ಓಮಿಕ್ರಾನ್ ಪ್ರಕರಣ ಹೆಚ್ಚಳ: ಹೊಸ ವರ್ಷದ ನಂತರ ರಾಜ್ಯದಲ್ಲಿಯೂ ನೈಟ್ ಕರ್ಫ್ಯೂ ?
ಬೆಂಗಳೂರು, ಡಿ.25: ಓಮಿಕ್ರಾನ್ ಭೀತಿಯಿಂದ ಈಗಾಗಲೇ ಹಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ ಹೇರಲಾಗಿದ್ದು, ರಾಜ್ಯದಲ್ಲಿಯೂ ಈ ಬಗ್ಗೆ ಚರ್ಚೆ ನಡೆಯುತ್ತಿದೆ.
ದೇಶದಲ್ಲಿ ಈಮಿಕ್ರನ್ ಪ್ರಕರಣಗಳು 400 ಗಡಿ ದಾಟಿದೆ. ಕರ್ನಾಟಕದಲ್ಲಿಯೂ 30 ಪ್ರಕರಣಗಳು ದಾಟಿವೆ. ಒಮಿಕ್ರಾನ್ ತೀವ್ರ ರೀತಿಯಲ್ಲಿ ಹರಡುವ ಶಕ್ತಿ ಇರುವುದನ್ನು ವೈದ್ಯರು ಸ್ಪಷ್ಟಪಡಿಸಿರುವುದರಿಂದ ರಾಜ್ಯದಲ್ಲಿಯೂ ಬಿಗಿ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ಆರಂಭವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದಾರೆ. ರಾಜ್ಯದಿಂದಲೂ ಸಹ ಹಿರಿಯ ಅಧಿಕಾರಿಗಳು ಪಾಲ್ಗೊಂಡು ರಾಜ್ಯದ ಸದ್ಯದ ಪರಿಸ್ಥಿತಿಯ ವಿವರ ಸಲ್ಲಿಸಿದ್ದಾರೆ. ಮಹಾರಾಷ್ಟ್ರ, ಗುಜರಾತ್, ಹರಿಯಾಣ, ಉತ್ತರ ಪ್ರದೇಶಗಳಲ್ಲಿ ಸೋಂಕು ಹೆಚ್ಚಳ ತಡೆಯಲು ಈಗಾಗಲೇ ನೈಟ್ ಕರ್ಫ್ಯೂ ವಿಧಿಸಲಾಗಿದೆ. ಇನ್ನು ಮಧ್ಯಪ್ರದೇಶದಲ್ಲಿ ಒಂದೇ ಒಂದು ಪ್ರಕರಣ ದಾಖಲಾಗಿದ್ದರೂ ಸಹ ಅಲ್ಲಿನ ಸರ್ಕಾರ ನೈಟ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದೆ.

ರಾಜ್ಯದಲ್ಲಿಯೂ ನೈಟ್ ಕರ್ಫ್ಯೂ ಜಾರಿ?
ರಾಜ್ಯದಲ್ಲಿಯೂ ಸಹ ಓಮಿಕ್ರಾನ್ ಹರಡುವುದನ್ನು ತಡೆಗಟ್ಟಬೇಕಾದರೆ ನೈಟ್‌ಕರ್ಫ್ಯೂನಂತಹ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಸಲಹೆಗಳು ಕೇಳಿಬಂದಿವೆ. ಸದ್ಯ ವರ್ಷಾಂತ್ಯ ಇರುವುದರಿಂದ ಹೆಚ್ಚಿನ ಜನರು ಅಲ್ಲಲ್ಲಿ ಸೇರುತ್ತಾರೆ. ಈಗಲೇ ನೈಟ್ ಕರ್ಫ್ಯೂ ಘೋಷಿಸಬೇಕು ಎಂದೂ ಸಹ ಕೆಲವು ತಜ್ಞರು ಅಭಿಪ್ರಾಯ ಹೊಂದಿದ್ದಾರೆ ಎನ್ನಲಾಗಿದೆ. ಆದರೆ, ಹೊಸ ವರ್ಷ ಮುಗಿದ ಬಳಿಕ ನೈಟ್ ಕರ್ಫ್ಯೂ ಜಾರಿ ಮಾಡಬಹುದು ಎಂದು ಹೇಳಲಾಗುತ್ತಿದೆ.
ಈ ಕುರಿತು ಹುಬ್ಬಳ್ಳಿಯಲ್ಲಿ ಸುಳಿವು ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 'ಭಾನುವಾರ ಬೆಂಗಳೂರು ತಲುಪಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸುತ್ತೇನೆ. ಬಳಿಕ ಇನ್ನಷ್ಟು ಕಠಿಣ ನಿಲುವು ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಗುವುದು' ಎಂದು ಹೇಳಿದ್ದಾರೆ.
ಓಮಿಕ್ರಾನ್ ಸೋಂಕು ಹರಡುವುದನ್ನು ತಡೆಗಟ್ಟಲು ಈಗಾಗಲೇ ಕೆಲವು ಮಾರ್ಗಸೂಚಿಗಳನ್ನು ರಾಜ್ಯದಲ್ಲಿ ಜಾರಿ ಮಾಡಲಾಗಿದೆ. ಇದರ ಜೊತೆಗೆ ತಜ್ಞರೊಂದಿಗೆ ಚರ್ಚಿಸಿ ಇನ್ನೂ ಕೆಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಅಕ್ಕಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಕೇರಳ ಜೊತೆಗೆ ಇತ್ತೀಚೆಗೆ ತಮಿಳುನಾಡಿನಲ್ಲಿಯೂ ಪ್ರಕರಣಗಳು ಹೆಚ್ಚಾಗುತ್ತಿರುವುದು ನಮ್ಮ ಆತಂಕಕ್ಕೆ ಕಾರಣವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಹೊಸ ವರ್ಷಾಚರಣೆಗೂ ಅಡ್ಡಿ?
ಹೊಸ ವರ್ಷಾಚರಣೆಗೆ ಅವಕಾಶ ಇದೆಯೇ ಎಂದು ಕೇಳಲಾದ ಪ್ರಶ್ನೆಗೆ, 'ಈಗಾಗಲೇ ಹೊಸ ವರ್ಷಾಚರಣೆಗೆ ಸಂಬಂಧಿಸಿದಂತೆ ಕೆಲವು ಮಾರ್ಗಸೂಚಿ ಬಿಡುಡಗಡೆ ಮಾಡಲಾಗಿದೆ. ಭಾನುವಾರ ತಜ್ಞರ ಸಭೆಯ ಬಳಿಕ ಮುಂದಿನ ತೀರ್ಮಾನ ಮಾಡಲಾಗುವುದು' ಎಂದಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರಿಸಿದರು.












Click it and Unblock the Notifications