare for land mafia SR Hiremath Karnataka person 2013
English summary
Anti-corruption crusader, environmentalist and social activist, Sangayya Rachayya Hiremath (S.R. Hiremath) has been chosen as 'Karnataka Person of the Year 2013' through a Oneindia Poll.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X